ಕನ್ನಡ

ಯೇಸು ಸದಾ ನಮ್ಮೊಂದಿಗಿದ್ದಾರೆ

ಆಗಸ್ಟ್ 1, 2022
ಸಾಮಾನ್ಯ ಕಾಲದ ಹದಿನೆಂಟನೇ ವಾರದ ಸೋಮವಾರ
ಇಂದಿನ ವಾಚನಗಳು

ಸಂತ ಅಲ್ಫೋನ್ಸ್ ಮರಿಯ ಡೆ ಲಿಗೋರಿ, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ—ಸ್ಮರಣೆ

ವೀಡಿಯೊ

ಸ್ನಾನಿಕ ಯೊವಾನ್ನನ ಮರಣದ ವಿಷಯವನ್ನು ಕೇಳಿದಾಗ ಯೇಸು ದೋಣಿಯನ್ನು ಹತ್ತಿ ಏಕಾಂತವಾಗಿ ನಿರ್ಜನ ಸ್ಥಳಕ್ಕೆ ತೆರಳಿದರು. ಜನರು ಇದನ್ನು ಕೇಳಿ ತಮ್ಮ ಪಟ್ಟಣಗಳಿಂದ ಕಾಲ್ನಡಿಗೆಯಲ್ಲೇ ಅವರನ್ನು ಹಿಂಬಾಲಿಸಿದರು. ಅವರು ದೋಣಿಯಿಂದ ಇಳಿದು ಅಪಾರ ಜನಸಮೂಹವನ್ನು ಕಂಡಾಗ ಅವರ ಹೃದಯವು ಕನಿಕರದಿಂದ ತುಂಬಿತು; ಅವರಲ್ಲಿದ್ದ ರೋಗಿಗಳನ್ನು ಗುಣಪಡಿಸಿದರು.  ಮತ್ತಾಯ 14:13-14

ಮಾನವೀಯ ದೃಷ್ಟಿಯಿಂದ ಹೇಳುವುದಾದರೆ, ಸ್ನಾನಿಕ ಯೋಹಾನನ ಮರಣದಿಂದ ಯೇಸುವಿನ ಹೃದಯ ದುಃಖಿತವಾಗಿತ್ತು.  ಅವರು ಯೋಹಾನನನ್ನು ಪ್ರೀತಿಸುತ್ತಿದ್ದರು; ಅವನ ಶಿರಚ್ಛೇದನದಿಂದ ತೀವ್ರವಾಗಿ ದುಃಖಿತರಾಗಿದ್ದರು.  ಆದ್ದರಿಂದ ಅವರು ದೋಣಿಯಲ್ಲಿ ಒಬ್ಬರೇ ನಿರ್ಜನ ಪ್ರದೇಶಕ್ಕೆ ತೆರಳಿದರು.  ಆದರೆ ಜನಸಮೂಹಕ್ಕೆ ಇನ್ನೂ ಹೆಚ್ಚಿನದನ್ನು ಪಡೆಯುವ ಹಂಬಲವಿತ್ತು!  ಅವರು ಯೇಸುವನ್ನು ನೋಡಲು ಮತ್ತು ಅವರ ಮಾತನ್ನು ಕೇಳಲು ಬಯಸಿದರು.  ಅವರಿಗೆ ಅನೇಕ ರೋಗಿಗಳ ಪರಿಚಯವಿತ್ತು ಮತ್ತು ಯೇಸು ಅವರನ್ನು ಗುಣಪಡಿಸಬೇಕೆಂದು ಬಯಸಿದರು.  ಹಾಗಾಗಿ, ಯೇಸು ಏಕಾಂತದಲ್ಲಿರಲು ಜನಸಮೂಹದಿಂದ ದೂರ ಸರಿದಿದ್ದರೂ, ಅವರು ಅವರನ್ನು ಹುಡುಕಿಕೊಂಡು ಹೋದರು.

