ಕನ್ನಡ

ನೀನು ನನ್ನನ್ನು ಪ್ರೀತಿಸುತ್ತೀಯಾ?

ಜೂನ್ 3, 2022
ಪಾಸ್ಕ ಕಾಲದ ಏಳನೇ ವಾರದ ಶುಕ್ರವಾರ
ಇಂದಿನ ವಾಚನಗಳು

ರಕ್ತಸಾಕ್ಷಿಗಳಾದ ಸಂತ ಚಾರ್ಲ್ಸ್ ಲ್ವಾಂಗಾ ಮತ್ತು ಸಂಗಡಿಗರು—ಸ್ಮರಣೆ

ವೀಡಿಯೊ

ಯೇಸು ಮೂರನೆಯ ಬಾರಿ ಅವನನ್ನು, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. “ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಮೂರನೆಯ ಬಾರಿ ಕೇಳಿದ್ದರಿಂದ ಪೇತ್ರನು ದುಃಖಗೊಂಡು ಅವರಿಗೆ, “ಪ್ರಭುವೇ, ನಿಮಗೆ ಎಲ್ಲವೂ ತಿಳಿದಿದೆ; ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂಬುದು ನಿಮಗೆ ತಿಳಿದಿದೆ” ಎಂದನು. ಯೇಸು ಅವನಿಗೆ, “ನನ್ನ ಕುರಿಗಳನ್ನು ಮೇಯಿಸು” ಎಂದರು.  ಯೋಹಾನ 21:17

ತನ್ನನ್ನು ಪ್ರೀತಿಸುತ್ತಾನೆಯೇ ಎಂದು ಯೇಸು ಪೇತ್ರನನ್ನು ಮೂರು ಬಾರಿ ಕೇಳಿದರು.  ಮೂರು ಬಾರಿ ಏಕೆ?  ಪೇತ್ರನು ಯೇಸುವನ್ನು ಮೂರು ಬಾರಿ ನಿರಾಕರಿಸಿದ್ದಕ್ಕೆ “ಪರಿಹಾರ ಮಾಡಿಕೊಳ್ಳಲು” ಅವಕಾಶ ನೀಡುವುದು ಒಂದು ಕಾರಣವಾಗಿತ್ತು.  ಇಲ್ಲ, ಪೇತ್ರನು ಮೂರು ಬಾರಿ ಕ್ಷಮೆ ಕೇಳಬೇಕೆಂಬ ಅಗತ್ಯ ಯೇಸುವಿಗಿರಲಿಲ್ಲ; ಆದರೆ ಪೇತ್ರನು ತನ್ನ ಪ್ರೀತಿಯನ್ನು ಮೂರು ಬಾರಿ ವ್ಯಕ್ತಪಡಿಸಬೇಕಾದ ಅಗತ್ಯವಿತ್ತು, ಅದು ಯೇಸುವಿಗೆ ತಿಳಿದಿತ್ತು.

ಮೂರು ಎಂಬುದು ಪರಿಪೂರ್ಣತೆಯ ಸಂಖ್ಯೆಯೂ ಆಗಿದೆ.  ಉದಾಹರಣೆಗೆ, ದೇವರು “ಪವಿತ್ರರು, ಪವಿತ್ರರು, ಪವಿತ್ರರು” ಎಂದು ನಾವು ಹೇಳುತ್ತೇವೆ.  ಈ ತ್ರಿವಿಧ ಅಭಿವ್ಯಕ್ತಿಯು ದೇವರು ಎಲ್ಲರಿಗಿಂತಲೂ ಪರಮಪವಿತ್ರರು ಎಂದು ಹೇಳುವ ಒಂದು ವಿಧಾನವಾಗಿದೆ.  ಯೇಸುವನ್ನು ಪ್ರೀತಿಸುತ್ತೇನೆ ಎಂದು ಮೂರು ಬಾರಿ ಹೇಳಲು ಪೇತ್ರನಿಗೆ ಅವಕಾಶ ನೀಡಲಾದದ್ದು, ತನ್ನ ಪ್ರೀತಿಯನ್ನು ಅತ್ಯಂತ ಆಳವಾಗಿ ವ್ಯಕ್ತಪಡಿಸಲು ಅವನಿಗೆ ದೊರೆತ ಅವಕಾಶವಾಗಿತ್ತು.

