ಕನ್ನಡ

ವಿಶ್ವಾಸದ ಅಭಿವ್ಯಕ್ತಿ

ಫೆಬ್ರವರಿ 13, 2020
ಸಾಮಾನ್ಯ ಕಾಲದ ಐದನೇ ವಾರದ ಗುರುವಾರ
ಇಂದಿನ ವಾಚನಗಳು

ಅಶುದ್ಧಾತ್ಮ ಹಿಡಿದಿದ್ದ ಮಗಳ ತಾಯಿಯೊಬ್ಬಳು ಯೇಸುವಿನ ವಿಷಯ ಕೇಳಿದಳು. ಆಕೆ ಕೂಡಲೇ ಬಂದು ಅವರ ಪಾದಗಳಿಗೆ ಬಿದ್ದಳು. ಆಕೆ ಗ್ರೀಕ್ ಮಹಿಳೆಯಾಗಿದ್ದು, ಜನ್ಮತಃ ಸಿರೊಫೆನಿಷ್ಯದವಳಾಗಿದ್ದಳು. ತನ್ನ ಮಗಳಿಂದ ದೆವ್ವವನ್ನು ಹೊರಹಾಕಬೇಕೆಂದು ಆಕೆ ಅವರನ್ನು ಬೇಡಿಕೊಂಡಳು. ಅವರು ಆಕೆಗೆ, “ಮೊದಲು ಮಕ್ಕಳು ಹೊಟ್ಟೆತುಂಬ ಊಟಮಾಡಲಿ. ಏಕೆಂದರೆ ಮಕ್ಕಳ ಆಹಾರವನ್ನು ತೆಗೆದುಕೊಂಡು ನಾಯಿಗಳಿಗೆ ಎಸೆಯುವುದು ಸರಿಯಲ್ಲ” ಎಂದರು. ಮಾರ್ಕ 7:25-27

ಯೇಸು ಈ ಮಹಿಳೆಯೊಂದಿಗೆ ಆ ರೀತಿಯಾಗಿ ಏಕೆ ಮಾತನಾಡಿದರು?  ಆಕೆ ಬಹುಶಃ ಭಯದಿಂದ ನಡುಗುತ್ತಾ ಅವರ ಬಳಿಗೆ ಬಂದು, ಅವರ ಪಾದಗಳಿಗೆ ಬಿದ್ದು, ತನ್ನ ಮಗಳಿಗೆ ಸಹಾಯಮಾಡಬೇಕೆಂದು ಬೇಡಿಕೊಳ್ಳುತ್ತಾಳೆ.  ಯೇಸು ಮೃದುತ್ವ ಮತ್ತು ಅನುಕಂಪದಿಂದ ಆಕೆಯನ್ನು ಬರಮಾಡಿಕೊಂಡು, ಆಕೆಯ ಮಗಳ ಬಗ್ಗೆ ವಿಚಾರಿಸಿ, “ಓ, ಖಂಡಿತವಾಗಿಯೂ ನಿನ್ನ ಮಗಳಿಗೆ ಸಹಾಯಮಾಡುತ್ತೇನೆ.  ಅವಳ ಬಳಿಗೆ ನನ್ನನ್ನು ಕರೆದುಕೊಂಡು ಹೋಗು” ಎಂದು ಹೇಳುವರೆಂದು ಮೊದಲು ನಮಗೆ ಅನಿಸಬಹುದು.  ಆದರೆ ಅವರು ಹೇಳುವುದು ಹಾಗಲ್ಲ.  “ಮಕ್ಕಳ ಆಹಾರವನ್ನು ತೆಗೆದುಕೊಂಡು ನಾಯಿಗಳಿಗೆ ಎಸೆಯುವುದು ಸರಿಯಲ್ಲ” ಎಂದು ಅವರು ಆಕೆಗೆ ಹೇಳುತ್ತಾರೆ.  ಅಯ್ಯೋ!  ನಿಜವಾಗಿಯೂ?  ಅವರು ನಿಜಕ್ಕೂ ಹಾಗೆ ಹೇಳಿದರೇ?  ಅಂಥ ಮಾತನ್ನು ಅವರು ಏಕೆ ಹೇಳಿರಬಹುದು?

