ಕನ್ನಡ

ಐಕ್ಯತೆಯ ಮೂಲಕ ಸುವಾರ್ತಾಪ್ರಚಾರ

ಮೇ 11, 2022
ಪಾಸ್ಕ ಕಾಲದ ನಾಲ್ಕನೆಯ ವಾರದ ಬುಧವಾರ
ಇಂದಿನ ವಾಚನಗಳು

ವೀಡಿಯೊ

ಯೇಸು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದರು: “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಮಾತ್ರವಲ್ಲ, ನನ್ನನ್ನು ಕಳುಹಿಸಿದವರಲ್ಲಿಯೂ ವಿಶ್ವಾಸವಿಡುತ್ತಾನೆ; ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದವರನ್ನು ನೋಡುತ್ತಾನೆ.”  ಯೋಹಾನ 12:44–45

ಈಗ, ಅಕ್ಷರಶಃ ಅರ್ಥದಲ್ಲಿ ಇದನ್ನು ಗ್ರಹಿಸುವುದು ಕಷ್ಟ.  ಯೇಸುವನ್ನು ನೋಡಿದವರು ತಂದೆಯನ್ನೂ ನೋಡುತ್ತಿದ್ದರು ಎನ್ನುವುದು ಹೇಗೆ?  ಯೇಸುವನ್ನು ನೋಡುವುದು ಸ್ವರ್ಗದಲ್ಲಿರುವ ತಂದೆಯನ್ನು ನೋಡುವುದಾಗಿತ್ತು ಎನ್ನುವುದು ಹೇಗೆ?  

ಉತ್ತರ ತುಂಬ ಸರಳವಾಗಿದೆ.  ತಂದೆ ಮತ್ತು ಪುತ್ರ ಹಂಚಿಕೊಳ್ಳುವ ಐಕ್ಯತೆ ಪರಿಪೂರ್ಣವಾದದ್ದು.  ಅವರು ವಿಭಿನ್ನ ವ್ಯಕ್ತಿಗಳಾಗಿಯೇ ಉಳಿಯುತ್ತಾರೆ, ಆದರೆ ಒಂದಾಗಿ ಐಕ್ಯಗೊಂಡಿದ್ದಾರೆ.  ತಮ್ಮ ಪರಿಪೂರ್ಣ ಪ್ರೀತಿಯಲ್ಲಿ ಮತ್ತು ತಮ್ಮ ಚಿತ್ತಗಳ ಪರಿಪೂರ್ಣ ಅನ್ಯೋನ್ಯತೆಯಲ್ಲಿ ಅವರು ಒಂದಾಗಿದ್ದಾರೆ.

ಆ ಕಾರಣದಿಂದ, ಯೇಸುವನ್ನು ಅರಿತುಕೊಳ್ಳುವುದು ತಂದೆಯನ್ನು ಅರಿತುಕೊಳ್ಳುವುದೂ ಆಗಿದೆ.  ಆದರೆ ಸತ್ಯವೇನೆಂದರೆ, ಪುತ್ರನ ದೈವತ್ವವು ಮರೆಯಾಗಿರುವಂತೆಯೇ ತಂದೆಯ ಸಾನ್ನಿಧ್ಯವೂ ಮರೆಯಾಗಿದೆ.  ಮೊದಲ ಶಿಷ್ಯರಂತೆ ಯೇಸು ಈ ಭೂಮಿಯಲ್ಲಿ ನಡೆದಾಡುವುದನ್ನು ನೋಡುವ ಅನುಭವ ನಮಗಿಲ್ಲದಿದ್ದರೂ, ಪವಿತ್ರ ದಿವ್ಯಪ್ರಸಾದದ ಮುಂದೆ ಬರುವ ಪ್ರತಿಬಾರಿಯೂ ನಾವು ಅದೇ ವಾಸ್ತವತೆಯನ್ನು ಕಾಣುತ್ತೇವೆ.  ನಾವು ದೇವಾಲಯವನ್ನು ಪ್ರವೇಶಿಸಿ ದಿವ್ಯಪ್ರಸಾದ ಪೆಟ್ಟಿಗೆಯ ಮುಂದೆ ಮೊಣಕಾಲೂರಿ ನಮಿಸುವಾಗ, ಪುತ್ರನಾದ ದೇವರ ಪೂರ್ಣ ದೈವಿಕ ಸಾನ್ನಿಧ್ಯದಲ್ಲಿ ನಾವಿದ್ದೇವೆ ಎಂಬುದನ್ನು ಸದಾ ವಿಶೇಷವಾಗಿ ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ.  ಆ ಕಾರಣದಿಂದ, ನಾವು ತಂದೆಯ ಪೂರ್ಣ ದೈವಿಕ ಸಾನ್ನಿಧ್ಯದಲ್ಲಿಯೂ ಇದ್ದೇವೆ!  ಅವರ ಸಾನ್ನಿಧ್ಯವು ನೈಜವೂ ಸಂಪೂರ್ಣವೂ ಆಗಿದೆ.  ಅವರು ನಮ್ಮ ಪಂಚೇಂದ್ರಿಯಗಳಿಗೆ ಮಾತ್ರ ಮರೆಯಾಗಿದ್ದಾರೆ.  

