ಕನ್ನಡ

ನಿರೀಕ್ಷೆಯ ಪವಾಡಗಳು

ಆಗಸ್ಟ್ 14, 2023
ಸಾಮಾನ್ಯ ಕಾಲದ ಹತ್ತೊಂಬತ್ತನೇ ವಾರದ ಸೋಮವಾರ
ಇಂದಿನ ವಾಚನಗಳು

ಸಂತ ಮ್ಯಾಕ್ಸಿಮಿಲಿಯನ್ ಮರಿಯ ಕೋಲ್ಬೆ, ಯಾಜಕ ಮತ್ತು ರಕ್ತಸಾಕ್ಷಿ—ಸ್ಮರಣೆ

ವೀಡಿಯೊ 

ಭೂಲೋಕದ ರಾಜರು ಯಾರಿಂದ ಸುಂಕವನ್ನಾಗಲಿ ಜನಗಣತಿ ತೆರಿಗೆಯನ್ನಾಗಲಿ ವಸೂಲು ಮಾಡುತ್ತಾರೆ? ತಮ್ಮ ಪ್ರಜೆಗಳಿಂದಲೋ ಅಥವಾ ಪರದೇಶಿಗಳಿಂದಲೋ?” ಅವನು, “ಪರದೇಶಿಗಳಿಂದ” ಎಂದಾಗ, ಯೇಸು ಅವನಿಗೆ, “ಹಾಗಾದರೆ ಪ್ರಜೆಗಳಿಗೆ ವಿನಾಯಿತಿ ಇದೆ. ಆದರೂ ನಾವು ಅವರಿಗೆ ಅಸಮಾಧಾನ ಉಂಟುಮಾಡದಂತೆ, ನೀನು ಸಮುದ್ರಕ್ಕೆ ಹೋಗಿ ಗಾಳ ಹಾಕು; ಮೊದಲು ಸಿಕ್ಕುವ ಮೀನನ್ನು ತೆಗೆದುಕೋ. ಅದರ ಬಾಯನ್ನು ತೆರೆದರೆ, ದೇವಾಲಯದ ತೆರಿಗೆಯ ಎರಡು ಪಟ್ಟು ಮೌಲ್ಯದ ನಾಣ್ಯವೊಂದು ನಿನಗೆ ಸಿಗುವುದು. ಅದನ್ನು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು” ಎಂದರು. ಮತ್ತಾಯ 17:25–27

ಈ ಚಿಕ್ಕ ಪವಾಡಕ್ಕೆ ಸ್ವಲ್ಪ ಮೊದಲು, ಯೇಸು ತಾವು ಮುಂದೆ ಅನುಭವಿಸಲಿದ್ದ ಯಾತನೆಯ ಬಗ್ಗೆ ತಮ್ಮ ಶಿಷ್ಯರಿಗೆ ಎರಡನೆಯ ಬಾರಿ ತಿಳಿಸಿದ್ದರು. ಅದನ್ನು ಕೇಳುವುದು ಈ ಬಾರಿಯೂ ಅವರಿಗೆ ಕಷ್ಟಕರವಾಗಿತ್ತು. ಯೇಸು ತಾವು ಮುಂದೆ ಅನುಭವಿಸಲಿದ್ದ ಯಾತನೆ ಮತ್ತು ಮರಣದ ಕುರಿತು ಮೊದಲ ಬಾರಿ ಮುಂತಿಳಿಸಿದ ಬಳಿಕ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಅವರ ಮುಂದೆ ರೂಪಾಂತರಗೊಂಡದ್ದನ್ನು ನೆನಪಿಸಿಕೊಳ್ಳಿ. ಶಿಷ್ಯರ ಭಯವನ್ನು ದೂರಮಾಡಿ, ಮುಂದೆ ಸಂಭವಿಸಲಿದ್ದ ಸಂಗತಿಗಳ ಬಗ್ಗೆ ಅವರಿಗೆ ನಿರೀಕ್ಷೆಯನ್ನು ನೀಡುವುದೂ ರೂಪಾಂತರದ ಉದ್ದೇಶಗಳಲ್ಲಿ ಒಂದಾಗಿತ್ತು. ಈಗ, ಯೇಸು ತಮ್ಮ ಯಾತನೆಯ ಕುರಿತು ಎರಡನೆಯ ಬಾರಿ ಮುಂತಿಳಿಸಿದ ಬಳಿಕ, ಪೇತ್ರನನ್ನು ಹುರಿದುಂಬಿಸಿ ಅವನಿಗೆ ನಿರೀಕ್ಷೆಯನ್ನು ನೀಡಲು, ವೈಯಕ್ತಿಕವಾಗಿ ಅವನಿಗಾಗಿ ಮತ್ತೊಂದು ಪವಾಡವನ್ನು ಮಾಡಲಾಯಿತು.

