ಸೆಪ್ಟೆಂಬರ್ 25, 2023
ಸಾಮಾನ್ಯ ಕಾಲದ ಇಪ್ಪತ್ತೈದನೆಯ ವಾರದ ಸೋಮವಾರ
ಇಂದಿನ ವಾಚನಗಳು

“ಆದ್ದರಿಂದ ನೀವು ಹೇಗೆ ಕೇಳುತ್ತೀರಿ ಎಂಬುದರ ಬಗ್ಗೆ ಎಚ್ಚರವಹಿಸಿ. ಇರುವವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು; ಇಲ್ಲದವನಿಂದ ಅವನಿಗೆ ಇದೆ ಎಂದು ತೋರುವುದನ್ನೂ ಕಸಿದುಕೊಳ್ಳಲಾಗುವುದು.” ಲೂಕ 8:18
ನಿಮ್ಮಲ್ಲಿ ಬಹಳ ಇದೆಯೇ? ಅಥವಾ ಸ್ವಲ್ಪವೇ? ಯೇಸುವಿನ ಮಾತುಗಳ ಪ್ರಕಾರ, ನಿಮ್ಮಲ್ಲಿ ಬಹಳ ಇದ್ದರೆ, ನಿಮಗೆ ಇನ್ನೂ ಹೆಚ್ಚು ದೊರೆಯುವುದು; ಆದರೆ ನಿಮ್ಮಲ್ಲಿ ಸ್ವಲ್ಪವೇ ಇದ್ದರೆ, ನಿಮ್ಮಲ್ಲಿರುವುದನ್ನೂ ಕಳೆದುಕೊಳ್ಳುವಿರಿ. ಇದು ನ್ಯಾಯವೆಂದು ತೋರುತ್ತದೆಯೇ?
ನಮ್ಮ ಪ್ರಭು ಲೌಕಿಕ ಅರ್ಥದಲ್ಲಿ ಮಾತನಾಡುತ್ತಿಲ್ಲ ಎಂಬುದು ನಿಶ್ಚಯ. ನಿಮ್ಮಲ್ಲಿ ಬಹಳ ಹಣವಿದ್ದರೆ ಇನ್ನೂ ಹೆಚ್ಚು ಗಳಿಸುವಿರಿ ಎಂದಾಗಲಿ, ನೀವು ಬಡವರಾಗಿದ್ದರೆ ಇನ್ನೂ ಬಡವರಾಗುವಿರಿ ಎಂದಾಗಲಿ ಅವರು ಹೇಳುತ್ತಿಲ್ಲ. ಬದಲಾಗಿ, ಯೇಸು ತಮ್ಮ ಪವಿತ್ರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದರಿಂದ ಬರುವ ಅನುಗ್ರಹದ ಬಗ್ಗೆ ಮಾತನಾಡುತ್ತಿದ್ದಾರೆ. ಮೇಲಿನ ಭಾಗವು, “ಆದ್ದರಿಂದ ನೀವು ಹೇಗೆ ಕೇಳುತ್ತೀರಿ ಎಂಬುದರ ಬಗ್ಗೆ ಎಚ್ಚರವಹಿಸಿ” ಎಂದು ಆರಂಭವಾಗುವುದನ್ನು ಗಮನಿಸಿ.
ದೇವರ ವಾಕ್ಯವನ್ನು “ಕೇಳುವುದು” ಎಂದರೆ ಯೇಸು ಬೋಧಿಸುವುದನ್ನು ನಿಜವಾಗಿಯೂ ಸ್ವೀಕರಿಸುವುದು. ಕೇಳುವುದೆಂದರೆ ಕಿವಿಗಳಿಂದ ಉಚ್ಚರಿಸಲಾದ ಮಾತುಗಳನ್ನು ಕೇಳಿಸಿಕೊಳ್ಳುವುದಷ್ಟೇ ಅಲ್ಲ. ಆದಿಕಾಲದ ಸಭಾಪಿತೃಗಳಲ್ಲಿ ಒಬ್ಬರಾದ ಸಂತ ಬೀಡ್ ವಿವರಿಸುವಂತೆ, ನಮ್ಮ ಮನಸ್ಸಿನಿಂದ ದೇವರ ವಾಕ್ಯವನ್ನು ನಿಜವಾಗಿಯೂ ಕೇಳುವುದು ಆ ವಾಕ್ಯವನ್ನು ಪ್ರೀತಿಸಲು ನಮ್ಮನ್ನು ನಡೆಸುತ್ತದೆ; ವಾಕ್ಯವನ್ನು ಪ್ರೀತಿಸುವುದು ಅದನ್ನು ಅರ್ಥಮಾಡಿಕೊಳ್ಳಲು ನಡೆಸುತ್ತದೆ. ಯೇಸು ಬೋಧಿಸುವುದೆಲ್ಲವನ್ನೂ ಗ್ರಹಿಸಲು ನಮ್ಮ ಸ್ವಾಭಾವಿಕ ಪ್ರತಿಭೆಗಳೇ ಮುಖ್ಯ ಸಾಧನಗಳಾಗಿವೆಯೋ ಎಂಬಂತೆ, ಕೇವಲ ಬೌದ್ಧಿಕ ಪ್ರಯತ್ನದಿಂದ ಇದು ಸಾಧ್ಯವಾಗುವುದಿಲ್ಲ. ಬದಲಾಗಿ, ನಮಗೆ ಎಲ್ಲವನ್ನೂ ಕಲಿಸುವ ಪವಿತ್ರಾತ್ಮರ ಅಲೌಕಿಕ ಕೊಡುಗೆಯಿಂದ ದೊರೆಯುವ ಆಧ್ಯಾತ್ಮಿಕ ಒಳನೋಟದ ಮೂಲಕ ಇದು ಸಾಧ್ಯವಾಗುತ್ತದೆ.
ದೇವರ ರಹಸ್ಯಗಳ ಕುರಿತು “ಹೆಚ್ಚಿನ” ಅರಿವನ್ನು ನೀವು ಬಯಸಿದರೆ, ಪವಿತ್ರ ಗ್ರಂಥವನ್ನು ಮನಸ್ಸಿಟ್ಟು ಅಧ್ಯಯನ ಮಾಡಲು ನಿಮ್ಮನ್ನು ಸಮರ್ಪಿಸಿಕೊಳ್ಳಿ. ಪವಿತ್ರ ಗ್ರಂಥವನ್ನು ಓದಿ, ಮನನ ಮಾಡಿ ಮತ್ತು ಅದರ ಆಧಾರದಲ್ಲಿ ಪ್ರಾರ್ಥಿಸಿ. ದೇವರ ವಾಕ್ಯವು ಜೀವಂತ ವಾಕ್ಯ ಎಂಬುದನ್ನು ಮರೆಯುವುದು ಸುಲಭ. ಇದರ ಅರ್ಥವೇನೆಂದರೆ, ನಾವು ಪ್ರಾರ್ಥನಾಪೂರ್ವಕವಾಗಿ ಪವಿತ್ರ ಗ್ರಂಥದಲ್ಲಿ ತಲ್ಲೀನರಾಗುವಾಗ, ಪ್ರಾರ್ಥನೆಯಲ್ಲಿ ದೇವರನ್ನೇ ಸಂಧಿಸುತ್ತೇವೆ. ದೇವರು ತಮ್ಮ ಪವಿತ್ರ ವಾಕ್ಯದಲ್ಲಿ ಜೀವಂತರಾಗಿದ್ದಾರೆ. ನಾವು ಅವರನ್ನು ವೈಯಕ್ತಿಕವಾಗಿ ಸಂಧಿಸುತ್ತೇವೆ; ಇದಾಗುವುದು ಒಂದು ವಿಶೇಷ ಅನುಗ್ರಹದಿಂದ ಮಾತ್ರ, ಮತ್ತು ಅದನ್ನು ಸ್ವೀಕರಿಸಲು ನಾವು ಮನಸ್ಸು ತೆರೆದಿರಬೇಕು.
ಯೇಸುವಿನ ಈ ಬೋಧನೆಯ ಸುಂದರ ಅಂಶವೇನೆಂದರೆ, ಈ ಅನುಗ್ರಹದ ಮೂಲಕ ನಾವು ಅವರ ವಾಕ್ಯವನ್ನು ಹೆಚ್ಚೆಚ್ಚಾಗಿ ಅರ್ಥಮಾಡಿಕೊಂಡಂತೆ, ಅದರಲ್ಲಿ ಇನ್ನಷ್ಟು ತಲ್ಲೀನರಾಗುತ್ತೇವೆ, ಮತ್ತು ಅದು ನಮ್ಮೊಳಗೆ ಬೆಳೆಯುತ್ತಲೇ ಇರುತ್ತದೆ. ಆದರೆ, ದೇವರ ವಾಕ್ಯದೊಂದಿಗೆ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳಲು ನಾವು ಸ್ವಲ್ಪವೇ ಸಮಯವನ್ನು ಮೀಸಲಿಟ್ಟರೆ, ದೇವರ ಪ್ರಜ್ಞೆಯ ಆಧ್ಯಾತ್ಮಿಕ ಆಳಗಳನ್ನು ನಾವು, ಒಂದು ರೀತಿಯಲ್ಲಿ ಹೇಳುವುದಾದರೆ, “ಮರೆಯಲು” ಆರಂಭಿಸುತ್ತೇವೆ. ನಮಗಿರುವ ಅಲ್ಪ ಅರಿವನ್ನೂ ಕಳೆದುಕೊಳ್ಳುತ್ತೇವೆ; ಹೀಗಾದಾಗ, ನಮ್ಮ ಜಗತ್ತಿನಲ್ಲಿ ವ್ಯಾಪಕವಾಗಿರುವ ಅನೇಕ ಗೊಂದಲಗಳು ಮತ್ತು ವಂಚನೆಗಳಲ್ಲಿ ತೊಡಗಿಕೊಂಡು ಅವನ್ನು ಒಪ್ಪಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಉಂಟಾಗುತ್ತದೆ.
ಪವಿತ್ರ ಗ್ರಂಥವನ್ನು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸುವ ನಿಮ್ಮ ಅಭ್ಯಾಸದ ಬಗ್ಗೆ ಇಂದು ಚಿಂತಿಸಿ. ಸದ್ಯ ನಿಮಗೆ ಈ ಅಭ್ಯಾಸವಿಲ್ಲದಿದ್ದರೆ, ಅದನ್ನು ರೂಢಿಸಿಕೊಳ್ಳಲು ನಿರ್ಧರಿಸಿ. ಬಹುಶಃ ಸುವಾರ್ತೆಗಳಲ್ಲಿ ಒಂದರಿಂದ ಆರಂಭಿಸಿ, ಪ್ರತಿದಿನ ಸ್ವಲ್ಪಸ್ವಲ್ಪವಾಗಿ ಅದನ್ನು ಪ್ರಾರ್ಥನಾಪೂರ್ವಕವಾಗಿ ಓದಲು ನಿಮ್ಮನ್ನು ಸಮರ್ಪಿಸಿಕೊಳ್ಳಬಹುದು. ಬೈಬಲಿನ ಪುಸ್ತಕಗಳನ್ನು ಓದಿ ಮುಗಿಸುವುದೇ ಗುರಿಯಲ್ಲ. ಪ್ರತಿಯೊಂದು ಪುಸ್ತಕದೊಳಗೆ ಆಳವಾಗಿ ಪ್ರವೇಶಿಸುವುದೇ ಗುರಿ. ಪ್ರತಿಯೊಂದು ಅಧ್ಯಾಯವೂ ಪ್ರತಿಯೊಂದು ಸಾಲೂ ಆಧ್ಯಾತ್ಮಿಕ ಒಳನೋಟ ಮತ್ತು ಅರಿವಿನ ಆಳವನ್ನು ನಮಗೆ ಒದಗಿಸುತ್ತದೆ; ಅದು ನಮಗೆ ನೀಡಲ್ಪಟ್ಟು ನಮ್ಮಿಂದ ಸ್ವೀಕರಿಸಲ್ಪಡಲು ಕಾಯುತ್ತಿದೆ. ಈ ಪವಿತ್ರ ಅಭ್ಯಾಸಕ್ಕೆ ನಿಮ್ಮನ್ನು ಸಮರ್ಪಿಸಿಕೊಳ್ಳಿ; ನಮ್ಮ ಪ್ರಭು ನಿಮಗೆ ದಯಪಾಲಿಸುವ ಆಧ್ಯಾತ್ಮಿಕ ಸಂಪತ್ತನ್ನು ಕಂಡು ನೀವು ವಿಸ್ಮಿತರಾಗುವಿರಿ.
ದೇವರ ಜೀವಂತ ವಾಕ್ಯವೇ, ನನ್ನ ಪ್ರಭುವೇ ಮತ್ತು ನನ್ನ ಅರಸನೇ, ಬರೆದು ನೀಡಲಾದ ನಿನ್ನ ವಾಕ್ಯದ ಮೂಲಕ ನೀನು ನನ್ನ ಬಳಿಗೂ ನಿನ್ನ ಎಲ್ಲ ಮಕ್ಕಳ ಬಳಿಗೂ ಬರುವ ರೀತಿಗಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆ ವಾಕ್ಯದ ಬಗ್ಗೆ ಪ್ರೀತಿಯಿಂದ ನನ್ನನ್ನು ತುಂಬಿಸು; ಅದರಲ್ಲಿ ಪ್ರಕಟವಾಗಿರುವ ಆಳವಾದ ಸತ್ಯಗಳಲ್ಲಿ ನಾನು ಪ್ರತಿದಿನ ನನ್ನ ಮನಸ್ಸನ್ನು ತೊಡಗಿಸಿಕೊಳ್ಳುವಂತಾಗಲಿ. ಪ್ರಿಯ ಪ್ರಭುವೇ, ನಾನು ನಿನ್ನನ್ನು ಸಂಧಿಸಿ, ನೀನು ಯಾರೆಂಬುದರ ಮತ್ತು ನನಗೆ ಏನನ್ನು ಪ್ರಕಟಿಸಲು ಬಯಸುತ್ತೀ ಎಂಬುದರ ಅರಿವಿನಲ್ಲಿ ಬೆಳೆಯುವಂತಾಗಲಿ. ಯೇಸುವೇ, ನಿನ್ನಲ್ಲಿ ಭರವಸೆಯಿಡುತ್ತೇನೆ.
ಲಿಸಿಯೂವಿನ ಸಂತ ತೆರೇಸಾರಿಗೆ ನೊವೆನಾ: ಸೆಪ್ಟೆಂಬರ್ 22-30
ನಾಲ್ಕನೆಯ ದಿನ- ಸೆಪ್ಟೆಂಬರ್ 25
ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು
ಮೇಲಿನ ಮುಖ್ಯ ಚಿತ್ರ: Pixabay ಯಿಂದ Thomas B. ಅವರ ಚಿತ್ರ



