ಕನ್ನಡ

ಚಿಂತಿಸಬೇಡಿ

ಜೂನ್ 18, 2022
ಸಾಮಾನ್ಯ ಕಾಲದ ಹನ್ನೊಂದನೇ ವಾರದ ಶನಿವಾರ
ಇಂದಿನ ವಾಚನಗಳು

ವೀಡಿಯೊ

“ನಿಮ್ಮಲ್ಲಿ ಯಾರಾದರೂ ಚಿಂತಿಸುವುದರಿಂದ ತಮ್ಮ ಆಯುಷ್ಯಕ್ಕೆ ಒಂದು ಕ್ಷಣವನ್ನಾದರೂ ಸೇರಿಸಬಲ್ಲರೇ?…ಮೊದಲು ದೇವರ ರಾಜ್ಯವನ್ನೂ ಅವರ ನೀತಿಯನ್ನೂ ಹುಡುಕಿರಿ; ಆಗ ಇವೆಲ್ಲವೂ ನಿಮಗೆ ಹೆಚ್ಚಾಗಿ ದೊರೆಯುವವು. ನಾಳೆಯ ಕುರಿತು ಚಿಂತಿಸಬೇಡಿ; ನಾಳೆಯದು ನಾಳೆಗೆ ನೋಡಿಕೊಳ್ಳುತ್ತದೆ.”  ಮತ್ತಾಯ 6:27 & 33-34

ಇದು ನಾವೆಲ್ಲರೂ ಕೇಳಬೇಕಾದ ಸಲಹೆ.  ಆದರೆ, ಮಾತೊಂದಿರುವಂತೆ, “ಹೇಳುವುದು ಸುಲಭ, ಮಾಡುವುದು ಕಷ್ಟ.”

ಕೆಲವರಿಗೆ ಚಿಂತಿಸುವುದು ಬದುಕಿನ ಸಹಜ ಭಾಗವೇ ಆಗಿಬಿಡಬಹುದು.  ನಾವು ಪ್ರತಿದಿನ ಚಿಂತಿಸುವ ವಿಷಯಗಳು ಅಸಂಖ್ಯವಾಗಿರಬಹುದು.  ಹಣಕಾಸು, ಸಂಬಂಧಗಳು, ಕೆಲಸ, ಕುಟುಂಬ, ಆರೋಗ್ಯ ಮತ್ತು ಬದುಕಿನ ಇನ್ನೂ ಅನೇಕ ವಿಷಯಗಳು ಬಹಳಷ್ಟು ಚಿಂತೆ, ಭಯ, ಆತಂಕ ಮತ್ತು ಖಿನ್ನತೆಗೂ ಕಾರಣವಾಗಬಹುದು.  ಅತಿಯಾದ ಚಿಂತೆಯನ್ನು ಸರಿಯಾಗಿ ನಿಭಾಯಿಸದಿದ್ದರೆ, ಅದು ನಿಜಕ್ಕೂ ಭಾರವಾದ ಹೊರೆಯಾಗಬಹುದು.

ಹಾಗಾದರೆ ನೀವು ಚಿಂತಿಸುವ ವಿಷಯಗಳನ್ನು ನಿಭಾಯಿಸಲು ಸರಿಯಾದ ಮಾರ್ಗ ಯಾವುದು?  ಭರವಸೆ.  ದೇವರಲ್ಲಿ, ಅವರ ನಿಷ್ಠೆಯಲ್ಲಿ, ನಿಮ್ಮ ಮೇಲಿನ ಅವರ ಸಂಪೂರ್ಣ ಪ್ರೀತಿಯಲ್ಲಿ ಮತ್ತು ಅವರ ದೈವಪರಿಪಾಲನೆಯಲ್ಲಿ ಭರವಸೆಯಿಡಿ.  ನೀವು ಎಂದಿಗೂ ಅರಿಯಬಹುದಾದುದಕ್ಕಿಂತಲೂ ಹೆಚ್ಚಾಗಿ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ.  ನೀವು ಎದುರಿಸಬಹುದಾದ ಪ್ರತಿಯೊಂದು ಸಂಗತಿಯೂ ಸಮಸ್ಯೆಯೂ ಅವರಿಗೆ ತಿಳಿದಿದೆ.   

