ಕನ್ನಡ

ದೇವರ ಅಧಿಕಾರ

ಫೆಬ್ರವರಿ 14, 2020
ಸಾಮಾನ್ಯ ಕಾಲದ ಐದನೇ ವಾರದ ಶುಕ್ರವಾರ
ಇಂದಿನ ವಾಚನಗಳು

ಸಂತರಾದ ಸಿರಿಲ್, ಮಠವಾಸಿ, ಮತ್ತು ಮೆಥೋಡಿಯಸ್, ಧರ್ಮಾಧ್ಯಕ್ಷ—ಸ್ಮರಣೆ

“ಎಫ್ಫಥಾ!” (ಅಂದರೆ, “ತೆರೆದು ಕೊಳ್ಳು!”)  ತಕ್ಷಣವೇ ಆ ಮನುಷ್ಯನ ಕಿವಿಗಳು ತೆರೆದವು.  ಮಾರ್ಕ 7:34-35

ಯೇಸು ನಿಮಗೆ ಹೀಗೆ ಹೇಳುವುದನ್ನು ನೀವು ಎಷ್ಟು ಬಾರಿ ಕೇಳುತ್ತೀರಿ?  “ಎಫ್ಫಥಾ! ತೆರೆದು ಕೊಳ್ಳು!”  ಅಥವಾ ಇಂತಹ ಅಧಿಕಾರದಿಂದ ಅವರು ನಿಮ್ಮೊಡನೆ ಮಾತನಾಡುವುದನ್ನು ನೀವು ಎಷ್ಟು ಬಾರಿ ಕೇಳುತ್ತೀರಿ?

ಈ ಮನುಷ್ಯನಿಗೆ ದೈಹಿಕವಾಗಿ ಕಿವಿ ಕೇಳಿಸುತ್ತಿರಲಿಲ್ಲ ಮತ್ತು ಅವನ ದೈಹಿಕ ರೋಗವನ್ನು ಗುಣಪಡಿಸಲು ಬಯಸಿದರು ಎಂಬ ಕಾರಣಕ್ಕಷ್ಟೇ ಯೇಸು ಹೀಗೆ ಹೇಳಿದರೇ?  ಅಥವಾ ಇದರಲ್ಲಿ ಇನ್ನೂ ಆಳವಾದ ಅರ್ಥವಿದೆಯೇ?  ಶಬ್ದಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗದಿದ್ದ ಈ ಮನುಷ್ಯನನ್ನು ಗುಣಪಡಿಸುವ ಮೂಲಕ, ಯೇಸು ನಮಗಾಗಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ನಮಗೆ ಪ್ರಕಟಿಸುತ್ತಿದ್ದರು.  ಈ ಗುಣಪಡಿಸುವಿಕೆಯ ಮೂಲಕ ಯೇಸು ನಮಗೆ ಸ್ಪಷ್ಟವಾದ ಮತ್ತು ಹೆಚ್ಚು ಆಳವಾದ ಸಂದೇಶವನ್ನು ನೀಡುತ್ತಿದ್ದಾರೆ.  ಖಂಡಿತವಾಗಿಯೂ ಈ ವಾಕ್ಯಭಾಗದಿಂದ ನಾವು ಅನೇಕ ಸಂದೇಶಗಳನ್ನು ಪಡೆಯಬಹುದು.  ಅವುಗಳಲ್ಲಿ ಒಂದನ್ನು ನೋಡೋಣ.

ಆ ಸಂದೇಶವು ಯೇಸುವಿನ ಆಜ್ಞೆಯಲ್ಲಿದೆ: “ತೆರೆದು ಕೊಳ್ಳು!”  ಇವು ಕಾರ್ಯವನ್ನು ಆಜ್ಞಾಪಿಸುವ ಶಕ್ತಿಯುತ ಪದಗಳು.  ಇವು ಪಾಲಿಸಿದರೂ ಸರಿ, ಪಾಲಿಸದಿದ್ದರೂ ಸರಿ ಎನ್ನುವ ಪದಗಳಲ್ಲ.  ಇವು ಸ್ಪಷ್ಟವೂ ನಿರ್ಣಾಯಕವೂ ಆಗಿವೆ.  “ತೆರೆದು ಕೊಳ್ಳು” ಎಂಬುದು ಪ್ರಶ್ನೆಯಲ್ಲ, ಆಹ್ವಾನವಲ್ಲ, ಅದೊಂದು ಆಜ್ಞೆ.  ಇದು ಮಹತ್ವದ ಸಂಗತಿ!