ಯೇಸು ಹೇಗೆ ಪ್ರತಿಕ್ರಿಯಿಸಿದರು?  ಅವರು ಜನರನ್ನು ನೋಡಿ ನಿಟ್ಟುಸಿರುಬಿಟ್ಟು, “ಇವರು ನನ್ನನ್ನು ಏಕೆ ಒಬ್ಬಂಟಿಯಾಗಿ ಬಿಡುವುದಿಲ್ಲ?  ನಾನು ದುಃಖದಲ್ಲಿದ್ದೇನೆಂದು ಇವರಿಗೆ ತಿಳಿಯುವುದಿಲ್ಲವೇ?” ಎಂದು ತಮ್ಮೊಳಗೆ ಅಂದುಕೊಂಡರೇ?  ಇಲ್ಲ.  ಬದಲಾಗಿ, ಯೇಸು ಅವರಿಗಾಗಿ ಕರುಣೆಯಿಂದಲೂ ಅನುಕಂಪದಿಂದಲೂ ತುಂಬಿ, ಅವರಲ್ಲಿದ್ದ ಅನೇಕ ರೋಗಿಗಳನ್ನು ಗುಣಪಡಿಸಲು ಅವರ ಬಳಿಗೆ ಹೋದರು.

ಇದು ನಮ್ಮ ಪ್ರಭುವಿನ ಹೃದಯವನ್ನೂ ಅನುಕಂಪವನ್ನೂ ಅರಿತುಕೊಳ್ಳಲು ನಮಗೆ ನೆರವಾಗುತ್ತದೆ.  ಅನೇಕ ಬಾರಿ ನಾವು ದೇವರ ಬಳಿಗೆ ಹೋಗಲು ಹೆದರುತ್ತೇವೆ.  ನಮ್ಮ ಪಾಪದ ಕಾರಣದಿಂದ ಅವರ ಕಡೆಗೆ ತಿರುಗಲು ಹೆದರುತ್ತೇವೆ.  ಅವರು ನಮ್ಮ ಬಗ್ಗೆ ಏನು ಯೋಚಿಸುವರೋ, ನಮಗೆ ಏನು ಹೇಳುವರೋ ಎಂದು ಹೆದರುತ್ತೇವೆ.  ನಾವು ತಪ್ಪಿತಸ್ಥ ಭಾವನೆಯಿಂದಲೂ ನಾಚಿಕೆಯಿಂದಲೂ ಬಳಲುತ್ತೇವೆ; ಪರಿಣಾಮವಾಗಿ, ಅವರನ್ನು ಹುಡುಕಿ ಹೋಗುವುದಿಲ್ಲ.

ಆದರೆ ಈ ಘಟನೆಯಲ್ಲಿ ತಮ್ಮನ್ನು ಹುಡುಕಿಕೊಂಡು ಬಂದವರ ಮೇಲೆ ಯೇಸು ಅನುಕಂಪ ತೋರಿದಂತೆಯೇ, ನಾವು ಅವರನ್ನು ಹುಡುಕಿಕೊಂಡು ಹೋದಾಗಲೆಲ್ಲ ಅವರು ಸದಾ ನಮ್ಮ ಮೇಲೆ ಅತ್ಯಂತ ಆಳವಾದ ಅನುಕಂಪವನ್ನು ತೋರುವರು.  ನಮ್ಮ ಜೀವನವು ಪಾಪದಲ್ಲಿ ಮುಳುಗಿದೆ ಎಂದು ನಮಗೆ ಕಂಡುಬಂದರೂ, ನಾವು ಅವರ ಬಳಿಗೆ ಓಡಿಹೋದರೆ, ಅವರು ಅನುಕಂಪದಿಂದಲೂ ಕರುಣೆಯಿಂದಲೂ ನಮ್ಮನ್ನು ನೋಡುವರು.  ಅವರಿಂದ ಗುಣಪಡಿಸುವಿಕೆಯನ್ನೂ ಕರುಣೆಯನ್ನೂ ಬೇಡಿ ನಾವು ಮತ್ತೆ ಮತ್ತೆ ಅವರ ಬಳಿಗೆ ಬರುವುದರಿಂದ ಅವರಿಗೆ ಎಂದಿಗೂ ಬೇಸರವಾಗುವುದಿಲ್ಲ.  ನಾವು ಸದಾ ಅವರಲ್ಲಿ ನಿರೀಕ್ಷೆಯಿಟ್ಟು, ಪೂರ್ಣ ಭರವಸೆಯಿಂದ ಅವರ ಕಡೆಗೆ ತಿರುಗಬೇಕು.

ನೀವು ಹೇಗಿದ್ದೀರೋ ಹಾಗೆಯೇ ಯೇಸುವಿನ ಕಡೆಗೆ ತಿರುಗಲು ನಿಮಗೆಷ್ಟು ಹಾಯೆನಿಸುತ್ತದೆ ಎಂಬುದನ್ನು ಇಂದು ಚಿಂತಿಸಿ.  ಅವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ನಿಮಗೆ ಭಯವಿದೆಯೇ ಅಥವಾ ಚಿಂತೆಯಿದೆಯೇ?  ನಿಮ್ಮ ಪಾಪ ಅಥವಾ ದೌರ್ಬಲ್ಯದ ಬಗ್ಗೆ ನಿಮಗೆ ನಾಚಿಕೆಯಾಗುತ್ತಿದೆಯೇ?  ಅವರು ನಿಮ್ಮನ್ನು ತೀರ್ಪುಮಾಡಿ, ನಿಮ್ಮ ಬಗ್ಗೆ ಕಾಳಜಿ ತೋರದೆ ಹೋಗುವರೆಂದು ಚಿಂತಿಸುತ್ತೀರಾ?  ಅವರ ಅಪಾರ ಕರುಣೆಯಲ್ಲಿ ಭರವಸೆಯಿಟ್ಟು, ಭಯವಿಲ್ಲದೆ ಅವರ ಬಳಿಗೆ ಓಡಿಹೋಗಿ.

ಅತ್ಯಂತ ಕನಿಕರವುಳ್ಳ ನನ್ನ ಪ್ರಭುವೇ, ನಿಮ್ಮ ಪ್ರೀತಿ ಮತ್ತು ಕನಿಕರದಲ್ಲಿ ಭರವಸೆಯಿಡಲು ನನಗೆ ಸಹಾಯಮಾಡಿ.  ನಾನು ನಿಮ್ಮ ಬಳಿಗೆ ಬರಬೇಕೆಂದು ನೀವು ಸದಾ ಹಾತೊರೆಯುತ್ತೀರಿ ಎಂಬುದನ್ನು ಅರಿಯಲು ನನಗೆ ಸಹಾಯಮಾಡಿ.  ನಾನು ನಿಮ್ಮ ಬಳಿಗೆ ಬರುವುದರಿಂದ ನೀವು ಎಂದಿಗೂ ಬೇಸರಗೊಳ್ಳದಂತೆ, ನಾನೂ ನಿಮ್ಮ ಬಳಿಗೆ ಬರುವುದರಲ್ಲಿ ಎಂದಿಗೂ ದಣಿಯದಿರಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಸಾಧಾರಣ ಕಾಲ: 18-34ನೇ ವಾರಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು: ಸಂತ ಅಲ್ಫೋನ್ಸ್ ಮರಿಯ ಡೆ ಲಿಗೋರಿ, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಆಯ್ದ ಚಿತ್ರ: ಯೇಸು ನಿರ್ಜನ ಸ್ಥಳಕ್ಕೆ ತೆರಳಿದರು — ಜೇಮ್ಸ್ ಟಿಸ್ಸೋ ಅವರ ಕೃತಿ, Wikimedia Commons ಮೂಲಕ