ಕನ್ನಡ

ಶಿಷ್ಯತ್ವದ ಬೆಲೆ

ಫೆಬ್ರವರಿ 28, 2022
ಸಾಮಾನ್ಯ ಕಾಲದ ಎಂಟನೆಯ ವಾರದ ಸೋಮವಾರ
ಇಂದಿನ ವಾಚನಗಳು

ವೀಡಿಯೊ

ಯೇಸು ಅವನನ್ನು ನೋಡಿ, ಅವನನ್ನು ಪ್ರೀತಿಸಿ ಅವನಿಗೆ, “ನಿನ್ನಲ್ಲಿ ಇನ್ನೂ ಒಂದು ಕೊರತೆಯಿದೆ. ಹೋಗು, ನಿನ್ನಲ್ಲಿರುವುದನ್ನು ಮಾರಿ ಬಡವರಿಗೆ ಕೊಡು; ಆಗ ಸ್ವರ್ಗದಲ್ಲಿ ನಿನಗೆ ಸಂಪತ್ತು ದೊರೆಯುವುದು. ಆಮೇಲೆ ಬಂದು ನನ್ನನ್ನು ಹಿಂಬಾಲಿಸು” ಎಂದರು. ಈ ಮಾತನ್ನು ಕೇಳಿ ಅವನ ಮುಖ ಬಾಡಿತು. ಅವನಿಗೆ ಬಹಳ ಆಸ್ತಿಪಾಸ್ತಿ ಇದ್ದುದರಿಂದ ಅವನು ದುಃಖದಿಂದ ಹೊರಟುಹೋದನು.  ಮಾರ್ಕ 10:21-22

ಈ ಪವಿತ್ರ ಗ್ರಂಥದ ವಚನಭಾಗದಲ್ಲಿ ಗಮನಿಸಬೇಕಾದ ಎರಡು ಮುಖ್ಯ ವಿಷಯಗಳಿವೆ.  ಮೊದಲನೆಯದು ಯೇಸುವಿನ ಪ್ರತಿಕ್ರಿಯೆ; ಎರಡನೆಯದು ಆ ಶ್ರೀಮಂತ ಯುವಕನ ಪ್ರತಿಕ್ರಿಯೆ.

ಯೇಸು ಅವನನ್ನು ನೋಡಿ “ಅವನನ್ನು ಪ್ರೀತಿಸಿದರು” ಎಂದು ಈ ವಚನಭಾಗ ಹೇಳುತ್ತದೆ.  ಯೇಸು ಈ ಯುವಕನಿಗೆ ಏನು ಮಾಡಲು ಕರೆ ನೀಡುತ್ತಾರೆ ಎಂಬುದನ್ನು ನೋಡುವ ಮೊದಲು ಈ ಸಾಲನ್ನು ಗಮನಿಸುವುದು ಮುಖ್ಯ.  ಅವನು ತನ್ನಲ್ಲಿರುವ ಎಲ್ಲವನ್ನೂ ತ್ಯಜಿಸಿ, ಎಲ್ಲವನ್ನೂ ದಾನಮಾಡಿ, ಬಂದು ತಮ್ಮನ್ನು ಹಿಂಬಾಲಿಸಬೇಕೆಂದು ಯೇಸು ಅವನಿಗೆ ಕರೆ ನೀಡುತ್ತಾರೆ.  ಯೇಸು ಅವನನ್ನು ಹೀಗೆ ಆಹ್ವಾನಿಸಿದ್ದು ಪ್ರೀತಿಯಿಂದಲೇ.  

ಈಗ ಅವನ ಬಳಿಯಿರುವುದಕ್ಕಿಂತಲೂ ಎಷ್ಟೋ ಹೆಚ್ಚಿನದನ್ನು ಪಡೆಯಲು ಯೇಸು ಈ ಯುವಕನನ್ನು ಆಹ್ವಾನಿಸುತ್ತಿದ್ದಾರೆ.  ಅದಕ್ಕಾಗಿಯೇ, ತಮ್ಮನ್ನು ಸಂಪೂರ್ಣವಾಗಿ ಮತ್ತು ಆಮೂಲಾಗ್ರವಾಗಿ ಹಿಂಬಾಲಿಸಲು ಆ ಯುವಕನನ್ನು ಆಹ್ವಾನಿಸುವ ಮೊದಲು ಯೇಸು ಅವನನ್ನು ಪ್ರೀತಿಯಿಂದ ನೋಡಿದರು.  ಆದರೆ ಈ ಸಂದರ್ಭದಲ್ಲಿ ಯೇಸುವನ್ನು ಪ್ರೀತಿಸುವುದು ನೋವುಂಟುಮಾಡಲಿತ್ತು.  ಏಕೆಂದರೆ ಯೇಸುವನ್ನು ಹಿಂಬಾಲಿಸಲು ಅವನು ತನ್ನಲ್ಲಿರುವ ಎಲ್ಲವನ್ನೂ ಸಂಪೂರ್ಣವಾಗಿ ತ್ಯಾಗಮಾಡಬೇಕಾಗಿತ್ತು.  ಅದು ಸಂಪೂರ್ಣವಾದ, ಆಮೂಲಾಗ್ರವಾದ ತ್ಯಾಗವಾಗಿತ್ತು.  ಕನಿಷ್ಠ ಕೇವಲ ಮಾನವೀಯ ಮತ್ತು ಲೌಕಿಕ ದೃಷ್ಟಿಯಿಂದ ನೋಡಿದಾಗ ಅದು ಕಷ್ಟಕರವಾಗಿತ್ತು.  ಆದರೆ ಈ ಯುವಕನ ಮೇಲಿನ ಯೇಸುವಿನ ಪ್ರೀತಿ ಎಷ್ಟು ಪರಿಪೂರ್ಣವಾಗಿತ್ತೆಂದರೆ, ಆ ಶ್ರೀಮಂತನು ಇನ್ನೂ ಎಷ್ಟೋ ಹೆಚ್ಚಿನದನ್ನು ಪಡೆಯುವಂತಾಗಲು ಎಲ್ಲವನ್ನೂ ತ್ಯಾಗಮಾಡುವ ಕಷ್ಟವನ್ನು ಸಹಿಸಿಕೊಳ್ಳುವಂತೆ ಅವನನ್ನು ಆಹ್ವಾನಿಸಲು ಯೇಸು ಸಿದ್ಧರಾಗಿದ್ದರು.

ನಾವೂ ಅದನ್ನೇ ಮಾಡಲು ಆಹ್ವಾನಿತರಾಗಿದ್ದೇವೆ.  ಇಲ್ಲ, ನಮ್ಮ ಭೌತಿಕ ಆಸ್ತಿಪಾಸ್ತಿಯನ್ನೆಲ್ಲ ತ್ಯಜಿಸುವ ಆ ವಿಶಿಷ್ಟವಾದ, ಆಮೂಲಾಗ್ರವಾದ ರೀತಿಯಲ್ಲಿ ಯೇಸುವನ್ನು ಹಿಂಬಾಲಿಸಲು ನಮಗೆ ಕರೆ ಇಲ್ಲದಿರಬಹುದು.  ಆದರೆ ಅಷ್ಟೇ ಆಳವಾದ ಭರವಸೆಯೊಂದಿಗೆ, ಅವರ ದೈವಿಕ ಚಿತ್ತಕ್ಕೆ ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಯೇಸುವನ್ನು ಹಿಂಬಾಲಿಸಲು ನಮಗೆ ಕರೆ ನೀಡಲಾಗಿದೆ.  ಅದಕ್ಕೆ ಅನಿವಾರ್ಯವಾಗಿ ತ್ಯಾಗ ಬೇಕಾಗುತ್ತದೆ.  ಅತ್ಯುನ್ನತ ಮಟ್ಟದ ತ್ಯಾಗ ಬೇಕಾಗುತ್ತದೆ.  

ಶಿಷ್ಯತ್ವಕ್ಕೆ ಯೇಸು ನೀಡುವ ಕರೆಗೆ ನಮ್ಮ ಪ್ರತಿಕ್ರಿಯೆ ಬಹಳ ಮುಖ್ಯ.  ನಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವ ಈ ಆಹ್ವಾನಕ್ಕೆ ನಾವು ಹೇಗೆ ಸ್ಪಂದಿಸುವೆವು?  ಆ ಶ್ರೀಮಂತ ಯುವಕನು ಮೊದಲು ದುಃಖದಿಂದ ಪ್ರತಿಕ್ರಿಯಿಸಿದನು.  ಯೇಸು ನೀಡಿದ ಆಹ್ವಾನವನ್ನು ಅವನು ಸ್ವೀಕರಿಸಲಿಲ್ಲ.  ಕೊನೆಗೆ ಅವನು ಈ ಆಮೂಲಾಗ್ರವಾದ ಮತ್ತು ಸಂಪೂರ್ಣವಾದ ರೀತಿಯಲ್ಲಿ ಯೇಸುವನ್ನು ಹಿಂಬಾಲಿಸಿದನೋ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ; ಆದರೆ ಅವನ ಮೊದಲ ಪ್ರತಿಕ್ರಿಯೆ ಏನಾಗಿತ್ತೆಂದು ನಮಗೆ ತಿಳಿದಿದೆ.  

ಅನೇಕ ಬಾರಿ ನಮ್ಮ ಮೊದಲ ಪ್ರತಿಕ್ರಿಯೆಯೂ ಇದೇ ಆಗಿರುತ್ತದೆ.  ನಾವು ನಿಷ್ಠಾವಂತರಾಗಿರಲು ಬಯಸುತ್ತೇವೆ; ಕ್ರಿಸ್ತರು ನಮ್ಮಿಂದ ಏನನ್ನೇ ಕೇಳಿದರೂ ಅವರನ್ನು ಹಿಂಬಾಲಿಸಲು ಬಯಸುತ್ತೇವೆ.  ಆದರೆ ಅವರ ಕರೆಗೆ ಸ್ಪಂದಿಸಲು ಒಂದು ನಿರ್ದಿಷ್ಟ ಆಹ್ವಾನ ಬಂದಾಗ, ಅದು ನಮ್ಮಿಂದ ಅತಿಯಾದುದನ್ನು ಬೇಡುತ್ತದೆ ಎಂದುಕೊಂಡು ದುಃಖದಿಂದ ಹಿಂದೆ ಸರಿಯುತ್ತೇವೆ.

ಇಂದು ಈ ಶ್ರೀಮಂತ ಯುವಕನ ಕುರಿತು ಚಿಂತಿಸಿ.  ನಿಮ್ಮ ಸ್ವಂತ ಜೀವನವನ್ನು ಗಮನಿಸಿ, ಯೇಸು ನಿಮ್ಮಿಂದ ಏನನ್ನೇ ಕೇಳಿದರೂ ಅದಕ್ಕೆ ಸಂಪೂರ್ಣವಾಗಿ “ಹೌದು” ಎಂದು ಹೇಳಲು ನೀವು ಎಷ್ಟು ಸಿದ್ಧರಾಗಿದ್ದೀರಿ ಮತ್ತು ಮನಸ್ಸುಳ್ಳವರಾಗಿದ್ದೀರಿ ಎಂಬ ಪ್ರಶ್ನೆಯನ್ನು ಮನನ ಮಾಡಿ.  ತ್ಯಾಗಪೂರ್ವಕವಾಗಿ “ಹೌದು” ಎಂದು ಹೇಳುವುದೇ ನೀವು ಕೈಗೊಳ್ಳಬಹುದಾದ ಅತ್ಯುತ್ತಮ ನಿರ್ಧಾರ.  ನಿಜವಾಗಿ ಅದು, ನೀವು ಜೀವಿಸಬಹುದಾದ ಅತ್ಯಂತ ಮಹಿಮೆಯ ಜೀವನವನ್ನು ಮನಃಪೂರ್ವಕವಾಗಿ ಸ್ವೀಕರಿಸುವುದಾಗಿದೆ.

ನನ್ನಿಂದ ಹೆಚ್ಚಿನದನ್ನು ಬೇಡುವ ನನ್ನ ಪ್ರಭುವೇ, ನಿಮ್ಮನ್ನು ಹಿಂಬಾಲಿಸುವುದು ಕೆಲವೊಮ್ಮೆ ಕಷ್ಟಕರವಾಗಿಯೂ ಆಮೂಲಾಗ್ರ ಬದಲಾವಣೆಯನ್ನು ಬೇಡುವಂತೆಯೂ ತೋರಬಹುದು.  ಅದು ನನ್ನಿಂದ ಸಾಧ್ಯವಾಗುವುದಕ್ಕಿಂತ ಮೀರಿದ ಬೇಡಿಕೆಯಂತೆ ತೋರಬಹುದು.  ವಿಶೇಷವಾಗಿ ಅಂಥ ಕ್ಷಣಗಳಲ್ಲಿ, ಈ ಲೋಕದಲ್ಲಿ ನನಗಿರುವ ಅನೇಕ ವ್ಯಾಮೋಹಗಳಿಗಿಂತ ಹೆಚ್ಚಾಗಿ ನಿಮ್ಮಲ್ಲಿ ಭರವಸೆಯಿಡಲು ನನಗೆ ಸಹಾಯಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಶಾಂತಿಗಾಗಿ ಪ್ರಾರ್ಥನೆಗಳು

ಯುದ್ಧಗಳನ್ನು ನಿಲ್ಲಿಸಿ…ಮನೆಯಲ್ಲೇ—ವೀಡಿಯೊ
ಶಾಂತಿಗಾಗಿ ಜಪಸರವನ್ನು ಪ್ರಾರ್ಥಿಸಲು ಫಾತಿಮಾ ಮಾತೆ ನಮ್ಮನ್ನು ಕರೆಯುತ್ತಾರೆ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲೆ ಪ್ರದರ್ಶಿಸಿರುವ ಚಿತ್ರ: ಹೆನ್ರಿಕ್ ಹೋಫ್‌ಮನ್, “ಕ್ರಿಸ್ತರು ಮತ್ತು ಶ್ರೀಮಂತ ಯುವ ಆಡಳಿತಗಾರ”, ವಿಕಿಮೀಡಿಯಾ ಕಾಮನ್ಸ್ ಮೂಲಕ


ತಪಸ್ಸುಕಾಲಕ್ಕಾಗಿ ಎರಡು ಅತ್ಯುತ್ತಮ ಪುಸ್ತಕಗಳು:

ತಪಸ್ಸುಕಾಲ ಮತ್ತು ಪಾಸ್ಕ ಧ್ಯಾನಗಳು
ಹೆಚ್ಚುವರಿ ಧ್ಯಾನಗಳು ಮತ್ತು ಇನ್ನಷ್ಟು ವಿವರವಾದ ವಿಷಯಸೂಚಿಯೊಂದಿಗೆ 2022ರ ತಪಸ್ಸುಕಾಲ & ಪಾಸ್ಕಕ್ಕಾಗಿ ಪರಿಷ್ಕರಿಸಲಾಗಿದೆ

ತಪಸ್ಸುಕಾಲ ಮತ್ತು ಪಾಸ್ಕ ಧ್ಯಾನಗಳು ಎಂಬುದು ಕ್ಯಾಥೊಲಿಕ್ ದೈನಂದಿನ ಧ್ಯಾನಗಳ ಸರಣಿ.ಯ ನಾಲ್ಕು ಪುಸ್ತಕಗಳಲ್ಲಿ ಒಂದಾಗಿದೆ.  ಭಕ್ತಿಗ್ರಂಥವಾಗಿ, ಇದು ದೈನಂದಿನ ಧ್ಯಾನ ಮತ್ತು ಪ್ರಾರ್ಥನೆಗೆ ಅತ್ಯುತ್ತಮ ಸಂಪನ್ಮೂಲವಾಗಿದೆ. ಆಯಾ ದಿನದ ಸುವಾರ್ತೆಯ ಕುರಿತು ಪ್ರಾಯೋಗಿಕವಾಗಿ, ವಿಶ್ವಾಸಕ್ಕೆ ನಿಷ್ಠೆಯಿಂದ ಮತ್ತು ಸರಳವಾಗಿ ಧ್ಯಾನಗಳನ್ನು ನೀಡುತ್ತದೆ. ಯಾವುದೇ ಆರಾಧನಾವಿಧಿ ವರ್ಷದಲ್ಲಿಯೂ ಬಳಸಬಹುದಾದ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ. ಭಾನುವಾರದ ವರ್ಷಗಳು A, B & C, ದೈನಂದಿನ ದಿವ್ಯಬಲಿಯ ಪ್ರತಿಯೊಂದು ಆಯ್ಕೆ ಹಾಗೂ ಎಲ್ಲ ಹಬ್ಬಗಳು ಮತ್ತು ಮಹೋತ್ಸವಗಳು ಸೇರಿದಂತೆ ಸುವಾರ್ತೆಯ ಪ್ರತಿಯೊಂದು ಆಯ್ಕೆಯ ಕುರಿತೂ ಇದು ಧ್ಯಾನಗಳನ್ನು ನೀಡುತ್ತದೆ. ಈ ತಪಸ್ಸುಕಾಲ ಮತ್ತು ಪಾಸ್ಕದಲ್ಲಿ ಕ್ರಿಸ್ತನ ಮರಣ ಮತ್ತು ಪುನರುತ್ಥಾನವು ನಿಮ್ಮ ಹೃದಯವನ್ನು ಇನ್ನಷ್ಟು ಪೂರ್ಣವಾಗಿ ಪರಿವರ್ತಿಸಲು ಅವಕಾಶ ನೀಡಿರಿ!  ಇದು ಪೇಪರ್‌ಬ್ಯಾಕ್ & ಇ-ಪುಸ್ತಕ ರೂಪದಲ್ಲಿಯೂ ಲಭ್ಯವಿದೆ!

ಶಿಲುಬೆಯ ಬುಡದಲ್ಲಿ 40 ದಿನಗಳು:
ನಮ್ಮ ಧನ್ಯ ಮಾತೆಯ ಹೃದಯದಿಂದ ಪ್ರೀತಿಯ ನೋಟ

ನಮ್ಮ ಧನ್ಯ ಮಾತೆಯು ತನ್ನ ಪ್ರೀತಿಯ ಸ್ವಂತ ಮಗನಿಗೆ ಉಂಟುಮಾಡಲಾದ ಮಹಾಯಾತನೆಯನ್ನು ಸಹಿಸಿಕೊಂಡಾಗ, ಆಕೆಯ ಮನಸ್ಸು ಮತ್ತು ಹೃದಯದ ಸ್ಥಿತಿಯನ್ನು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಲು ಈ ದೈನಂದಿನ ಭಕ್ತಿಗ್ರಂಥವು ನಿಮ್ಮನ್ನು ಆಹ್ವಾನಿಸುತ್ತದೆ.  ಮಾತೆ ಮರಿಯಳು ಪರಿಪೂರ್ಣ ವಿಶ್ವಾಸ, ಪ್ರೀತಿ ಮತ್ತು ಭಕ್ತಿಯಿಂದ ತನ್ನ ಮಗನ ಶಿಲುಬೆಯನ್ನು ಎದುರಿಸಿದಳು. ತನ್ನ ಮಗನ ಜೀವನದುದ್ದಕ್ಕೂ ಆತನಿಗೆ ಆಕೆ ತೋರಿದ ನಿಷ್ಠೆ ಅಚಲವಾಗಿತ್ತು. ಆ ಸುದೀರ್ಘ ಮೂರು ಗಂಟೆಗಳ ಕಾಲ ಆಕೆ ಶಿಲುಬೆಯ ಮುಂದೆ ನಿಂತಿದ್ದಾಗಲೂ ಆ ನಿಷ್ಠೆ ಎಂದಿಗೂ ಕುಂದಲಿಲ್ಲ.