ಕನ್ನಡ

ಒಬ್ಬರಿಗೊಬ್ಬರು ಬೆಂಬಲವಾಗಿರುವುದು

ಸೆಪ್ಟೆಂಬರ್ 28, 2020
ಸಾಮಾನ್ಯ ಕಾಲದ ಇಪ್ಪತ್ತಾರನೆಯ ವಾರದ ಸೋಮವಾರ
ಇಂದಿನ ವಾಚನಗಳು

 ಸಂತ ವೆನ್ಸೆಸ್ಲಾಸ್, ರಕ್ತಸಾಕ್ಷಿ—ಐಚ್ಛಿಕ ಸ್ಮರಣೆ

ಸಂತ ಲಾರೆನ್ಸ್ ರೂಯಿಸ್ ಮತ್ತು ಸಂಗಡಿಗರು, ರಕ್ತಸಾಕ್ಷಿಗಳು—ಐಚ್ಛಿಕ ಸ್ಮರಣೆ

ಆಗ ಯೋಹಾನನು, “ಗುರುವೇ, ಒಬ್ಬನು ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವುದನ್ನು ನಾವು ಕಂಡೆವು. ಅವನು ನಮ್ಮ ಬಳಗವನ್ನು ಅನುಸರಿಸುವವನಲ್ಲದ ಕಾರಣ ನಾವು ಅವನನ್ನು ತಡೆಯಲು ಪ್ರಯತ್ನಿಸಿದೆವು” ಎಂದು ಹೇಳಿದನು. ಯೇಸು ಅವನಿಗೆ, “ಅವನನ್ನು ತಡೆಯಬೇಡಿ; ಏಕೆಂದರೆ ನಿಮಗೆ ವಿರುದ್ಧವಾಗಿಲ್ಲದವನು ನಿಮ್ಮ ಪರವಾಗಿದ್ದಾನೆ” ಎಂದರು.  ಲೂಕ 9:49-50

ಯೇಸುವಿನ ಹೆಸರಿನಲ್ಲಿ ದೆವ್ವವನ್ನು ಬಿಡಿಸುತ್ತಿದ್ದ ಒಬ್ಬನನ್ನು ತಡೆಯಲು ಪ್ರೇಷಿತರು ಏಕೆ ಪ್ರಯತ್ನಿಸಿದರು?  ಯೇಸುವಿಗೆ ಅದರ ಬಗ್ಗೆ ಚಿಂತೆ ಇರಲಿಲ್ಲ; ವಾಸ್ತವವಾಗಿ, ಅವನನ್ನು ತಡೆಯಬೇಡಿ ಎಂದು ಅವರು ಪ್ರೇಷಿತರಿಗೆ ಹೇಳುತ್ತಾರೆ.  ಹಾಗಾದರೆ ಪ್ರೇಷಿತರು ಏಕೆ ಚಿಂತಿತರಾಗಿದ್ದರು?  ಬಹುಶಃ ಅಸೂಯೆಯ ಕಾರಣದಿಂದಲೇ.

ಈ ಸಂದರ್ಭದಲ್ಲಿ ಪ್ರೇಷಿತರಲ್ಲಿ ನಾವು ಕಾಣುವ ಅಸೂಯೆಯು ಕೆಲವೊಮ್ಮೆ ಧರ್ಮಸಭೆಯೊಳಗೂ ನುಸುಳಬಹುದು.  ಅದು ಅಧಿಕಾರ ಮತ್ತು ನಿಯಂತ್ರಣವನ್ನು ಹೊಂದಬೇಕೆಂಬ ಬಯಕೆಗೆ ಸಂಬಂಧಿಸಿದೆ.  ದೆವ್ವಗಳನ್ನು ಬಿಡಿಸುತ್ತಿದ್ದ ವ್ಯಕ್ತಿ ತಮ್ಮ ಬಳಗವನ್ನು ಅನುಸರಿಸದಿದ್ದುದರಿಂದ ಪ್ರೇಷಿತರು ಅಸಮಾಧಾನಗೊಂಡಿದ್ದರು.  ಬೇರೆ ಮಾತಿನಲ್ಲಿ ಹೇಳುವುದಾದರೆ, ಆ ವ್ಯಕ್ತಿಯನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ಪ್ರೇಷಿತರಿಗೆ ಸಾಧ್ಯವಾಗಿರಲಿಲ್ಲ.

ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದಾದರೂ, ಇಂದಿನ ಸನ್ನಿವೇಶದಲ್ಲಿ ಇದನ್ನು ನೋಡುವುದು ಸಹಾಯಕವಾಗಬಹುದು.  ಒಬ್ಬರು ದೇವಾಲಯದಲ್ಲಿ ಒಂದು ಸೇವಾಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ ಮತ್ತು ಇನ್ನೊಬ್ಬರು ಅಥವಾ ಕೆಲವರು ಹೊಸ ಸೇವಾಕಾರ್ಯವನ್ನು ಆರಂಭಿಸುತ್ತಾರೆ ಎಂದುಕೊಳ್ಳಿ.  ಆ ಹೊಸ ಸೇವಾಕಾರ್ಯವು ಬಹಳ ಯಶಸ್ವಿಯಾಗುತ್ತದೆ. ಪರಿಣಾಮವಾಗಿ, ಹಿಂದಿನಿಂದಲೂ ಸುಸ್ಥಾಪಿತವಾಗಿರುವ ಸೇವಾಕಾರ್ಯಗಳಲ್ಲಿ ತೊಡಗಿರುವವರು ಅಸಮಾಧಾನಗೊಳ್ಳಬಹುದು ಮತ್ತು ಸ್ವಲ್ಪ ಅಸೂಯೆಪಡಬಹುದು.

ಇದು ಅರ್ಥಹೀನವಾದರೂ ವಾಸ್ತವವೂ ಹೌದು.  ಇದು ಯಾವಾಗಲೂ ನಡೆಯುತ್ತಿರುತ್ತದೆ; ದೇವಾಲಯದ ವಾತಾವರಣದಲ್ಲಿ ಮಾತ್ರವಲ್ಲ, ನಮ್ಮ ದೈನಂದಿನ ಜೀವನದಲ್ಲಿಯೂ ಸಹ.  ಬೇರೊಬ್ಬರು ಮಾಡುವ ಕೆಲಸವು ಯಶಸ್ವಿಯಾಗುತ್ತಿರುವುದನ್ನು ಅಥವಾ ಒಳ್ಳೆಯ ಫಲ ನೀಡುತ್ತಿರುವುದನ್ನು ಕಂಡಾಗ, ನಾವು ಹೊಟ್ಟೆಕಿಚ್ಚುಪಡಬಹುದು ಅಥವಾ ಅಸೂಯೆಪಡಬಹುದು.  

ಪ್ರೇಷಿತರೊಂದಿಗಿನ ಈ ಸಂದರ್ಭದಲ್ಲಿ, ಯೇಸು ಇಡೀ ವಿಷಯವನ್ನು ಬಹಳ ತಿಳಿವಳಿಕೆಯಿಂದ ಮತ್ತು ಅನುಕಂಪದಿಂದ ನೋಡುತ್ತಾರೆ.  ಆದರೆ ಅವರು ಅಷ್ಟೇ ಸ್ಪಷ್ಟವಾಗಿಯೂ ಹೇಳುತ್ತಾರೆ.  “ಅವನನ್ನು ತಡೆಯಬೇಡಿ; ಏಕೆಂದರೆ ನಿಮಗೆ ವಿರುದ್ಧವಾಗಿಲ್ಲದವನು ನಿಮ್ಮ ಪರವಾಗಿದ್ದಾನೆ.”  ನೀವು ಜೀವನದ ಸಂಗತಿಗಳನ್ನು ಈ ರೀತಿಯಾಗಿ ನೋಡುತ್ತೀರಾ?  ಯಾರಾದರೂ ಚೆನ್ನಾಗಿ ಕಾರ್ಯನಿರ್ವಹಿಸಿದಾಗ ನೀವು ಸಂತೋಷಪಡುತ್ತೀರಾ ಅಥವಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತೀರಾ?  ಬೇರೊಬ್ಬರು ಯೇಸುವಿನ ಹೆಸರಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದಾಗ, ದೇವರು ಆ ವ್ಯಕ್ತಿಯನ್ನು ಒಳಿತಿಗಾಗಿ ಬಳಸುತ್ತಿದ್ದಾರೆ ಎಂಬ ಕೃತಜ್ಞತೆಯಿಂದ ನಿಮ್ಮ ಹೃದಯ ತುಂಬುತ್ತದೆಯೇ ಅಥವಾ ನೀವು ಅಸೂಯೆಪಡುತ್ತೀರಾ?

