ಕನ್ನಡ

ವಿವೇಚನಾರಾಹಿತ್ಯ ಮತ್ತು ಸಹಜತೆ 

ಜುಲೈ 7, 2020
ಸಾಮಾನ್ಯ ಕಾಲದ ಹದಿನಾಲ್ಕನೆಯ ವಾರದ ಮಂಗಳವಾರ
ಇಂದಿನ ವಾಚನಗಳು

ಮಾತನಾಡಲಾರದ ಒಬ್ಬ ದೆವ್ವಪೀಡಿತನನ್ನು ಯೇಸುವಿನ ಬಳಿಗೆ ಕರೆತರಲಾಯಿತು. ದೆವ್ವವನ್ನು ಓಡಿಸಿದಾಗ ಆ ಮೂಕನು ಮಾತನಾಡಿದನು. ಜನಸಮೂಹವು ಆಶ್ಚರ್ಯಪಟ್ಟು, “ಇಂಥದ್ದನ್ನು ಇಸ್ರಾಯೇಲಿನಲ್ಲಿ ಎಂದೂ ಕಂಡಿಲ್ಲ” ಎಂದಿತು. ಆದರೆ ಫರಿಸಾಯರು, “ಇವನು ದೆವ್ವಗಳ ಅಧಿಪತಿಯ ನೆರವಿನಿಂದ ದೆವ್ವಗಳನ್ನು ಓಡಿಸುತ್ತಾನೆ” ಎಂದರು.  ಮತ್ತಾಯ 9:32-34

ಜನಸಮೂಹದ ಪ್ರತಿಕ್ರಿಯೆಗೂ ಫರಿಸಾಯರ ಪ್ರತಿಕ್ರಿಯೆಗೂ ಎಂಥ ತೀವ್ರ ವ್ಯತ್ಯಾಸವನ್ನು ನಾವು ಕಾಣುತ್ತೇವೆ! ನಿಜಕ್ಕೂ ಇದು ಬಹಳ ದುಃಖಕರವಾದ ವ್ಯತ್ಯಾಸ.

ಜನಸಮೂಹದ, ಅಂದರೆ ಸಾಮಾನ್ಯ ಜನರ ಪ್ರತಿಕ್ರಿಯೆಯು ಆಶ್ಚರ್ಯದಿಂದ ಕೂಡಿತ್ತು. ಅವರ ಪ್ರತಿಕ್ರಿಯೆಯು ತಾನು ಕಂಡದ್ದನ್ನು ಸ್ವೀಕರಿಸುವ ಸರಳ ಮತ್ತು ನಿರ್ಮಲ ವಿಶ್ವಾಸವನ್ನು ತೋರಿಸುತ್ತದೆ. ಇಂಥ ವಿಶ್ವಾಸವನ್ನು ಹೊಂದಿರುವುದು ಎಂಥ ಆಶೀರ್ವಾದ!

ಫರಿಸಾಯರ ಪ್ರತಿಕ್ರಿಯೆಯು ತೀರ್ಪು, ವಿವೇಚನಾರಾಹಿತ್ಯ, ಅಸೂಯೆ ಮತ್ತು ಕಠೋರತೆಯಿಂದ ಕೂಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಅದು ವಿವೇಚನಾರಹಿತವಾಗಿತ್ತು. ಯೇಸು “ದೆವ್ವಗಳ ಅಧಿಪತಿಯ ನೆರವಿನಿಂದ ದೆವ್ವಗಳನ್ನು ಓಡಿಸುತ್ತಾನೆ” ಎಂಬ ತೀರ್ಮಾನಕ್ಕೆ ಬರಲು ಫರಿಸಾಯರನ್ನು ಪ್ರೇರೇಪಿಸಿದ್ದು ಯಾವುದು? ಖಂಡಿತವಾಗಿಯೂ ಯೇಸು ಮಾಡಿದ ಯಾವ ಕಾರ್ಯವೂ ಅವರನ್ನು ಈ ತೀರ್ಮಾನಕ್ಕೆ ಕರೆದೊಯ್ಯುವಂಥದ್ದಾಗಿರಲಿಲ್ಲ. ಆದ್ದರಿಂದ, ತರ್ಕಬದ್ಧವಾಗಿ ಬರಬಹುದಾದ ಏಕೈಕ ತೀರ್ಮಾನವೆಂದರೆ ಫರಿಸಾಯರು ಒಂದು ಬಗೆಯ ಅಸೂಯೆ ಮತ್ತು ಮತ್ಸರದಿಂದ ತುಂಬಿದ್ದರು ಎಂಬುದೇ. ಈ ಪಾಪಗಳೇ ಅವರನ್ನು ಈ ಹಾಸ್ಯಾಸ್ಪದ ಮತ್ತು ವಿವೇಚನಾರಹಿತ ತೀರ್ಮಾನಕ್ಕೆ ಕರೆದೊಯ್ದವು. 

ಇದರಿಂದ ನಾವು ಕಲಿಯಬೇಕಾದ ಪಾಠವೇನೆಂದರೆ, ನಾವು ಇತರರನ್ನು ಅಸೂಯೆಯಿಂದಲ್ಲ, ದೀನತೆ ಮತ್ತು ಪ್ರಾಮಾಣಿಕತೆಯಿಂದ ಸಮೀಪಿಸಬೇಕು. ನಮ್ಮ ಸುತ್ತಲಿರುವವರನ್ನು ದೀನತೆ ಮತ್ತು ಪ್ರೀತಿಯಿಂದ ನೋಡುವಾಗ, ಅವರ ಬಗ್ಗೆ ನಾವು ಸಹಜವಾಗಿಯೇ ಯಥಾರ್ಥವಾದ ಮತ್ತು ಪ್ರಾಮಾಣಿಕವಾದ ತೀರ್ಮಾನಗಳಿಗೆ ಬರುತ್ತೇವೆ. ದೀನತೆ ಮತ್ತು ಪ್ರಾಮಾಣಿಕ ಪ್ರೀತಿಯು ಇತರರ ಒಳ್ಳೆಯತನವನ್ನು ಕಾಣಲು ಮತ್ತು ಆ ಒಳ್ಳೆಯತನದಲ್ಲಿ ಸಂತೋಷಿಸಲು ನಮಗೆ ನೆರವಾಗುತ್ತವೆ. ಖಂಡಿತವಾಗಿಯೂ ನಮಗೆ ಪಾಪದ ಅರಿವೂ ಇರುತ್ತದೆ. ಆದರೆ ಅಸೂಯೆ ಮತ್ತು ಮತ್ಸರದ ಪರಿಣಾಮವಾಗಿ ಇತರರ ಬಗ್ಗೆ ದುಡುಕಿನ ಮತ್ತು ವಿವೇಚನಾರಹಿತ ತೀರ್ಪುಗಳನ್ನು ನೀಡದಂತೆ ದೀನತೆಯು ನಮಗೆ ಸಹಾಯ ಮಾಡುತ್ತದೆ.

ಇತರರ ಬಗ್ಗೆ ನೀವು ಸಾಮಾನ್ಯವಾಗಿ ಯೋಚಿಸುವ ಮತ್ತು ಮಾತನಾಡುವ ರೀತಿಯನ್ನು ಕುರಿತು ಇಂದು ಚಿಂತಿಸಿ.  ಯೇಸು ಮಾಡಿದ ಒಳ್ಳೆಯ ಕಾರ್ಯಗಳನ್ನು ಕಂಡು, ವಿಶ್ವಾಸವಿಟ್ಟು, ಆಶ್ಚರ್ಯಪಟ್ಟ ಜನಸಮೂಹದವರಂತೆ ನೀವು ಹೆಚ್ಚಾಗಿ ವರ್ತಿಸುತ್ತೀರಾ?  ಅಥವಾ ತಮ್ಮ ತೀರ್ಮಾನಗಳಲ್ಲಿ ವಿಷಯಗಳನ್ನು ಕಲ್ಪಿಸಿಕೊಂಡು ಅತಿಶಯೋಕ್ತಿಯಿಂದ ಹೇಳುವ ಫರಿಸಾಯರಂತಿದ್ದೀರಾ?  ಜನಸಮೂಹದ ಸಹಜ ಮನೋಭಾವವನ್ನು ನಿಮ್ಮದಾಗಿಸಿಕೊಳ್ಳಲು ದೃಢಸಂಕಲ್ಪ ಮಾಡಿ. ಆಗ ನೀವೂ ಕ್ರಿಸ್ತನಲ್ಲಿ ಸಂತೋಷ ಮತ್ತು ಆಶ್ಚರ್ಯವನ್ನು ಕಂಡುಕೊಳ್ಳಬಹುದು.

ಪ್ರಭುವೇ, ಸರಳವಾದ, ದೀನವಾದ ಮತ್ತು ನಿರ್ಮಲವಾದ ವಿಶ್ವಾಸವನ್ನು ಹೊಂದಲು ನಾನು ಬಯಸುತ್ತೇನೆ.  ದೀನತೆಯಿಂದ ಇತರರಲ್ಲಿಯೂ ನಿನ್ನನ್ನು ಕಾಣಲು ನನಗೆ ಸಹಾಯ ಮಾಡು.  ನಾನು ಪ್ರತಿದಿನ ಭೇಟಿಯಾಗುವವರ ಜೀವನದಲ್ಲಿ ನಿನ್ನನ್ನು ಕಾಣಲು ಮತ್ತು ನಿನ್ನ ಸಾನ್ನಿಧ್ಯವನ್ನು ಕಂಡು ಆಶ್ಚರ್ಯಪಡಲು ನನಗೆ ಸಹಾಯ ಮಾಡು.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಜೇಮ್ಸ್ ಟಿಸ್ಸೋಟ್ ಅವರ ‘ದೆವ್ವಪೀಡಿತ ಕುರುಡ ಮತ್ತು ಮೂಕ ಮನುಷ್ಯ’