ಕನ್ನಡ

ರಾತ್ರಿಯಿಡೀ ಪ್ರಾರ್ಥಿಸುವುದು

ಬುಧವಾರ, ಅಕ್ಟೋಬರ್ 28, 2020

ಅಪೊಸ್ತಲರಾದ ಸಂತ ಸಿಮೋನ ಮತ್ತು ಸಂತ ಯೂದರ ಹಬ್ಬ

ಇಂದಿನ ವಾಚನಗಳು

ಯೇಸು ಪ್ರಾರ್ಥಿಸಲು ಬೆಟ್ಟಕ್ಕೆ ಹೋದರು; ರಾತ್ರಿಯಿಡೀ ದೇವರಿಗೆ ಪ್ರಾರ್ಥಿಸುತ್ತಾ ಕಳೆದರು.  ಲೂಕ 6:12

ಯೇಸು ರಾತ್ರಿಯಿಡೀ ಪ್ರಾರ್ಥಿಸಿದುದನ್ನು ಕುರಿತು ಯೋಚಿಸುವುದು ಮನಸ್ಸನ್ನು ಸೆಳೆಯುವ ವಿಷಯ.  ಅವರ ಈ ಕಾರ್ಯವು ಅವರ ಅಪೊಸ್ತಲರಿಗೆ ಅನೇಕ ವಿಷಯಗಳನ್ನು ಕಲಿಸಿರಬಹುದಾದಂತೆಯೇ ನಮಗೂ ಕಲಿಸುತ್ತದೆ.  ಅವರ ಈ ಕಾರ್ಯದಿಂದ ನಾವು ಕಲಿಯಬಹುದಾದ ಕೆಲವು ವಿಷಯಗಳು ಇಲ್ಲಿವೆ.

ಮೊದಲನೆಯದಾಗಿ, ಯೇಸುವಿಗೆ ಪ್ರಾರ್ಥಿಸುವ “ಅಗತ್ಯ” ಇರಲಿಲ್ಲ ಎಂದು ಅನಿಸಬಹುದು.  ಏಕೆಂದರೆ ಅವರು ದೇವರೇ ಆಗಿದ್ದಾರೆ.  ಹಾಗಾದರೆ ಅವರಿಗೆ ಪ್ರಾರ್ಥಿಸುವ ಅಗತ್ಯವಿತ್ತೇ?  ವಾಸ್ತವವಾಗಿ, ಇದು ಕೇಳಬೇಕಾದ ಸರಿಯಾದ ಪ್ರಶ್ನೆಯಲ್ಲ.  ಇದು ಅವರಿಗೆ ಪ್ರಾರ್ಥಿಸುವ ಅಗತ್ಯವಿತ್ತೇ ಎಂಬ ವಿಷಯವಲ್ಲ; ಬದಲಾಗಿ, ಅವರ ಪ್ರಾರ್ಥನೆಯು ಅವರ ಸ್ವರೂಪದ ಅಂತರಾಳವನ್ನೇ ಮುಟ್ಟುವುದರಿಂದ ಅವರು ಪ್ರಾರ್ಥಿಸಿದರು ಎಂಬುದೇ ಮುಖ್ಯ.

ಪ್ರಾರ್ಥನೆಯು ಎಲ್ಲಕ್ಕಿಂತ ಮೊದಲು ದೇವರೊಂದಿಗೆ ಗಾಢ ಅನ್ಯೋನ್ಯತೆಯ ಕ್ರಿಯೆಯಾಗಿದೆ.  ಯೇಸುವಿನ ವಿಷಯದಲ್ಲಿ, ಅದು ಸ್ವರ್ಗದಲ್ಲಿರುವ ಪಿತನೊಂದಿಗೆ ಮತ್ತು ಪವಿತ್ರಾತ್ಮರೊಂದಿಗೆ ಗಾಢ ಅನ್ಯೋನ್ಯತೆಯ ಕ್ರಿಯೆಯಾಗಿದೆ.  ಯೇಸು ಪಿತನೊಂದಿಗೆ ಮತ್ತು ಪವಿತ್ರಾತ್ಮರೊಂದಿಗೆ ನಿರಂತರವಾಗಿ ಪರಿಪೂರ್ಣ ಅನ್ಯೋನ್ಯತೆಯಲ್ಲಿ (ಐಕ್ಯದಲ್ಲಿ) ಇದ್ದರು. ಆದ್ದರಿಂದ, ಅವರ ಪ್ರಾರ್ಥನೆಯು ಈ ಅನ್ಯೋನ್ಯತೆಯ ಭೂಲೋಕದ ಅಭಿವ್ಯಕ್ತಿಯೇ ಆಗಿತ್ತು.  ಅವರ ಪ್ರಾರ್ಥನೆಯು ಪಿತನನ್ನೂ ಪವಿತ್ರಾತ್ಮರನ್ನೂ ಅವರು ಪ್ರೀತಿಸುವುದನ್ನು ಜೀವನದಲ್ಲಿ ವ್ಯಕ್ತಪಡಿಸುವುದಾಗಿದೆ.  ಆದ್ದರಿಂದ, ಅವರಿಗೆ ಹತ್ತಿರವಾಗಿರಲು ಯೇಸು ಪ್ರಾರ್ಥಿಸಬೇಕಾಗಿತ್ತು ಎಂಬುದಕ್ಕಿಂತಲೂ, ಅವರೊಂದಿಗೆ ಪರಿಪೂರ್ಣವಾಗಿ ಐಕ್ಯವಾಗಿದ್ದುದರಿಂದಲೇ ಅವರು ಪ್ರಾರ್ಥಿಸಿದರು ಎಂಬುದೇ ಮುಖ್ಯ.  ಈ ಪರಿಪೂರ್ಣ ಅನ್ಯೋನ್ಯತೆಗೆ ಭೂಲೋಕದಲ್ಲಿ ಪ್ರಾರ್ಥನೆಯ ಅಭಿವ್ಯಕ್ತಿ ಅಗತ್ಯವಾಗಿತ್ತು.  ಈ ಸಂದರ್ಭದಲ್ಲಿ, ಅದು ರಾತ್ರಿಯಿಡೀ ಮಾಡಿದ ಪ್ರಾರ್ಥನೆಯಾಗಿತ್ತು.

ಎರಡನೆಯದಾಗಿ, ಅದು ರಾತ್ರಿಯಿಡೀ ನಡೆಯಿತು ಎಂಬ ಸಂಗತಿಯು ಯೇಸುವಿನ “ವಿಶ್ರಾಂತಿ” ಪಿತನ ಸಾನ್ನಿಧ್ಯದಲ್ಲಿರುವುದೇ ಆಗಿತ್ತು ಎಂಬುದನ್ನು ತಿಳಿಸುತ್ತದೆ.  ವಿಶ್ರಾಂತಿಯು ನಮ್ಮನ್ನು ಚೇತರಿಸಿ ನವಚೈತನ್ಯ ನೀಡುವಂತೆಯೇ, ಯೇಸು ರಾತ್ರಿಯಿಡೀ ಜಾಗರಣೆಯಲ್ಲಿ ಕಳೆದದ್ದು, ಅವರ ಮಾನವ ವಿಶ್ರಾಂತಿಯು ಪಿತನ ಸಾನ್ನಿಧ್ಯದಲ್ಲಿ ವಿಶ್ರಮಿಸುವುದೇ ಆಗಿತ್ತು ಎಂಬುದನ್ನು ತಿಳಿಸುತ್ತದೆ.

ಮೂರನೆಯದಾಗಿ, ನಮ್ಮ ಸ್ವಂತ ಜೀವನಕ್ಕಾಗಿ ಇದರಿಂದ ನಾವು ಕಲಿಯಬೇಕಾದದ್ದು, ಪ್ರಾರ್ಥನೆಯನ್ನು ಎಂದಿಗೂ ಕಡಿಮೆಯಾಗಿ ಅಂದಾಜಿಸಬಾರದು ಎಂಬುದೇ.  ಅನೇಕ ಬಾರಿ ನಾವು ದೇವರಿಗೆ ಪ್ರಾರ್ಥನಾರೂಪದ ಕೆಲವು ಮಾತುಗಳನ್ನು ಹೇಳಿ ಅಲ್ಲಿಗೇ ನಿಲ್ಲಿಸುತ್ತೇವೆ.  ಆದರೆ ಯೇಸು ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆಯಲು ಆರಿಸಿಕೊಂಡರೆ, ನಮ್ಮ ಮೌನ ಪ್ರಾರ್ಥನೆಯ ಸಮಯದಲ್ಲಿ ನಾವು ಈಗ ಅವರಿಗೆ ನೀಡುತ್ತಿರುವುದಕ್ಕಿಂತ ಹೆಚ್ಚಿನದನ್ನು ದೇವರು ಬಯಸಿದರೆ ನಾವು ಆಶ್ಚರ್ಯಪಡಬೇಕಿಲ್ಲ.  ಪ್ರತಿದಿನ ಇನ್ನೂ ಹೆಚ್ಚು ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯಲು ದೇವರು ನಿಮ್ಮನ್ನು ಕರೆಯುತ್ತಿದ್ದರೆ ಆಶ್ಚರ್ಯಪಡಬೇಡಿ.  ಪ್ರಾರ್ಥನೆಗೆ ಒಂದು ನಿಶ್ಚಿತ ಕ್ರಮವನ್ನು ರೂಪಿಸಿಕೊಳ್ಳಲು ಹಿಂಜರಿಯಬೇಡಿ.  ಯಾವುದಾದರೂ ಒಂದು ರಾತ್ರಿ ನಿಮಗೆ ನಿದ್ರೆ ಬಾರದಿದ್ದರೆ, ಎದ್ದು, ಮೊಣಕಾಲೂರಿ, ನಿಮ್ಮ ಆತ್ಮದೊಳಗೆ ವಾಸಿಸುವ ದೇವರ ಸಾನ್ನಿಧ್ಯವನ್ನು ಅರಸಲು ಹಿಂಜರಿಯಬೇಡಿ.  ಅವರನ್ನು ಅರಸಿ, ಅವರಿಗೆ ಕಿವಿಗೊಡಿ, ಅವರೊಂದಿಗಿರಿ ಮತ್ತು ಪ್ರಾರ್ಥನೆಯಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಅವರಿಗೆ ಅವಕಾಶ ಕೊಡಿ.  ಯೇಸು ನಮಗೆ ಪರಿಪೂರ್ಣ ಮಾದರಿಯನ್ನು ನೀಡಿದ್ದಾರೆ.  ಆ ಮಾದರಿಯನ್ನು ಅನುಸರಿಸುವುದು ಈಗ ನಮ್ಮ ಜವಾಬ್ದಾರಿಯಾಗಿದೆ.

ನಾವು ಅಪೊಸ್ತಲರಾದ ಸಿಮೋನ ಮತ್ತು ಯೂದರನ್ನು ಗೌರವಿಸುವಾಗ, ಕ್ರಿಸ್ತನನ್ನು ಅನುಸರಿಸಿ ಜಗತ್ತಿನಲ್ಲಿ ಅವರ ಅಪೊಸ್ತಲರಾಗಿ ಕಾರ್ಯನಿರ್ವಹಿಸಲು ನಿಮಗಿರುವ ಕರೆಯ ಕುರಿತು ಇಂದು ಚಿಂತಿಸಿ.  ಈ ಧ್ಯೇಯವನ್ನು ನೀವು ನೆರವೇರಿಸಬಹುದಾದ ಏಕೈಕ ಮಾರ್ಗ ಪ್ರಾರ್ಥನೆಯ ಜೀವನವೇ ಆಗಿದೆ.  ನಿಮ್ಮ ಪ್ರಾರ್ಥನಾ ಜೀವನದ ಕುರಿತು ಚಿಂತಿಸಿ; ಪ್ರಾರ್ಥನೆಯಲ್ಲಿ ನಮ್ಮ ಪ್ರಭುವಿನ ಪರಿಪೂರ್ಣ ಮಾದರಿಯ ಆಳವನ್ನೂ ತೀವ್ರತೆಯನ್ನೂ ಅನುಕರಿಸುವ ನಿಮ್ಮ ಸಂಕಲ್ಪವನ್ನು ಇನ್ನಷ್ಟು ದೃಢಪಡಿಸಿಕೊಳ್ಳಲು ಹಿಂಜರಿಯಬೇಡಿ.

ಪ್ರಭು ಯೇಸುವೇ, ಪ್ರಾರ್ಥಿಸಲು ನನಗೆ ಸಹಾಯ ಮಾಡಿರಿ.  ಪ್ರಾರ್ಥನೆಯ ನಿಮ್ಮ ಮಾದರಿಯನ್ನು ಅನುಸರಿಸಲು ಮತ್ತು ಪಿತನ ಸಾನ್ನಿಧ್ಯವನ್ನು ಆಳವಾಗಿ ಹಾಗೂ ನಿರಂತರವಾಗಿ ಅರಸಲು ನನಗೆ ಸಹಾಯ ಮಾಡಿರಿ.  ನಿಮ್ಮೊಂದಿಗೆ ಗಾಢ ಅನ್ಯೋನ್ಯತೆಯನ್ನು ಹೊಂದಲು ಮತ್ತು ಪವಿತ್ರಾತ್ಮರಿಂದ ಸಂಪೂರ್ಣವಾಗಿ ಆವರಿಸಲ್ಪಡಲು ನನಗೆ ಸಹಾಯ ಮಾಡಿರಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಚುನಾವಣೆಗಳಿಗಾಗಿ ಪ್ರಾರ್ಥನೆಗಳು & ಸಂಪನ್ಮೂಲಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಅಪೊಸ್ತಲರಾದ ಸಂತ ಸಿಮೋನ ಮತ್ತು ಸಂತ ಯೂದ

ದಿವ್ಯಬಲಿಯ ವಾಚನಗಳ ಆಯ್ಕೆಗಳು