ಮೇ 12, 2022
ಪಾಸ್ಕಕಾಲದ ನಾಲ್ಕನೇ ವಾರದ ಗುರುವಾರ
ಇಂದಿನ ವಾಚನಗಳು
ಸಂತ ನೇರೆಯುಸ್ ಮತ್ತು ಸಂತ ಅಕಿಲೆಯುಸ್, ರಕ್ತಸಾಕ್ಷಿಗಳು—ಐಚ್ಛಿಕ ಸ್ಮರಣೆ
ಸಂತ ಪಂಕ್ರಾಸ್, ರಕ್ತಸಾಕ್ಷಿ—ಐಚ್ಛಿಕ ಸ್ಮರಣೆ

ಯೇಸು ಶಿಷ್ಯರ ಪಾದಗಳನ್ನು ತೊಳೆದ ಬಳಿಕ ಅವರಿಗೆ ಹೀಗೆ ಹೇಳಿದರು: “ಆಮೆನ್, ಆಮೆನ್, ನಾನು ನಿಮಗೆ ಹೇಳುತ್ತೇನೆ, ಯಾವ ದಾಸನೂ ತನ್ನ ಯಜಮಾನನಿಗಿಂತ ದೊಡ್ಡವನಲ್ಲ; ಯಾವ ಸಂದೇಶವಾಹಕನೂ ತನ್ನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.” ಯೋಹಾನ 13:16
ಈ ಮಾತುಗಳ ಒಳಾರ್ಥವನ್ನು ಗಮನಿಸಿದರೆ, ಯೇಸು ನಮಗೆ ಎರಡು ವಿಷಯಗಳನ್ನು ಹೇಳುತ್ತಿರುವುದನ್ನು ಕೇಳಬಹುದು. ಮೊದಲನೆಯದು, ನಮ್ಮನ್ನು ದೇವರ ದಾಸರು ಮತ್ತು ಸಂದೇಶವಾಹಕರು ಎಂದು ಕಂಡುಕೊಳ್ಳುವುದು ಒಳ್ಳೆಯದು; ಎರಡನೆಯದು, ನಾವು ಯಾವಾಗಲೂ ದೇವರಿಗೇ ಮಹಿಮೆಯನ್ನು ಸಲ್ಲಿಸಬೇಕು. ಆಧ್ಯಾತ್ಮಿಕ ಜೀವನದಲ್ಲಿ ಅನುಸರಿಸಬೇಕಾದ ಮುಖ್ಯ ಅಂಶಗಳಿವು. ಇವೆರಡನ್ನೂ ನೋಡೋಣ.
ಸಾಮಾನ್ಯವಾಗಿ, “ದಾಸ”ನಾಗಿರುವ ಕಲ್ಪನೆಯು ಅಷ್ಟೇನೂ ಅಪೇಕ್ಷಣೀಯವಲ್ಲ. ನಮ್ಮ ಈ ಕಾಲದಲ್ಲಿ ದಾಸ್ಯ ಪದ್ಧತಿಯ ಪರಿಚಯ ನಮಗೆ ಅಷ್ಟಾಗಿ ಇಲ್ಲದಿರಬಹುದು. ಆದರೆ ಅದು ವಾಸ್ತವವಾಗಿದೆ; ನಮ್ಮ ಜಗತ್ತಿನ ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳಲ್ಲಿ ಮತ್ತು ಅನೇಕ ಕಾಲಘಟ್ಟಗಳಲ್ಲಿ ಅದು ಅಪಾರ ಹಾನಿಯನ್ನು ಉಂಟುಮಾಡಿದೆ. ದಾಸ್ಯ ಪದ್ಧತಿಯ ಅತ್ಯಂತ ಕೆಟ್ಟ ಅಂಶವೆಂದರೆ ದಾಸರನ್ನು ನಡೆಸಿಕೊಳ್ಳುವ ಕ್ರೂರ ರೀತಿ. ಅವರನ್ನು ವಸ್ತುಗಳಂತೆ, ಆಸ್ತಿಯಂತೆ ಕಾಣಲಾಗುತ್ತದೆ; ಇದು ಅವರ ಮಾನವ ಘನತೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಆದರೆ ಒಬ್ಬ ವ್ಯಕ್ತಿಯು ತನ್ನನ್ನು ಪರಿಪೂರ್ಣವಾಗಿ ಪ್ರೀತಿಸುವ ಯಜಮಾನನ ದಾಸನಾಗಿದ್ದಾನೆಂದು ಕಲ್ಪಿಸಿಕೊಳ್ಳಿ. ಆ “ದಾಸ”ನು ತನ್ನ ನಿಜವಾದ ಸಾಮರ್ಥ್ಯವನ್ನು ಅರಿತು, ಜೀವನದಲ್ಲಿ ಪೂರ್ಣತೆಯನ್ನು ಪಡೆಯಲು ನೆರವಾಗುವುದೇ ಆ ಯಜಮಾನನ ಮುಖ್ಯ ಧ್ಯೇಯವಾಗಿದ್ದರೆ ಹೇಗಿರುತ್ತದೆ? ಇಂತಹ ಸಂದರ್ಭದಲ್ಲಿ, ಪ್ರೀತಿ ಮತ್ತು ಸಂತೋಷವನ್ನು ಸ್ವೀಕರಿಸಬೇಕೆಂದು ಯಜಮಾನನು ದಾಸನಿಗೆ “ಆಜ್ಞಾಪಿಸುತ್ತಾನೆ”; ಅವನ ಮಾನವ ಘನತೆಗೆ ಎಂದಿಗೂ ಧಕ್ಕೆ ತರುವುದಿಲ್ಲ.
ದೇವರ ವಿಷಯದಲ್ಲಿ ಹೀಗೆಯೇ ಇರುತ್ತದೆ. ದೇವರ ದಾಸರಾಗುವ ವಿಚಾರಕ್ಕೆ ನಾವು ಎಂದಿಗೂ ಹೆದರಬಾರದು. ಈ ಪದಪ್ರಯೋಗವು ಹಿಂದಿನ ಕಾಲದಲ್ಲಿ ಮಾನವ ಘನತೆಗೆ ನಡೆದ ಅವಮಾನಗಳ ಭಾರವನ್ನು ಹೊತ್ತುಕೊಂಡಿರಬಹುದಾದರೂ, ದೇವರ ದಾಸರಾಗಿರುವುದೇ ನಮ್ಮ ಗುರಿಯಾಗಿರಬೇಕು. ಏಕೆ? ಏಕೆಂದರೆ ನಾವು ನಮ್ಮ ಯಜಮಾನನಾಗಿ ಬಯಸಬೇಕಾದವರು ದೇವರೇ. ನಿಜವಾಗಿ, ನಾವೇ ನಮ್ಮ ಯಜಮಾನರಾಗಿರಬೇಕೆಂದು ಬಯಸುವುದಕ್ಕಿಂತಲೂ ಹೆಚ್ಚಾಗಿ ದೇವರು ನಮ್ಮ ಯಜಮಾನರಾಗಿರಬೇಕೆಂದು ಬಯಸಬೇಕು. ನಾವು ನಮ್ಮನ್ನು ನೋಡಿಕೊಳ್ಳುವುದಕ್ಕಿಂತಲೂ ಚೆನ್ನಾಗಿ ದೇವರು ನಮ್ಮನ್ನು ನೋಡಿಕೊಳ್ಳುವರು! ಅವರು ನಮಗೆ ಪವಿತ್ರತೆ ಮತ್ತು ಸಂತೋಷದಿಂದ ಕೂಡಿದ ಪರಿಪೂರ್ಣ ಜೀವನವನ್ನು ವಿಧಿಸುವರು; ನಾವು ಅವರ ದೈವಿಕ ಚಿತ್ತಕ್ಕೆ ವಿನಮ್ರವಾಗಿ ವಿಧೇಯರಾಗಿರುವೆವು. ಅಷ್ಟೇ ಅಲ್ಲ, ನಾವು ಅವರಿಗೆ ಅವಕಾಶ ಕೊಟ್ಟರೆ, ಅವರು ನಮಗೆ ವಿಧಿಸುವ ಎಲ್ಲವನ್ನೂ ಸಾಧಿಸಲು ಬೇಕಾದ ಸಾಧನಗಳನ್ನೂ ನೀಡುವರು. “ದೇವರ ದಾಸ”ರಾಗಿರುವುದು ಒಳ್ಳೆಯದು; ಅದೇ ನಮ್ಮ ಜೀವನದ ಗುರಿಯಾಗಿರಬೇಕು.
ನಮ್ಮ ಜೀವನದ ನಿಯಂತ್ರಣವನ್ನು ದೇವರಿಗೆ ಒಪ್ಪಿಸಿಕೊಡುವ ಸಾಮರ್ಥ್ಯದಲ್ಲಿ ನಾವು ಬೆಳೆಯುತ್ತಾ ಹೋದಂತೆ, ಅವರು ನಮ್ಮಲ್ಲಿ ಮಾಡುವ ಎಲ್ಲ ಕಾರ್ಯಗಳಿಗಾಗಿ ಅವರಿಗೆ ಕೃತಜ್ಞತೆ ಮತ್ತು ಸ್ತುತಿ ಸಲ್ಲಿಸುವ ಮನೋಭಾವವನ್ನೂ ನಾವು ನಿಯಮಿತವಾಗಿ ಬೆಳೆಸಿಕೊಳ್ಳಬೇಕು. ತಮ್ಮ ಧ್ಯೇಯದಲ್ಲಿ ಪಾಲುಗೊಳ್ಳಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಮತ್ತು ತಮ್ಮ ಚಿತ್ತವನ್ನು ನೆರವೇರಿಸಲು ನಮ್ಮನ್ನು ಕಳುಹಿಸಿದ್ದಕ್ಕಾಗಿ ನಾವು ಎಲ್ಲ ಮಹಿಮೆಯನ್ನೂ ಅವರಿಗೇ ಸಲ್ಲಿಸಬೇಕು. ಅವರು ಎಲ್ಲ ರೀತಿಯಲ್ಲೂ ಶ್ರೇಷ್ಠರು; ಆದರೂ ಆ ಶ್ರೇಷ್ಠತೆಯಲ್ಲಿ ಮತ್ತು ಮಹಿಮೆಯಲ್ಲಿ ನಾವೂ ಪಾಲುಗೊಳ್ಳಬೇಕೆಂದು ಅವರು ಬಯಸುತ್ತಾರೆ. ಆದ್ದರಿಂದ ಶುಭಸುದ್ದಿ ಏನೆಂದರೆ, ದೇವರು ನಮ್ಮಲ್ಲಿ ಮಾಡುವ ಎಲ್ಲ ಕಾರ್ಯಗಳಿಗಾಗಿ ಹಾಗೂ ಅವರ ಧರ್ಮಶಾಸ್ತ್ರದ ಎಲ್ಲ ವಿಧಿಗಳಿಗಾಗಿ ಮತ್ತು ಅವರ ಆಜ್ಞೆಗಳಿಗಾಗಿ ನಾವು ಅವರನ್ನು ಮಹಿಮೆಪಡಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದಾಗ, ಅವರ ಮಹಿಮೆಯಲ್ಲಿ ಪಾಲುಗೊಂಡು ಅದನ್ನು ಹಂಚಿಕೊಳ್ಳುವಂತೆ ದೇವರು ನಮ್ಮನ್ನು ಮೇಲಕ್ಕೆತ್ತುವರು! ಇದು ಕ್ರೈಸ್ತ ಜೀವನದ ಒಂದು ಫಲವಾಗಿದೆ; ನಾವು ಸ್ವತಃ ಕಲ್ಪಿಸಿಕೊಳ್ಳಬಹುದಾದುದನ್ನೂ ಮೀರಿ ಇದು ನಮ್ಮನ್ನು ಆಶೀರ್ವದಿಸುತ್ತದೆ.
ಇಂದು, ದೇವರಿಗೂ ಅವರ ಚಿತ್ತಕ್ಕೂ ಸಂಪೂರ್ಣ ದಾಸರಾಗಲು ನಿಮ್ಮನ್ನು ಒಪ್ಪಿಸಿಕೊಡುವುದರ ಬಗ್ಗೆ ಚಿಂತಿಸಿ. ಆ ಬದ್ಧತೆಯು ನಿಮ್ಮನ್ನು ಅಪಾರ ಆನಂದದ ಹಾದಿಯಲ್ಲಿ ಮುನ್ನಡೆಸಲು ಆರಂಭಿಸುತ್ತದೆ.
ನನ್ನ ಪ್ರಭುವೇ, ನನ್ನ ಗುರುವೇ, ನಿಮ್ಮ ಪ್ರತಿಯೊಂದು ಆಜ್ಞೆಗೂ ನಾನು ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ. ನನ್ನಲ್ಲಿ ನಿಮ್ಮ ಚಿತ್ತವೇ ನೆರವೇರಲಿ, ನಿಮ್ಮ ಚಿತ್ತ ಮಾತ್ರವೇ ನೆರವೇರಲಿ. ಎಲ್ಲ ವಿಷಯಗಳಲ್ಲಿಯೂ ನಿಮ್ಮನ್ನೇ ನನ್ನ ಗುರುವನ್ನಾಗಿ ಆರಿಸಿಕೊಳ್ಳುತ್ತೇನೆ ಮತ್ತು ನನ್ನ ಮೇಲಿರುವ ನಿಮ್ಮ ಪರಿಪೂರ್ಣ ಪ್ರೀತಿಯಲ್ಲಿ ಭರವಸೆಯಿಡುತ್ತೇನೆ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಇಂದಿನ ಸಂತರು –
ಸಂತ ನೆರೆಯುಸ್ ಮತ್ತು ಸಂತ ಅಕಿಲೆಯುಸ್, ರಕ್ತಸಾಕ್ಷಿಗಳು




