ಕನ್ನಡ

ದೈವಿಕ ಪ್ರೀತಿಯ ಎಣ್ಣೆ

ಆಗಸ್ಟ್ 28, 2020
ಸಾಮಾನ್ಯ ಕಾಲದ ಇಪ್ಪತ್ತೊಂದನೆಯ ವಾರದ ಶುಕ್ರವಾರ
ಇಂದಿನ ವಾಚನಗಳು

ಹಿಪ್ಪೋದ ಸಂತ ಅಗಸ್ಟಿನ್, ಧರ್ಮಾಧ್ಯಕ್ಷರು ಮತ್ತು ಧರ್ಮಸಭೆಯ ಪಂಡಿತರು—ಸ್ಮರಣೆ

“‘ಪ್ರಭುವೇ, ಪ್ರಭುವೇ, ನಮಗಾಗಿ ಬಾಗಿಲು ತೆರೆಯಿರಿ!’ ಆದರೆ ಅವರು ಉತ್ತರವಾಗಿ, ‘ಆಮೆನ್, ನಾನು ನಿಮಗೆ ಹೇಳುತ್ತೇನೆ, ನೀವು ಯಾರೆಂದು ನನಗೆ ತಿಳಿಯದು’ ಎಂದರು.”  ಮತ್ತಾಯ 25:11b-12

ಅದು ಎಂತಹ ಭಯಾನಕವಾದ, ಗಂಭೀರ ಚಿಂತನೆಗೆ ಹಚ್ಚುವ ಅನುಭವವಾಗಿರಬಹುದು!  ಈ ಭಾಗವು ಹತ್ತು ಕನ್ಯೆಯರ ಸಾಮತಿಯಿಂದ ಬಂದಿದೆ.  ಅವರಲ್ಲಿ ಐವರು ನಮ್ಮ ಪ್ರಭುವನ್ನು ಭೇಟಿಯಾಗಲು ಸಿದ್ಧರಾಗಿದ್ದರು; ಉಳಿದ ಐವರು ಸಿದ್ಧರಾಗಿರಲಿಲ್ಲ.  ಪ್ರಭು ಬಂದಾಗ, ಐವರು ಬುದ್ಧಿಹೀನ ಕನ್ಯೆಯರು ತಮ್ಮ ದೀಪಗಳಿಗಾಗಿ ಇನ್ನಷ್ಟು ಎಣ್ಣೆ ತರಲು ಹೋಗಿದ್ದರು. ಅವರು ಹಿಂದಿರುಗಿದಾಗ, ಔತಣದ ಬಾಗಿಲಿಗೆ ಆಗಲೇ ಬೀಗ ಹಾಕಲಾಗಿತ್ತು.  ಮುಂದೆ ಏನಾಯಿತು ಎಂಬುದನ್ನು ಮೇಲಿನ ಭಾಗವು ತಿಳಿಸುತ್ತದೆ.

ನಮ್ಮನ್ನು ಎಚ್ಚರಗೊಳಿಸುವುದೂ ಯೇಸು ಈ ಸಾಮತಿಯನ್ನು ಹೇಳುವ ಉದ್ದೇಶಗಳಲ್ಲಿ ಒಂದು.  ನಾವು ಪ್ರತಿದಿನವೂ ಅವರಿಗಾಗಿ ಸಿದ್ಧರಾಗಿರಬೇಕು.  ನಾವು ಸಿದ್ಧರಾಗಿದ್ದೇವೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು?  ನಮ್ಮ ದೀಪಗಳಿಗೆ ಸಾಕಷ್ಟು “ಎಣ್ಣೆ” ಇದ್ದಾಗ ನಾವು ಸಿದ್ಧರಾಗಿರುತ್ತೇವೆ.  ಈ ಎಣ್ಣೆ ವಿಶೇಷವಾಗಿ ನಮ್ಮ ಜೀವನದಲ್ಲಿನ ದೈವಿಕ ಪ್ರೀತಿಯನ್ನು ಸೂಚಿಸುತ್ತದೆ.  ಆದ್ದರಿಂದ, ಧ್ಯಾನಿಸಬೇಕಾದ ಸರಳ ಪ್ರಶ್ನೆ ಇದು: “ನನ್ನ ಜೀವನದಲ್ಲಿ ದೈವಿಕ ಪ್ರೀತಿ ಇದೆಯೇ?”

ದೈವಿಕ ಪ್ರೀತಿ ಕೇವಲ ಸಾಮಾನ್ಯ ಮಾನವ ಪ್ರೀತಿಗಿಂತ ಹೆಚ್ಚಿನದು.  “ಮಾನವ ಪ್ರೀತಿ” ಎಂದರೆ ಭಾವೋದ್ವೇಗ, ಭಾವನೆ, ಆಕರ್ಷಣೆ ಮುಂತಾದವುಗಳನ್ನು ನಾವು ಅರ್ಥೈಸುತ್ತೇವೆ.  ಇನ್ನೊಬ್ಬ ವ್ಯಕ್ತಿಯ ಬಗ್ಗೆ, ಯಾವುದಾದರೂ ಚಟುವಟಿಕೆಯ ಬಗ್ಗೆ ಅಥವಾ ಜೀವನದ ಅನೇಕ ವಿಷಯಗಳ ಬಗ್ಗೆ ನಮಗೆ ಇಂತಹ ಭಾವನೆ ಉಂಟಾಗಬಹುದು.  ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು, ಚಲನಚಿತ್ರಗಳನ್ನು ನೋಡುವುದು ಮುಂತಾದವುಗಳನ್ನು ನಾವು “ಪ್ರೀತಿಸಬಹುದು.”

