ಕನ್ನಡ

ಯೇಸುವೇ, ಕರುಣೆ ತೋರಿ!

ಅಕ್ಟೋಬರ್ 24, 2021
ಸಾಮಾನ್ಯ ಕಾಲದ ಮೂವತ್ತನೇ ಭಾನುವಾರ, ವರ್ಷ B
ಇಂದಿನ ವಾಚನಗಳು

ವೀಡಿಯೊ

ಬರುತ್ತಿರುವವರು ನಜರೇತಿನ ಯೇಸು ಎಂದು ಕೇಳಿದಾಗ ಬಾರ್ತಿಮಾಯನು, “ಯೇಸುವೇ, ದಾವೀದರ ಪುತ್ರರೇ, ನನ್ನ ಮೇಲೆ ಕರುಣೆ ತೋರಿ” ಎಂದು ಕೂಗಲಾರಂಭಿಸಿದನು.  ಮಾರ್ಕ 10:47

ಕುರುಡನಾದ ಬಾರ್ತಿಮಾಯನ ಈ ಮಾತುಗಳು ಕೆಲವು ಕಾರಣಗಳಿಂದ ನಮಗೆ ಪರಿಪೂರ್ಣ ಪ್ರಾರ್ಥನೆಯನ್ನು ನೀಡುತ್ತವೆ.

ಮೊದಲನೆಯದಾಗಿ, ಈ ಪ್ರಾರ್ಥನೆಯು ಬಾರ್ತಿಮಾಯನ ಆಳವಾದ ದೀನತೆಯನ್ನು ತೋರಿಸುತ್ತದೆ. ತನಗೆ ಅಗತ್ಯವಿರುವುದರ ಮೂಲ ಯೇಸುವೇ ಎಂದೂ, ತಾನು ತನಗೆ ಸಹಾಯ ಮಾಡಿಕೊಳ್ಳಲು ಅಸಮರ್ಥನೆಂದೂ ತನಗೆ ತಿಳಿದಿತ್ತು ಎಂಬುದನ್ನು ಬಾರ್ತಿಮಾಯನು ಈ ಪ್ರಾರ್ಥನೆಯ ಮೂಲಕ ವ್ಯಕ್ತಪಡಿಸುತ್ತಾನೆ.  ತಾನು ದುರ್ಬಲನೆಂದೂ, ಆದರೆ ಯೇಸು ಪರಿಪೂರ್ಣ ಶಕ್ತಿಯುಳ್ಳವರೆಂದೂ ಬಾರ್ತಿಮಾಯನಿಗೆ ತಿಳಿದಿತ್ತು.  ಹೀಗೆ, ತನ್ನ ಅಗತ್ಯವನ್ನು ಪೂರೈಸುವ ಮೂಲ ಯೇಸುವೇ ಎಂದು ಗುರುತಿಸಿ, ಬಾರ್ತಿಮಾಯನು ತನ್ನ ಸಂಕಷ್ಟದಲ್ಲಿ ದೀನತೆಯಿಂದ ಅವರ ಕಡೆಗೆ ತಿರುಗಿದನು.

ಎರಡನೆಯದಾಗಿ, ಇದು “ಕರುಣೆ”ಗಾಗಿ ಮೊರೆಯಿಡುವ ಪ್ರಾರ್ಥನೆ.  ಇತರರ ಸಂಕಟದಿಂದ ನಮ್ಮಲ್ಲಿ ಉಂಟಾಗುವ ದುಃಖ ಮತ್ತು ಸಹಾನುಭೂತಿಯ ಭಾವನೆಯೇ ಕರುಣೆ.  ಇಂತಹ ಅನುಕಂಪವೇ ಕರುಣೆ; ಕೊಡುವ ಯಾವ ಬಾಧ್ಯತೆಯೂ ಇಲ್ಲದಿದ್ದರೂ ಒಬ್ಬರು ಮತ್ತೊಬ್ಬರಿಗೆ ನೀಡುವ ಪ್ರೀತಿಯ ರೂಪ ಅದು.  ಈ ಪ್ರಾರ್ಥನೆಯಲ್ಲಿ ಬಾರ್ತಿಮಾಯನು, ಇಂತಹ ಕೊಡುಗೆಗೆ ತಾನು ಅಯೋಗ್ಯನಾಗಿದ್ದರೂ, ತನಗೆ ದಯೆ ಮತ್ತು ಕರುಣೆ ತೋರಬೇಕೆಂದು ಸರ್ವಶಕ್ತರಾದ ಪ್ರಭುವನ್ನು ಕೇಳಿಕೊಳ್ಳುತ್ತಾನೆ.  ನಮ್ಮ ಪ್ರಭುವಿನ ಸಹಾಯಕ್ಕೆ ತಾನು ಅರ್ಹನಲ್ಲ ಎಂಬುದು ಬಾರ್ತಿಮಾಯನಿಗೆ ತಿಳಿದಿತ್ತು ಎಂಬುದನ್ನು ಈ ಪ್ರಾರ್ಥನೆ ತೋರಿಸುತ್ತದೆ. ಆದರೂ ಯೇಸು ಸಹಾಯ ಮಾಡುವರೆಂಬ ನಿರೀಕ್ಷೆಯಿಂದ ಅವನು ಅದಕ್ಕಾಗಿ ಮೊರೆಯಿಟ್ಟನು.  ನಿಜಕ್ಕೂ ಯೇಸು ಅವನಿಗೆ ಸಹಾಯ ಮಾಡುತ್ತಾರೆ.

ಮೂರನೆಯದಾಗಿ, ಈ ಪ್ರಾರ್ಥನೆಯು ದೃಢವಾದ ಮತ್ತು ಆಳವಾದ ಉತ್ಕಟತೆಯನ್ನು ತೋರಿಸುತ್ತದೆ.  ಇದು ದೇವರ ಸಹಾಯಕ್ಕಾಗಿ ಮಾಡುವ ಕೇವಲ ವಿನಂತಿಯಲ್ಲ; ಬದಲಾಗಿ, ಸಹಾಯಕ್ಕಾಗಿ ಎತ್ತುವ ಮೊರೆ.  ಇದು ಆರ್ತ ವಿನಂತಿ ಮತ್ತು ಒಂದು ರೀತಿಯ ಬೇಡಿಕೆ.  ತನ್ನ ದೌರ್ಬಲ್ಯಗಳು ಹೊರಗೆ ಕಾಣಿಸಿಕೊಳ್ಳುತ್ತವೆಯೇ ಎಂಬ ಚಿಂತೆಯಾಗಲಿ, ಇತರರು ಅದನ್ನು ನೋಡುತ್ತಾರೆಯೇ ಅಥವಾ ಏನು ಯೋಚಿಸುತ್ತಾರೆಯೇ ಎಂಬ ಆತಂಕವಾಗಲಿ ಇಲ್ಲದೆ, ತನ್ನ ಆತ್ಮವನ್ನು ದೇವರಿಗೆ ತೆರೆದಿಡುವುದೇ ಇದು.  ಇದು ಆ ಕುರುಡನ ಪ್ರಾರ್ಥನೆಯ ಆಳವನ್ನು ತೋರಿಸುತ್ತದೆ. 

ಬಾರ್ತಿಮಾಯನ ಚಿಕ್ಕ ಪ್ರಾರ್ಥನೆಯ ಈ ಮೂರು ಪಾಠಗಳನ್ನು ಇಂದು ಮನನ ಮಾಡಿ.  ನಾವು ದೀನರಾಗಿರಬೇಕು, ಕರುಣೆಗಾಗಿ ಬೇಡಿಕೊಳ್ಳಬೇಕು ಮತ್ತು ಆಳವಾದ ಉತ್ಕಟತೆ ಹಾಗೂ ಹಂಬಲದಿಂದ ಹಾಗೆ ಮಾಡಬೇಕು.  ಈ ರೀತಿ ಪ್ರಾರ್ಥಿಸುವುದು ದೇವರ ಅನುಗ್ರಹ ಮತ್ತು ಕರುಣೆಯನ್ನು ಸ್ವೀಕರಿಸಲು ನಮ್ಮನ್ನು ಖಂಡಿತವಾಗಿಯೂ ಸಿದ್ಧಗೊಳಿಸುತ್ತದೆ.

ಪ್ರಭು ಯೇಸುವೇ, ದಾವೀದರ ಪುತ್ರರೇ, ನನ್ನ ಮೇಲೆ ಕರುಣೆ ತೋರಿ.  ನಿಮ್ಮ ಕರುಣೆ ಮತ್ತು ಅನುಕಂಪಕ್ಕಾಗಿ ಪೂರ್ಣ ಹೃದಯದಿಂದ ದೀನನಾಗಿ ನಿಮ್ಮನ್ನು ಬೇಡಿಕೊಳ್ಳುತ್ತೇನೆ.  ನಾನು ಅಯೋಗ್ಯನಾಗಿದ್ದರೂ, ನಿಮ್ಮ ಅನುಗ್ರಹವನ್ನು ಕೋರುತ್ತೇನೆ ಮತ್ತು ನಿಮ್ಮ ಒಳ್ಳೆಯತನದಲ್ಲಿ ಭರವಸೆಯಿಡುತ್ತೇನೆ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಸಂತ ಯೂದರಿಗೆ ನೊವೇನಾ
ನಿರಾಶಾದಾಯಕ ಸನ್ನಿವೇಶಗಳು ಮತ್ತು ನಿರಾಶಾದಾಯಕ ಪ್ರಕರಣಗಳಿಗಾಗಿ
ವರ್ಷದ ಯಾವುದೇ ಸಮಯದಲ್ಲಿ, ವಿಶೇಷವಾಗಿ ಅಕ್ಟೋಬರ್ 19–27ರಂದು ಪ್ರಾರ್ಥಿಸಲಾಗುತ್ತದೆ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಸಂತ ಅಂತೋನಿ ಮೇರಿ ಕ್ಲಾರೆಟ್, ಧರ್ಮಾಧ್ಯಕ್ಷರು—ಐಚ್ಛಿಕ ಸ್ಮರಣೆ
ಈ ವರ್ಷ ಭಾನುವಾರದಂದು ಬರುವುದರಿಂದ ಇದನ್ನು ಧರ್ಮಾಚರಣೆಯ ಸ್ಮರಣೆಯಾಗಿ ಆಚರಿಸಲಾಗುವುದಿಲ್ಲ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲೆ ಪ್ರದರ್ಶಿಸಿರುವ ಚಿತ್ರ:  ಫೆರ್ನಾಂಡೊ ಗಲ್ಲೆಗೊ ರಚಿಸಿದ ಕುರುಡ ಬಾರ್ತಿಮಾಯನ ಗುಣಪಡಿಸುವಿಕೆ, ವಿಕಿಮೀಡಿಯಾ ಕಾಮನ್ಸ್ ಮೂಲಕ