ಇಂದು ನಿಮ್ಮ ಸುತ್ತಲೂ ನಡೆಯುತ್ತಿರುವ ಅನೇಕ ಒಳ್ಳೆಯ ಸಂಗತಿಗಳ ಕುರಿತು ಮನನ ಮಾಡಿ.  ವಿಶೇಷವಾಗಿ, ದೇವರ ರಾಜ್ಯವನ್ನು ಬೆಳೆಸುತ್ತಿರುವವರ ಕುರಿತು ಮನನ ಮಾಡಿ.  ಅವರ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎಂಬುದನ್ನೂ ಮನನ ಮಾಡಿ.  ಅವರನ್ನು ನಿಮ್ಮ ಪ್ರತಿಸ್ಪರ್ಧಿಗಳೆಂದು ನೋಡದೆ, ಕ್ರಿಸ್ತನ ದ್ರಾಕ್ಷಿತೋಟದಲ್ಲಿ ನಿಮ್ಮ ಸಹೋದ್ಯೋಗಿಗಳೆಂದು ನೋಡುವಂತಾಗಲು ಪ್ರಾರ್ಥಿಸಿ.  

ಪ್ರಭುವೇ, ನಿಮ್ಮ ಧರ್ಮಸಭೆಯಲ್ಲಿಯೂ ಸಮಾಜದಲ್ಲಿಯೂ ನಡೆಯುತ್ತಿರುವ ಅನೇಕ ಒಳ್ಳೆಯ ಸಂಗತಿಗಳಿಗಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ.  ಇತರರ ಮೂಲಕ ನೀವು ಮಾಡುವ ಎಲ್ಲ ಕಾರ್ಯಗಳಲ್ಲಿ ಸಂತೋಷಪಡಲು ನನಗೆ ಸಹಾಯ ಮಾಡಿ.  ಅಸೂಯೆಯೊಂದಿಗೆ ನನಗಿರುವ ಯಾವುದೇ ಹೋರಾಟದಿಂದ ಮುಕ್ತನಾಗಲು ನನಗೆ ಸಹಾಯ ಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಏಳನೆಯ ದಿನ: ಲಿಸಿಯುವಿನ ಸಂತ ತೆರೇಸಾ – ಪುಟ್ಟ ಪುಷ್ಪ ಅವರಿಗೆ ನೊವೇನಾ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು –

ಸಂತ ವೆನ್ಸೆಸ್ಲಾಸ್, ರಕ್ತಸಾಕ್ಷಿ
 ಹಾಗೂ
ಸಂತ ಲಾರೆನ್ಸ್ ರೂಯಿಸ್ ಮತ್ತು ಸಂಗಡಿಗರು, ರಕ್ತಸಾಕ್ಷಿಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಜೇಮ್ಸ್ ಟಿಸ್ಸೋ ಅವರ ‘ಯೇಸು ತಮ್ಮ ಶಿಷ್ಯರೊಂದಿಗೆ ಸಂಭಾಷಿಸುತ್ತಿರುವುದು’