ಆದರೆ ದೈವಿಕ ಪ್ರೀತಿ ಇದಕ್ಕಿಂತ ಎಷ್ಟೋ ಹೆಚ್ಚಿನದು.  ದೈವಿಕ ಪ್ರೀತಿ ಎಂದರೆ ನಾವು ಕ್ರಿಸ್ತರ ಹೃದಯದಿಂದ ಪ್ರೀತಿಸುವುದು.  ಅಂದರೆ, ಯೇಸು ತಮ್ಮದೇ ಕರುಣಾಮಯ ಹೃದಯವನ್ನು ನಮ್ಮ ಹೃದಯಗಳಲ್ಲಿ ಇರಿಸಿದ್ದಾರೆ ಮತ್ತು ನಾವು ಅವರ ಪ್ರೀತಿಯಿಂದ ಪ್ರೀತಿಸುತ್ತೇವೆ.  ದೈವಿಕ ಪ್ರೀತಿ ದೇವರ ಕೊಡುಗೆಯಾಗಿದೆ. ಅದು ನಮ್ಮ ಸ್ವಂತ ಸಾಮರ್ಥ್ಯಗಳನ್ನು ಬಹಳವಾಗಿ ಮೀರುವ ರೀತಿಯಲ್ಲಿ ಇತರರ ಬಳಿಗೆ ಹೋಗಿ ಅವರ ಕಾಳಜಿ ವಹಿಸಲು ನಮಗೆ ಶಕ್ತಿ ನೀಡುತ್ತದೆ.  ದೈವಿಕ ಪ್ರೀತಿ ನಮ್ಮ ಜೀವನದಲ್ಲಿ ದೇವರ ಕ್ರಿಯೆಯಾಗಿದೆ. ಸ್ವರ್ಗದ ಔತಣಕ್ಕೆ ನಮ್ಮನ್ನು ಸ್ವಾಗತಿಸಬೇಕೆಂದು ನಾವು ಬಯಸಿದರೆ, ಅದು ಅಗತ್ಯವಾಗಿದೆ.

ನಿಮ್ಮ ಸ್ವಂತ ಹೃದಯದಲ್ಲಿ ಯೇಸುವಿನ ಹೃದಯವು ಜೀವಂತವಾಗಿರುವುದನ್ನು ನೀವು ಕಾಣಬಲ್ಲಿರೋ ಇಲ್ಲವೋ ಎಂಬುದನ್ನು ಇಂದು ಧ್ಯಾನಿಸಿ.  ಕಷ್ಟವಾಗಿದ್ದರೂ ಇತರರ ಬಳಿಗೆ ಹೋಗುವಂತೆ ನಿಮ್ಮನ್ನು ಪ್ರೇರೇಪಿಸುತ್ತಾ, ಅವರು ನಿಮ್ಮೊಳಗೆ ಕಾರ್ಯನಿರ್ವಹಿಸುತ್ತಿರುವುದನ್ನು ನೀವು ಕಾಣಬಲ್ಲಿರಾ?  ಜನರು ಜೀವನದ ಪಾವಿತ್ರ್ಯದಲ್ಲಿ ಬೆಳೆಯಲು ಸಹಾಯಮಾಡುವ ಮಾತುಗಳನ್ನು ನೀವು ಆಡುತ್ತೀರಾ ಮತ್ತು ಅಂತಹ ಕಾರ್ಯಗಳನ್ನು ಮಾಡುತ್ತೀರಾ?  ಜಗತ್ತಿನಲ್ಲಿ ಬದಲಾವಣೆ ತರಲು ದೇವರು ನಿಮ್ಮೊಳಗೆ ಮತ್ತು ನಿಮ್ಮ ಮೂಲಕ ಕಾರ್ಯನಿರ್ವಹಿಸುತ್ತಾರೆಯೇ?  ಈ ಪ್ರಶ್ನೆಗಳಿಗೆ ಉತ್ತರ “ಹೌದು” ಎಂದಾದರೆ, ದೈವಿಕ ಪ್ರೀತಿ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಜೀವಂತವಾಗಿದೆ.

ಪ್ರಭುವೇ, ನಿಮ್ಮ ದಿವ್ಯ ಹೃದಯಕ್ಕೆ ನನ್ನ ಹೃದಯವನ್ನು ಯೋಗ್ಯವಾದ ವಾಸಸ್ಥಾನವನ್ನಾಗಿ ಮಾಡಿರಿ.  ನನ್ನ ಹೃದಯವು ನಿಮ್ಮ ಪ್ರೀತಿಯಿಂದ ಮಿಡಿಯಲಿ; ನನ್ನ ಮಾತುಗಳು ಮತ್ತು ಕಾರ್ಯಗಳು ಇತರರಿಗಾಗಿ ನೀವು ವಹಿಸುವ ಪರಿಪೂರ್ಣ ಕಾಳಜಿಯಲ್ಲಿ ಪಾಲ್ಗೊಳ್ಳಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಹಿಪ್ಪೋದ ಸಂತ ಅಗಸ್ಟಿನ್, ಧರ್ಮಾಧ್ಯಕ್ಷರು ಮತ್ತು ಧರ್ಮಸಭೆಯ ಪಂಡಿತರು

ಚಿತ್ರ: ಪೀಟರ್ ಲೀಸಾರ್ಟ್ ಅವರ ವಿವೇಕಿ ಮತ್ತು ಬುದ್ಧಿಹೀನ ಕನ್ಯೆಯರ ಸಾಮತಿ