ಮೇ 19, 2020
ಪಾಸ್ಕಕಾಲದ ಆರನೆಯ ವಾರದ ಮಂಗಳವಾರ
ಇಂದಿನ ವಾಚನಗಳು

“ಆದರೆ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ: ನಾನು ಹೋಗುವುದು ನಿಮಗೆ ಒಳ್ಳೆಯದು. ಏಕೆಂದರೆ ನಾನು ಹೋಗದಿದ್ದರೆ, ಪರಮ ಸಹಾಯಕರು ನಿಮ್ಮ ಬಳಿಗೆ ಬರುವುದಿಲ್ಲ. ಆದರೆ ನಾನು ಹೋದರೆ, ಅವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ.” ಯೋಹಾನ 16:7
ಪ್ರೇಷಿತರ ಹೃದಯಗಳಲ್ಲಿ ದ್ವಂದ್ವವಿತ್ತು. ಅವರು ದುಃಖದಿಂದ ತುಂಬಿದ್ದರು, ಆದರೂ ಯೇಸು ತಮಗೆ ಹೇಳಿದ ಮಾತುಗಳಲ್ಲಿ ಭರವಸೆಯಿಡಲು ಪ್ರಯತ್ನಿಸುತ್ತಿದ್ದರು. ತಾವು ತಮ್ಮ ತಂದೆಯ ಬಳಿಗೆ ಏರಿಹೋಗುತ್ತಿರುವುದಾಗಿಯೂ, ತಾವು ಹೋಗುವುದೇ ಅವರಿಗೆ ಒಳ್ಳೆಯದೆಂದೂ ಯೇಸು ಅವರಿಗೆ ಹೇಳಿದರು. ಏಕೆ? ಏಕೆಂದರೆ ಅವರು ಹೋದರೆ, ಪವಿತ್ರಾತ್ಮರನ್ನು ಅವರ ಬಳಿಗೆ ಕಳುಹಿಸುತ್ತಾರೆ.
ಮಾನವ ದೃಷ್ಟಿಯಿಂದ ನೋಡಿದರೆ, ಯೇಸುವಿನೊಂದಿಗಿನ ದಿನನಿತ್ಯದ ಒಡನಾಟವನ್ನು ಬಿಟ್ಟುಕೊಡುವುದು ಪ್ರೇಷಿತರಿಗೆ ಬಹಳ ಕಷ್ಟವಾಗಿರಬೇಕು. ತಮ್ಮ ಕಣ್ಣುಗಳಿಂದ ಅವರನ್ನು ನೋಡುವುದು, ಅವರನ್ನು ಮುಟ್ಟುವುದು ಮತ್ತು ಅವರ ಮಾತುಗಳನ್ನು ಕೇಳುವುದು ತಪ್ಪಿಹೋದುದರಿಂದ ಅವರಿಗೆ ಖಂಡಿತವಾಗಿಯೂ ಕೊರತೆ ಕಾಡುತ್ತಿತ್ತು. ಆದರೆ ತಾವು ಹೊರಟುಹೋಗುತ್ತಿದ್ದರೂ ಸದಾ ಅವರೊಂದಿಗೆ ಇರುವುದಾಗಿ ಯೇಸು ಸ್ಪಷ್ಟಪಡಿಸಿದರು. ಅಲ್ಲದೆ, ಅವರಿಗೆ ಮಾರ್ಗದರ್ಶನ ನೀಡಲು, ಧೈರ್ಯ ತುಂಬಲು ಮತ್ತು ಸಕಲ ಸತ್ಯವನ್ನು ಬೋಧಿಸಲು ಪವಿತ್ರಾತ್ಮರನ್ನು ಅವರ ಮೇಲೆ ಕಳುಹಿಸುವುದಾಗಿಯೂ ಹೇಳಿದರು. ಇನ್ನು ಪವಿತ್ರಾತ್ಮರ ಶಕ್ತಿಯಿಂದ ಅವರು ಲೋಕದಲ್ಲಿ ಯೇಸುವಿನ ಸಾನ್ನಿಧ್ಯವಾಗಿರುತ್ತಿದ್ದರು.
ಪ್ರೇಷಿತರು ಯೇಸುವನ್ನು ಕಂಡ ರೀತಿಯಲ್ಲಿ ಅವರನ್ನು ನೋಡುವ ಭಾಗ್ಯ ನಮಗೆ ಎಂದೂ ಸಿಗಲಿಲ್ಲ. ಆದರೆ ಅವರು ಸದಾ ನಮ್ಮೊಂದಿಗಿರುವ ಅದೇ ಭಾಗ್ಯ ನಮಗೂ ಇದೆ. ಪವಿತ್ರಾತ್ಮರ ಪರಿಪೂರ್ಣತೆಯನ್ನು ಸ್ವೀಕರಿಸುವ ಅದೇ ಭಾಗ್ಯವೂ ನಮಗಿದೆ. ಇದು ಒಳ್ಳೆಯದು. ಬಹಳ ಒಳ್ಳೆಯದು. ಆದರೆ ಈ ಒಳಿತನ್ನು ನಾವು ಅನೇಕ ಬಾರಿ ಕಳೆದುಕೊಳ್ಳುತ್ತೇವೆ. ನಾವು ದೃಢೀಕರಣ ಸಂಸ್ಕಾರವನ್ನು ಪಡೆದಿರಬಹುದು; ಆದರೂ ಪವಿತ್ರಾತ್ಮರನ್ನು ನಮ್ಮೊಳಗೆ ಬರಲು ಮತ್ತು ನಮ್ಮ ಜೀವನವನ್ನು ಪರಿವರ್ತಿಸಲು ಬಿಡದೆ ಇರಬಹುದು.
ಇನ್ನು ಎರಡು ವಾರಗಳೊಳಗೆ ನಾವು ಪೆಂತೆಕೋಸ್ತೆ ಮಹೋತ್ಸವವನ್ನು ಆಚರಿಸಲಿದ್ದೇವೆ. ಇದು ಯೇಸುವಿನ ಈ ವಾಗ್ದಾನ ನೆರವೇರಿದುದರ ವಾರ್ಷಿಕ ಆಚರಣೆಯಾಗಿದೆ. ಪವಿತ್ರಾತ್ಮರು ಬಂದಿದ್ದಾರೆ ಮತ್ತು ನಾವೀಗ ಪವಿತ್ರಾತ್ಮರ ಕಾಲದಲ್ಲಿದ್ದೇವೆ ಎಂಬ ಸತ್ಯವನ್ನು ಆ ದಿನ ನಾವು ಸ್ಮರಿಸುತ್ತೇವೆ.
ಇಂದು ಮತ್ತು ಮುಂದಿನ ಒಂದೆರಡು ವಾರಗಳಲ್ಲಿ ಪವಿತ್ರಾತ್ಮರ ಕುರಿತು ಧ್ಯಾನಿಸಿ. ನಿಮ್ಮ ಜೀವನದಲ್ಲಿ ಪವಿತ್ರಾತ್ಮರು ಇನ್ನಷ್ಟು ಸಕ್ರಿಯರಾಗಲು ನೀವು ಅವಕಾಶ ನೀಡಬೇಕಿದ್ದರೆ, ಅದನ್ನು ವಿನಮ್ರತೆಯಿಂದ ಒಪ್ಪಿಕೊಳ್ಳಿ. ನೀವು ಪವಿತ್ರಾತ್ಮರನ್ನು ಅವರ ಪರಿಪೂರ್ಣತೆಯಲ್ಲಿ ಸ್ವೀಕರಿಸಬೇಕೆಂದು ಯೇಸು ಬಯಸುತ್ತಾರೆ ಎಂಬ ಭರವಸೆಯಿಡಿ. ಮತ್ತು ಈ ಐಕ್ಯವು ಉಂಟಾಗಲು ಅವಕಾಶ ನೀಡುವುದಕ್ಕೆ ಭಯಪಡಬೇಡಿ.
ಪವಿತ್ರಾತ್ಮರೇ, ದಯವಿಟ್ಟು ನನ್ನ ಬಳಿಗೆ ಬನ್ನಿ. ನನ್ನ ಜೀವನದಲ್ಲಿ ನಿಮ್ಮ ಸಾನ್ನಿಧ್ಯವು ಜ್ವಾಲೆಯಂತೆ ಉಜ್ವಲವಾಗಿ ಪ್ರಜ್ವಲಿಸುವಂತೆ ಮಾಡಲು ನನಗೆ ಸಹಾಯಮಾಡಿ. ಯೇಸು ವಾಗ್ದಾನ ಮಾಡಿದ ನಿಮ್ಮನ್ನು ನಿಮ್ಮ ಪರಿಪೂರ್ಣತೆಯಲ್ಲಿ ನಾನು ಸ್ವೀಕರಿಸುವಂತಾಗಲಿ. ಪವಿತ್ರಾತ್ಮರೇ, ದಿವ್ಯ ಯೇಸುವೇ, ಕರುಣಾಮಯ ತಂದೆಯೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಪವಿತ್ರಾತ್ಮರಿಗೆ ನೊವೇನಾ
ಪೆಂತೆಕೋಸ್ತೆ ಹಬ್ಬದ ಸಿದ್ಧತೆಯಾಗಿ ಪ್ರಾರ್ಥಿಸಲಾಗುತ್ತದೆ
ಮೇ 22, ಶುಕ್ರವಾರದಿಂದ ಆರಂಭ
ನೀವು ನನಗೆ ಅವಕಾಶ ನೀಡಿದರೆ ನಾನು ನಿಮ್ಮ ಜೀವನವನ್ನು ಪ್ರವೇಶಿಸಬಲ್ಲೆ
ಆಧ್ಯಾತ್ಮಿಕ ಚಿಂತನೆಗಳು