ಈ ಎರಡು ಚಿಕ್ಕ ಪದಗಳು ಯೇಸು ಕಾರ್ಯಪ್ರವೃತ್ತರಾಗಲು ನಿರ್ಧರಿಸಿದ್ದಾರೆ ಎಂಬ ಸತ್ಯವನ್ನು ಪ್ರಕಟಿಸುತ್ತವೆ.  ಈ ನಿರ್ಧಾರದಲ್ಲಿ ಅವರಿಗೆ ಕಿಂಚಿತ್ತೂ ಹಿಂಜರಿಕೆಯಿಲ್ಲ ಎಂಬುದನ್ನು ಅವು ಪ್ರಕಟಿಸುತ್ತವೆ.  ಅವರು ತಮ್ಮ ನಿರ್ಧಾರವನ್ನು ಮಾಡಿದ್ದಾರೆ ಮತ್ತು ತಮ್ಮ ಚಿತ್ತವನ್ನು ನುಡಿದಿದ್ದಾರೆ.  ಅವರ ಈ ಕ್ರಿಯೆಯೇ ಬದಲಾವಣೆಯನ್ನು ತರುತ್ತದೆ.  ದೇವರು ಮಾತನಾಡುವಾಗ ಅನಿಶ್ಚಿತತೆಯಿಂದಿರುವುದಿಲ್ಲ ಎಂಬುದನ್ನು ಈ ಎರಡು ಚಿಕ್ಕ ಪದಗಳು ಪ್ರಕಟಿಸುತ್ತವೆ.  ಅವರು ಸಂಕೋಚಪಡುವವರಲ್ಲ, ಸಂದೇಹಪಡುವವರೂ ಅಲ್ಲ.  ಅವರು ಸಂಪೂರ್ಣ ದೃಢತೆಯುಳ್ಳವರೂ ಸ್ಪಷ್ಟತೆಯುಳ್ಳವರೂ ಆಗಿದ್ದಾರೆ.

ಈ ಅರಿವು ನಮಗೆ ಬಹಳ ಸಾಂತ್ವನ ನೀಡಬೇಕು.  ಯೇಸು ತಮ್ಮ ಸರ್ವಶಕ್ತ ಅಧಿಕಾರವನ್ನು ಚಲಾಯಿಸಲು ಸಿದ್ಧರೂ ಇಚ್ಛೆಯುಳ್ಳವರೂ ಆಗಿದ್ದಾರೆ ಎಂಬ ಅರ್ಥದಲ್ಲಿ ಅದು ಸಾಂತ್ವನ ನೀಡಬೇಕು.  ಅವರಿಗೆ ನಿಜವಾಗಿಯೂ ಸರ್ವಶಕ್ತಿಯಿದೆ ಮತ್ತು ತಾವು ಬಯಸಿದಾಗ ಈ ಅಧಿಕಾರವನ್ನು ಚಲಾಯಿಸಲು ಅವರು ಹೆದರುವುದಿಲ್ಲ.  ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮ ಅಧಿಕಾರವನ್ನು ಚಲಾಯಿಸುವುದರಿಂದ ನಮ್ಮ ಜೀವನದಲ್ಲಿ ಅತ್ಯುತ್ತಮ ಒಳಿತು ಉಂಟಾಗುವುದಾದರೆ, ಅವರು ಅದನ್ನು ಚಲಾಯಿಸಲು ಬಯಸುತ್ತಾರೆ.

ಈ ಸರ್ವಶಕ್ತ ದೇವರು ನಿಜವಾಗಿಯೂ ಸರ್ವಶಕ್ತರು ಮತ್ತು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ ಎಂದು ನಾವು ಭರವಸೆಯಿಡಬಹುದು ಎಂಬ ಅರ್ಥದಲ್ಲಿ ಇದು ನಮಗೆ ಬಹಳ ಸಾಂತ್ವನ ನೀಡಬೇಕು.  ಪ್ರಕೃತಿ ಲೋಕವೂ (ಕಿವಿಯಿಂದ ಕೇಳಿಸಿಕೊಳ್ಳುವುದು) ಅವರ ನಿಯಂತ್ರಣದಲ್ಲಿದ್ದರೆ, ಆಧ್ಯಾತ್ಮಿಕ ಲೋಕವೂ ನಿಶ್ಚಯವಾಗಿ ಅವರ ನಿಯಂತ್ರಣದಲ್ಲಿದೆ.  ಅವರು ಒಳಿತಾದ ಎಲ್ಲವನ್ನೂ ಮಾಡಲು ಶಕ್ತರು.

ಸರ್ವಶಕ್ತರು ಮಾತ್ರವಲ್ಲದೆ, ಸಂಪೂರ್ಣ ಪ್ರೀತಿಮಯರೂ ಸಂಪೂರ್ಣ ಕರುಣಾಮಯರೂ ಆದವರ ಸನ್ನಿಧಿಯಲ್ಲಿ ನಾವಿದ್ದೇವೆ ಎಂಬುದನ್ನು ಕಂಡುಕೊಂಡಾಗ, ನಾವು ಬಹಳ ನೆಮ್ಮದಿಯಿಂದ ನಿಟ್ಟುಸಿರುಬಿಟ್ಟು ಅವರಲ್ಲಿ ಸಂಪೂರ್ಣ ಭರವಸೆಯಿಡಲು ಸಾಧ್ಯವಾಗಬೇಕು.  ಎಲ್ಲವನ್ನೂ ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅವರು ಶಕ್ತರೂ ಸಂಪೂರ್ಣವಾಗಿ ಇಚ್ಛೆಯುಳ್ಳವರೂ ಆಗಿದ್ದಾರೆ.  

ಇಂದು ಈ ಎರಡು ಚಿಕ್ಕ ಪದಗಳ ಕುರಿತು ಧ್ಯಾನಿಸಿ.  ಯೇಸುವಿನ ಈ ಪವಿತ್ರವೂ ದೈವಿಕವೂ ಆದ ಅಧಿಕಾರವು ನಿಮ್ಮ ಜೀವನವನ್ನು ನಿಯಂತ್ರಿಸಲಿ.  ಅವರು ನಿಮಗೆ ಆಜ್ಞಾಪಿಸಲಿ.  ಅವರ ಆಜ್ಞೆಗಳು ಪರಿಪೂರ್ಣ ಪ್ರೀತಿ ಮತ್ತು ಕರುಣೆಯೇ ಆಗಿವೆ.  ಅವು ನಿಮ್ಮ ಪರಮ ಒಳಿತಿನ ಕಡೆಗೆ ನಿಮ್ಮನ್ನು ನಡೆಸುವ ಮಾತುಗಳಾಗಿವೆ.  ಈ ಸರ್ವಶಕ್ತ ದೇವರು ನಿಮ್ಮ ಸಂಪೂರ್ಣ ಭರವಸೆಗೆ ಯೋಗ್ಯರಾಗಿದ್ದಾರೆ.

ಪ್ರಭುವೇ, ನಾನು ನಿಜವಾಗಿಯೂ ನಿಮ್ಮಲ್ಲಿ ಭರವಸೆಯಿಡುತ್ತೇನೆ ಮತ್ತು ನೀವು ಎಲ್ಲವನ್ನೂ ಮಾಡಬಲ್ಲಿರಿ ಎಂದು ನನಗೆ ತಿಳಿದಿದೆ.  ನನ್ನ ಜೀವನದಲ್ಲಿ ಸಂಪೂರ್ಣ ಅಧಿಕಾರ ಹೊಂದಲು ನೀವು ಬಯಸುತ್ತೀರಿ ಎಂದು ನನಗೆ ತಿಳಿದಿದೆ.  ನನ್ನ ಜೀವನವನ್ನು ಸಂಪೂರ್ಣವಾಗಿ ನಿಮಗೆ ಒಪ್ಪಿಸಲು ಮತ್ತು ನನ್ನ ಜೀವನದ ಪ್ರತಿಯೊಂದು ಕಾರ್ಯವನ್ನೂ ನಿರ್ದೇಶಿಸಿ ಆಜ್ಞಾಪಿಸುವಂತೆ ನಿಮ್ಮಲ್ಲಿ ಸಾಕಷ್ಟು ಭರವಸೆಯಿಡಲು ನನಗೆ ಸಹಾಯ ಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಸಂಪೂರ್ಣ ಭರವಸೆಯಿಡುತ್ತೇನೆ!

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು