ಕನ್ನಡ

ಪುನರುತ್ಥಾನದ ಆನಂದದಿಂದ ಉಕ್ಕಿಹೋಗಿ!

ಏಪ್ರಿಲ್ 18, 2022
ಪಾಸ್ಕ ಅಷ್ಟಕದ ಸೋಮವಾರ
ಇಂದಿನ ವಾಚನಗಳು

ವೀಡಿಯೊ

ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಭಯದಿಂದಲೂ ಅಪಾರ ಆನಂದದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಈ ಸುದ್ದಿಯನ್ನು ಅವರ ಶಿಷ್ಯರಿಗೆ ತಿಳಿಸಲು ಓಡಿದರು. ಆಗ ಇಗೋ, ದಾರಿಯಲ್ಲಿ ಯೇಸು ಅವರನ್ನು ಭೇಟಿಯಾಗಿ ವಂದಿಸಿದರು. ಮತ್ತಾಯ 28:8–9

ಅವರು “ಭಯದಿಂದ” ಹೊರಟರು, ಆದರೆ “ಅಪಾರ ಆನಂದದಿಂದಲೂ” ತುಂಬಿದ್ದರು. ಎಂಥ ವಿಸ್ಮಯಕರ ಸಂಗಮ! ಈ ಎರಡು ಅನುಭವಗಳು ಒಟ್ಟಿಗೆ ಇರಲು ಸಾಧ್ಯವೆಂದು ಮೊದಲ ನೋಟಕ್ಕೆ ತೋರುವುದಿಲ್ಲ. ಒಬ್ಬರು ಭಯಪಡುತ್ತಲೇ ಆನಂದದಿಂದ ತುಂಬಿರಲು ಹೇಗೆ ಸಾಧ್ಯ? ಭಯವು ಆನಂದವನ್ನು ಕುಗ್ಗಿಸುವುದಿಲ್ಲವೇ? ಆನಂದವು ಭಯವನ್ನು ತೊಲಗಿಸುವಂತೆ ತೋರುವುದಿಲ್ಲವೇ? ಇದೆಲ್ಲವೂ ಈ ಪವಿತ್ರ ಸ್ತ್ರೀಯರು ಯಾವ ರೀತಿಯ “ಭಯವನ್ನು” ಅನುಭವಿಸುತ್ತಿದ್ದರು ಎಂಬುದರ ಮೇಲೆ ಅವಲಂಬಿತವಾಗಿದೆ.

ಈ ಸ್ತ್ರೀಯರು ಅನುಭವಿಸುತ್ತಿದ್ದ ಭಯವು ಪವಿತ್ರಾತ್ಮನ ಏಳು ವರಗಳಲ್ಲಿ ಒಂದಾದ ಪವಿತ್ರ ಭಯದ ವರವಾಗಿತ್ತು ಎಂದು ತೋರುತ್ತದೆ. ಇದು ಸಾಮಾನ್ಯ ಅರ್ಥದಲ್ಲಿ ಹೆದರುವ ಭಯವಲ್ಲ. ಬದಲಾಗಿ, ಇದನ್ನು ಆಳವಾದ ಪೂಜ್ಯಭಾವ, ವಿಸ್ಮಯ ಮತ್ತು ಭಕ್ತಿಭರಿತ ಬೆರಗು ಎಂದು ಹೇಳುವುದು ಹೆಚ್ಚು ಸೂಕ್ತ. ತಾವು ಆ ಕ್ಷಣದಲ್ಲಿ ಅನುಭವಿಸುತ್ತಿದ್ದ ಸಂಗತಿಯ ಆಳವನ್ನು ಗುರುತಿಸಲು ಈ ವರವು ಆ ಸ್ತ್ರೀಯರಿಗೆ ನೆರವಾಯಿತು. ಅವರು ಒಂದೇ ಸಮಯದಲ್ಲಿ ಭಕ್ತಿಭರಿತ ಬೆರಗು, ಪವಿತ್ರ ತಲ್ಲಣ, ಆಶ್ಚರ್ಯ ಮತ್ತು ಆನಂದದಿಂದ ತುಂಬಿದ್ದರು. ಯೇಸು ಮರಣವನ್ನೇ ಜಯಿಸಿದ್ದಾರೆ ಎಂಬ ಅದ್ಭುತ ಅರಿವು ಮತ್ತು ಭರವಸೆಯನ್ನು ಅವರು ಹಠಾತ್ತನೆ ಅನುಭವಿಸಿರಬಹುದು. ಅವರು ಬಹುಶಃ ಗೊಂದಲಗೊಂಡಿದ್ದರೂ, ಅಸಾಧಾರಣವಾದದ್ದೊಂದು ಈಗಷ್ಟೇ ಸಂಭವಿಸಿದೆ ಎಂಬ ದೃಢನಿಶ್ಚಯವನ್ನು ನೀಡುವ ವಿಶ್ವಾಸದಿಂದಲೂ ತುಂಬಿದ್ದರು.