ನೀವು ಪೇತ್ರನಾಗಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ. ಯೇಸುವಿನ ಸೂಚನೆಯಂತೆ ಸಮುದ್ರಕ್ಕೆ ಹೋಗಿ, ಗಾಳ ಹಾಕಿ, ಮೀನನ್ನು ಹೊರತೆಗೆದು, ಅದರ ಬಾಯನ್ನು ತೆರೆಯುವುದನ್ನು ಊಹಿಸಿಕೊಳ್ಳಿ. ಯೇಸುವಿನ ಮಾತುಗಳು ನಿಜವಾಗುವವೋ ಎಂದು ಯೋಚಿಸುತ್ತಾ ಆ ಮೀನನ್ನು ಎಳೆಯುವಾಗ, ಪೇತ್ರನು ನಿರೀಕ್ಷೆ ಮತ್ತು ಉತ್ಸಾಹದಿಂದ ತುಂಬಿಹೋಗಿದ್ದಿರಬೇಕು. ಯೇಸು ಹೇಳಿದಂತೆಯೇ ನಾಣ್ಯವನ್ನು ಕಂಡ ತಕ್ಷಣ, ಪೇತ್ರನು ವಿಸ್ಮಯಗೊಂಡಿದ್ದಿರಬೇಕು. ತನ್ನ ಪ್ರಭುವಿನಿಂದ ಮತ್ತೊಂದು ಅದ್ಭುತವಾದ ಸೂಚಕಕಾರ್ಯವನ್ನು ಕಂಡಾಗ, ಯೇಸುವಿನ ಯಾತನೆ ಮತ್ತು ಮರಣದ ಈ ಎರಡನೆಯ ಮುನ್ಸೂಚನೆಯಿಂದ ಪೇತ್ರನು ಅನುಭವಿಸುತ್ತಿದ್ದ ಭಯ ಮತ್ತು ಆತಂಕ ನಿಧಾನವಾಗಿ ಕಡಿಮೆಯಾಗತೊಡಗಿರಬೇಕು.

ದೇವರು ಪ್ರತಿದಿನವೂ ನಮ್ಮ ಜೀವನದಲ್ಲಿ ಪವಾಡಗಳನ್ನು ಮಾಡುತ್ತಾರೆ. ಆದರೆ ಅವುಗಳನ್ನು ಗುರುತಿಸುವಲ್ಲಿ ನಾವು ಅನೇಕ ಬಾರಿ ವಿಫಲರಾಗುವುದೇ ಸಮಸ್ಯೆ. ನಮ್ಮನ್ನು ಬಲಪಡಿಸಲು ಅವರ ಮಹಿಮಾಮಯ ಶಕ್ತಿ ನಮ್ಮೊಳಗೆ ಕಾರ್ಯನಿರ್ವಹಿಸುವಾಗಲೆಲ್ಲ ಅಥವಾ ಧೈರ್ಯ, ನಿರೀಕ್ಷೆ, ಪ್ರೀತಿ ಮತ್ತು ಇತರ ಎಲ್ಲ ಸದ್ಗುಣಗಳಿಂದ ನಮ್ಮನ್ನು ತುಂಬಿಸುವಾಗಲೆಲ್ಲ, ಅದು ನಮ್ಮನ್ನು ಪರಿವರ್ತಿಸುವ ಅನುಗ್ರಹದ ಪವಾಡವಾಗಿದೆ. ಜೀವನದಲ್ಲಿ ನಮಗೆ ಏನು ಬೇಕೆಂಬುದು ದೇವರಿಗೆ ಸದಾ ತಿಳಿದಿದೆ. ನಮ್ಮ ಹೋರಾಟಗಳು ಮತ್ತು ಸಂದೇಹಗಳು ಅವರಿಗೆ ತಿಳಿದಿವೆ. ಕೆಲವೊಮ್ಮೆ, ಸಂಕಲ್ಪಪೂರ್ವಕ ಪ್ರಾರ್ಥನೆ ಮತ್ತು ವಿಶ್ವಾಸದ ಕೃತ್ಯಗಳ ಮೂಲಕ ನಮ್ಮನ್ನು ಇನ್ನಷ್ಟು ಆಳಕ್ಕೆ ಕರೆದೊಯ್ಯಲು ಅವರು ಮೌನವಾಗಿರುತ್ತಾರೆ. ಇನ್ನು ಕೆಲವೊಮ್ಮೆ, ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ಅನುಗ್ರಹದ ಫಲವಾಗಿ, ಜೀವನದಲ್ಲಿ ಹೊಸ ಸ್ಪಷ್ಟತೆ ನಮಗೆ ದೊರೆತಿರುವುದನ್ನು ನಾವು ಇದ್ದಕ್ಕಿದ್ದಂತೆ ಕಂಡುಕೊಳ್ಳುತ್ತೇವೆ.

ಪೇತ್ರನು ತನ್ನ ಭಯಗಳು ಮತ್ತು ಹೋರಾಟಗಳನ್ನು ದಾಟಿ, ತನ್ನ ಸಂಪೂರ್ಣ ಭರವಸೆಯನ್ನು ಯೇಸುವಿನಲ್ಲಿ ಇಡಲು, ವೈಯಕ್ತಿಕವಾಗಿ ಅವನಿಗಾಗಿ ನಡೆದ ಈ ಪವಾಡದ ಹೆಚ್ಚುವರಿ ಅನುಗ್ರಹ ಅವನಿಗೆ ಅಗತ್ಯವಿತ್ತು ಎಂಬುದು ಯೇಸುವಿಗೆ ತಿಳಿದಿತ್ತು. ಯೇಸು ಭರವಸೆಗೆ ಅರ್ಹರಾಗಿದ್ದರು. ಪೇತ್ರನು ಈ ತೀರ್ಮಾನಕ್ಕೆ ಬಂದಿರಬೇಕು. ಅವರು ಭರವಸೆಗೆ ಅರ್ಹರಾಗಿದ್ದರು. ಆದ್ದರಿಂದ, ಅವರು ಹೇಳಿದ ಪ್ರತಿಯೊಂದನ್ನೂ ನಂಬಬೇಕು. ನಾವೆಲ್ಲರೂ ತಲುಪಬೇಕಾದ ಎಂತಹ ಅದ್ಭುತ ತೀರ್ಮಾನವಿದು!

ನಿಮ್ಮ ಜೀವನದಲ್ಲಿ ತಮ್ಮ ದೈವಿಕ ಸಾನ್ನಿಧ್ಯ ಮತ್ತು ಕಾರ್ಯದ ಕುರಿತು ದೇವರು ನಿಮಗೆ ಭರವಸೆ ನೀಡಿರುವ ರೀತಿಗಳನ್ನು ಇಂದು ಧ್ಯಾನಿಸಿ. ನಿಮಗೆ ಭರವಸೆ ನೀಡಲು ದೇವರು ನಿಮ್ಮ ಜೀವನದಲ್ಲಿ ಮಾಡಿದ ಪವಾಡಗಳು ಭೌತಿಕವಾಗಿ ವ್ಯಕ್ತವಾಗದಿರಬಹುದು; ಆದರೂ, ದೇವರ ಕಾರ್ಯಗಳನ್ನು ನಾವು ಸ್ಪಷ್ಟವಾಗಿ ಗ್ರಹಿಸಿದರೆ, ಅವು ಅಷ್ಟೇ ಮನವರಿಕೆ ಮಾಡಿಕೊಡಬಲ್ಲವು. ನಿಮ್ಮ ಜೀವನದಲ್ಲಿ ದೇವರು ನಿಮಗೆ ಯಾವ ವಿಷಯದ ಕುರಿತು ಭರವಸೆ ನೀಡಲು ಬಯಸುತ್ತಾರೆ? ಯಾವ ಹೋರಾಟ ಅಥವಾ ಸಂದೇಹದಿಂದ ನೀವು ತೊಳಲಾಡುತ್ತಿದ್ದೀರಿ? ನೀವು ತೊಳಲಾಡುತ್ತಿದ್ದರೆ, ನಿಮ್ಮ ಜೀವನದಲ್ಲಿ ದೇವರು ಸನ್ನಿಹಿತರಾಗಿ ಕಾರ್ಯನಿರ್ವಹಿಸಿರುವ ರೀತಿಗಳ ಕಡೆಗೆ ನಿಮ್ಮ ಮನಸ್ಸನ್ನು ತಿರುಗಿಸಿ. ಅವರ ಹಸ್ತಕ್ಷೇಪವನ್ನೂ, ಅವರು ನಿಮ್ಮನ್ನು ಕಾಪಾಡಿ ಮುನ್ನಡೆಸಿದ ರೀತಿಗಳನ್ನೂ ಮನನ ಮಾಡಿ. ಕೃತಜ್ಞರಾಗಿರಿ; ದೇವರು ಮಾಡಿರುವ ಕಾರ್ಯಗಳ ನೆನಪು ಇಂದು ನಿಮ್ಮ ಬಲವಾಗಿಯೂ, ನಿಮಗೆ ಅತ್ಯಂತ ಅಗತ್ಯವಿರುವಾಗ ನಿರೀಕ್ಷೆಯ ಮೂಲವಾಗಿಯೂ ಇರಲು ಅವಕಾಶ ಮಾಡಿಕೊಡಿ.

ಪವಾಡಗಳನ್ನು ಮಾಡುವ ನನ್ನ ಪ್ರಭುವೇ, ನನ್ನ ಜೀವನದಲ್ಲಿ ನಿನ್ನ ಕಾರ್ಯವು ನಿಜವಾಗಿಯೂ ಮಹಿಮಾಮಯವೂ ವಿಸ್ಮಯಕರವೂ ಆಗಿದೆ. ನನಗೆ ಅಗತ್ಯವಿದ್ದಾಗಲೆಲ್ಲ ನೀನು ನನ್ನ ಕೊರತೆಗಳನ್ನು ನೀಗಿಸಲು ಎಂದಿಗೂ ತಪ್ಪುವುದಿಲ್ಲ. ನಾನು ತೊಳಲಾಡುವಾಗಲೆಲ್ಲ ನಿನ್ನಲ್ಲಿ ಹೊಸ ನಿರೀಕ್ಷೆಯಿಂದ ತುಂಬಿಕೊಳ್ಳುವಂತೆ ನಿನ್ನ ಕಡೆಗೆ ತಿರುಗಲು ನನಗೆ ಸಹಾಯ ಮಾಡು. ಪ್ರಿಯ ಪ್ರಭುವೇ, ನೀನು ಸದಾ ನಿಷ್ಠಾವಂತನು. ನನ್ನ ಸಂಪೂರ್ಣ ನಿರೀಕ್ಷೆಯನ್ನು ನಾನು ನಿನ್ನಲ್ಲಿಯೇ ಇಡುತ್ತೇನೆ. ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಸಂತ ಮ್ಯಾಕ್ಸಿಮಿಲಿಯನ್ ಮರಿಯ ಕೋಲ್ಬೆ, ಯಾಜಕ ಮತ್ತು ರಕ್ತಸಾಕ್ಷಿ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ಮುಖ್ಯ ಚಿತ್ರ: ಮೀನಿನಲ್ಲಿ ದೊರೆತ ಬೆಳ್ಳಿಯ ನಾಣ್ಯದಿಂದ ತೆರಿಗೆ ಪಾವತಿಸುತ್ತಿರುವ ಸಂತ ಪೇತ್ರರು — ಜಾರ್ಜ್ ಹೇಟರ್ ಅವರ ಕೃತಿ, Wikimedia Commons ಮೂಲಕ