ಸೆಪ್ಟೆಂಬರ್ 26, 2020
ಸಾಮಾನ್ಯ ಕಾಲದ ಇಪ್ಪತ್ತೈದನೆಯ ವಾರದ ಶನಿವಾರ
ಇಂದಿನ ವಾಚನಗಳು
ಸಂತ ಕೊಸ್ಮಾಸ್ ಮತ್ತು ಸಂತ ದಮಿಯಾನ್, ರಕ್ತಸಾಕ್ಷಿಗಳು—ಐಚ್ಛಿಕ ಸ್ಮರಣೆ

“ನಾನು ನಿಮಗೆ ಹೇಳುತ್ತಿರುವುದನ್ನು ಗಮನವಿಟ್ಟು ಕೇಳಿರಿ. ಮನುಷ್ಯಕುಮಾರನನ್ನು ಮನುಷ್ಯರ ಕೈಗೆ ಒಪ್ಪಿಸಲಾಗುವುದು.” ಆದರೆ ಈ ಮಾತು ಅವರಿಗೆ ಅರ್ಥವಾಗಲಿಲ್ಲ; ಅವರು ಅದನ್ನು ಅರ್ಥಮಾಡಿಕೊಳ್ಳದಂತೆ ಅದರ ಅರ್ಥವನ್ನು ಅವರಿಂದ ಮರೆಮಾಡಲಾಗಿತ್ತು. ಈ ಮಾತಿನ ಬಗ್ಗೆ ಅವರನ್ನು ಕೇಳಲು ಅವರು ಹೆದರಿದರು. ಲೂಕ 9:44-45
ಹಾಗಾದರೆ ಇದರ ಅರ್ಥವನ್ನು “ಅವರಿಂದ ಮರೆಮಾಡಲಾಗಿತ್ತು” ಏಕೆ? ಇದು ಆಸಕ್ತಿಕರವಾಗಿದೆ. ಇಲ್ಲಿ ಯೇಸು ಅವರಿಗೆ, “ನಾನು ನಿಮಗೆ ಹೇಳುತ್ತಿರುವುದನ್ನು ಗಮನವಿಟ್ಟು ಕೇಳಿರಿ” ಎಂದು ಹೇಳುತ್ತಾರೆ. ನಂತರ ತಾವು ಯಾತನೆ ಅನುಭವಿಸಿ ಸಾಯುವುದಾಗಿ ವಿವರಿಸಲು ಆರಂಭಿಸುತ್ತಾರೆ. ಆದರೆ ಅವರಿಗೆ ಅದು ಅರ್ಥವಾಗಲಿಲ್ಲ. ಅವರ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ ಮತ್ತು “ಈ ಮಾತಿನ ಬಗ್ಗೆ ಅವರನ್ನು ಕೇಳಲು ಅವರು ಹೆದರಿದರು.”
ನಿಜವೆಂದರೆ, ಅವರಿಗೆ ಅರ್ಥವಾಗದಿದ್ದುದರಿಂದ ಯೇಸು ಬೇಸರಗೊಳ್ಳಲಿಲ್ಲ. ಅವರು ತಕ್ಷಣವೇ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಆದರೂ ಇದು ಅವರಿಗೆ ಹೇಳುವುದರಿಂದ ಯೇಸುವನ್ನು ತಡೆಯಲಿಲ್ಲ. ಏಕೆ? ಏಕೆಂದರೆ ಕಾಲಕ್ರಮೇಣ ಅವರು ಅರ್ಥಮಾಡಿಕೊಳ್ಳುತ್ತಾರೆಂದು ಅವರಿಗೆ ತಿಳಿದಿತ್ತು. ಆದರೆ ಆರಂಭದಲ್ಲಿ ಪ್ರೇಷಿತರು ಸ್ವಲ್ಪ ಗೊಂದಲದಿಂದ ಸುಮ್ಮನೆ ಕೇಳಿಸಿಕೊಂಡರು.
ಪ್ರೇಷಿತರಿಗೆ ಯಾವಾಗ ಅರ್ಥವಾಯಿತು? ಪವಿತ್ರಾತ್ಮರು ಅವರ ಮೇಲೆ ಇಳಿದುಬಂದು ಅವರನ್ನು ಸಂಪೂರ್ಣ ಸತ್ಯದ ಕಡೆಗೆ ನಡೆಸಿದಾಗ ಅವರಿಗೆ ಅರ್ಥವಾಯಿತು. ಇಂತಹ ಆಳವಾದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಪವಿತ್ರಾತ್ಮರ ಕಾರ್ಯ ಅಗತ್ಯವಾಗಿತ್ತು.