ಮೊದಲನೆಯದಾಗಿ, ಯೇಸು ಹೇಳುವುದೆಲ್ಲವೂ ಪ್ರೀತಿಯ ಕ್ರಿಯೆ ಎಂಬುದನ್ನು ನಾವು ಅರಿಯಬೇಕು.  ಅದು ಅತ್ಯಂತ ಮಹತ್ತಾದ ದಯೆ ಮತ್ತು ಕರುಣೆಯ ಕ್ರಿಯೆ.  ಇದು ನಮಗೆ ತಿಳಿದಿದೆ, ಏಕೆಂದರೆ ಯೇಸುವಿನ ಸ್ವಭಾವವೇ ಅದು.  ಅವರು ಪ್ರೀತಿ ಮತ್ತು ಕರುಣೆಯ ಸ್ವರೂಪವೇ ಆಗಿದ್ದಾರೆ.  ಹಾಗಾದರೆ, ಮೇಲ್ನೋಟಕ್ಕೆ ಕಾಣುವ ಈ ವಿರೋಧಾಭಾಸವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

ಈ ಸಂವಾದವನ್ನು ಅರ್ಥಮಾಡಿಕೊಳ್ಳುವ ಕೀಲಿಕೈ ಅದರ ಅಂತಿಮ ಫಲಿತಾಂಶವನ್ನು ನೋಡುವುದಾಗಿದೆ.  ಈ ಮಹಿಳೆ ಯೇಸುವಿಗೆ ಹೇಗೆ ಪ್ರತಿಕ್ರಿಯಿಸಿದಳು ಮತ್ತು ಆ ಸಂಭಾಷಣೆ ಹೇಗೆ ಕೊನೆಗೊಂಡಿತು ಎಂಬುದನ್ನು ನಾವು ನೋಡಬೇಕು.  ಹೀಗೆ ಮಾಡಿದಾಗ, ಆ ಮಹಿಳೆ ಅಪಾರ ದೀನತೆ ಮತ್ತು ವಿಶ್ವಾಸದಿಂದ ಪ್ರತಿಕ್ರಿಯಿಸುವುದನ್ನು ನಾವು ಕಾಣುತ್ತೇವೆ.  ಯೇಸು ಹೇಳುವುದು ಸತ್ಯವೇ.  ಒಂದು ರೀತಿಯಲ್ಲಿ, ಅವರ ಅನುಗ್ರಹ ಮತ್ತು ಕರುಣೆಯ ಮೇಲೆ ಯಾರಿಗೂ ಹಕ್ಕಿಲ್ಲ ಎಂಬ ಅರ್ಥದಲ್ಲಿ ಅವರ ಮಾತನ್ನು ನಾವು ಅರ್ಥೈಸಿಕೊಳ್ಳಬಹುದು.  ಆಕೆಯನ್ನೂ ಆಕೆಯ ಮಗಳನ್ನೂ ಒಳಗೊಂಡಂತೆ ಯಾರೂ, ದೇವರು ತಮ್ಮ ಜೀವನದಲ್ಲಿ ಕಾರ್ಯನಿರ್ವಹಿಸಬೇಕೆಂದು ಕೇಳಲು “ಅರ್ಹತೆ” ಹೊಂದಿಲ್ಲ.  ಯೇಸುವಿಗೆ ಇದು ತಿಳಿದಿದೆ. ಆದ್ದರಿಂದ ಅವರು ಈ ಮಾತುಗಳನ್ನು ಹೇಳುವ ಮೂಲಕ, ಆಕೆಯ ಆಳವಾದ ವಿಶ್ವಾಸವು ಎಲ್ಲರಿಗೂ ಕಾಣುವಂತೆ ವ್ಯಕ್ತವಾಗಲು ಅದ್ಭುತವಾದ ಅವಕಾಶವನ್ನು ಕೊಡುತ್ತಾರೆ.  ಅವರ ಮಾತುಗಳು ಆಕೆಯು ವಿಶ್ವಾಸ, ನಿರೀಕ್ಷೆ ಮತ್ತು ಭರವಸೆಯ ದಾರಿದೀಪವಾಗಿ ಬೆಳಗಲು ಅವಕಾಶಮಾಡಿಕೊಡುತ್ತವೆ.  ಇದೇ ಯೇಸುವಿನ ಉದ್ದೇಶ, ಮತ್ತು ಅದು ನೆರವೇರಿತು.  ಅದು ನೆರವೇರಲು ಕಾರಣವೇನೆಂದರೆ, ಆಕೆ ಅವರ ಬಳಿಗೆ ಬಂದಾಗಲೇ ಆಕೆಗೆ ನಿಜವಾಗಿಯೂ ಆಳವಾದ ವಿಶ್ವಾಸವಿದೆ ಎಂಬುದು ಅವರಿಗೆ ತಿಳಿದಿತ್ತು.  ಆಕೆ ದೀನತೆ ಮತ್ತು ಭರವಸೆಯಿಂದ ಪ್ರತಿಕ್ರಿಯಿಸುವಳೆಂದು ಅವರಿಗೆ ತಿಳಿದಿತ್ತು.  ಆ ಮಹಿಳೆ ಹಾಗೆಯೇ ಮಾಡಿದಳು. ಹೀಗಾಗಿ ಆಕೆಯ ವಿಶ್ವಾಸ ಮತ್ತು ದೀನತೆಯ ಅಭಿವ್ಯಕ್ತಿಗೆ ನಾವು ಸಾಕ್ಷಿಗಳಾಗಬಲ್ಲೆವು.

