ಫೆಬ್ರವರಿ 16, 2023
ಸಾಮಾನ್ಯ ಕಾಲದ ಆರನೇ ವಾರದ ಗುರುವಾರ
ಇಂದಿನ ವಾಚನಗಳು

ಯೇಸು ಮತ್ತು ಅವರ ಶಿಷ್ಯರು ಫಿಲಿಪ್ಪನ ಸೆಸೇರಿಯದ ಹಳ್ಳಿಗಳಿಗೆ ಹೊರಟರು. ದಾರಿಯಲ್ಲಿ ಅವರು ತಮ್ಮ ಶಿಷ್ಯರನ್ನು, “ನಾನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು. ಮಾರ್ಕ 8:27
ಈ ಪ್ರಶ್ನೆಗೆ ಉತ್ತರವಾಗಿ ಶಿಷ್ಯರು ಯೇಸುವಿಗೆ, ಕೆಲವರು ಅವರನ್ನು “ಸ್ನಾನಿಕ ಯೊವಾನ್ನ, ಇನ್ನು ಕೆಲವರು ಎಲೀಯ, ಮತ್ತೆ ಕೆಲವರು ಪ್ರವಾದಿಗಳಲ್ಲಿ ಒಬ್ಬರು” ಎಂದು ಭಾವಿಸುತ್ತಾರೆಂದು ತಿಳಿಸಿದರು. ಆದರೆ ಬಳಿಕ ಯೇಸು, ತಾವು ಯಾರೆಂದು ಶಿಷ್ಯರು ಭಾವಿಸುತ್ತಾರೆ ಎಂದು ಕೇಳಿದರು. ಆಗ ಪೇತ್ರನು, “ನೀವು ಕ್ರಿಸ್ತರು” ಎಂದು ಉತ್ತರಿಸಿದನು.
ಯೇಸು ಮತ್ತು ಶಿಷ್ಯರ ನಡುವಿನ ಈ ಸಂಭಾಷನೆಯನ್ನು ನಾವು ಧ್ಯಾನಿಸುವಾಗ, ನಮ್ಮ ಪ್ರಭು ನಿಮಗೂ ಅದೇ ಪ್ರಶ್ನೆಯನ್ನು ಕೇಳುವುದನ್ನು ಆಲಿಸಲು ಪ್ರಯತ್ನಿಸಿ. “ಆದರೆ ನಾನು ಯಾರೆಂದು ನೀನು ಹೇಳುತ್ತೀಯ?” ಬೌದ್ಧಿಕ ಮಟ್ಟದಲ್ಲಿ ಇದಕ್ಕೆ ಉತ್ತರಿಸುವುದು ನಿಮಗೆ ಸುಲಭವೆನಿಸಬಹುದು. ಆದರೂ ತೀರಾ ಅವಸರವಾಗಿ ಉತ್ತರಿಸಬೇಡಿ. ಅದರ ಬಗ್ಗೆ ಯೋಚಿಸಿ. ನಿಮ್ಮ ಆತ್ಮದ ಆಳದಲ್ಲಿ, ಯೇಸುವಿನ ಬಗ್ಗೆ ನೀವು ಏನು ವಿಶ್ವಾಸಿಸುತ್ತೀರಿ?
ಪೇತ್ರನ ಉತ್ತರ ಸರಿಯಾಗಿದ್ದರೂ, ಅದರ ನಿಜವಾದ ಅರ್ಥವೇನೆಂದು ಧ್ಯಾನಿಸುವುದು ಮುಖ್ಯ. ಕ್ರಿಸ್ತರಾಗಿ ತಮ್ಮ ಧ್ಯೇಯಕಾರ್ಯವನ್ನು ಯೇಸು ವಿವರಿಸಲು ಆರಂಭಿಸಿದ ಕೂಡಲೇ ಪೇತ್ರನು ಅದನ್ನು ಸ್ವೀಕರಿಸಲಾರದೆ ಹೋದ ಸಂಗತಿಯಿಂದ ಇದು ವಿಶೇಷವಾಗಿ ಸ್ಪಷ್ಟವಾಗುತ್ತದೆ. ಕ್ರಿಸ್ತರಾಗಿ ತಾವು “ಬಹಳವಾಗಿ ಸಂಕಟಪಡಬೇಕು, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ತಿರಸ್ಕೃತರಾಗಬೇಕು, ಕೊಲ್ಲಲ್ಪಡಬೇಕು ಮತ್ತು ಮೂರು ದಿನಗಳ ಬಳಿಕ ಪುನರುತ್ಥಾನ ಹೊಂದಬೇಕು” ಎಂದು ಯೇಸು ಪೇತ್ರನಿಗೂ ಇತರ ಶಿಷ್ಯರಿಗೂ ವಿವರಿಸಿದರು. ಬೇರೆ ಮಾತಿನಲ್ಲಿ ಹೇಳುವುದಾದರೆ, ತಮ್ಮ ಧ್ಯೇಯಕಾರ್ಯದ ಸಾರವನ್ನು ಶಿಷ್ಯರು ಅರಿತುಕೊಳ್ಳಬೇಕೆಂದು ಯೇಸು ಬಯಸಿದರು. ಬಲಿಯರ್ಪಿತವಾಗುವ ದೇವರ ಕುರಿಮರಿಯಾಗಿ ನಮ್ಮ ಪಾಪಗಳಿಗಾಗಿ ಸಾಯುವುದೇ ಅವರ ಧ್ಯೇಯಕಾರ್ಯವಾಗಿತ್ತು. ಆದರೆ ಇದನ್ನು ಕೂಡಲೇ ಅರಿತುಕೊಂಡು, ಸ್ವೀಕರಿಸಿ, ಕೃತಜ್ಞತೆಯಿಂದ ಮನಸಾರೆ ಅಪ್ಪಿಕೊಳ್ಳುವುದು ಶಿಷ್ಯರಿಗೆ ತೀರಾ ಕಷ್ಟವಾಗಿತ್ತು.
ಯೇಸುವಿನ ಈ ಪ್ರಧಾನ ಧ್ಯೇಯಕಾರ್ಯವನ್ನು ನೀವು ಅರಿತುಕೊಂಡು, ಸ್ವೀಕರಿಸಿ, ಮನಸಾರೆ ಅಪ್ಪಿಕೊಳ್ಳುತ್ತೀರಾ? ನೀವು ವೈಯಕ್ತಿಕವಾಗಿ ಮಾಡಿದ ಪಾಪಗಳ ಕಾರಣ ನಿಮಗೆ ಒಬ್ಬ ರಕ್ಷಕನ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳುತ್ತೀರಾ? ನಿಮ್ಮ ಪಾಪಗಳ ಪರಿಣಾಮ ಮರಣ ಎಂಬುದನ್ನು ಅರಿತುಕೊಳ್ಳುತ್ತೀರಾ? ಅದು ನಿತ್ಯಮರಣ ಎಂಬುದನ್ನು? ಅಲ್ಲದೆ, ಯೇಸುವಿನ ಮರಣದಿಂದ ಮಾತ್ರವೇ ಎಲ್ಲ ಪಾಪವೂ ಮರಣವೂ ನಾಶವಾಗುತ್ತವೆ ಎಂಬುದನ್ನೂ ಅರಿತುಕೊಳ್ಳುತ್ತೀರಾ?
ಕೆಲವೊಮ್ಮೆ, ನಾವು ಹೇಗೆ ಬದುಕಬೇಕೆಂದು ಬೋಧಿಸುವ ಒಬ್ಬ ಸ್ಫೂರ್ತಿದಾಯಕ ವ್ಯಕ್ತಿ ಮಾತ್ರವೇ ಯೇಸು ಎಂದು ತಪ್ಪಾಗಿ ಭಾವಿಸಬಹುದು. ಅದು ನಿಜವಾಗಿದ್ದರೂ, ಯೇಸು ಅದಕ್ಕಿಂತ ಎಷ್ಟೋ ಹೆಚ್ಚಿನವರು. ಸ್ವರ್ಗಕ್ಕೆ ಅವರೇ ಏಕೈಕ ಮಾರ್ಗ. ಅವರ ಮರಣ ಮತ್ತು ಪುನರುತ್ಥಾನವಿಲ್ಲದೆ ನಾವು ಸ್ವರ್ಗವನ್ನು ಪಡೆಯಲಾರೆವು. ಅವರೇ ಏಕೈಕ ರಕ್ಷಕ. ನಮ್ಮ ಪಾಪಗಳಿಗಾಗಿ ವಧಿಸಲ್ಪಟ್ಟ ಕುರಿಮರಿ. ನಿತ್ಯ ವಿಮೋಚನೆಯ ಏಕೈಕ ಮೂಲ. ಸ್ವರ್ಗ ಮತ್ತು ಮಾನವಕುಲದ ನಡುವಿನ ಏಕೈಕ ಸೇತುವೆ. ನೀವು ಇದನ್ನು ಬೌದ್ಧಿಕವಾಗಿ ಸ್ವಲ್ಪಮಟ್ಟಿಗೆ ಅರಿತುಕೊಂಡಿದ್ದರೂ, ಈ ಸತ್ಯದಲ್ಲಿ ನಿಮಗಿರುವ ವಿಶ್ವಾಸವು ನಿಮ್ಮ ಆತ್ಮದ ಆಳಕ್ಕೆ ಇಳಿಯಬೇಕು. ಆಗ ನೀವು ಅದನ್ನು ನಂಬಿ, ಅವರು ನೀಡುವ ನಿತ್ಯರಕ್ಷಣೆಯ ವರವನ್ನು ನಿಮ್ಮ ಅಂತರಂಗದ ಅತ್ಯಂತ ಆಳದಲ್ಲಿ ಮನಸಾರೆ ಅಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಯೇಸುವಿನ ಜೀವದ ವರವನ್ನು ನಾವು ನಿಜವಾಗಿಯೂ ಸ್ವೀಕರಿಸಬೇಕಾದರೆ, ಇದನ್ನು ಆಮೂಲಾಗ್ರವಾಗಿ ಅರಿತುಕೊಂಡು, ಸ್ವೀಕರಿಸಿ, ಮನಸಾರೆ ಅಪ್ಪಿಕೊಳ್ಳಬೇಕು.
