ಕನ್ನಡ

ಪರಮಪವಿತ್ರ ದಿವ್ಯಪ್ರಸಾದದಲ್ಲಿ ವಿಶ್ವಾಸ

ಡಿಸೆಂಬರ್ 2, 2019
ಆಗಮನಕಾಲದ ಮೊದಲ ವಾರದ ಸೋಮವಾರ
ಇಂದಿನ ವಾಚನಗಳು

“ಪ್ರಭುವೇ, ತಾವು ನನ್ನ ಮನೆಯೊಳಗೆ ಬರಲು ನಾನು ಯೋಗ್ಯನಲ್ಲ; ತಾವು ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕನು ಗುಣಹೊಂದುವನು.”  Mt. 8:8

ಪರಿಚಿತವಾದ ಈ ವಾಕ್ಯವು ರೋಮನ್ ಶತಾಧಿಪತಿಯೊಬ್ಬನ ವಿಶ್ವಾಸದಿಂದ ಬಂದದ್ದು.  ತನ್ನ ಸೇವಕನನ್ನು ಗುಣಪಡಿಸಬೇಕೆಂದು ಅವನು ಯೇಸುವನ್ನು ಕೇಳಿಕೊಂಡನು. ಯೇಸು ಬಂದು ಅವನನ್ನು ಗುಣಪಡಿಸಲು ಒಪ್ಪಿದಾಗ, ಆ ಶತಾಧಿಪತಿಯು ಎರಡು ವಿಷಯಗಳನ್ನು ಹೇಳುತ್ತಾ ಯೇಸುವಿನಲ್ಲಿದ್ದ ತನ್ನ ಆಳವಾದ ವಿಶ್ವಾಸವನ್ನು ಉದ್ಗರಿಸುತ್ತಾನೆ: 1) ತನ್ನ ಮನೆಯಲ್ಲಿ ಯೇಸುವಿನ ಸಾನ್ನಿಧ್ಯಕ್ಕೆ ತಾನು ಯೋಗ್ಯನಲ್ಲ ಮತ್ತು, 2) ಯೇಸು ಕೇವಲ ಒಂದು ಮಾತನ್ನು ಹೇಳುವುದರಿಂದಲೇ ತನ್ನ ಸೇವಕನನ್ನು ಗುಣಪಡಿಸಬಲ್ಲರು ಎಂಬ ಭರವಸೆ ತನಗಿದೆ.  

ಈ ವ್ಯಕ್ತಿಯ ವಿಶ್ವಾಸವು ಯೇಸುವನ್ನು ಬಹಳವಾಗಿ ಮೆಚ್ಚಿಸುತ್ತದೆ. ಯೇಸು ದೂರದಿಂದಲೇ ಅವನ ಸೇವಕನ ದೈಹಿಕ ಕಾಯಿಲೆಯನ್ನು ಗುಣಪಡಿಸಿ ಅವನ ಕೋರಿಕೆಯನ್ನು ಈಡೇರಿಸುತ್ತಾರೆ.  ಆದರೆ ಯೇಸು ಕೇವಲ ಗುಣಪಡಿಸುವುದಕ್ಕಿಂತಲೂ ಹೆಚ್ಚಿನದನ್ನು ಮಾಡುತ್ತಾರೆ.  ಈ ವ್ಯಕ್ತಿಯನ್ನು ಎಲ್ಲರಿಗೂ ವಿಶ್ವಾಸದ ಮಾದರಿಯಾಗಿಯೂ ತೋರಿಸುತ್ತಾರೆ.

ಶತಾಧಿಪತಿಯ ಈ ಸುಂದರವಾದ ವಿಶ್ವಾಸದ ಹೇಳಿಕೆಯನ್ನು ದಿವ್ಯಬಲಿಯಲ್ಲಿ ದಿವ್ಯಪ್ರಸಾದಕ್ಕೆ ಸಂಬಂಧಿಸಿದ ವಿಶ್ವಾಸದ ಎರಡು ವಿಷಯಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ: 1) ನಾವು ದಿವ್ಯಪ್ರಸಾದವನ್ನು ಸ್ವೀಕರಿಸಲು ಯೋಗ್ಯರಲ್ಲ ಮತ್ತು, 2) ಆದರೂ ಬಂದು ನಮ್ಮ ಆತ್ಮಗಳನ್ನು ಗುಣಪಡಿಸಬೇಕೆಂದು ನಾವು ಯೇಸುವನ್ನು ಆಹ್ವಾನಿಸುತ್ತೇವೆ.

ಆಗಮನಕಾಲವು ನರಾವತಾರದ ಮಹಾ ರಹಸ್ಯವನ್ನು ನಾವು ವಿಶೇಷವಾಗಿ ಧ್ಯಾನಿಸುವ ಸಮಯವಾಗಿದೆ.  ದೇವರು ಶರೀರರೂಪದಲ್ಲಿ ಬಂದು ನಮ್ಮೊಂದಿಗೆ ವಾಸಿಸುವ ರಹಸ್ಯವನ್ನು ನಾವು ವಿಶೇಷವಾಗಿ ಧ್ಯಾನಿಸುವ ಸಮಯವಿದು.  ಇದು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ನಡೆದಿದ್ದರೂ, ಪ್ರತಿಯೊಂದು ದಿವ್ಯಬಲಿಯಲ್ಲಿಯೂ ಇದು ನಡೆಯುತ್ತಲೇ ಇದೆ.  ಪ್ರತಿಯೊಂದು ದಿವ್ಯಬಲಿಯಲ್ಲಿಯೂ ಈ ರೋಮನ್ ಶತಾಧಿಪತಿಯಂತೆಯೇ ವಿಶ್ವಾಸವನ್ನು ವ್ಯಕ್ತಪಡಿಸಲು ನಮಗೆ ಕರೆ ನೀಡಲಾಗಿದೆ.

ಪರಮಪವಿತ್ರ ದಿವ್ಯಪ್ರಸಾದದಲ್ಲಿ ಕ್ರಿಸ್ತನ ಆಗಮನದ ಕುರಿತು ನಿಮಗಿರುವ ವಿಶ್ವಾಸವನ್ನು ಇಂದು ಧ್ಯಾನಿಸಿ.  ನಮ್ಮ ನಡುವೆ ಮತ್ತು ನಮ್ಮ ಅಂತರಂಗದಲ್ಲಿ ವಾಸಿಸಲು ಬಂದ ದೇವಮಾನವನ ಪ್ರಕಟಣೆಯೇ ಪ್ರತಿಯೊಂದು ದಿವ್ಯಬಲಿ.  ಈ ಶತಾಧಿಪತಿಯ ವಿಶ್ವಾಸ ನಮಗಿದ್ದರೆ ಸಾಕು, ನಾವೂ ನಮ್ಮ ದೇವರಿಂದ ಅಳತೆಗೆ ಮೀರಿದ ಆಶೀರ್ವಾದವನ್ನು ಪಡೆಯುವೆವು.

ಪ್ರಭುವೇ, ನಾನು ನಿಜವಾಗಿಯೂ ವಿಶ್ವಾಸಿಸುತ್ತೇನೆ.  ನನ್ನ ಅವಿಶ್ವಾಸವನ್ನು ನಿವಾರಿಸಲು ನೆರವಾಗಿ.  ದಿವ್ಯಪ್ರಸಾದವನ್ನು ಸ್ವೀಕರಿಸಲು ನಾನು ಸಿದ್ಧಗೊಳ್ಳುವ ಪ್ರತಿಬಾರಿಯೂ ನನ್ನ ಅಯೋಗ್ಯತೆಯನ್ನು ಅರಿಯಲು ನನಗೆ ನೆರವಾಗಿ.  ಆ ವಿನಮ್ರ ಒಪ್ಪಿಗೆಯೊಂದಿಗೆ, ನನ್ನ ಜೀವನದಲ್ಲಿ ಗುಣಪಡಿಸುವ ತಮ್ಮ ಸಾನ್ನಿಧ್ಯವನ್ನೂ ನಾನು ಆಹ್ವಾನಿಸುವಂತಾಗಲಿ.  ಯೇಸುವೇ, ನಾನು ತಮ್ಮಲ್ಲಿ ಭರವಸೆಯಿಡುತ್ತೇನೆ.

ನಮ್ಮ ಹೊಸ ಮೊಬೈಲ್ ಆ್ಯಪ್ ಬಳಸಿ ನೋಡಿ!

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಆಗಮನಕಾಲದ ಸಂಪನ್ಮೂಲಗಳು

ಇಂದಿನ ಎಲ್ಲ ಸಂತರು

YouTube ನಲ್ಲಿ ವೀಕ್ಷಿಸಿ


ಆಗಮನ ಕಾಲಕ್ಕೆ ಸಿದ್ಧರಾಗಿ!

ಆಗಮನಕಾಲ ಮತ್ತು ಕ್ರಿಸ್ಮಸ್ ಧ್ಯಾನಗಳು

ಮೃದು ರಟ್ಟಿನ ಪುಸ್ತಕ & ಇ-ಪುಸ್ತಕ

Amazon.com – Google Play – iTunes – Barnes and Noble