ಕನ್ನಡ

ಸಂಪೂರ್ಣವಾಗಿ ಸಮರ್ಪಿತರಾಗಿರುವುದು!

ಆಗಸ್ಟ್ 21, 2020
ಸಾಮಾನ್ಯ ಕಾಲದ ಇಪ್ಪತ್ತನೆಯ ವಾರದ ಶುಕ್ರವಾರ
ಇಂದಿನ ವಾಚನಗಳು

ಸಂತ ಹತ್ತನೆಯ ಪಿಯುಸ್, ಪೋಪ್—ಸ್ಮರಣೆ

ಯೇಸು ಸದ್ದುಕಾಯರ ಬಾಯಿ ಮುಚ್ಚಿಸಿದರೆಂದು ಕೇಳಿದ ಫರಿಸಾಯರು ಒಟ್ಟುಗೂಡಿದರು. ಅವರಲ್ಲಿ ಧರ್ಮಶಾಸ್ತ್ರ ಪಂಡಿತನೊಬ್ಬನು ಅವರನ್ನು ಪರೀಕ್ಷಿಸಲು, “ಬೋಧಕರೇ, ಧರ್ಮಶಾಸ್ತ್ರದಲ್ಲಿ ಅತಿ ಶ್ರೇಷ್ಠವಾದ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ನಿನ್ನ ದೇವರಾದ ಪ್ರಭುವನ್ನು ನಿನ್ನ ಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣ ಆತ್ಮದಿಂದಲೂ, ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂದರು.  ಮತ್ತಾಯ 22:34-37

“ನಿನ್ನ ಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣ ಆತ್ಮದಿಂದಲೂ, ನಿನ್ನ ಪೂರ್ಣ ಮನಸ್ಸಿನಿಂದಲೂ.”  ಬೇರೆ ಮಾತಿನಲ್ಲಿ ಹೇಳುವುದಾದರೆ, ನಿಮ್ಮ ಇಡೀ ಅಸ್ತಿತ್ವದಿಂದ!

ಪ್ರಾಯೋಗಿಕವಾಗಿ ಹೇಳುವುದಾದರೆ, ಇಷ್ಟು ಆಳವಾದ ಪ್ರೀತಿ ಹೇಗಿರುತ್ತದೆ?  ಇದು ಒಂದು ಉನ್ನತ ವಿಚಾರವಾಗಿ ಅಥವಾ ಮಾತುಗಳ ಉಪದೇಶವಾಗಿ ಉಳಿದುಬಿಡುವುದು ಸುಲಭ. ಆದರೆ ಈ ವಿಚಾರ ಅಥವಾ ಉಪದೇಶ ನಮ್ಮ ಕೃತ್ಯಗಳಲ್ಲಿ ಸಾಕ್ಷಿಯಾಗಿ ಮೂಡಿಬರುವಂತೆ ಮಾಡುವುದು ಸವಾಲಿನ ಸಂಗತಿ.  ನೀವು ನಿಮ್ಮ ಇಡೀ ಅಸ್ತಿತ್ವದಿಂದ ದೇವರನ್ನು ಪ್ರೀತಿಸುತ್ತೀರಾ?  ನಿಮ್ಮ ವ್ಯಕ್ತಿತ್ವದ ಪ್ರತಿಯೊಂದು ಅಂಶದಿಂದಲೂ ಪ್ರೀತಿಸುತ್ತೀರಾ?  ಅದರ ನಿಖರವಾದ ಅರ್ಥವೇನು?

ಬಹುಶಃ ಇಷ್ಟು ಆಳವಾದ ಪ್ರೀತಿ ಅನೇಕ ರೀತಿಗಳಲ್ಲಿ ವ್ಯಕ್ತವಾಗಬಹುದು. ಈ ಪ್ರೀತಿಯಲ್ಲಿ ಕಂಡುಬರುವ ಕೆಲವು ಗುಣಗಳು ಇಲ್ಲಿವೆ:

1) ಒಪ್ಪಿಸಿಕೊಡುವಿಕೆ: ನಮ್ಮ ಜೀವನವನ್ನು ದೇವರಿಗೆ ಒಪ್ಪಿಸಿಕೊಡುವುದು ಪ್ರೀತಿಗೆ ಅಗತ್ಯವಾದದ್ದು.  ದೇವರು ಪರಿಪೂರ್ಣರು. ಆದ್ದರಿಂದ ಅವರನ್ನು ಪ್ರೀತಿಸಬೇಕಾದರೆ, ನಾವು ಅವರ ಪರಿಪೂರ್ಣತೆಯನ್ನು ಕಾಣಬೇಕು, ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.  ದೇವರು ಯಾರೆಂಬುದನ್ನು ನಾವು ಕಂಡು ಅರ್ಥಮಾಡಿಕೊಂಡಾಗ, ಅದರ ಫಲವಾಗಿ ನಾವು ಸಂಪೂರ್ಣವಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಅವರಲ್ಲಿ ಭರವಸೆಯಿಡಬೇಕು.  ದೇವರು ಸರ್ವಶಕ್ತರೂ ಅಪಾರ ಪ್ರೀತಿಯುಳ್ಳವರೂ ಆಗಿದ್ದಾರೆ.  ಸರ್ವಶಕ್ತರೂ ಅಪಾರ ಪ್ರೀತಿಯುಳ್ಳವರೂ ಆದ ದೇವರಲ್ಲಿ ಅಪರಿಮಿತವಾಗಿ ಭರವಸೆಯಿಡಬೇಕು.

2) ಅಂತರಂಗದ ಅಗ್ನಿ: ನಮ್ಮನ್ನು ದೇವರಿಗೆ ಒಪ್ಪಿಸಿಕೊಡುವುದು ನಮ್ಮ ಹೃದಯಗಳನ್ನು ಉರಿಯುವಂತೆ ಮಾಡುತ್ತದೆ!  ಅಂದರೆ, ಪವಿತ್ರಾತ್ಮರು ನಮ್ಮ ಆತ್ಮಗಳಲ್ಲಿ ಅದ್ಭುತ ಕಾರ್ಯಗಳನ್ನು ಮಾಡುವುದನ್ನು ನಾವು ಕಾಣುತ್ತೇವೆ.  ದೇವರು ಕಾರ್ಯಮಾಡುತ್ತಾ ನಮ್ಮನ್ನು ಪರಿವರ್ತಿಸುವುದನ್ನು ನಾವು ಕಾಣುತ್ತೇವೆ.  ಅದು ನಮ್ಮ ಸ್ವಂತ ಪ್ರಯತ್ನದಿಂದ ನಾವು ಎಂದಿಗೂ ಸಾಧಿಸಲಾಗದಷ್ಟು ಹೆಚ್ಚಿನದಾಗಿರುತ್ತದೆ.  ಧಗಧಗಿಸುವ ಬೆಂಕಿಯು ಎಲ್ಲವನ್ನೂ ಆವರಿಸಿಕೊಳ್ಳುವಂತೆಯೇ, ದೇವರು ಮುಂದಾಳತ್ವ ವಹಿಸಿ ನಮ್ಮಲ್ಲಿ ಮಹತ್ಕಾರ್ಯಗಳನ್ನು ಮಾಡುತ್ತಾ ನಮ್ಮ ಜೀವನವನ್ನು ಪರಿವರ್ತಿಸುವರು.

3) ನಿಮ್ಮ ಸಾಮರ್ಥ್ಯವನ್ನು ಮೀರಿದ ಕಾರ್ಯಗಳು: ನಮ್ಮೊಳಗೆ ಪವಿತ್ರಾತ್ಮರ ಅಗ್ನಿ ಪ್ರಜ್ವಲಿಸುವುದರ ಫಲವೇನೆಂದರೆ, ದೇವರು ನಮ್ಮ ಮೂಲಕ ನಮ್ಮ ಸುತ್ತಲಿರುವವರ ಜೀವನಗಳಲ್ಲಿ ಮಹತ್ಕಾರ್ಯಗಳನ್ನು ಮಾಡುವರು.  ದೇವರು ಕಾರ್ಯಮಾಡುವುದನ್ನು ನಾವು ಕಣ್ಣಾರೆ ಕಂಡು, ಅವರು ಮಾಡುವ ಕಾರ್ಯಗಳನ್ನು ನೋಡಿ ಬೆರಗಾಗುತ್ತೇವೆ.  ಅವರ ಅದ್ಭುತ ಶಕ್ತಿಗೂ ಪರಿವರ್ತಿಸುವ ಪ್ರೀತಿಗೂ ನಾವು ನೇರ ಸಾಕ್ಷಿಗಳಾಗುತ್ತೇವೆ; ಅದು ನಮ್ಮ ಮೂಲಕವೇ ಸಂಭವಿಸುತ್ತದೆ.  ಎಂಥ ವರದಾನ!

ಇಂದು, ದೇವರ ಮೇಲಿನ ನಿಮ್ಮ ಸಂಪೂರ್ಣ ಪ್ರೀತಿಯ ಕುರಿತು ಚಿಂತಿಸಿ.  ನೀವು ಸಂಪೂರ್ಣವಾಗಿ ಸಮರ್ಪಿತರಾಗಿದ್ದೀರಾ?  ನಮ್ಮ ಪ್ರಭುವಿನ ಸೇವೆಗೂ ಅವರ ಪವಿತ್ರ ಚಿತ್ತವನ್ನು ನೆರವೇರಿಸುವುದಕ್ಕೂ ನೀವು ಸಂಪೂರ್ಣವಾಗಿ ಬದ್ಧರಾಗಿದ್ದೀರಾ?  ಹಿಂಜರಿಯಬೇಡಿ.  ಅದು ನಿಜಕ್ಕೂ ಸಾರ್ಥಕ!

ಪ್ರಭುವೇ, ನನ್ನ ಪೂರ್ಣ ಹೃದಯದಿಂದಲೂ, ಮನಸ್ಸಿನಿಂದಲೂ, ಆತ್ಮದಿಂದಲೂ, ಶಕ್ತಿಯಿಂದಲೂ ನಿನ್ನನ್ನು ಪ್ರೀತಿಸಲು ನನಗೆ ಸಹಾಯ ಮಾಡು.  ನನ್ನ ಇಡೀ ಅಸ್ತಿತ್ವದಿಂದ ನಿನ್ನನ್ನು ಪ್ರೀತಿಸಲು ನನಗೆ ಸಹಾಯ ಮಾಡು.  ಆ ಪ್ರೀತಿಯಲ್ಲಿ ನನ್ನನ್ನು ನಿನ್ನ ಅನುಗ್ರಹದ ಸಾಧನವಾಗಿ ಪರಿವರ್ತಿಸಬೇಕೆಂದು ನಿನ್ನನ್ನು ಪ್ರಾರ್ಥಿಸುತ್ತೇನೆ.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಟ್ಟಿದ್ದೇನೆ!

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಸಂತ ಹತ್ತನೆಯ ಪಿಯುಸ್, ಪೋಪ್

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಜೇಮ್ಸ್ ಟಿಸ್ಸೊ ಅವರ ‘ಯೇಸುವನ್ನು ಪರೀಕ್ಷಿಸಲು ಬರುವ ಫರಿಸಾಯರು ಮತ್ತು ಸದ್ದುಕಾಯರು’