ಹೀಗೆ ಇಲ್ಲಿ ಮೂರು ಬಾರಿ ಪ್ರೀತಿಯ ನಿವೇದನೆಯೂ, ಪೇತ್ರನ ಮೂರು ನಿರಾಕರಣೆಗಳ ನಿವಾರಣೆಯೂ ನಡೆಯುತ್ತವೆ.  ದೇವರನ್ನು ಪ್ರೀತಿಸುವ ಮತ್ತು ಅವರ ಕರುಣೆಯನ್ನು “ಮೂರು ಬಾರಿ” ಬೇಡುವ ಅಗತ್ಯ ನಮಗೂ ಇದೆ ಎಂಬುದನ್ನು ಇದು ನಮಗೆ ತೋರಿಸಬೇಕು.

ನೀವು ದೇವರನ್ನು ಪ್ರೀತಿಸುತ್ತೀರಿ ಎಂದು ಅವರಿಗೆ ಹೇಳುವಾಗ, ಆ ಪ್ರೀತಿ ಎಷ್ಟು ಆಳವಾಗಿದೆ?  ಅದು ಹೆಚ್ಚಾಗಿ ಬರಿಯ ಮಾತುಗಳಿಗೆ ಸೀಮಿತವಾಗಿದೆಯೇ, ಅಥವಾ ಅದು ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವ ಪರಿಪೂರ್ಣ ಪ್ರೀತಿಯೇ?  ದೇವರ ಮೇಲಿನ ನಿಮ್ಮ ಪ್ರೀತಿಯನ್ನು ನೀವು ಪೂರ್ಣ ಹೃದಯದಿಂದ ವ್ಯಕ್ತಪಡಿಸುತ್ತೀರಾ?  ಅಥವಾ ಅದು ಇನ್ನೂ ಬೆಳೆಸಿಕೊಳ್ಳಬೇಕಾದ ಪ್ರೀತಿಯೇ?

ಖಂಡಿತವಾಗಿಯೂ ನಾವೆಲ್ಲರೂ ನಮ್ಮ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಅದಕ್ಕಾಗಿಯೇ ಈ ವಾಕ್ಯಭಾಗವು ನಮಗೆ ಇಷ್ಟು ಮಹತ್ವದ್ದಾಗಿರಬೇಕು.  ಯೇಸು ನಮಗೂ ಈ ಪ್ರಶ್ನೆಯನ್ನು ಮೂರು ಬಾರಿ ಕೇಳುತ್ತಿರುವುದನ್ನು ನಾವು ಕೇಳಿಸಿಕೊಳ್ಳಬೇಕು.  “ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಸರಳವಾಗಿ ಹೇಳುವುದರಿಂದ ಮಾತ್ರ ಅವರು ತೃಪ್ತರಾಗುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.  ಅದನ್ನು ಮತ್ತೆ ಮತ್ತೆ ಕೇಳಲು ಅವರು ಬಯಸುತ್ತಾರೆ.  ಈ ಪ್ರೀತಿಯನ್ನು ನಾವು ಅತ್ಯಂತ ಆಳವಾಗಿ ವ್ಯಕ್ತಪಡಿಸಬೇಕಾದ ಅಗತ್ಯವಿದೆ ಎಂಬುದು ಅವರಿಗೆ ತಿಳಿದಿರುವುದರಿಂದ ಅವರು ಇದನ್ನು ನಮ್ಮನ್ನು ಕೇಳುತ್ತಾರೆ.  “ಪ್ರಭುವೇ, ನಿಮಗೆ ಎಲ್ಲವೂ ತಿಳಿದಿದೆ; ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂಬುದು ನಿಮಗೆ ತಿಳಿದಿದೆ!”  ಇದೇ ನಮ್ಮ ಅಂತಿಮ ಉತ್ತರವಾಗಿರಬೇಕು.

