ಸೆಪ್ಟೆಂಬರ್ 3, 2022
ಸಾಮಾನ್ಯ ಕಾಲದ ಇಪ್ಪತ್ತೆರಡನೆಯ ವಾರದ ಶನಿವಾರ
ಇಂದಿನ ವಾಚನಗಳು
ಮಹಾನ್ ಸಂತ ಗ್ರೆಗೊರಿ, ಪೋಪ್ ಮತ್ತು ಧರ್ಮಪಂಡಿತ—ಸ್ಮರಣೆ

ಒಂದು ಸಬ್ಬತ್ ದಿನ ಯೇಸು ಧಾನ್ಯದ ಹೊಲದ ಮೂಲಕ ಹಾದುಹೋಗುತ್ತಿದ್ದಾಗ, ಅವರ ಶಿಷ್ಯರು ತೆನೆಗಳನ್ನು ಕಿತ್ತು, ಕೈಗಳಲ್ಲಿ ಹೊಸಕಿ ತಿನ್ನುತ್ತಿದ್ದರು. ಕೆಲವು ಫರಿಸಾಯರು, “ಸಬ್ಬತ್ ದಿನ ಮಾಡಬಾರದ ಕೆಲಸವನ್ನು ನೀವು ಏಕೆ ಮಾಡುತ್ತಿದ್ದೀರಿ?” ಎಂದು ಕೇಳಿದರು. ಲೂಕ 6:1-2
ಎಂಥ ಕ್ಷುಲ್ಲಕ ಮನೋಭಾವ! ಇಲ್ಲಿ ಶಿಷ್ಯರಿಗೆ ಹಸಿವಾಗಿತ್ತು. ಬಹುಶಃ ಅವರು ಸ್ವಲ್ಪ ಸಮಯದಿಂದ ಯೇಸುವಿನೊಂದಿಗೆ ನಡೆದುಕೊಂಡು ಬರುತ್ತಿದ್ದರು. ದಾರಿಯಲ್ಲಿ ಗೋಧಿಯ ತೆನೆಗಳು ಕಂಡಾಗ, ನಡೆಯುತ್ತಲೇ ತಿನ್ನಲು ಅವುಗಳನ್ನು ಕಿತ್ತುಕೊಂಡರು. ಇಷ್ಟು ಸಹಜವಾದ ಕೆಲಸವನ್ನು ಮಾಡಿದ್ದಕ್ಕಾಗಿ ಫರಿಸಾಯರು ಅವರನ್ನು ಖಂಡಿಸಿದರು. ಈ ಧಾನ್ಯವನ್ನು ಕಿತ್ತು ತಿಂದದ್ದರಿಂದ ಅವರು ನಿಜವಾಗಿಯೂ ಧರ್ಮನಿಯಮವನ್ನು ಉಲ್ಲಂಘಿಸಿ ದೇವರಿಗೆ ನೋವುಂಟುಮಾಡಿದರೇ?
ಫರಿಸಾಯರು ಬಹಳ ಗೊಂದಲದಲ್ಲಿದ್ದಾರೆ ಮತ್ತು ಶಿಷ್ಯರು ಯಾವ ತಪ್ಪನ್ನೂ ಮಾಡಿಲ್ಲ ಎಂಬುದನ್ನು ಯೇಸುವಿನ ಉತ್ತರ ಸ್ಪಷ್ಟಪಡಿಸುತ್ತದೆ. ಆದರೆ ಈ ವಾಕ್ಯಭಾಗವು ಕೆಲವರು ಕೆಲವೊಮ್ಮೆ ಸಿಲುಕಿಕೊಳ್ಳುವ ಒಂದು ಆಧ್ಯಾತ್ಮಿಕ ಅಪಾಯದ ಕುರಿತು ಚಿಂತಿಸಲು ನಮಗೆ ಅವಕಾಶ ನೀಡುತ್ತದೆ. ಅದೇ ಅತಿಯಾದ ಪಾಪಭೀತಿಯ ಅಪಾಯ.