ಇಂದು, ಈ ದೀನ ಮಹಿಳೆಯ ಸುಂದರವಾದ ವಿಶ್ವಾಸದ ಬಗ್ಗೆ ಚಿಂತಿಸಿ.  ಆಕೆಯ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿಕೊಂಡು, ಯೇಸು ಇದೇ ಮಾತುಗಳನ್ನು ನಿಮಗೆ ಹೇಳುವುದನ್ನು ಆಲಿಸಲು ಪ್ರಯತ್ನಿಸಿ.  ನೀವು ಹೇಗೆ ಪ್ರತಿಕ್ರಿಯಿಸುವಿರಿ?  ಕೋಪದಿಂದ ಅಥವಾ ತಳಮಳದಿಂದ ಪ್ರತಿಕ್ರಿಯಿಸುವಿರಾ?  ನಿಮ್ಮ ಅಹಂಕಾರಕ್ಕೆ ನೋವಾಗುವುದೇ?  ಅಥವಾ ದೇವರು ಕೊಡುವುದೆಲ್ಲವೂ ನಮಗೆ ಪಡೆಯುವ ಹಕ್ಕಿಲ್ಲದ ಉಡುಗೊರೆ ಎಂಬ ಸತ್ಯವನ್ನು ಒಪ್ಪಿಕೊಂಡು, ಇನ್ನೂ ಹೆಚ್ಚಿನ ದೀನತೆಯಿಂದ ಪ್ರತಿಕ್ರಿಯಿಸುವಿರಾ?  ಇಂತಹ ಪ್ರತಿಕ್ರಿಯೆಯೇ ದೇವರು ನಮ್ಮಲ್ಲಿ ಪ್ರತಿಯೊಬ್ಬರಿಂದಲೂ ನಿರೀಕ್ಷಿಸುತ್ತಿರುವ ವಿಶ್ವಾಸದ ಕ್ರಿಯೆಯಾಗಿರಬಹುದು. ನಮಗೆ ಎಷ್ಟೋ ಅಗತ್ಯವಾಗಿರುವ ಅವರ ಕರುಣೆಯ ಧಾರಾಳ ಸುರಿಯುವಿಕೆಗೆ ಇದೇ ಕೀಲಿಕೈ.

ಪ್ರಭುವೇ, ದಯಮಾಡಿ ನನ್ನನ್ನು ದೀನನನ್ನಾಗಿ ಮಾಡಿರಿ.  ನನ್ನ ಅಹಂಕಾರವನ್ನು ತೊಲಗಿಸಿರಿ.  ನಿಮ್ಮ ಪಾದಗಳಿಗೆ ಬೀಳಲು ನನಗೆ ನೆರವಾಗಿರಿ.  ನಾನು ನಿಮ್ಮಲ್ಲಿ ಎಷ್ಟು ಆಳವಾಗಿ ಭರವಸೆಯಿಡಬೇಕೆಂದರೆ, ನಿಮ್ಮ ಮೇಲಿನ ನನ್ನ ಪ್ರೀತಿಯಿಂದ ಪ್ರೇರಿತರಾಗಿ, ನಿಮ್ಮ ಅನುಗ್ರಹದ ಭಂಡಾರವನ್ನು ತೆರೆದು ಅದನ್ನು ನನ್ನ ಮೇಲೆ ಸುರಿಸದೆ ನೀವು ಇರಲಾರಿರಿ. ಅಂಥ ಭರವಸೆಯನ್ನು ಹೊಂದಲು ನನಗೆ ನೆರವಾಗಿರಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು