ಮೇ 16, 2020
ಪಾಸ್ಕಕಾಲದ ಐದನೆಯ ವಾರದ ಶನಿವಾರ
ಇಂದಿನ ವಾಚನಗಳು

“‘ಯಾವ ದಾಸನೂ ತನ್ನ ಯಜಮಾನನಿಗಿಂತ ದೊಡ್ಡವನಲ್ಲ’ ಎಂದು ನಾನು ನಿಮಗೆ ಹೇಳಿದ ಮಾತನ್ನು ನೆನಪಿಟ್ಟುಕೊಳ್ಳಿ. ಅವರು ನನಗೆ ಕಿರುಕುಳ ಕೊಟ್ಟಿದ್ದರೆ, ನಿಮಗೂ ಕಿರುಕುಳ ಕೊಡುವರು.” ಯೋಹಾನ 15:20
ನೀವು ಯೇಸುವಿನಂತಾಗಲು ಬಯಸುತ್ತೀರಾ? ಹಾಗಿದ್ದರೆ, ಅದರ ಅರ್ಥವೇನೆಂಬುದರ ಬಗ್ಗೆ ಎಚ್ಚರವಾಗಿರಿ. ನಾವು ಕ್ರಿಸ್ತನಿಗೆ ಹೆಚ್ಚು ಹತ್ತಿರವಾದಷ್ಟೂ ಲೋಕವು ನಮ್ಮನ್ನು ಹೆಚ್ಚು ಪ್ರೀತಿಸುತ್ತದೆ ಮತ್ತು ಅರ್ಥಮಾಡಿಕೊಳ್ಳುತ್ತದೆ ಎಂದು ಭಾವಿಸುವುದು ಸುಲಭ. ಎಲ್ಲರೂ ನಮ್ಮ ಪವಿತ್ರತೆಯನ್ನು ಕಂಡು ಮೆಚ್ಚುತ್ತಾರೆ ಮತ್ತು ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಿಯೂ ಸುಲಭವಾಗಿಯೂ ಇರುತ್ತದೆ ಎಂದು ನಾವು ಭಾವಿಸಬಹುದು.
ಆದರೆ ಅದು ಹಾಗಲ್ಲ ಎಂದು ತಿಳಿಯಲು ನಾವು ಕ್ರಿಸ್ತನ ಜೀವನವನ್ನು ನೋಡಿದರೆ ಸಾಕು. ಅವರು ಎಲ್ಲ ರೀತಿಯಲ್ಲಿಯೂ ಪರಿಪೂರ್ಣರಾಗಿದ್ದರು ಎಂಬುದು ಸ್ಪಷ್ಟ. ಅದರ ಪರಿಣಾಮವಾಗಿ, ಅವರು ತೀವ್ರ ದ್ವೇಷ ಮತ್ತು ಕಿರುಕುಳಕ್ಕೆ ಒಳಗಾದರು. ಅವರು ನಿಜವಾಗಿಯೂ ಅವರನ್ನು ಕೊಂದರು ಎಂಬ ಕರಾಳ ಸತ್ಯವನ್ನು ಗ್ರಹಿಸುವುದು ಕಷ್ಟ. ರಾತ್ರಿಯ ಕತ್ತಲಿನಲ್ಲಿ ಅವರನ್ನು ಬಂಧಿಸಿ, ವಿಚಾರಣೆಯ ನಾಟಕವಾಡಿ, ಅಪರಾಧಿಯೆಂದು ತೀರ್ಮಾನಿಸಿ ಮರಣದಂಡನೆ ವಿಧಿಸಿದರು. ಆಮೇಲೆ ತಕ್ಷಣವೇ ಆ ದಂಡನೆಯನ್ನು ಜಾರಿಗೊಳಿಸಿದರು.
ಅವರು ದೇವರ ಪುತ್ರನಿಗೆ ಹೀಗೆ ಮಾಡಿದ್ದೇಕೆ? ಎಲ್ಲ ರೀತಿಯಲ್ಲಿಯೂ ಇಷ್ಟು ಪರಿಪೂರ್ಣರೂ ಕರುಣಾಮಯರೂ ಆದವರನ್ನು ಇಷ್ಟು ಕ್ರೂರವಾಗಿ ನಡೆಸಿಕೊಂಡದ್ದೇಕೆ?
ಅವರ ಮೊದಲ ಅನುಯಾಯಿಗಳಾಗಿ ನಾವು ಅಲ್ಲಿ ಇದ್ದಿದ್ದರೆ, ಬಹುಶಃ ಬೆಚ್ಚಿಬಿದ್ದು, ಭಯಪಟ್ಟು, ವಿಚಲಿತರಾಗಿ, ಗೊಂದಲಕ್ಕೊಳಗಾಗುತ್ತಿದ್ದೆವು. ಯೇಸು ಏನೋ ತಪ್ಪು ಮಾಡಿದರು ಎಂದು ಭಾವಿಸಿ, ಅವರಲ್ಲಿದ್ದ ನಮ್ಮ ಭರವಸೆಯನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಅವರ ಯೋಜನೆ ಎಲ್ಲ ರೀತಿಯಲ್ಲಿಯೂ ಪರಿಪೂರ್ಣವಾಗಿತ್ತು; ಸುಳ್ಳು ಆರೋಪಗಳನ್ನೂ ದ್ವೇಷಪೂರಿತ ಕಿರುಕುಳವನ್ನೂ ಅವರು ಸಹಿಸಿಕೊಳ್ಳುವುದು ಆ ಯೋಜನೆಯ ಕೇಂದ್ರಭಾಗವಾಗಿತ್ತು. ಈ ದುರ್ವರ್ತನೆಯನ್ನು ಸ್ವಇಚ್ಛೆಯಿಂದ ಸ್ವೀಕರಿಸುವ ಮೂಲಕ ಅವರು ಲೋಕವನ್ನು ವಿಮೋಚಿಸಿದರು.
ಹಾಗಾದರೆ ಮೂಲ ಪ್ರಶ್ನೆಗೆ ಮರಳೋಣ: “ನೀವು ಯೇಸುವಿನಂತಾಗಲು ಬಯಸುತ್ತೀರಾ?” ಅವರಿಗೆ ಸಂಭವಿಸಿದ ಸಂಗತಿಗಳ ಬೆಳಕಿನಲ್ಲಿ ನೋಡಿದಾಗ ಇದು ಕಠಿಣವಾದ ಪ್ರಶ್ನೆ. “ಯಾವ ದಾಸನೂ ತನ್ನ ಯಜಮಾನನಿಗಿಂತ ದೊಡ್ಡವನಲ್ಲ.” “ಅವರು ನನಗೆ ಕಿರುಕುಳ ಕೊಟ್ಟಿದ್ದರೆ, ನಿಮಗೂ ಕಿರುಕುಳ ಕೊಡುವರು.” ಇವು ಸ್ವೀಕರಿಸಲು ಮತ್ತು ಒಪ್ಪಿಕೊಳ್ಳಲು ಕಠಿಣವಾದ ಮಾತುಗಳು.
ಕಿರುಕುಳದಿಂದ ನಾವು ಓಡಿಹೋಗಬಾರದು. ಅದು ಎದುರಾದರೆ ನಾವು ಹತಾಶರಾಗಬಾರದು ಮತ್ತು ತಲೆತಗ್ಗಿಸಬಾರದು. ಏಕೆ? ಏಕೆಂದರೆ ಕಿರುಕುಳವು ನಾವು ನಮ್ಮ ಗುರುದ ಹೆಜ್ಜೆಜಾಡಿನಲ್ಲಿ ನಡೆಯುತ್ತಿದ್ದೇವೆ ಎಂಬುದರ ಸ್ಪಷ್ಟ ಸಂಕೇತವಾಗಿದೆ. ಕಿರುಕುಳದ ಪರಿಣಾಮವಾಗಿ ನಾವು ಊಹಿಸಬಲ್ಲದಕ್ಕಿಂತಲೂ ಹೆಚ್ಚು ಆಳವಾಗಿ ಕ್ರಿಸ್ತನೊಂದಿಗೆ ಐಕ್ಯರಾಗುತ್ತೇವೆ.
ನಾವು ಅವಕಾಶ ಕೊಟ್ಟರೆ, ಎಲ್ಲ ದುರ್ವರ್ತನೆಯನ್ನೂ ಒಳಿತಿಗಾಗಿ ಬಳಸಲು ದೇವರು ಉದ್ದೇಶಿಸುತ್ತಾರೆ ಎಂಬುದನ್ನು ಅರಿಯುವುದೇ ಮುಖ್ಯ. ಅದನ್ನು ಅವರಿಗೆ ಸಮರ್ಪಿಸಿ, ಅಸಮಾಧಾನದಿಂದಲ್ಲದೆ ಮನಃಪೂರ್ವಕವಾಗಿ ಸ್ವೀಕರಿಸಿದಾಗ, ಅದನ್ನು ಒಳಿತಿಗಾಗಿ ಬಳಸಲು ನಾವು ಅವರಿಗೆ ಅವಕಾಶ ಕೊಡುತ್ತೇವೆ. ನಮ್ಮ ದೈವಿಕ ಪ್ರಭುವಿನ ಹೆಜ್ಜೆಜಾಡಿನಲ್ಲಿ ನಡೆಯಲು ನಾವು ಯೋಗ್ಯರೆಂದು ಪರಿಗಣಿಸಲ್ಪಟ್ಟಿದ್ದಕ್ಕಾಗಿ “ಹರ್ಷಿಸಿ ಆನಂದಿಸುವುದೇ” ನಮ್ಮ ಪ್ರತಿಕ್ರಿಯೆಯಾಗಿರಬೇಕು.
ನಿಮ್ಮ ವಿಶ್ವಾಸದ ನಿಮಿತ್ತ ಮತ್ತು ಸುವಾರ್ತೆಯನ್ನು ಸ್ವೀಕರಿಸಿರುವುದರ ನಿಮಿತ್ತ ನೀವು ಅನುಭವಿಸುವ ಯಾವುದೇ ರೀತಿಯ ಕಿರುಕುಳ ಅಥವಾ ಅನ್ಯಾಯದ ಬಗ್ಗೆ ಇಂದು ಚಿಂತಿಸಿ. ನೀವು ಅವಕಾಶ ಕೊಟ್ಟರೆ, ಪ್ರಭು ಅದನ್ನು ಬಳಸಲು ಬಯಸುತ್ತಾರೆ.
ಪ್ರಭುವೇ, ನನ್ನನ್ನು ಕುಗ್ಗಿಸುವ ಎಲ್ಲವನ್ನೂ ನಿಮಗೆ ಸಮರ್ಪಿಸುತ್ತೇನೆ. ನಿಮ್ಮ ಅನುಯಾಯಿಯಾಗಿರುವುದಕ್ಕಾಗಿ ನಾನು ಅನುಭವಿಸುವ ಯಾವುದೇ ಸಂಕಟವನ್ನು ನಿಮಗೆ ಅರ್ಪಿಸುತ್ತೇನೆ. ನಿಮ್ಮ ಯಾತನೆಯಲ್ಲಿ ಮಾತ್ರವಲ್ಲದೆ, ಅದನ್ನು ನೀವು ಮನಃಪೂರ್ವಕವಾಗಿ ಸ್ವೀಕರಿಸಿದ ರೀತಿಯಲ್ಲಿಯೂ ನಾನು ನಿಮ್ಮನ್ನು ಅನುಕರಿಸುವಂತಾಗಲಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಚಿತ್ರ: ನಿಕೊಲಾ ಗ್ರಾಸಿ ರಚಿಸಿದ ಕ್ರಿಸ್ತನಿಗೆ ಚಾವಟಿಯೇಟು

ಶಿಲುಬೆಯ ಬುಡದಲ್ಲಿ 40 ದಿನಗಳು:
ನಮ್ಮ ಧನ್ಯ ಮಾತೆಯ ಹೃದಯದಿಂದ ಪ್ರೀತಿಯ ನೋಟ