ಆದರೆ ಇಲ್ಲಿ ಚಿಂತಿಸಬೇಕಾದ ಒಂದು ಮುಖ್ಯ ವಿಷಯವೆಂದರೆ ತಂದೆ, ಪುತ್ರ ಮತ್ತು ಪವಿತ್ರಾತ್ಮರ ಐಕ್ಯತೆ.  ಅವರ ಐಕ್ಯತೆಯನ್ನು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸುವುದು ನಮ್ಮ ಪ್ರಾರ್ಥನಾ ಜೀವನಕ್ಕೆ ಬಹಳ ಹಿತಕರವಾಗಿದೆ.  ಏಕೆ?  ಏಕೆಂದರೆ ಅವರ ಐಕ್ಯತೆಯಲ್ಲಿ ಪಾಲ್ಗೊಳ್ಳಲು ನಮಗೆ ಕರೆ ನೀಡಲಾಗಿದೆ; ಹಾಗೆಯೇ ಪರಸ್ಪರ ಐಕ್ಯತೆಯಲ್ಲಿ ಬಾಳಲೂ ನಮಗೆ ಕರೆ ನೀಡಲಾಗಿದೆ.

ಐಕ್ಯತೆಯನ್ನು ಸಾಧಿಸುವುದು ಕಷ್ಟ.  ಅದಕ್ಕೆ ಅಪಾರವಾದ ಪ್ರೀತಿ ಬೇಕು.  ಅದರ ಅರ್ಥ, ಇನ್ನೊಬ್ಬರಿಗೆ ಸಂಪೂರ್ಣವಾಗಿ ಸನ್ನಿಹಿತರಾಗಿರುವುದು ಮತ್ತು ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು, ಸ್ವೀಕರಿಸಲು ಹಾಗೂ ಅರಿತುಕೊಳ್ಳಲು ಪ್ರಯತ್ನಿಸುವುದು.  ಇದಕ್ಕೆ ಪವಿತ್ರ ತ್ರಿತ್ವವೇ ನಮ್ಮ ಮಾದರಿ.  ತಂದೆತಾಯಿಗಳು ಮತ್ತು ಮಕ್ಕಳು, ದಂಪತಿಗಳು, ಸ್ನೇಹಿತರು ಅಥವಾ ಇತರರು ಯಾರೇ ಆಗಿರಲಿ, ಆಳವಾದ ಮತ್ತು ಶಾಶ್ವತವಾಗಿ ನೆಲೆಸುವ ಐಕ್ಯತೆಗೆ ನಾವು ಕರೆಯಲ್ಪಟ್ಟಿದ್ದೇವೆ.  

ನಿಮಗೆ ಚೆನ್ನಾಗಿ ಪರಿಚಯವಿರುವ ಒಬ್ಬ ವ್ಯಕ್ತಿಯ ಕುರಿತು ಯೋಚಿಸಿ.  ಆ ವ್ಯಕ್ತಿಗೆ ಚೆನ್ನಾಗಿ ಪರಿಚಯವಿರುವ ಮತ್ತು ಅವರು ಪ್ರೀತಿಸುವ ಇನ್ನೊಬ್ಬರ ಕುರಿತೂ ಯೋಚಿಸಿ.  ಅವರನ್ನು ತಿಳಿದಿರುವ ವ್ಯಕ್ತಿಯನ್ನು ನೀವು ಅರಿತಿರುವುದರಿಂದಲೇ, ಆ ಇನ್ನೊಬ್ಬ ವ್ಯಕ್ತಿಯನ್ನೂ ನೀವು ಸ್ವಲ್ಪಮಟ್ಟಿಗೆ ಅರಿತಿದ್ದೀರಿ ಎಂದು ನಿಮಗೆ ಅನಿಸಬಹುದು.  ಉದಾಹರಣೆಗೆ, ನಿಮಗೆ ಒಬ್ಬ ಆತ್ಮೀಯ ಸ್ನೇಹಿತರಿದ್ದು, ಅವರಿಗೆ ಒಂದು ಮಗು ಇದೆ ಎಂದುಕೊಳ್ಳಿ; ಅವರು ತಮ್ಮ ಮಗುವಿನ ಕುರಿತು ನಿಮ್ಮೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.  ನಿಮ್ಮ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ಅನುಭವಿಸುತ್ತಿರುವುದು ಆ ತಂದೆ ಅಥವಾ ತಾಯಿ ಮತ್ತು ಮಗುವಿನ ಐಕ್ಯತೆಯನ್ನೇ.  