ಶಿಷ್ಯರ ವಿಷಯದಲ್ಲಿ ಹೀಗಿತ್ತೇ ಎಂಬುದು ನಮಗೆ ತಿಳಿದಿಲ್ಲ. ಆದರೆ ಶಿಷ್ಯರಲ್ಲಿ ಒಬ್ಬರು ಅಥವಾ ಹಲವರು ಅತಿಯಾದ ಪಾಪಭೀತಿಯೊಂದಿಗೆ ಹೋರಾಡುತ್ತಿದ್ದರೆ, ಧಾನ್ಯವನ್ನು ತಿಂದದ್ದಕ್ಕಾಗಿ ಫರಿಸಾಯರು ತಮ್ಮನ್ನು ಖಂಡಿಸುವುದನ್ನು ಕೇಳಿದಾಗ, ತಮ್ಮ ಕೃತ್ಯಗಳ ಬಗ್ಗೆ ತಕ್ಷಣವೇ ಪಶ್ಚಾತ್ತಾಪ ಮತ್ತು ಅಪರಾಧಭಾವ ಅನುಭವಿಸಿರಬಹುದು. ಸಬ್ಬತ್ ದಿನವನ್ನು ಪವಿತ್ರವಾಗಿ ಆಚರಿಸಬೇಕೆಂಬ ದೇವರ ಆಜ್ಞೆಯನ್ನು ಉಲ್ಲಂಘಿಸಿದ ಅಪರಾಧಕ್ಕೆ ತಾವು ಒಳಗಾದೆವು ಎಂದು ಭಯಪಡಲು ಆರಂಭಿಸಿರಬಹುದು. ಆದರೆ ಅವರ ಅತಿಯಾದ ಪಾಪಭೀತಿಯನ್ನು ಅದರ ನಿಜಸ್ವರೂಪದಲ್ಲೇ ನೋಡಬೇಕು. ಅಂಥ ಪಾಪಭೀತಿಗೆ ಒಳಗಾಗುವಂತೆ ಅವರನ್ನು ಪ್ರೇರೇಪಿಸಿದ ಸಂಗತಿಯನ್ನು ಅವರು ಗುರುತಿಸಬೇಕು.
ಅವರನ್ನು ಪ್ರಲೋಭನೆಗೆ ಒಳಪಡಿಸಿದ “ಪ್ರಚೋದಕ”ವೆಂದರೆ ಫರಿಸಾಯರು ಪ್ರಸ್ತುತಪಡಿಸಿದ ದೇವರ ನಿಯಮದ ಅತಿರೇಕದ ಮತ್ತು ತಪ್ಪಾದ ದೃಷ್ಟಿಕೋನ. ಹೌದು, ದೇವರ ನಿಯಮವು ಪರಿಪೂರ್ಣವಾಗಿದೆ ಮತ್ತು ಅದರ ಪ್ರತಿಯೊಂದು ಅಕ್ಷರವನ್ನೂ ಯಾವಾಗಲೂ ಪಾಲಿಸಬೇಕು. ಆದರೆ ಪಾಪದ ಕುರಿತ ಅತಿಯಾದ ಆತಂಕದಿಂದ ಬಳಲುವವರಿಗೆ ದೇವರ ನಿಯಮವು ಸುಲಭವಾಗಿ ವಿಕೃತಗೊಂಡು, ಅತಿಶಯವಾಗಿ ಕಾಣಿಸಬಹುದು. ಮಾನವ ನಿಯಮಗಳು ಮತ್ತು ದೇವರ ನಿಯಮದ ಕುರಿತು ಮನುಷ್ಯರು ನೀಡುವ ತಪ್ಪು ನಿರೂಪಣೆಗಳು ಗೊಂದಲಕ್ಕೆ ಕಾರಣವಾಗಬಹುದು. ಮೇಲಿನ ಪವಿತ್ರ ಗ್ರಂಥದ ಭಾಗದಲ್ಲಿ, ಫರಿಸಾಯರ ಅಹಂಕಾರ ಮತ್ತು ಕಠೋರತೆಯೇ ಆ ಪ್ರಚೋದಕವಾಗಿತ್ತು. ಶಿಷ್ಯರು ಸಬ್ಬತ್ ದಿನದಂದು ತೆನೆಗಳನ್ನು ಕಿತ್ತು ತಿಂದದ್ದರಿಂದ ದೇವರಿಗೆ ಯಾವುದೇ ರೀತಿಯಲ್ಲೂ ಅಸಮಾಧಾನವಾಗಿರಲಿಲ್ಲ. ಆದ್ದರಿಂದ ಫರಿಸಾಯರು ದೇವರಿಂದ ಬರದ ಹೊರೆಯನ್ನು ಶಿಷ್ಯರ ಮೇಲೆ ಹೇರಲು ಪ್ರಯತ್ನಿಸುತ್ತಿದ್ದರು.