ನಮ್ಮ ಪ್ರಭುವಿನ ಈ ಪ್ರಶ್ನೆಗೆ ನೀವು ಹೇಗೆ ಉತ್ತರಿಸುತ್ತೀರಿ ಎಂಬುದನ್ನು ಇಂದು ಧ್ಯಾನಿಸಿ. “ನಾನು ಯಾರೆಂದು ನೀವೇ ಹೇಳುತ್ತೀರಿ?” ಇದಕ್ಕೆ ಸರಿಯಾಗಿ ಉತ್ತರಿಸಬೇಕಾದರೆ, ನಮ್ಮ ಪ್ರಭುವಿನ ರಕ್ಷಣಾ ಧ್ಯೇಯಕಾರ್ಯವನ್ನು ಅರಿತುಕೊಳ್ಳುವಲ್ಲಿ, ಸ್ವೀಕರಿಸುವಲ್ಲಿ ಮತ್ತು ಪೂರ್ಣಮನಸ್ಸಿನಿಂದ ಅಪ್ಪಿಕೊಳ್ಳುವಲ್ಲಿ ನೀವು ನಿರಂತರವಾಗಿ ಇನ್ನಷ್ಟು ಆಳವಾಗಿ ಬೆಳೆಯಬೇಕು. ಇದು ಜೀವನಪರ್ಯಂತ ನಡೆಯುವ ಪ್ರಕ್ರಿಯೆಯಾಗಿದ್ದರೂ, ಈ ದೈವಿಕ ರಹಸ್ಯ ಮತ್ತು ವರದೊಳಗೆ ಇನ್ನಷ್ಟು ಆಳವಾಗಿ ಪ್ರವೇಶಿಸುವುದನ್ನು ನಾವು ಎಂದಿಗೂ ನಿಲ್ಲಿಸಬಾರದು. ಹೀಗೆ ದೇವರ ಕ್ರಿಸ್ತರಾಗಿರುವ ಅವರ ಜೀವನ, ಮರಣ ಮತ್ತು ಪುನರುತ್ಥಾನದಿಂದ ನಾವು ಸಂಪೂರ್ಣವಾಗಿ ರೂಪಾಂತರಗೊಳ್ಳುವೆವು.
ರಕ್ಷಕ ಪ್ರಭುವೇ, ಈ ದಿನವೂ ನನ್ನ ಜೀವನದ ಪ್ರತಿದಿನವೂ ನನ್ನ ಮನಸ್ಸನ್ನೂ ಹೃದಯವನ್ನೂ ನಿಮಗೆ ಇನ್ನಷ್ಟು ಆಳವಾಗಿ ತೆರೆಯುವಂತೆ ಮಾಡಿರಿ. ನಿಮ್ಮಲ್ಲಿರುವ ನನ್ನ ವಿಶ್ವಾಸದಲ್ಲಿಯೂ, ನಿಮ್ಮ ಹಾಗೂ ನಿಮ್ಮ ದೈವಿಕ ರಕ್ಷಣಾ ಧ್ಯೇಯಕಾರ್ಯದ ಅರಿವಿನಲ್ಲಿಯೂ ನಾನು ನಿರಂತರವಾಗಿ ಇನ್ನಷ್ಟು ಆಳವಾಗಿ ಬೆಳೆಯುವಂತಾಗಲಿ. ನಾನು ಹೀಗೆ ಮಾಡುವಾಗ, ನೀವು ನನಗೆ ದಯಪಾಲಿಸಲು ಬಂದಿರುವ ಎಲ್ಲವನ್ನೂ ಸ್ವೀಕರಿಸಲು ನಾನು ಇನ್ನಷ್ಟು ಪೂರ್ಣವಾಗಿ ಸಿದ್ಧನಾಗುವಂತೆ ನನ್ನನ್ನು ಹೆಚ್ಚುಹೆಚ್ಚಾಗಿ ರೂಪಾಂತರಿಸಿರಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.
ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು





