ನವೆಂಬರ್ 7, 2023
ಸಾಮಾನ್ಯ ಕಾಲದ ಮೂವತ್ತೊಂದನೇ ವಾರದ ಮಂಗಳವಾರ
ಇಂದಿನ ವಾಚನಗಳು

“ಒಬ್ಬ ಮನುಷ್ಯನು ದೊಡ್ಡ ಔತಣವನ್ನು ಏರ್ಪಡಿಸಿ ಅನೇಕರನ್ನು ಆಹ್ವಾನಿಸಿದನು. ಔತಣದ ಸಮಯ ಬಂದಾಗ, ‘ಬನ್ನಿರಿ, ಈಗ ಎಲ್ಲವೂ ಸಿದ್ಧವಾಗಿದೆ’ ಎಂದು ಆಹ್ವಾನಿತರಿಗೆ ಹೇಳಲು ತನ್ನ ಸೇವಕನನ್ನು ಕಳುಹಿಸಿದನು. ಆದರೆ ಅವರೆಲ್ಲರೂ ಒಬ್ಬೊಬ್ಬರಾಗಿ ನೆಪಗಳನ್ನು ಹೇಳತೊಡಗಿದರು.” ಲೂಕ 14:16–18
ನೀವು ಎಂದಾದರೂ ನೆಪಗಳನ್ನು ಹೇಳಿ ದೇವರ ಚಿತ್ತವನ್ನು ಪಾಲಿಸುವುದರಿಂದ ತಪ್ಪಿಸಿಕೊಳ್ಳುತ್ತೀರಾ? ಅವರ ಮಹಾ ಔತಣದ ಮೇಜಿನಲ್ಲಿ ಭೋಜನ ಮಾಡಲು ಅವರು ನೀಡುವ ಆಹ್ವಾನವನ್ನು ಕಡೆಗಣಿಸುತ್ತೀರಾ? ಎಲ್ಲಕ್ಕಿಂತ ಮಿಗಿಲಾಗಿ, ಈ “ಮಹಾ ಔತಣ”ಕ್ಕೆ ದೇವರು ನಮಗೆ ನೀಡಿರುವ ಆಹ್ವಾನವು ದಿವ್ಯಬಲಿಯಲ್ಲಿ ಪಾಲ್ಗೊಳ್ಳಲು ಮತ್ತು ಪ್ರಾರ್ಥಿಸಲು ನೀಡಿರುವ ಆಹ್ವಾನವಾಗಿದೆ. ಕೆಲವರು ಇಂತಹ ಆಹ್ವಾನದಿಂದ ತಪ್ಪಿಸಿಕೊಳ್ಳಲು ಪದೇಪದೇ ನೆಪಗಳನ್ನು ಹೇಳುವುದು, ತಮ್ಮನ್ನು ಯಾವುದಕ್ಕೆ ಆಹ್ವಾನಿಸಲಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಂಡಿಲ್ಲವೆಂದು ತೋರಿಸುತ್ತದೆ. ಇನ್ನು ಕೆಲವರು ಶಾರೀರಿಕವಾಗಿ ಹಾಜರಾಗುತ್ತಾರೆ, ಆದರೆ ಆಂತರಿಕವಾಗಿ ಅವರು ಪಾಲ್ಗೊಳ್ಳುವ ಔತಣದಿಂದ ಬಹುದೂರದಲ್ಲಿರುತ್ತಾರೆ.
ಈ ಸಾಮ್ಯದಲ್ಲಿ, ಆಹ್ವಾನಿತ ಅತಿಥಿಗಳು ಒಬ್ಬರಾದ ಮೇಲೊಬ್ಬರು ಬರಲಿಲ್ಲ. ಆದ್ದರಿಂದ ಔತಣವನ್ನು ಏರ್ಪಡಿಸಿದ ಮನುಷ್ಯನು “ಬಡವರು, ಅಂಗವಿಕಲರು, ಕುರುಡರು ಮತ್ತು ಕುಂಟರು” ಇವರಿಗೆ ಆಹ್ವಾನ ಕಳುಹಿಸಿದನು. ಇದು ಯೇಸುವಿನ ಕಾಲದಲ್ಲಿ ತಮಗೆ ರಕ್ಷಣೆಯ ವರದ ಅಗತ್ಯವಿದೆ ಎಂದು ಅರಿತಿದ್ದ ಯೆಹೂದ್ಯರನ್ನು ಸೂಚಿಸುತ್ತದೆ. ಇವರು ತಮ್ಮ ದೌರ್ಬಲ್ಯಗಳು ಮತ್ತು ಪಾಪಗಳ ಅರಿವುಳ್ಳವರಾಗಿದ್ದರು; ಯೇಸುವೇ ತಮಗೆ ಉತ್ತರವೆಂದು ತಿಳಿದಿದ್ದರು.
ಬಡವರು, ಅಂಗವಿಕಲರು, ಕುರುಡರು ಮತ್ತು ಕುಂಟರು ಔತಣಕ್ಕೆ ಬಂದ ಬಳಿಕವೂ ಇನ್ನೂ ಸ್ಥಳ ಉಳಿದಿತ್ತು. ಆದ್ದರಿಂದ ಆ ಮನುಷ್ಯನು “ಹೆದ್ದಾರಿಗಳು ಮತ್ತು ಬೇಲಿಗಳ ಬಳಿಯಿರುವವರನ್ನು” ಆಹ್ವಾನಿಸಲು ತನ್ನ ಸೇವಕರನ್ನು ಕಳುಹಿಸಿದನು. ಇದು ಯೆಹೂದಿ ಮೂಲದವರಲ್ಲದ ಅನ್ಯಜನರಿಗೆ ಸುವಾರ್ತೆಯನ್ನು ಸಾರುವುದನ್ನು ಸೂಚಿಸುತ್ತದೆ.
ಇಂದಿಗೂ ಈ ಔತಣವನ್ನು ನೀಡಲಾಗುತ್ತಿದೆ. ಆದರೆ ಧಾರ್ಮಿಕ ಜೀವನದಲ್ಲಿ ಅಸಡ್ಡೆಯುಳ್ಳ ಅನೇಕ ಕ್ಯಾಥೊಲಿಕರು ಬರಲು ನಿರಾಕರಿಸುತ್ತಾರೆ. ಪ್ರಾರ್ಥನೆಗೂ ದಿವ್ಯಬಲಿಗೂ ಸಮಯ ಮಾಡಿಕೊಳ್ಳಲಾಗದಷ್ಟು ತಮ್ಮ ಜೀವನವು ಕಾರ್ಯನಿರತವಾಗಿದೆ ಎಂದು ಭಾವಿಸುವವರಿದ್ದಾರೆ. ಇವರು ಲೌಕಿಕ ವ್ಯವಹಾರಗಳಲ್ಲಿ ಎಷ್ಟರಮಟ್ಟಿಗೆ ಮುಳುಗಿದ್ದಾರೆಂದರೆ, ಪವಿತ್ರ ಪರಮಪ್ರಸಾದದ ಆಚರಣೆಗೆ ತಮ್ಮನ್ನು ಅರ್ಪಿಸಿಕೊಳ್ಳುವುದರಿಂದ ತಮಗೆ ಹೆಚ್ಚಿನ ವೈಯಕ್ತಿಕ ಪ್ರಯೋಜನವಿದೆ ಎಂದು ಅವರು ಕಾಣುವುದಿಲ್ಲ.
ನಮ್ಮ ಪ್ರಭುವಿನ ಔತಣದಲ್ಲಿ ಪಾಲ್ಗೊಳ್ಳುವವರಲ್ಲಿ ನೀವೂ ಒಬ್ಬರಾಗಬೇಕೆಂದು ಬಯಸಿದರೆ, ಬಡವರು, ಅಂಗವಿಕಲರು, ಕುರುಡರು ಮತ್ತು ಕುಂಟರಲ್ಲಿ ನೀವೂ ಒಬ್ಬರೆಂದು ಗುರುತಿಸಿಕೊಳ್ಳಲು ಶ್ರಮಿಸಬೇಕು. ನಿಮ್ಮ ಭಗ್ನ ಸ್ಥಿತಿಯನ್ನು, ದೌರ್ಬಲ್ಯಗಳನ್ನು ಮತ್ತು ಪಾಪಗಳನ್ನು ಗುರುತಿಸಬೇಕು. ನಿಮ್ಮನ್ನು ಈ ರೀತಿಯಾಗಿ ನೋಡಿಕೊಳ್ಳಲು ಹಿಂಜರಿಯಬಾರದು, ಏಕೆಂದರೆ ಇಂಥವರಿಗೇ ಯೇಸು ತೀವ್ರ ಹಂಬಲದಿಂದ ಆಹ್ವಾನವನ್ನು ಕಳುಹಿಸುತ್ತಾರೆ. ಈ ತೀವ್ರ ಹಂಬಲವು ನಾವು ಅವರ ಪ್ರೀತಿಯಲ್ಲಿ ಪಾಲ್ಗೊಳ್ಳಬೇಕೆಂಬ ಅವರ ಸರ್ವವ್ಯಾಪಿ ಬಯಕೆಯಾಗಿದೆ. ಅಗತ್ಯದಲ್ಲಿರುವವರನ್ನು ಪ್ರೀತಿಸಲು ಮತ್ತು ಗುಣಪಡಿಸಲು ಅವರು ಬಯಸುತ್ತಾರೆ. ಅಗತ್ಯದಲ್ಲಿರುವವರು ನಾವೇ.
ಪ್ರಾರ್ಥನೆಯ ಮೂಲಕ, ಅವರ ವಾಕ್ಯಕ್ಕೆ ನಿಷ್ಠೆಯಿಂದಿರುವ ಮೂಲಕ ಮತ್ತು ಸಂಸ್ಕಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮ ಪ್ರಭುವಿನ ಔತಣಕ್ಕೆ ಬಂದಾಗ, ಇತರರೂ ನಮ್ಮೊಂದಿಗೆ ಅವರ ಔತಣಕ್ಕೆ ಸೇರಬೇಕೆಂದು ಅವರು ಬಯಸುತ್ತಾರೆಂಬುದನ್ನು ಗಮನಿಸುತ್ತೇವೆ. ಆದ್ದರಿಂದ ಹೆದ್ದಾರಿಗಳಿಗೂ ಬೇಲಿಗಳ ಬಳಿಗೂ ಕಳುಹಿಸಲ್ಪಡುವ ಸೇವಕರು ನಾವೇ ಎಂದು ಸಹ ಭಾವಿಸಬೇಕು. ಅಲ್ಲಿ ದೇವರ ಚಿತ್ತವನ್ನು ಅನುಸರಿಸದವರು ನಮಗೆ ಸಿಗುತ್ತಾರೆ. ಅವರನ್ನು ಆಹ್ವಾನಿಸಲೇಬೇಕು. ತಾವು ಅಲ್ಲಿಗೆ ಸೇರಿದವರಲ್ಲವೆಂದು ಅವರಿಗೆ ಅನಿಸಿದರೂ, ಅವರು ತಮ್ಮ ಔತಣದಲ್ಲಿರಬೇಕೆಂದು ದೇವರು ಬಯಸುತ್ತಾರೆ. ಆಹ್ವಾನಿಸುವ ಕೆಲಸವನ್ನು ನಾವು ಮಾಡಬೇಕು.