ನಮ್ಮ ವಿಷಯದಲ್ಲಿಯೂ ಇದು ನಿಜ. ಯೇಸುವಿನ ಯಾತನೆಗಳ ರಹಸ್ಯವನ್ನು ನಾವು ಎದುರಿಸುವಾಗ ಮತ್ತು ನಮ್ಮ ಸ್ವಂತ ಜೀವನದಲ್ಲಿ ಅಥವಾ ನಾವು ಪ್ರೀತಿಸುವವರ ಜೀವನದಲ್ಲಿ ಯಾತನೆಯ ವಾಸ್ತವತೆಯನ್ನು ಎದುರಿಸುವಾಗ, ಆರಂಭದಲ್ಲಿ ನಾವು ಅನೇಕ ಬಾರಿ ಗೊಂದಲಕ್ಕೊಳಗಾಗಬಹುದು. ಅರ್ಥಮಾಡಿಕೊಳ್ಳುವಂತೆ ನಮ್ಮ ಮನಸ್ಸನ್ನು ತೆರೆಯಲು ಪವಿತ್ರಾತ್ಮರ ವರ ಅಗತ್ಯ. ಯಾತನೆಯನ್ನು ತಪ್ಪಿಸುವುದು ಬಹುಪಾಲು ಅಸಾಧ್ಯ. ನಾವೆಲ್ಲರೂ ಅದನ್ನು ಸಹಿಸಿಕೊಳ್ಳುತ್ತೇವೆ. ನಮ್ಮ ಜೀವನದಲ್ಲಿ ಕಾರ್ಯಮಾಡಲು ಪವಿತ್ರಾತ್ಮರಿಗೆ ನಾವು ಅವಕಾಶ ನೀಡದಿದ್ದರೆ, ಯಾತನೆಯು ನಮ್ಮನ್ನು ಗೊಂದಲ ಮತ್ತು ಹತಾಶೆಗೆ ದೂಡುತ್ತದೆ. ಆದರೆ ನಮ್ಮ ಮನಸ್ಸನ್ನು ತೆರೆಯಲು ಪವಿತ್ರಾತ್ಮರಿಗೆ ನಾವು ಅವಕಾಶ ನೀಡಿದರೆ, ಕ್ರಿಸ್ತನ ಯಾತನೆಗಳ ಮೂಲಕ ದೇವರು ಜಗತ್ತಿಗೆ ರಕ್ಷಣೆಯನ್ನು ತಂದಂತೆಯೇ, ನಮ್ಮ ಯಾತನೆಗಳ ಮೂಲಕವೂ ನಮ್ಮಲ್ಲಿ ಹೇಗೆ ಕಾರ್ಯಮಾಡಬಲ್ಲರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಆರಂಭಿಸುತ್ತೇವೆ.
ಯೇಸುವಿನ ಯಾತನೆಗಳನ್ನು ಮತ್ತು ನಿಮ್ಮ ಸ್ವಂತ ಯಾತನೆಗಳನ್ನು ನೀವು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಇಂದು ಚಿಂತಿಸಿ. ಯಾತನೆಯ ಅರ್ಥವನ್ನೂ ಅದರ ಮೌಲ್ಯವನ್ನೂ ನಿಮಗೆ ಪ್ರಕಟಿಸಲು ನೀವು ಪವಿತ್ರಾತ್ಮರಿಗೆ ಅವಕಾಶ ನೀಡುತ್ತಿದ್ದೀರಾ? ಈ ಅನುಗ್ರಹವನ್ನು ಬೇಡಿ ಪವಿತ್ರಾತ್ಮರಿಗೆ ಪ್ರಾರ್ಥನೆ ಸಲ್ಲಿಸಿ; ನಮ್ಮ ವಿಶ್ವಾಸದ ಈ ಗಹನ ರಹಸ್ಯದೊಳಗೆ ದೇವರು ನಿಮ್ಮನ್ನು ನಡೆಸಲು ಅವಕಾಶ ನೀಡಿ.
ಪ್ರಭುವೇ, ನನ್ನ ರಕ್ಷಣೆಗಾಗಿ ನೀವು ಯಾತನೆ ಅನುಭವಿಸಿ ಮರಣಹೊಂದಿದಿರಿ ಎಂದು ನನಗೆ ತಿಳಿದಿದೆ. ನಿಮ್ಮ ಶಿಲುಬೆಯಲ್ಲಿ ನನ್ನ ಸ್ವಂತ ಯಾತನೆಯೂ ಹೊಸ ಅರ್ಥವನ್ನು ಪಡೆಯಬಲ್ಲದು ಎಂದು ನನಗೆ ತಿಳಿದಿದೆ. ಈ ಮಹಾ ರಹಸ್ಯವನ್ನು ಇನ್ನಷ್ಟು ಪೂರ್ಣವಾಗಿ ಕಾಣಲು ಮತ್ತು ಅರ್ಥಮಾಡಿಕೊಳ್ಳಲು ಹಾಗೂ ನಿಮ್ಮ ಶಿಲುಬೆಯಲ್ಲಿಯೂ ನನ್ನ ಶಿಲುಬೆಯಲ್ಲಿಯೂ ಇನ್ನಷ್ಟು ಹೆಚ್ಚಿನ ಮೌಲ್ಯವನ್ನು ಕಂಡುಕೊಳ್ಳಲು ನನಗೆ ಸಹಾಯಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಐದನೆಯ ದಿನ: ಲಿಸಿಯುವಿನ ಸಂತ ತೆರೇಸಾ – ಪುಟ್ಟ ಹೂವು ಅವರಿಗೆ ನವೇನ ಪ್ರಾರ್ಥನೆ
ಇಂದಿನ ಸಂತರು – ಸಂತ ಕೊಸ್ಮಾಸ್ ಮತ್ತು ಸಂತ ದಮಿಯಾನ್, ರಕ್ತಸಾಕ್ಷಿಗಳು
ಚಿತ್ರ: ಕರವಾಜ್ಜಿಯೊ ಅವರ ‘ಕ್ರಿಸ್ತನ ಬಂಧನ’




