ಜೂನ್ 1, 2023
ಸಾಮಾನ್ಯ ಕಾಲದ ಎಂಟನೇ ವಾರದ ಗುರುವಾರ
ಇಂದಿನ ವಾಚನಗಳು

ಯೇಸು ತಮ್ಮ ಶಿಷ್ಯರೊಂದಿಗೆ ಮತ್ತು ದೊಡ್ಡ ಜನಸಮೂಹದೊಂದಿಗೆ ಜೆರಿಕೋ ಪಟ್ಟಣದಿಂದ ಹೊರಟಾಗ, ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ದಾರಿಯ ಬದಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಬರುತ್ತಿರುವವರು ನಜರೇತಿನ ಯೇಸು ಎಂದು ಕೇಳಿದಾಗ ಅವನು, “ಯೇಸುವೇ, ದಾವೀದರ ಪುತ್ರರೇ, ನನ್ನ ಮೇಲೆ ಕರುಣೆ ತೋರಿ” ಎಂದು ಮೊರೆಯಿಡತೊಡಗಿದನು. ಮಾರ್ಕ 10:46–47
ನೀವು ಹೇಗೆ ಪ್ರಾರ್ಥಿಸುತ್ತೀರಿ? ನೀವು ಎಂದಾದರೂ ಆಳವಾದ ದೃಢನಿಶ್ಚಯದಿಂದ ಮತ್ತು ತೀವ್ರತೆಯಿಂದ ಯೇಸುವಿಗೆ “ಮೊರೆಯಿಡುತ್ತೀರಾ”? ಈ ಕುರುಡನಾದ ಬಾರ್ತಿಮಾಯನು ನಮ್ಮ ಪ್ರಭುವಿಗೆ ನಾವು ಹೇಗೆ ಪ್ರಾರ್ಥಿಸಬೇಕೆಂಬುದಕ್ಕೆ ಅದ್ಭುತ ಮಾದರಿಯಾಗಿದ್ದಾನೆ. ಮೊದಲನೆಯದಾಗಿ, ಆ ಕುರುಡನು ನೆರವಿನ ಅಗತ್ಯದಲ್ಲಿದ್ದನು. ಅವನ ಕುರುಡುತನವು ನಿಮ್ಮ ಜೀವನದಲ್ಲಿರುವ ಪ್ರತಿಯೊಂದು ದೌರ್ಬಲ್ಯ ಮತ್ತು ಅಗತ್ಯವನ್ನು ಸಂಕೇತಿಸುತ್ತದೆ. ಹಾಗಾದರೆ, ಜೀವನದಲ್ಲಿ ನೀವು ಯಾವುದರೊಂದಿಗೆ ಹೆಚ್ಚು ಹೋರಾಡುತ್ತಿದ್ದೀರಿ? ಅಭ್ಯಾಸವಾಗಿಬಿಟ್ಟಿರುವ ನಿಮ್ಮ ಅತ್ಯಂತ ದೊಡ್ಡ ಪಾಪ ಯಾವುದು? ಅಥವಾ ನಿಮಗೆ ಅತಿಹೆಚ್ಚು ದುಃಖವನ್ನುಂಟುಮಾಡುವುದು ಯಾವುದು?
ನಮ್ಮ ದೌರ್ಬಲ್ಯವನ್ನು ಗುರುತಿಸುವುದೇ ಮೊದಲ ಹೆಜ್ಜೆ. ನಮ್ಮ ಅತ್ಯಂತ ದೊಡ್ಡ ಅಗತ್ಯಗಳ ಅರಿವಾದ ಮೇಲೆ, ಬಾರ್ತಿಮಾಯನಂತೆಯೇ ನಾವೂ ನಮ್ಮ ಪ್ರಭುವಿಗೆ “ಮೊರೆಯಿಡಬೇಕು.” ಬರುತ್ತಿರುವವರು ಯೇಸು ಎಂದು ಕೇಳಿದಾಗ, ಯೇಸು ತನ್ನನ್ನು ಗುಣಪಡಿಸಲು ಬಯಸುತ್ತಾರೆ ಎಂಬುದನ್ನು ಬಾರ್ತಿಮಾಯನು ಹೇಗೋ ತನ್ನ ಅಂತರಾತ್ಮದಲ್ಲಿ ಅರಿತುಕೊಂಡನು. ಅವನು ಇದನ್ನು ಹೇಗೆ ಅರಿತುಕೊಂಡನು? ತನ್ನ ಅಂತರಂಗದಲ್ಲಿ ದೇವರ ಧ್ವನಿಗೆ ಕಿವಿಗೊಟ್ಟನು. ಹೌದು, ಯೇಸು ದಾಟಿಹೋಗುತ್ತಿದ್ದಾಗ ಅನೇಕರು ಅವರ ಕುರಿತು ಮಾತನಾಡುತ್ತಿದ್ದ ಗದ್ದಲವನ್ನು ಅವನು ಕೇಳಿದನು. ಆದರೆ ಅಷ್ಟರಿಂದಲೇ ಅವನು ಮೊರೆಯಿಡಲು ಪ್ರೇರಿತನಾಗಲು ಮತ್ತು ತನಗೆ ಬೇಕಾಗಿದ್ದ ಕರುಣೆಯ ಮೂಲ ಯೇಸುವೇ ಎಂದು ಅರಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವನನ್ನು ಪ್ರೇರೇಪಿಸಿದ್ದು ಅವನ ಅಂತರಾತ್ಮದಲ್ಲಿ ಕೇಳಿಬಂದ ದೇವರ ಸ್ಪಷ್ಟ ಧ್ವನಿ, ಪವಿತ್ರಾತ್ಮರ ಪ್ರೇರಣೆ. ತನಗೆ ಯೇಸುವಿನ ಅಗತ್ಯವಿದೆ ಮತ್ತು ಯೇಸು ತನ್ನನ್ನು ಗುಣಪಡಿಸಲು ಬಯಸುತ್ತಾರೆ ಎಂಬುದನ್ನು ಅದು ಅವನಿಗೆ ತಿಳಿಸಿತು.
ಮೊದಲಿಗೆ, ಸುತ್ತಲಿದ್ದವರು ಬಾರ್ತಿಮಾಯನನ್ನು ಗದರಿಸಿ ಸುಮ್ಮನಿರಲು ಹೇಳಿದರು. ಬಾರ್ತಿಮಾಯನು ವಿಶ್ವಾಸದಲ್ಲಿ ದುರ್ಬಲನಾಗಿದ್ದಿದ್ದರೆ, ಜನರ ಮಾತಿಗೆ ಕಿವಿಗೊಟ್ಟು ಹತಾಶೆಯಿಂದ ಸುಮ್ಮನಾಗುತ್ತಿದ್ದನೇನೋ. ಆದರೆ ಅವನು ಇತರರ ಗದರಿಕೆಯನ್ನು ಲೆಕ್ಕಿಸದಿದ್ದಷ್ಟೇ ಅಲ್ಲ, “ಇನ್ನಷ್ಟು ಜೋರಾಗಿ ಮೊರೆಯಿಡುತ್ತಲೇ ಇದ್ದನು” ಎಂಬುದು ಬಹಳ ಸ್ಪಷ್ಟವಾಗಿದೆ.
ನಾವು ನಮ್ಮ ಪ್ರಭುವಿನ ಕಡೆಗೆ ಹೇಗೆ ತಿರುಗಬೇಕೆಂಬುದಕ್ಕೆ ಬಾರ್ತಿಮಾಯನು ಇಲ್ಲಿ ಎರಡು ರೀತಿಯಲ್ಲಿ ಸಾಕ್ಷಿಯಾಗಿದ್ದಾನೆ. ಮೊದಲನೆಯದಾಗಿ, ನಮ್ಮ ಅಂತರಾತ್ಮದಲ್ಲಿ ಅವರ ಸೌಮ್ಯವಾದ, ಆದರೆ ಸ್ಪಷ್ಟವಾದ ಸಾನ್ನಿಧ್ಯವನ್ನು ನಾವು ಅರಿಯಬೇಕು. ಅವರ ಧ್ವನಿಯನ್ನೂ ಅವರ ಅನುಗ್ರಹದ ಪ್ರೇರಣೆಗಳನ್ನೂ ನಾವು ಗುರುತಿಸಬೇಕು. ಅವರು ನಮ್ಮನ್ನು ಗುಣಪಡಿಸಲು ಬಯಸುತ್ತಾರೆ; ನಮ್ಮ ಜೀವನದಲ್ಲಿರುವ ಅವರ ಸಾನ್ನಿಧ್ಯವನ್ನು ನಾವು ಅಂತರಂಗದಲ್ಲಿ ಅರಿಯಬೇಕು. ಎರಡನೆಯದಾಗಿ, ನಮ್ಮೊಳಗಿನ ಆ ಧ್ವನಿಯ ಮೇಲೆ ನಾವು ತೀವ್ರವಾಗಿ ಗಮನವಿಡಬೇಕು. ಬಾರ್ತಿಮಾಯನನ್ನು ಗದರಿಸಿದ ಜನರು, ನಮ್ಮೊಂದಿಗೆ ಮಾತನಾಡುವ ದೇವರಿಗೆ ನಾವು ವಿಶ್ವಾಸದಿಂದಲೂ ಉತ್ಸಾಹದಿಂದಲೂ ಮೊರೆಯಿಡದಂತೆ ತಡೆಯಲು ಯತ್ನಿಸುವ ಅನೇಕ “ಧ್ವನಿಗಳು” ಮತ್ತು ನಮ್ಮ ಜೀವನದ ಪ್ರಲೋಭನೆಗಳಿಗೆ ಸಂಕೇತವಾಗಿದ್ದಾರೆ. ನಮ್ಮ ಅಗತ್ಯವನ್ನು ಯೇಸುವಿನ ಮುಂದೆ ಇಟ್ಟು ಮೊರೆಯಿಡಬೇಕೆಂಬ ನಮ್ಮ ಪೂರ್ಣಹೃದಯದ ದೃಢಸಂಕಲ್ಪದಿಂದ ಯಾವುದೂ ನಮ್ಮನ್ನು ಹಿಮ್ಮೆಟ್ಟಿಸಬಾರದು.
ಬಾರ್ತಿಮಾಯನು ನಿಮ್ಮದೇ ಪ್ರತಿರೂಪವೆಂದು ಇಂದು ಚಿಂತಿಸಿ. ನಮ್ಮ ಪ್ರಭುವಿನ ನೆರವು ನಿಮಗೆ ಅತ್ಯಗತ್ಯವಾಗಿದೆ ಎಂಬುದನ್ನು ಅರಿತುಕೊಳ್ಳಿ ಮತ್ತು ಅವರ ಸ್ಪಷ್ಟ ಧ್ವನಿಗೆ ಕಿವಿಗೊಡಿ. ಅವರ ಧ್ವನಿ ನಿಮಗೆ ಕೇಳಿಸುತ್ತಿದೆಯೇ? ಅವರು ನಿಮ್ಮ ಬಳಿಯಿಂದ ನಡೆದುಹೋಗುತ್ತಿರುವುದನ್ನು ನೀವು ಅರಿಯುತ್ತೀರಾ? ಹಾಗೆ ಅರಿತಾಗ, ಉತ್ಸಾಹದಿಂದ, ತೀವ್ರತೆಯಿಂದ ಮತ್ತು ದೃಢನಿಶ್ಚಯದಿಂದ ಅವರಿಗೆ ಮೊರೆಯಿಡಿ. ನಿಮ್ಮ ಪ್ರಾರ್ಥನೆ ಮತ್ತು ವಿಶ್ವಾಸವನ್ನು ಮೌನಗೊಳಿಸಲು ಪ್ರಯತ್ನಿಸುವ ಪ್ರಲೋಭನೆಗಳಿವೆ ಎಂದು ನಿಮಗೆ ಕಂಡುಬಂದರೆ, ಇನ್ನಷ್ಟು ತೀವ್ರವಾಗಿ ನಮ್ಮ ಪ್ರಭುವಿಗೆ “ಮತ್ತಷ್ಟು ಜೋರಾಗಿ” ಮೊರೆಯಿಡಿ. ಅವರು ನಿಮ್ಮ ಮೊರೆಯನ್ನು ಕೇಳುವರು, ನಿಮ್ಮನ್ನು ತಮ್ಮ ಬಳಿಗೆ ಕರೆಯುವರು ಮತ್ತು ನಿಮಗೆ ದಯಪಾಲಿಸಲು ಬಯಸುವ ಅನುಗ್ರಹವನ್ನು ನೀಡುವರು.
ನನ್ನ ಕರುಣಾಮಯ ಯೇಸುವೇ, ನೀನು ಸದಾ ನನ್ನ ಬಳಿ ಹಾದುಹೋಗುತ್ತಾ, ನಿನ್ನ ದಿವ್ಯ ಸಾನ್ನಿಧ್ಯದಿಂದ ನನ್ನನ್ನು ನಿನ್ನತ್ತ ಸೆಳೆಯುತ್ತಿರುವೆ. ನನ್ನ ಅಗತ್ಯವನ್ನು ಅರಿತುಕೊಳ್ಳಲು ಮತ್ತು ಪೂರ್ಣ ಹೃದಯದಿಂದ ನಿನಗೆ ಮೊರೆಯಿಡಲು ನನಗೆ ಬೇಕಾದ ಅನುಗ್ರಹವನ್ನು ದಯಪಾಲಿಸು. ಪ್ರಿಯ ಪ್ರಭುವೇ, ಈ ಉತ್ಕಟ ಪ್ರಾರ್ಥನೆಯಿಂದ ನಾನು ಎಂದಿಗೂ ಹಿಂದೆ ಸರಿಯದಿರಲಿ; ಪ್ರಲೋಭನೆ ಎದುರಾದಾಗ ನಾನು ಇನ್ನಷ್ಟು ಮೊರೆಯಿಡುವಂತಾಗಲಿ. ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.
ಇಂದಿನ ಸಂತರು – ಸಂತ ಜಸ್ಟಿನ್ ಹುತಾತ್ಮ
ಮೇಲಿನ ಮುಖ್ಯ ಚಿತ್ರ: ಕುರುಡ ಬಾರ್ತಿಮಾಯನಿಗೆ ಸ್ವಸ್ಥತೆ — ಚಿತ್ರಕಾರ: Fernando Gallego, Wikimedia Commons ಮೂಲಕ




