ಏಪ್ರಿಲ್ 12, 2022
ಪವಿತ್ರ ವಾರದ ಮಂಗಳವಾರ
ಇಂದಿನ ವಾಚನಗಳು

ತಮ್ಮ ಶಿಷ್ಯರೊಡನೆ ಊಟಕ್ಕೆ ಕುಳಿತಿದ್ದ ಯೇಸು ತೀವ್ರವಾಗಿ ಮನನೊಂದು, “ಆಮೆನ್, ಆಮೆನ್, ನಾನು ನಿಮಗೆ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಸಾಕ್ಷಿ ನುಡಿದರು. ಯೋಹಾನ 13:21
ಯೇಸು “ತೀವ್ರವಾಗಿ ಮನನೊಂದರು” ಎಂಬುದನ್ನು ಇಲ್ಲಿ ಗಮನಿಸುವುದು ಬಹಳ ಮುಖ್ಯ. ಇದು ಅವರ ಮಾನವತ್ವವನ್ನು ತೋರಿಸುತ್ತದೆ. ಯೇಸುವಿಗೆ ಮಾನವ ಹೃದಯವಿತ್ತು; ತಮ್ಮ ಮಾನವ ಹೃದಯದ ಮೂಲಕ ಅವರು ಯೂದಾಸನನ್ನು ದೈವಿಕ ಪ್ರೀತಿಯಿಂದ ಪ್ರೀತಿಸಿದರು. ಯೂದಾಸನ ಮೇಲಿನ ಈ ಪರಿಪೂರ್ಣ ಪ್ರೀತಿಯ ಪರಿಣಾಮವಾಗಿ ಯೇಸುವಿನ ಹೃದಯವು ತೀವ್ರವಾಗಿ ನೊಂದಿತು. ಯೂದಾಸನ ಮನಸ್ಸು ಮತ್ತು ಹೃದಯವನ್ನು ಬದಲಾಯಿಸಲು ತಾವು ಆಗಲೇ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿರಲಿಲ್ಲ ಎಂಬ ಅರ್ಥದಲ್ಲಿ ಯೇಸು “ಮನನೊಂದರು.” ಯೂದಾಸನ ದ್ರೋಹದಿಂದ ಯೇಸು ವೈಯಕ್ತಿಕವಾಗಿ ಅವಮಾನಿತರಾದರು ಅಥವಾ ಕೋಪಗೊಂಡರು ಎಂದಲ್ಲ. ಬದಲಾಗಿ, ತಾವು ಪರಿಪೂರ್ಣ ಪ್ರೀತಿಯಿಂದ ಪ್ರೀತಿಸಿದ ಯೂದಾಸನು ನಾಶವಾಗುತ್ತಿರುವುದನ್ನು ಕಂಡು ಯೇಸುವಿನ ಹೃದಯವು ಆಳವಾದ ದುಃಖದಿಂದ ಉರಿಯಿತು.
ಯೂದಾಸನಿಗೆ ಸ್ವತಂತ್ರ ಇಚ್ಛೆಯಿತ್ತು. ಸ್ವತಂತ್ರ ಇಚ್ಛೆಯಿಲ್ಲದೆ ಯೂದಾಸನು ಯೇಸುವನ್ನು ಸ್ವತಂತ್ರವಾಗಿ ಪ್ರೀತಿಸಲು ಸಾಧ್ಯವಿರಲಿಲ್ಲ. ಆದರೆ ತನ್ನ ಸ್ವತಂತ್ರ ಇಚ್ಛೆಯಿಂದ ಯೂದಾಸನು ಯೇಸುವಿಗೆ ದ್ರೋಹ ಮಾಡಲು ಆಯ್ಕೆಮಾಡಿದನು. ನಮ್ಮ ವಿಷಯದಲ್ಲಿಯೂ ಇದೇ ಸತ್ಯ. ನಮಗೆ ಸ್ವತಂತ್ರ ಇಚ್ಛೆಯಿದೆ; ಯೇಸುವಿನ ಪ್ರೀತಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಯೂದಾಸನಿಗಿದ್ದ ಅದೇ ಸಾಮರ್ಥ್ಯವನ್ನು ನಮಗೂ ನೀಡಲಾಗಿದೆ. ಅವರು ಪ್ರೀತಿಯಿಂದ ನೀಡುವ ರಕ್ಷಣೆ ಮತ್ತು ಅನುಗ್ರಹದ ವರವು ನಮ್ಮ ಬದುಕನ್ನು ಪ್ರವೇಶಿಸಲು ನಾವು ಅವಕಾಶ ನೀಡಬಹುದು ಅಥವಾ ಅದನ್ನು ನಿರಾಕರಿಸಬಹುದು. ಇದು 100% ನಮ್ಮ ಆಯ್ಕೆಗೆ ಬಿಟ್ಟದ್ದು.
ನೀವು ಸಾಗುತ್ತಿರುವ ಹಾದಿಯ ಕುರಿತು ಗಂಭೀರವಾಗಿ ಧ್ಯಾನಿಸಲು ಪವಿತ್ರ ವಾರವು ಸೂಕ್ತವಾದ ಸಮಯ. ನಿಮ್ಮ ಬದುಕಿನ ಪ್ರತಿಯೊಂದು ದಿನವೂ ನಿಮ್ಮೆಲ್ಲ ಶಕ್ತಿ ಮತ್ತು ಪ್ರೀತಿಯಿಂದ ದೇವರನ್ನು ಆಯ್ಕೆಮಾಡುವಂತೆ ಅವರು ನಿಮ್ಮನ್ನು ಆಹ್ವಾನಿಸುತ್ತಾರೆ. ಆದರೆ ಯೂದಾಸನಂತೆಯೇ ನಾವು ಕೂಡ ಯೇಸುವಿನ ಶಿಲುಬೆಯನ್ನು ನಮ್ಮದೆಂದು ಸ್ವೀಕರಿಸಿ, ಅವರೊಡನೆ ಪವಿತ್ರ ವಾರವನ್ನು ಪ್ರವೇಶಿಸಲು ನಿರಾಕರಿಸುವ ಮೂಲಕ ಎಷ್ಟೋ ಬಾರಿ ಅವರಿಗೆ ದ್ರೋಹ ಮಾಡುತ್ತೇವೆ. ನಮ್ಮ ಪ್ರಭು ಆ ಪವಿತ್ರ ವಾರದಲ್ಲಿ ಮಾಡಿದಂತೆ, ತ್ಯಾಗದಿಂದಲೂ ಉದಾರತೆಯಿಂದಲೂ ನಮ್ಮ ಬದುಕನ್ನು ಸಂಪೂರ್ಣವಾಗಿ ಅರ್ಪಿಸಲು ನಾವು ಎಷ್ಟೋ ಬಾರಿ ವಿಫಲರಾಗುತ್ತೇವೆ.
ಯೇಸುವಿಗೆ ಯೂದಾಸನ ಮೇಲಿದ್ದ ಪ್ರೀತಿಯ ಕುರಿತು ಇಂದು ಚಿಂತಿಸಿ. ಯೂದಾಸನ ಪಾಪಕ್ಕಿಂತಲೂ ಹೆಚ್ಚಾಗಿ, ಅವನ ಮೇಲಿದ್ದ ಪ್ರೀತಿಯೇ ಯೇಸುವಿನ ಹೃದಯಕ್ಕೆ ಅಷ್ಟು ನೋವನ್ನು ಉಂಟುಮಾಡಿತು. ಯೇಸು ಅವನನ್ನು ಪ್ರೀತಿಸದೇ ಇದ್ದಿದ್ದರೆ, ಅವನ ತಿರಸ್ಕಾರವು ನೋವುಂಟುಮಾಡುತ್ತಿರಲಿಲ್ಲ. ಯೇಸುವಿಗೆ ನಿಮ್ಮ ಮೇಲಿರುವ ಪ್ರೀತಿಯ ಕುರಿತೂ ಚಿಂತಿಸಿ. ನಿಮ್ಮ ಬದುಕಿನ ಕೃತ್ಯಗಳಿಂದ ಅವರ ಹೃದಯವೂ ನೊಂದುಕೊಳ್ಳುತ್ತಿದೆಯೇ ಎಂದು ಮನನಮಾಡಿ. ಪ್ರಾಮಾಣಿಕರಾಗಿರಿ; ನೆಪಗಳನ್ನು ಹೇಳಬೇಡಿ. ನಿಮ್ಮ ಕೃತ್ಯಗಳು ಮತ್ತು ಆಯ್ಕೆಗಳಿಂದ ಯೇಸು ಯಾವುದೇ ರೀತಿಯಲ್ಲಿ ನೊಂದಿದ್ದರೆ, ಯೂದಾಸನಂತೆ ಹತಾಶರಾಗಲು ಅದು ಕಾರಣವಲ್ಲ. ಬದಲಾಗಿ, ನಿಮ್ಮ ದೌರ್ಬಲ್ಯ, ಪಾಪ ಮತ್ತು ಮಿತಿಯ ಅರಿವು ನಿಮಗಿರುವುದರಿಂದ ಅದು ಸಂತೋಷಕ್ಕೆ ಕಾರಣವಾಗಬೇಕು. ನೀವು ನಿಮ್ಮನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುವ ಯೇಸುವಿಗೆ ಅವನ್ನೆಲ್ಲ ಒಪ್ಪಿಸಿಕೊಡಿ. ಹೀಗೆ ಮಾಡುವುದು ನಿಮ್ಮ ಹೃದಯಕ್ಕೆ ಅಪಾರ ಸಾಂತ್ವನ ಮತ್ತು ಶಾಂತಿಯನ್ನು ತರುತ್ತದೆ. ಅದು ನಮ್ಮ ದಿವ್ಯ ಪ್ರಭುವಿನ ಹೃದಯಕ್ಕೂ ಅಪಾರ ಸಾಂತ್ವನ ಮತ್ತು ಶಾಂತಿಯನ್ನು ತರುತ್ತದೆ. ಅವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ಈ ಪವಿತ್ರ ವಾರದಲ್ಲಿ ನೀವು ತಮ್ಮ ಬಳಿಗೆ ಬರಲೆಂದು ಕಾಯುತ್ತಿದ್ದಾರೆ.
ಯಾತನೆ ಅನುಭವಿಸುವ ಮತ್ತು ತಿರಸ್ಕೃತನಾದ ನನ್ನ ಪ್ರಿಯ ಪ್ರಭುವೇ, ನಾನು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತೇನೆ. ಆದರೆ ನನ್ನ ದ್ರೋಹದಿಂದ ನಿಮ್ಮ ಹೃದಯವನ್ನು ವ್ಯಾಕುಲಗೊಳಿಸುತ್ತೇನೆ ಎಂಬುದೂ ನನಗೆ ತಿಳಿದಿದೆ. ಈ ಪವಿತ್ರ ವಾರದಲ್ಲಿ ನನ್ನ ಪಾಪವನ್ನು ಪ್ರಾಮಾಣಿಕವಾಗಿ ಕಾಣಲು ನನಗೆ ಸಹಾಯಮಾಡಿ. ಅದನ್ನು ಕಂಡುಕೊಂಡು, ನಿಮ್ಮನ್ನು ಇನ್ನಷ್ಟು ಆಳವಾಗಿ ಪ್ರೀತಿಸಲು ನನಗೆ ಅಡ್ಡಿಯಾಗಿರುವುದನ್ನು ನಾನು ತೊರೆಯುವಂತಾಗಲಿ; ಹೀಗೆ ನಿಮ್ಮ ಮಹಿಮಾಮಯ ವಿಜಯದಲ್ಲಿ ಪಾಲುಗೊಳ್ಳಲು ನಿಮ್ಮೊಡನೆ ಶಿಲುಬೆಯವರೆಗೆ ನಡೆಯುವಂತಾಗಲಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
(ಪವಿತ್ರ ವಾರದ ಮಂಗಳವಾರ)
ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು
ಮೇಲೆ ಪ್ರದರ್ಶಿಸಲಾದ ಚಿತ್ರ: Valentin de Boulogne ರಚಿಸಿದ ಕೊನೆಯ ಭೋಜನ, Wikimedia Commons ಮೂಲಕ