ಈ ಮೂರು ಬಾರಿಯ ಪ್ರಶ್ನೆಯು ಅವರ ಕರುಣೆಗಾಗಿ ನಮ್ಮಲ್ಲಿರುವ ಅತ್ಯಂತ ಆಳವಾದ ಹಂಬಲವನ್ನು ವ್ಯಕ್ತಪಡಿಸಲು ನಮಗೆ ಅವಕಾಶವನ್ನೂ ನೀಡುತ್ತದೆ.  ನಾವೆಲ್ಲರೂ ಪಾಪ ಮಾಡುತ್ತೇವೆ.  ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಯೇಸುವನ್ನು ನಿರಾಕರಿಸುತ್ತೇವೆ.  ಆದರೆ ಶುಭಸುದ್ದಿ ಏನೆಂದರೆ, ನಮ್ಮ ಪಾಪವೇ ನಮ್ಮ ಪ್ರೀತಿಯನ್ನು ಇನ್ನಷ್ಟು ಆಳಗೊಳಿಸಲು ಪ್ರೇರಣೆಯಾಗುವಂತೆ ಮಾಡಿಕೊಳ್ಳಲು ಯೇಸು ನಮ್ಮನ್ನು ಸದಾ ಆಹ್ವಾನಿಸುತ್ತಾರೆ.  ಅವರು ನಮ್ಮ ಮೇಲೆ ಕೋಪಗೊಂಡು ಕುಳಿತುಕೊಳ್ಳುವುದಿಲ್ಲ.  ಮುನಿಸಿಕೊಳ್ಳುವುದಿಲ್ಲ.  ನಮ್ಮ ಪಾಪವನ್ನು ಮುಂದಿಟ್ಟುಕೊಂಡು ನಮ್ಮನ್ನು ಬೆದರಿಸುವುದಿಲ್ಲ.  ಆದರೆ ಅವರು ಅತ್ಯಂತ ಆಳವಾದ ಪಶ್ಚಾತ್ತಾಪವನ್ನೂ ಹೃದಯದ ಸಂಪೂರ್ಣ ಪರಿವರ್ತನೆಯನ್ನೂ ಕೇಳುತ್ತಾರೆ.  ನಾವು ನಮ್ಮ ಪಾಪದಿಂದ ಸಂಪೂರ್ಣವಾಗಿ ವಿಮುಖರಾಗಬೇಕೆಂದು ಅವರು ಬಯಸುತ್ತಾರೆ.

ದೇವರ ಮೇಲಿನ ನಿಮ್ಮ ಪ್ರೀತಿಯ ಆಳವನ್ನೂ, ಅದನ್ನು ನೀವು ಅವರಿಗೆ ಎಷ್ಟು ಚೆನ್ನಾಗಿ ವ್ಯಕ್ತಪಡಿಸುತ್ತೀರಿ ಎಂಬುದನ್ನೂ ಇಂದು ಧ್ಯಾನಿಸಿ.  ದೇವರ ಮೇಲಿನ ನಿಮ್ಮ ಪ್ರೀತಿಯನ್ನು ಮೂರು ಬಾರಿ ವ್ಯಕ್ತಪಡಿಸಲು ನಿರ್ಧರಿಸಿ.  ಅದು ಆಳವಾಗಿಯೂ ಪ್ರಾಮಾಣಿಕವಾಗಿಯೂ ಹಿಂತೆಗೆದುಕೊಳ್ಳಲಾಗದಂತೆಯೂ ಇರಲಿ.  ಹೃದಯಪೂರ್ವಕವಾದ ಈ ಕಾರ್ಯವನ್ನು ಪ್ರಭು ಸ್ವೀಕರಿಸಿ, ನಿಮಗೆ ನೂರರಷ್ಟು ಪ್ರತಿಯಾಗಿ ನೀಡುವರು.

ನನ್ನ ಪ್ರೀತಿಯ ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನಿಮಗೆ ಚೆನ್ನಾಗಿ ತಿಳಿದಿದೆ.  ನಾನು ಎಷ್ಟು ದುರ್ಬಲನಾಗಿದ್ದೇನೆಂಬುದೂ ನಿಮಗೆ ತಿಳಿದಿದೆ.  ನಿಮ್ಮ ಮೇಲಿನ ನನ್ನ ಪ್ರೀತಿಯನ್ನೂ ನಿಮ್ಮ ಕರುಣೆಗಾಗಿ ನನಗಿರುವ ಹಂಬಲವನ್ನೂ ವ್ಯಕ್ತಪಡಿಸಲು ನೀವು ನೀಡುವ ಕರೆಯನ್ನು ನಾನು ಆಲಿಸುವಂತೆ ಮಾಡಿರಿ.  ಈ ಪ್ರೀತಿಯನ್ನೂ ಹಂಬಲವನ್ನೂ ನಾನು ಸಂಪೂರ್ಣವಾಗಿ ಅರ್ಪಿಸುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಪವಿತ್ರಾತ್ಮರಿಗೆ ನೊವೇನಾ
ಪೆಂತೆಕೋಸ್ತ್ ಹಬ್ಬದ ಸಿದ್ಧತೆಗಾಗಿ ಪ್ರಾರ್ಥಿಸಲಾಗುತ್ತದೆ
ಎಂಟನೇ ದಿನ – ಶುಕ್ರವಾರ, ಜೂನ್ 3

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ರಕ್ತಸಾಕ್ಷಿಗಳಾದ ಸಂತ ಚಾರ್ಲ್ಸ್ ಲ್ವಾಂಗಾ ಮತ್ತು ಸಂಗಡಿಗರು

ದಿವ್ಯಬಲಿಯ ವಾಚನಗಳ ಆಯ್ಕೆಗಳು