ಇಂದು ಎರಡು ವಿಷಯಗಳ ಕುರಿತು ಚಿಂತಿಸಿ. ಮೊದಲನೆಯದಾಗಿ, ಪ್ರಾರ್ಥಿಸಲು, ನಿಮ್ಮ ವಿಶ್ವಾಸವನ್ನು ಆಳಗೊಳಿಸಲು ಮತ್ತು ಪರಮಪ್ರಸಾದದಲ್ಲಿ ಪಾಲ್ಗೊಳ್ಳಲು ದೇವರು ನಿಮ್ಮನ್ನು ಆಹ್ವಾನಿಸುವಾಗ, ನೀವು ಪದೇಪದೇ ಹೇಳುವ ಯಾವುದೇ ನೆಪದ ಕುರಿತು ಚಿಂತಿಸಿ. ನೀವು ತಕ್ಷಣವೇ ಉತ್ಸಾಹದಿಂದ ಪ್ರತಿಕ್ರಿಯಿಸುತ್ತೀರಾ? ಅಥವಾ ನೀವು ಒಪ್ಪಿಕೊಳ್ಳಲು ಬಯಸುವುದಕ್ಕಿಂತಲೂ ಹೆಚ್ಚಾಗಿ ನೆಪಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತೀರಾ? ದೇವರ ಔತಣಕ್ಕೆ ಆಹ್ವಾನಿಸಲು, ದಾರಿತಪ್ಪಿ ಅತಿ ದೂರ ಹೋಗಿರುವ ಆತ್ಮಗಳ ಬಳಿಗೆ ತೆರಳಬೇಕೆಂದು ದೇವರು ನಿಮಗೆ ನೀಡಿರುವ ಕರ್ತವ್ಯದ ಕುರಿತೂ ಚಿಂತಿಸಿ. ತಮಗೆ ಆಹ್ವಾನವಿದೆ ಎಂದು ಪ್ರತಿಯೊಬ್ಬರೂ ತಿಳಿಯಬೇಕೆಂದು ನಮ್ಮ ಪ್ರಭು ಬಯಸುತ್ತಾರೆ. ತಮ್ಮ ಆಹ್ವಾನವನ್ನು ತಲುಪಿಸಲು ಅವರು ನಿಮ್ಮನ್ನು ಬಳಸಿಕೊಳ್ಳಲಿ.
ನನ್ನ ಉದಾರ ಪ್ರಭುವೇ, ನಿಮ್ಮ ಮಹಾ ಔತಣದ ಮಹಿಮೆಯಲ್ಲಿ ಪಾಲ್ಗೊಳ್ಳಲು ನೀವು ನನ್ನನ್ನು ಆಹ್ವಾನಿಸಿದ್ದೀರಿ. ಪ್ರಾರ್ಥಿಸಲು, ನನ್ನ ವಿಶ್ವಾಸದಲ್ಲಿ ಬಲಗೊಳ್ಳಲು ಮತ್ತು ಪವಿತ್ರ ಪರಮಪ್ರಸಾದದಲ್ಲಿ ಪಾಲ್ಗೊಳ್ಳಲು ನೀವು ಪ್ರತಿದಿನ ನನ್ನನ್ನು ಆಹ್ವಾನಿಸುತ್ತೀರಿ. ನಾನು ಸದಾ ನಿಮಗೆ ಪ್ರತಿಕ್ರಿಯಿಸುವಂತೆಯೂ, ನಿಮ್ಮ ಆಹ್ವಾನಗಳಿಂದ ಎಂದಿಗೂ ನೆಪ ಹೇಳಿ ತಪ್ಪಿಸಿಕೊಳ್ಳದಂತೆಯೂ ಅನುಗ್ರಹಿಸಿ. ಪ್ರಿಯ ಪ್ರಭುವೇ, ಅತ್ಯಂತ ಅಗತ್ಯದಲ್ಲಿರುವವರಿಗೆ ನಿಮ್ಮ ಆಹ್ವಾನವನ್ನು ತಲುಪಿಸಲು ದಯವಿಟ್ಟು ನನ್ನನ್ನೂ ಬಳಸಿಕೊಳ್ಳಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.
ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು



