ಕನ್ನಡ

ನೀವು ಧನ್ಯರೇ?

ಅಕ್ಟೋಬರ್ 10, 2020
ಸಾಮಾನ್ಯ ಕಾಲದ ಇಪ್ಪತ್ತೇಳನೆಯ ವಾರದ ಶನಿವಾರ
ಇಂದಿನ ವಾಚನಗಳು

ಯೇಸು ಮಾತನಾಡುತ್ತಿದ್ದಾಗ, ಜನಸಮೂಹದಲ್ಲಿದ್ದ ಒಬ್ಬ ಸ್ತ್ರೀ ಗಟ್ಟಿಯಾಗಿ ಅವರಿಗೆ, “ನಿನ್ನನ್ನು ಹೊತ್ತ ಗರ್ಭವೂ ನೀನು ಹಾಲು ಕುಡಿದ ಸ್ತನಗಳೂ ಧನ್ಯವಾದವು” ಎಂದಳು. ಅದಕ್ಕೆ ಅವರು, “ಅದಕ್ಕಿಂತಲೂ, ದೇವರ ವಾಕ್ಯವನ್ನು ಆಲಿಸಿ ಅದರಂತೆ ನಡೆಯುವವರು ಧನ್ಯರು” ಎಂದು ಉತ್ತರಿಸಿದರು.  ಲೂಕ 11:27-28

ನೀವು ದೇವರ ವಾಕ್ಯವನ್ನು ಆಲಿಸುತ್ತೀರಾ?  ಆಲಿಸುತ್ತಿದ್ದರೆ, ಅದರಂತೆ ನಡೆಯುತ್ತೀರಾ?  ಹಾಗಿದ್ದರೆ, ನಮ್ಮ ಪ್ರಭುವಿನಿಂದ ನಿಜವಾಗಿಯೂ ಧನ್ಯರಾದವರಲ್ಲಿ ನೀವೂ ಒಬ್ಬರೆಂದು ಪರಿಗಣಿಸಬಹುದು.

ಆಸಕ್ತಿಕರ ಸಂಗತಿಯೆಂದರೆ, ಈ ವಾಕ್ಯಭಾಗದಲ್ಲಿ ಯೇಸುವಿನೊಂದಿಗೆ ಮಾತನಾಡುವ ಸ್ತ್ರೀಯು, ಅವರನ್ನು ಗರ್ಭದಲ್ಲಿ ಹೊತ್ತು ಹಾಲುಣಿಸಿದ್ದಕ್ಕಾಗಿ ಅವರ ತಾಯಿ ಧನ್ಯಳು ಎಂದು ಹೇಳುವ ಮೂಲಕ ಆಕೆಯನ್ನು ಗೌರವಿಸುತ್ತಿದ್ದಳು.  ಆದರೆ ಯೇಸು ತಮ್ಮ ಈ ಮಾತಿನ ಮೂಲಕ ತಮ್ಮ ತಾಯಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಗೌರವಿಸುತ್ತಾರೆ.  ಬೇರೆಲ್ಲರಿಗಿಂತಲೂ ಹೆಚ್ಚಾಗಿ ಆಕೆ ದೇವರ ವಾಕ್ಯವನ್ನು ಆಲಿಸಿ ಅದನ್ನು ಪರಿಪೂರ್ಣವಾಗಿ ಪಾಲಿಸುವುದರಿಂದ, ಅವರು ಆಕೆಯನ್ನು ಗೌರವಿಸಿ ಧನ್ಯಳು ಎಂದು ಕರೆಯುತ್ತಾರೆ.

ಆಲಿಸುವುದು ಮತ್ತು ಅದರಂತೆ ಮಾಡುವುದು ಬಹಳ ಭಿನ್ನವಾದ ಎರಡು ಸಂಗತಿಗಳು.  ಆಧ್ಯಾತ್ಮಿಕ ಜೀವನದಲ್ಲಿ ಈ ಎರಡಕ್ಕೂ ಹೆಚ್ಚಿನ ಬದ್ಧತೆ ಬೇಕು.  ಮೊದಲನೆಯದಾಗಿ, ದೇವರ ವಾಕ್ಯವನ್ನು ಆಲಿಸುವುದೆಂದರೆ ಕೇವಲ ಕಿವಿಯಿಂದ ಕೇಳಿಸಿಕೊಳ್ಳುವುದೋ ಪವಿತ್ರ ಗ್ರಂಥವನ್ನು ಓದುವುದೋ ಅಲ್ಲ.  ಇಲ್ಲಿ “ಆಲಿಸುವುದು” ಎಂದರೆ ದೇವರು ನಮ್ಮ ಆತ್ಮಗಳೊಂದಿಗೆ ಮಾತನಾಡಿದ್ದಾರೆ ಎಂದರ್ಥ.  ಅಂದರೆ, ನಾವು ಒಬ್ಬ ವ್ಯಕ್ತಿಯೊಂದಿಗೆ, ಸ್ವತಃ ಯೇಸುವಿನೊಂದಿಗೆ, ಸಂಬಂಧ ಬೆಳೆಸುತ್ತಿದ್ದೇವೆ ಮತ್ತು ಅವರು ನಮಗೆ ತಿಳಿಸಲು ಬಯಸುವುದೆಲ್ಲವನ್ನೂ ತಿಳಿಸಲು ಅವಕಾಶ ನೀಡುತ್ತಿದ್ದೇವೆ.

ಯೇಸು ಮಾತನಾಡುವುದನ್ನು ಆಲಿಸುವುದು ಮತ್ತು ಅವರು ಹೇಳುವುದನ್ನು ಹೃದಯದಲ್ಲಿ ಅಳವಡಿಸಿಕೊಳ್ಳುವುದು ಸವಾಲಾಗಿರಬಹುದು. ಆದರೆ ಅವರು ಹೇಳಿದಂತೆ ನಾವು ಜೀವಿಸುವಷ್ಟರ ಮಟ್ಟಿಗೆ ಅವರ ವಾಕ್ಯವು ನಮ್ಮನ್ನು ಬದಲಾಯಿಸಲು ಅವಕಾಶ ನೀಡುವುದು ಇನ್ನೂ ಹೆಚ್ಚಿನ ಸವಾಲಾಗಿದೆ.  ಅನೇಕ ಬಾರಿ ನಮ್ಮಲ್ಲಿ ಬಹಳ ಒಳ್ಳೆಯ ಉದ್ದೇಶಗಳಿದ್ದರೂ, ದೇವರ ವಾಕ್ಯದಂತೆ ಜೀವಿಸುವ ಮೂಲಕ ಅವುಗಳನ್ನು ಕಾರ್ಯರೂಪಕ್ಕೆ ತರಲು ನಾವು ವಿಫಲರಾಗುತ್ತೇವೆ.

ಇಂದು, ಆಲಿಸುವುದು ಮತ್ತು ಪಾಲಿಸುವುದು ಎರಡರ ಕುರಿತೂ ಚಿಂತಿಸಿ.  ಆಲಿಸುವುದರಿಂದ ಪ್ರಾರಂಭಿಸಿ; ಯೇಸು ನಿಮ್ಮೊಂದಿಗೆ ಸಂಬಂಧ ಬೆಳೆಸಲು ನೀವು ಪ್ರತಿದಿನ ಅವಕಾಶ ನೀಡುತ್ತೀರೋ ಇಲ್ಲವೋ ಎಂಬುದನ್ನು ಚಿಂತಿಸಿ.  ಬಳಿಕ, ಅವರು ಹೇಳಿದ್ದಾರೆಂದು ನಿಮಗೆ ತಿಳಿದಿರುವುದಕ್ಕೆ ಅನುಸಾರವಾಗಿ ನೀವು ಜೀವಿಸುತ್ತಿದ್ದೀರಾ ಎಂದು ಚಿಂತಿಸಿ.  ಈ ಪ್ರಕ್ರಿಯೆಗೆ ನಿಮ್ಮನ್ನು ಮತ್ತೊಮ್ಮೆ ಸಮರ್ಪಿಸಿಕೊಳ್ಳಿ; ಆಗ ನೀವೂ ನಿಜವಾಗಿಯೂ ಧನ್ಯರೆಂದು ಕಂಡುಕೊಳ್ಳುವಿರಿ!

ಪ್ರಭುವೇ, ನೀವು ನನ್ನೊಂದಿಗೆ ಮಾತನಾಡುವುದನ್ನು ನಾನು ಆಲಿಸುವಂತಾಗಲಿ.  ನನ್ನ ಆತ್ಮದಲ್ಲಿ ನಾನು ನಿಮ್ಮನ್ನು ಭೇಟಿಯಾಗಿ ನಿಮ್ಮ ಪವಿತ್ರ ವಾಕ್ಯವನ್ನು ಸ್ವೀಕರಿಸುವಂತಾಗಲಿ.  ನನಗಾಗಿ ನೀವು ಕಾದಿರಿಸಿರುವ ಆಶೀರ್ವಾದಗಳನ್ನು ಅನುಭವಿಸುವಂತೆ, ಆ ವಾಕ್ಯವನ್ನು ನನ್ನ ಜೀವನದಲ್ಲಿ ಕಾರ್ಯರೂಪಕ್ಕೆ ತರುವಂತೆಯೂ ಆಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಜನಸಮೂಹದಲ್ಲಿ ಒಬ್ಬ ಸ್ತ್ರೀ ಗಟ್ಟಿಯಾಗಿ ಕೂಗುತ್ತಾಳೆ — ಜೇಮ್ಸ್ ಟಿಸ್ಸೊ


ಹೊಸದು!

ಆಳವನ್ನು ಅನ್ವೇಷಿಸುವುದು

ಇಗ್ನಾಸಿಯಸ್‌ರ ಬೋಧನೆಗಳು ಮತ್ತು ಧ್ಯಾನಗಳು
ಆರಾಧನಾ ವರ್ಷದ ಪ್ರಕಾರ ಜೋಡಿಸಲಾಗಿದೆ