ಕನ್ನಡ

“ನನ್ನ ಪ್ರಭುವೇ, ನನ್ನ ದೇವರೇ!”

ಶುಕ್ರವಾರ, ಜುಲೈ 3, 2020

ಪ್ರೇಷಿತ ಸಂತ ತೋಮರ ಹಬ್ಬ

ಇಂದಿನ ವಾಚನಗಳು

ಹನ್ನೆರಡು ಮಂದಿಯಲ್ಲಿ ಒಬ್ಬನಾದ, ದಿದುಮನೆಂದು ಕರೆಯಲ್ಪಡುವ ತೋಮನು ಯೇಸು ಬಂದಾಗ ಅವರೊಂದಿಗೆ ಇರಲಿಲ್ಲ.  ಆದ್ದರಿಂದ ಇತರ ಶಿಷ್ಯರು ಅವನಿಗೆ, “ನಾವು ಪ್ರಭುವನ್ನು ಕಂಡಿದ್ದೇವೆ” ಎಂದರು.  ಆದರೆ ತೋಮನು ಅವರಿಗೆ, “ಅವರ ಕೈಗಳಲ್ಲಿ ಮೊಳೆಗಳ ಗುರುತನ್ನು ನೋಡಿ, ಆ ಗುರುತುಗಳಲ್ಲಿ ನನ್ನ ಬೆರಳನ್ನಿಟ್ಟು, ಅವರ ಪಾರ್ಶ್ವದಲ್ಲಿ ನನ್ನ ಕೈಯನ್ನು ಇಡದ ಹೊರತು ನಾನು ನಂಬುವುದಿಲ್ಲ” ಎಂದನು. ಯೋಹಾನ 20:24-25

ಮೇಲಿನ ಮಾತಿನಲ್ಲಿ ವ್ಯಕ್ತವಾಗುವ ಸಂತ ತೋಮರ ನಂಬಿಕೆಯ ಕೊರತೆಯನ್ನು ಟೀಕಿಸುವುದು ಸುಲಭ.  ಆದರೆ ಅವರ ಬಗ್ಗೆ ಕೀಳಾಗಿ ಯೋಚಿಸುವ ಮೊದಲು, ನೀವಾಗಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ ಎಂದು ಯೋಚಿಸಿ.  ಈ ಘಟನೆಯ ಅಂತ್ಯ ನಮಗೆ ಸ್ಪಷ್ಟವಾಗಿ ತಿಳಿದಿರುವುದರಿಂದ ಹೀಗೆ ಯೋಚಿಸುವುದು ಕಷ್ಟ.  ಯೇಸು ನಿಜವಾಗಿಯೂ ಸತ್ತವರೊಳಗಿಂದ ಎದ್ದರು ಮತ್ತು ಕೊನೆಗೆ ತೋಮರು “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಉದ್ಗರಿಸುತ್ತಾ ವಿಶ್ವಾಸಿಸಿದರು ಎಂಬುದು ನಮಗೆ ತಿಳಿದಿದೆ.  ಆದರೂ ಅವರ ಪರಿಸ್ಥಿತಿಯಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ.

ಮೊದಲನೆಯದಾಗಿ, ತೋಮರ ಸಂಶಯಕ್ಕೆ ತೀವ್ರ ದುಃಖ ಮತ್ತು ಹತಾಶೆಯೂ ಸ್ವಲ್ಪಮಟ್ಟಿಗೆ ಕಾರಣವಾಗಿದ್ದಿರಬಹುದು.  ಯೇಸುವೇ ಮೆಸ್ಸೀಯರೆಂದು ಅವರು ಆಶಿಸಿದ್ದರು; ತಮ್ಮ ಜೀವನದ ಹಿಂದಿನ ಮೂರು ವರ್ಷಗಳನ್ನು ಅವರನ್ನು ಹಿಂಬಾಲಿಸಲು ಮುಡಿಪಾಗಿಟ್ಟಿದ್ದರು; ಈಗ ಯೇಸು ಸತ್ತಿದ್ದರು…ಎಂದು ಅವರು ಭಾವಿಸಿದ್ದರು.  ಇದು ಒಂದು ಮುಖ್ಯವಾದ ಅಂಶ. ಏಕೆಂದರೆ ಜೀವನದಲ್ಲಿ ಯಾವುದಾದರೂ ಕಷ್ಟ, ನಿರಾಸೆ ಅಥವಾ ನೋವಿನ ಪರಿಸ್ಥಿತಿಯನ್ನು ಎದುರಿಸುವಾಗ ಅನೇಕ ಬಾರಿ ನಮ್ಮ ವಿಶ್ವಾಸವು ಪರೀಕ್ಷೆಗೆ ಒಳಗಾಗುತ್ತದೆ.  ಹತಾಶೆಯು ನಮ್ಮನ್ನು ಸಂಶಯದ ಕಡೆಗೆ ಸೆಳೆಯಲು ಅವಕಾಶ ಕೊಡುವ ಪ್ರಲೋಭನೆ ನಮಗೆ ಉಂಟಾಗುತ್ತದೆ. ಹೀಗಾದಾಗ ನಾವು ನಮ್ಮ ವಿಶ್ವಾಸಕ್ಕಿಂತಲೂ ನಮ್ಮ ನೋವನ್ನೇ ಹೆಚ್ಚಾಗಿ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

ಎರಡನೆಯದಾಗಿ, ತೋಮರು ತಮ್ಮ ಕಣ್ಣಾರೆ ಕಂಡ ಭೌತಿಕ ವಾಸ್ತವವನ್ನು ನಿರಾಕರಿಸಿ, ಲೌಕಿಕ ದೃಷ್ಟಿಯಿಂದ ಸಂಪೂರ್ಣವಾಗಿ “ಅಸಾಧ್ಯವಾದ” ಸಂಗತಿಯನ್ನು ನಂಬಲು ಸಹ ಕರೆಯಲ್ಪಟ್ಟಿದ್ದರು.  ಜನರು ಸತ್ತವರೊಳಗಿಂದ ಎದ್ದು ಬರುವುದಿಲ್ಲವಲ್ಲ!  ಕೇವಲ ಲೌಕಿಕ ದೃಷ್ಟಿಯಿಂದ ನೋಡಿದರೆ, ಹೀಗೆ ಆಗುವುದೇ ಇಲ್ಲ.  ಯೇಸು ಇಂತಹ ಅದ್ಭುತಗಳನ್ನು ಮಾಡುವುದನ್ನು ತೋಮರು ಹಿಂದೆ ಕಂಡಿದ್ದರೂ, ತಮ್ಮ ಕಣ್ಣಾರೆ ನೋಡದೆ ನಂಬಲು ಅವರಿಗೆ ಬಹಳ ವಿಶ್ವಾಸದ ಅಗತ್ಯವಿತ್ತು.  ಹೀಗೆ ಹತಾಶೆ ಮತ್ತು ಅಸಾಧ್ಯವೆಂದು ತೋರಿದ ಸಂಗತಿಯು ತೋಮರ ವಿಶ್ವಾಸದ ಮೂಲವನ್ನೇ ತಟ್ಟಿ ಅದನ್ನು ನಂದಿಸಿಬಿಟ್ಟವು.

ಈ ಭಾಗದಿಂದ ನಾವು ಕಲಿಯಬಹುದಾದ ಎರಡು ಪಾಠಗಳನ್ನು ಇಂದು ಮನನ ಮಾಡಿ: 1) ಜೀವನದಲ್ಲಿ ನಿಮ್ಮ ನಿರ್ಧಾರಗಳಿಗೆ ಅಥವಾ ನಂಬಿಕೆಗಳಿಗೆ ಹತಾಶೆ, ನಿರಾಸೆ ಅಥವಾ ನೋವು ಮಾರ್ಗದರ್ಶಿಯಾಗಲು ಎಂದಿಗೂ ಅವಕಾಶ ಕೊಡಬೇಡಿ.  ಅವು ಎಂದಿಗೂ ಒಳ್ಳೆಯ ಮಾರ್ಗದರ್ಶಿಗಳಲ್ಲ.  2)  ದೇವರು ತಾವು ಆಯ್ಕೆಮಾಡುವ ಯಾವುದನ್ನಾದರೂ, ಎಲ್ಲವನ್ನೂ ಮಾಡುವ ಶಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಸಂಶಯಿಸಬೇಡಿ.  ಈ ಸಂದರ್ಭದಲ್ಲಿ, ದೇವರು ಸತ್ತವರೊಳಗಿಂದ ಏಳಲು ನಿರ್ಧರಿಸಿದರು; ಅದರಂತೆಯೇ ಎದ್ದರು.  ನಮ್ಮ ಜೀವನದಲ್ಲಿಯೂ ದೇವರು ತಾವು ಇಚ್ಛಿಸುವ ಯಾವುದನ್ನಾದರೂ ಮಾಡಬಲ್ಲರು.  ನಾವು ಅವರ ಪರಿಪಾಲನೆಯ ಮೇಲೆ ಭರವಸೆ ಇಟ್ಟರೆ ಸಾಕು, ಅವರು ವಿಶ್ವಾಸದಲ್ಲಿ ನಮಗೆ ಪ್ರಕಟಿಸುವುದು ನೆರವೇರುತ್ತದೆ ಎಂಬುದನ್ನು ನಾವು ನಂಬಬೇಕು ಮತ್ತು ಅರಿತಿರಬೇಕು.

ಪ್ರಭುವೇ, ನಾನು ನಂಬುತ್ತೇನೆ.  ನನ್ನ ಅಪನಂಬಿಕೆಯನ್ನು ನೀಗಿಸಲು ಸಹಾಯಮಾಡಿ.  ಹತಾಶೆಗೆ ಮಣಿಯುವ ಅಥವಾ ಜೀವನದ ಎಲ್ಲದರ ಮೇಲಿರುವ ನಿಮ್ಮ ಸರ್ವಶಕ್ತಿಯನ್ನು ಸಂಶಯಿಸುವ ಪ್ರಲೋಭನೆ ನನಗೆ ಉಂಟಾದಾಗ, ನಿಮ್ಮ ಕಡೆಗೆ ತಿರುಗಲು ಮತ್ತು ಪೂರ್ಣ ಹೃದಯದಿಂದ ನಿಮ್ಮಲ್ಲಿ ಭರವಸೆ ಇಡಲು ನನಗೆ ಸಹಾಯಮಾಡಿ.  ಸಂತ ತೋಮರೊಂದಿಗೆ ನಾನೂ “ನನ್ನ ಪ್ರಭುವೇ, ನನ್ನ ದೇವರೇ” ಎಂದು ಉದ್ಗರಿಸುವಂತಾಗಲಿ. ನೀವು ನನ್ನ ಆತ್ಮದಲ್ಲಿ ಇರಿಸಿದ ವಿಶ್ವಾಸದಿಂದ ಮಾತ್ರ ನಾನು ಕಾಣುವಾಗಲೂ ಹೀಗೆ ಉದ್ಗರಿಸುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಪ್ರೇಷಿತ ಸಂತ ತೋಮರು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ – ಕಾರವಾಜ್ಜಿಯವರ ‘ಸಂತ ತೋಮರ ಅಪನಂಬಿಕೆ’