ದೇವರ ವಿಷಯದಲ್ಲಿಯೂ ಹೀಗೆಯೇ.  ನಾವು ಪುತ್ರನಾದ ದೇವರನ್ನು ಅರಿತುಕೊಳ್ಳುತ್ತಾ ಹೋದಂತೆ, ಸಹಜವಾಗಿಯೇ ತಂದೆಯಾದ ದೇವರನ್ನೂ ಅರಿತುಕೊಳ್ಳುತ್ತೇವೆ.  ಸಂತೋಷದ ಸಂಗತಿಯೇನೆಂದರೆ, ನಾವು ದೇವರನ್ನು ಅರಿತುಕೊಂಡು, ನಂತರ ಇನ್ನೊಬ್ಬರು ನಮ್ಮನ್ನು ಅರಿತುಕೊಳ್ಳಲು ಅವಕಾಶ ನೀಡಿದರೆ, ಅದರ ಪರಿಣಾಮವಾಗಿ ಅವರು ನಮ್ಮ ಮೂಲಕ ದೇವರನ್ನು ಅರಿತುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ.  ಸುವಾರ್ತಾಪ್ರಚಾರ ಮಾಡಲು ಮತ್ತು ನಾವು ಅರಿತಿರುವ ಹಾಗೂ ಪ್ರೀತಿಸುವ ಜನರಿಗೆ ದೇವರನ್ನು ತಲುಪಿಸಲು ಇರುವ ಅದ್ಭುತ ಮಾರ್ಗಗಳಲ್ಲಿ ಇದು ಒಂದು.  

ಇಂದು, ದೇವರೊಂದಿಗಿನ ನಿಮ್ಮ ಸಂಬಂಧದ ಕುರಿತು ಮತ್ತು ಆ ಸಂಬಂಧವು ನಿಮ್ಮ ಇತರ ಎಲ್ಲ ಸಂಬಂಧಗಳಲ್ಲಿ ಹೇಗೆ ಹೊಳೆಯುತ್ತದೆ ಎಂಬುದರ ಕುರಿತು ಚಿಂತಿಸಿ.  ದೇವರನ್ನು ಅರಿತುಕೊಳ್ಳಲು ಮತ್ತು ಪ್ರೀತಿಸಲು ಇನ್ನಷ್ಟು ಪೂರ್ಣವಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳಿ; ಆಗ ನಿಮ್ಮ ಸುತ್ತಲಿರುವವರೂ ದೇವರ ಮೇಲಿನ ನಿಮ್ಮ ಪ್ರೀತಿಯಿಂದ ಪ್ರಯೋಜನ ಪಡೆಯಬಹುದು.

ಪರಿಪೂರ್ಣ ಐಕ್ಯದ ಪ್ರಭುವೇ, ನಿಮ್ಮನ್ನು ಅರಿತು ಪ್ರೀತಿಸಲು ಮತ್ತು ಆ ಸಂಬಂಧದ ಮೂಲಕ ತಂದೆಯನ್ನೂ ಪವಿತ್ರಾತ್ಮರನ್ನೂ ಅರಿತು ಪ್ರೀತಿಸಲು ನನಗೆ ಸಹಾಯಮಾಡಿ.  ಅತಿ ಪವಿತ್ರ ತ್ರಿತ್ವವೇ, ನಿಮ್ಮ ಮೇಲಿನ ಪ್ರೀತಿಯಲ್ಲಿ ನಾನು ಬೆಳೆಯುತ್ತಾ ಹೋದಂತೆ, ನನ್ನ ಪ್ರತಿಯೊಂದು ಸಂಬಂಧದಲ್ಲಿಯೂ ಆ ಪ್ರೀತಿಯನ್ನು ತೋರಿಸಲು ನನಗೆ ಸಹಾಯಮಾಡಿ; ಹೀಗೆ ನಾನು ಇತರರಿಗೆ ನಿಮ್ಮ ಪ್ರೀತಿಯ ಸಾಧನವಾಗುವಂತಾಗಲಿ.  ಅತಿ ಪವಿತ್ರ ತ್ರಿತ್ವವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಪಾಸ್ಕ ಪ್ರಾರ್ಥನೆಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ಮುಖ್ಯ ಚಿತ್ರ: ಪವಿತ್ರ ತ್ರಿತ್ವ, flickr ಮೂಲಕ