ನಾವೂ ದೇವರ ಧರ್ಮನಿಯಮ ಮತ್ತು ಚಿತ್ತವನ್ನು ಅತಿಯಾದ ಪಾಪಭೀತಿಯಿಂದ ನೋಡುವ ಪ್ರಲೋಭನೆಗೆ ಒಳಗಾಗಬಹುದು. ಅನೇಕರು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರೂ (ತೀರಾ ಸಡಿಲ ಮನೋಭಾವ ಹೊಂದಿದ್ದರೂ), ಕೆಲವರು ದೇವರಿಗೆ ಯಾವ ನೋವೂ ಆಗದಿರುವಾಗಲೂ ತಾವು ದೇವರಿಗೆ ನೋವುಂಟುಮಾಡುತ್ತಿದ್ದೇವೋ ಎಂಬ ಆತಂಕದೊಂದಿಗೆ ಹೋರಾಡುತ್ತಾರೆ.
ಇಂದು, ಅತಿಯಾದ ಪಾಪಭೀತಿಯೊಂದಿಗೆ ನಿಮಗಿರುವ ಹೋರಾಟದ ಕುರಿತು ಚಿಂತಿಸಿ. ನಿಮ್ಮ ಸ್ಥಿತಿ ಹೀಗಿದ್ದರೆ, ಈ ಹೊರೆಗಳಿಂದ ನಿಮ್ಮನ್ನು ಮುಕ್ತಗೊಳಿಸಲು ದೇವರು ಬಯಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ಪ್ರಭುವೇ, ನಿಮ್ಮ ನಿಯಮವನ್ನೂ ಚಿತ್ತವನ್ನೂ ಸತ್ಯದ ಬೆಳಕಿನಲ್ಲಿ ಕಾಣಲು ನನಗೆ ಸಹಾಯಮಾಡಿ. ನಿಮ್ಮ ನಿಯಮದ ಕುರಿತ ಎಲ್ಲಾ ತಪ್ಪು ಕಲ್ಪನೆಗಳನ್ನೂ ತಪ್ಪು ನಿರೂಪಣೆಗಳನ್ನೂ ಬಿಟ್ಟು, ಅವುಗಳ ಬದಲಿಗೆ ನಿಮ್ಮ ಪರಿಪೂರ್ಣ ಪ್ರೀತಿ ಮತ್ತು ಕರುಣೆಯ ಸತ್ಯಗಳನ್ನು ಸ್ವೀಕರಿಸಲು ನನಗೆ ಸಹಾಯಮಾಡಿ. ಎಲ್ಲದರಲ್ಲಿಯೂ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಾನು ಆ ಕರುಣೆ ಮತ್ತು ಪ್ರೀತಿಯನ್ನು ಬಿಗಿಯಾಗಿ ಹಿಡಿದುಕೊಳ್ಳುವಂತಾಗಲಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ಇಂದಿನ ಸಂತ – ಮಹಾನ್ ಸಂತ ಗ್ರೆಗೊರಿ, ಪೋಪ್ ಮತ್ತು ಧರ್ಮಪಂಡಿತ
ಚಿತ್ರ: ಬೈಬಲ್ ದೃಶ್ಯಾವಳಿ, ಅಥವಾ ಚಿತ್ರ ಮತ್ತು ಕಥೆಯಲ್ಲಿ ಪವಿತ್ರ ಗ್ರಂಥಗಳು, Wikimedia Commons ಮೂಲಕ