ದೇವರ ಪ್ರೀತಿಯನ್ನೂ ಅವರ ಅಪಾರ ಜ್ಞಾನವನ್ನೂ ನಾವು ನಿಜವಾಗಿ ಅರಿತಿದ್ದರೆ, ಯಾವುದರ ಬಗ್ಗೆಯೂ ಚಿಂತಿಸುತ್ತಿರಲಿಲ್ಲ.  ಪ್ರತಿದಿನ ಅವರಲ್ಲಿ ಭರವಸೆಯಿಟ್ಟು ಎಲ್ಲವನ್ನೂ ಅವರಿಗೆ ಸಮರ್ಪಿಸಲು ನಮಗೆ ಸಾಧ್ಯವಾಗುತ್ತಿತ್ತು. ನಮ್ಮ ಬದುಕಿಗಾಗಿ ಅವರಿಗಿರುವ ಪರಿಪೂರ್ಣ ಯೋಜನೆಯ ಪ್ರಕಾರ, ಅವರು ನಮ್ಮ ಬದುಕಿನಲ್ಲಿ ಪ್ರವೇಶಿಸಿ ಭರವಸೆಯೊಂದಿಗೆ ನಮ್ಮನ್ನು ನಡೆಸಲು ನಾವು ಅವಕಾಶ ಕೊಡುತ್ತಿದ್ದೆವು.  ಆದರೆ, ಮೇಲೆ ಹೇಳಿದಂತೆ, ಇದನ್ನು ಹೇಳುವುದು ಸುಲಭ, ಮಾಡುವುದು ಕಷ್ಟ.

ಬದುಕಿನ ಚಿಂತೆಗಳನ್ನೂ ಆತಂಕಗಳನ್ನೂ ಜಯಿಸುವಲ್ಲಿ ಮತ್ತೊಂದು ಮುಖ್ಯ ಅಂಶವೆಂದರೆ ಸತ್ಯವನ್ನು ಹುಡುಕುವುದು.  ಸತ್ಯವನ್ನು ಅರಿಯುವುದು ನಮ್ಮನ್ನು ಮುಕ್ತಗೊಳಿಸುತ್ತದೆ; ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲಿಯೂ ದೇವರ ಹಸ್ತವು ಕಾರ್ಯನಿರತವಾಗಿರುವುದನ್ನು ಕಾಣಲು ಅದು ನಮಗೆ ನೆರವಾಗುತ್ತದೆ.  ಕೆಲವೊಮ್ಮೆ ದೇವರು ನಮ್ಮನ್ನು ಕೈಬಿಟ್ಟಂತೆ ಅನಿಸಿದರೂ, ಅವರು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ.  ಅವರ ಸ್ವರವನ್ನು ಕೇಳಲು, ಅವರ ಚಿತ್ತವನ್ನೂ ಜ್ಞಾನವನ್ನೂ ಸತ್ಯವನ್ನೂ ಕಂಡುಕೊಳ್ಳಲು ನಾವು ಪ್ರಯತ್ನಿಸಿದರೆ, ಅವರಲ್ಲಿ ನಮ್ಮ ಭರವಸೆಯಿಡುವುದು ಇನ್ನಷ್ಟು ಸುಲಭವಾಗುತ್ತದೆ.  ಅವರಲ್ಲಿ ನಮ್ಮ ಭರವಸೆಯಿಟ್ಟಾಗ, ನಮ್ಮ ಆತ್ಮದಲ್ಲಿ ಶಾಂತಿಯನ್ನು ಕಂಡುಕೊಳ್ಳುತ್ತೇವೆ ಮತ್ತು ನಮ್ಮ ಚಿಂತೆಯ ಭಾರವಾದ ಹೊರೆ ದೂರವಾಗುವುದನ್ನು ಅನುಭವಿಸುತ್ತೇವೆ.

ಇಂದು, ನೀವು ಯಾವುದರ ಕುರಿತು ಹೆಚ್ಚು ಚಿಂತಿಸುತ್ತೀರಿ ಎಂಬುದನ್ನು ಮನನಮಾಡಿ.  ಅದು ಬಹಳ ಭಾರವಾಗಿ ನಿಮ್ಮನ್ನು ಕುಗ್ಗಿಸುವ ಭಯವಾಗಿರಬಹುದು.  ಅಥವಾ, ಮನಸ್ಸಿನ ಮೂಲೆಯಲ್ಲಿ ನಿರಂತರವಾಗಿ ಉಳಿದಿರುವ ಒಂದು ಆಲೋಚನೆಯಷ್ಟೇ ಆಗಿರಬಹುದು.  ನಿಮ್ಮ ಪರಿಸ್ಥಿತಿ ಏನೇ ಆಗಿರಲಿ, ನಿಮಗೆ ಅತ್ಯಂತ ಹೊರೆಯಾಗಿ ತೋರುವ ಮತ್ತು ಅತಿಹೆಚ್ಚು ಚಿಂತೆಗೆ ಕಾರಣವಾಗಿರುವ ವಿಷಯವನ್ನು ಗುರುತಿಸಲು ಪ್ರಯತ್ನಿಸಿ.  ಬಳಿಕ ನಿಮ್ಮ ಪರಿಸ್ಥಿತಿಗೆ ಅನ್ವಯಿಸುವ ದೇವರ ಸತ್ಯವನ್ನು ಹುಡುಕಲು ಪ್ರಯತ್ನಿಸಿ. ಆಗ ನಿಮ್ಮ ಬದುಕಿಗಾಗಿ ಅವರಿಗಿರುವ ಪರಿಪೂರ್ಣ ಯೋಜನೆಗೆ ಭರವಸೆಯಿಂದ ನಿಮ್ಮನ್ನು ಸಮರ್ಪಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.

ಪರಿಪೂರ್ಣ ಜ್ಞಾನವುಳ್ಳ ಪ್ರಭುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ; ಆದರೂ ಸಾಕಷ್ಟು ಭರವಸೆಯಿಡಲು ತಪ್ಪುತ್ತೇನೆ.  ಬದುಕಿನ ಹೊರೆಗಳೂ ಚಿಂತೆಗಳೂ ನನ್ನನ್ನು ಕುಗ್ಗಿಸುವಾಗ, ಆ ಚಿಂತೆಗಳನ್ನು ನಿಮಗೆ ಸಮರ್ಪಿಸಲು ನನಗೆ ನೆರವಾಗಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ರಾಷ್ಟ್ರೀಯ ಪರಮಪ್ರಸಾದ ಪುನರುಜ್ಜೀವನ
ಜೂನ್ 19, 2022—ಕ್ರಿಸ್ತರ ಪವಿತ್ರ ಶರೀರ ಮತ್ತು ರಕ್ತದ ಮಹೋತ್ಸವದಂದು ಆರಂಭವಾಗುತ್ತದೆ

ಯೇಸುವಿನ ಪವಿತ್ರ ಹೃದಯಕ್ಕೆ ನೊವೇನಾ
ನೊವೇನಾ ದಿನಾಂಕಗಳು: ಜೂನ್ 15-23, 2022
ಜೂನ್ 24, 2022: ಯೇಸುವಿನ ಪವಿತ್ರ ಹೃದಯದ ಮಹೋತ್ಸವ

ರಾಷ್ಟ್ರೀಯ ಪರಮಪ್ರಸಾದ ಪುನರುಜ್ಜೀವನ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ವಿಶೇಷ ಚಿತ್ರ:  ಕ್ರಿಸ್ತ ಮತ್ತು ಶ್ರೀಮಂತ ಯುವ ಅಧಿಕಾರಿ — ಚಿತ್ರಕಾರ: ಹೈನ್ರಿಕ್ ಹೋಫ್‌ಮನ್, ವಿಕಿಮೀಡಿಯಾ ಕಾಮನ್ಸ್ ಮೂಲಕ