ಇಂದು ನಮಗೂ ಇರಬೇಕಾದ ಅನುಭವ ಇದೇ. ಇಂದು ಪಾಸ್ಕ ಅಷ್ಟಕದ ಎರಡನೆಯ ದಿನ. ಅಂದರೆ ಇಂದು ಮತ್ತೊಮ್ಮೆ ಪಾಸ್ಕ ದಿನವೇ ಆಗಿದೆ. ದೈವಿಕ ಕರುಣೆಯ ಭಾನುವಾರದೊಂದಿಗೆ ಕೊನೆಗೊಳ್ಳುವಂತೆ ನಾವು ಸತತ ಎಂಟು ದಿನಗಳ ಕಾಲ ಪಾಸ್ಕ ಹಬ್ಬವನ್ನು ಆಚರಿಸುತ್ತೇವೆ. ಆದ್ದರಿಂದ ಈ ಮುಂದಿನ ಎಂಟು ದಿನಗಳಲ್ಲಿ, ಯೇಸು ಇನ್ನು ಸಮಾಧಿಯಲ್ಲಿಲ್ಲವೆಂದು ಈ ಪವಿತ್ರ ಸ್ತ್ರೀಯರು ಮೊದಲ ಬಾರಿಗೆ ಅರಿತಾಗ ಅವರಿಗಾದ ಅನುಭವವನ್ನು ಆಳವಾಗಿ ಅರಿತು, ನಾವೂ ಅನುಭವಿಸಲು ಹೆಚ್ಚಿನ ಸಮಯವನ್ನು ಮೀಸಲಿಡಬೇಕು. ಪುನರುತ್ಥಾನದ ರಹಸ್ಯದಲ್ಲಿ ನಾವು ತೊಡಗಿಸಿಕೊಳ್ಳಬೇಕು. ಅದನ್ನು ಅದರ ನಿಜಸ್ವರೂಪದಲ್ಲಿ ಕಾಣಬೇಕು. ಈ ವರವನ್ನೂ, ತಮ್ಮ ಪುನರುತ್ಥಾನದಲ್ಲಿ ಯೇಸು ಪಾಪದ ಪರಿಣಾಮಗಳನ್ನು ನಾಶಮಾಡುತ್ತಾರೆ ಎಂಬ ಅದ್ಭುತ ಸತ್ಯವನ್ನೂ ಗ್ರಹಿಸಲು ನಾವು ಶ್ರಮಿಸಬೇಕು. ಅವರು ಮರಣವನ್ನೇ ನಾಶಮಾಡುತ್ತಾರೆ. ನಿಜಕ್ಕೂ ಅದ್ಭುತ!

ಕ್ರಿಸ್ತನ ಪುನರುತ್ಥಾನವನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ಸಾಕಾಗುವಷ್ಟು ಅರ್ಥಮಾಡಿಕೊಂಡಿಲ್ಲ. ಪುನರುತ್ಥಾನವನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ನಮ್ಮಲ್ಲಿ ಪ್ರತಿಯೊಬ್ಬರೂ ಒಪ್ಪಿಕೊಳ್ಳುವುದು ವಿನಮ್ರತೆಯಿಂದ ಸತ್ಯವನ್ನು ಒಪ್ಪಿಕೊಂಡಂತೆಯೇ. ಪುನರುತ್ಥಾನದ ಸತ್ಯವು ನಮ್ಮ ಅಂತರಾಳಕ್ಕೆ ಇಳಿಯಲು ಬಿಡುವುದಷ್ಟೇ ಅಲ್ಲ, ಅದರ ಪರಿಣಾಮಗಳು ನಮ್ಮನ್ನು ಬದಲಾಯಿಸಲೂ ಅವಕಾಶ ನೀಡಬೇಕು. ಕ್ರಿಸ್ತನ ಪುನರುತ್ಥಾನವು ನಮ್ಮ ಆತ್ಮದೊಳಗೆ ಪ್ರವೇಶಿಸಿ, ಇಂದು ಈ ಹೊಸ ಜೀವಿತದಲ್ಲಿ ಪಾಲ್ಗೊಳ್ಳಲು ನಮ್ಮನ್ನು ಆಹ್ವಾನಿಸುವಂತೆ ನಾವು ಅವಕಾಶ ನೀಡಬೇಕು.

ಈ ಪವಿತ್ರ ಸ್ತ್ರೀಯರು ಸಮಾಧಿಯಿಂದ ಹೊರಟಾಗ, ದಾರಿಯಲ್ಲಿ ಪುನರುತ್ಥಾನಗೊಂಡ ಕ್ರಿಸ್ತನನ್ನು ಭೇಟಿಯಾದರೆಂದು ಪವಿತ್ರ ಗ್ರಂಥವು ನಮಗೆ ತಿಳಿಸುತ್ತದೆ. ಯೇಸುವನ್ನು ಕಂಡಾಗ ಅವರು “ಹತ್ತಿರ ಬಂದು, ಅವರ ಪಾದಗಳನ್ನು ಅಪ್ಪಿಕೊಂಡು, ಅವರಿಗೆ ಪ್ರಣಾಮ ಮಾಡಿದರು” ಎಂದೂ ಅದು ಹೇಳುತ್ತದೆ. ಇದು ಆರಾಧನೆ ಮತ್ತು ಪ್ರೀತಿಯ ಸಣ್ಣ ಕ್ರಿಯೆಯೇನಲ್ಲ. ಯೇಸುವನ್ನು ಪೂಜಿಸಿ ಆರಾಧಿಸಿದ ಈ ಕ್ರಿಯೆಯು, ಅವರು ಕೇವಲ ವಿಶ್ವಾಸವಿಟ್ಟಿದ್ದಷ್ಟೇ ಅಲ್ಲ, ಅವರನ್ನು ಆರಾಧಿಸುವ ಮೂಲಕ ಅದನ್ನು ಕಾರ್ಯರೂಪಕ್ಕೆ ತಂದರು ಎಂಬುದನ್ನು ತೋರಿಸುತ್ತದೆ. ನಾವೂ ಹಾಗೆಯೇ ಮಾಡಬೇಕು.

ಇಂದು ಪುನರುತ್ಥಾನದ ವಿಸ್ಮಯಕರ ಘಟನೆಯ ಕುರಿತು ಧ್ಯಾನಿಸಿ; ಈ ವಾರ ಈ ವಿನಮ್ರ ಆರಾಧನೆಯಲ್ಲಿ ಸಮಯ ಕಳೆಯಿರಿ. ಪುನರುತ್ಥಾನಗೊಂಡ ಕ್ರಿಸ್ತನ ಮುಂದೆ ಪ್ರಣಾಮ ಸಲ್ಲಿಸುತ್ತಾ ನಿಜವಾಗಿಯೂ ನೆಲಕ್ಕೆ ಬಾಗಿ ನಮಸ್ಕರಿಸಲು ಪ್ರಯತ್ನಿಸಿ. ಇದನ್ನು ನಿಜವಾಗಿಯೂ ಮಾಡಿ ನೋಡಿರಿ. ಬಹುಶಃ ನಿಮ್ಮ ಕೋಣೆಯ ನಿಶ್ಶಬ್ದತೆಯಲ್ಲಿ, ಅಥವಾ ದೇವಾಲಯದಲ್ಲಿ, ಇಲ್ಲವೇ ಈ ಪೂಜೆ ಮತ್ತು ಆರಾಧನೆಯ ಕ್ರಿಯೆಯನ್ನು ದೈಹಿಕವಾಗಿ, ಮುಕ್ತವಾಗಿ ವ್ಯಕ್ತಪಡಿಸಲು ನಿಮಗೆ ಅನುಕೂಲವಾಗುವ ಯಾವುದೇ ಸ್ಥಳದಲ್ಲಿ ಹೀಗೆ ಮಾಡಬಹುದು. ಹೀಗೆ ಮಾಡುವಾಗ ಪುನರುತ್ಥಾನಗೊಂಡ ಪ್ರಭುವನ್ನು ಮುಖಾಮುಖಿಯಾಗಿ ಎದುರುಗೊಳ್ಳಲು ನಿಮ್ಮನ್ನು ತೆರೆದುಕೊಳ್ಳಿ. ನಿಮ್ಮ ಜೀವನವನ್ನು ಇನ್ನಷ್ಟು ಆಳವಾಗಿ ಪರಿವರ್ತಿಸಲು ಅವರಿಗೆ ಅವಕಾಶ ನೀಡಿ!

ಪ್ರಭುವೇ, ನಾನು ನಿಜವಾಗಿಯೂ ವಿಶ್ವಾಸಿಸುತ್ತೇನೆ.  ನೀವು ಪಾಪ ಮತ್ತು ಮರಣದ ಮೇಲೆ ವಿಜಯಿಯಾಗಿ ಪುನರುತ್ಥಾನಗೊಂಡಿದ್ದೀರಿ ಎಂದು ನಾನು ವಿಶ್ವಾಸಿಸುತ್ತೇನೆ.  ವಿಶೇಷವಾಗಿ ಈ ಪಾಸ್ಕ ಅಷ್ಟಕದಲ್ಲಿ, ನಿಮ್ಮ ಪುನರುತ್ಥಾನದ ಮಹಾ ರಹಸ್ಯವನ್ನು ಪ್ರವೇಶಿಸಲು ನನಗೆ ಅನುಗ್ರಹಿಸಿ.  ಈ ಅಪಾರ ಮಹಿಮೆಯನ್ನು ನನ್ನ ಜೀವನದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಅನುಭವಿಸಲು ನನಗೆ ಸಹಾಯಮಾಡಿ.  ಪ್ರಿಯ ಪ್ರಭುವೇ, ನಾನು ಗಾಢವಾದ ಪ್ರೀತಿಯಿಂದ ನಿಮ್ಮನ್ನು ಆರಾಧಿಸುತ್ತೇನೆ. ನನ್ನ ಸರ್ವಶಕ್ತಿಯಿಂದ ನಿಮ್ಮನ್ನು ಆರಾಧಿಸಲು ನನಗೆ ಸಹಾಯಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ನಾಲ್ಕನೆಯ ದಿನ: ದೈವಿಕ ಕರುಣೆಯ ಭಾನುವಾರದ ಸಿದ್ಧತೆಗಾಗಿ ನೊವೇನಾ

ಪಾಸ್ಕ ಪ್ರಾರ್ಥನೆಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಜಪಮಾಲೆ – ಮಹಿಮೆಯ ರಹಸ್ಯಗಳು (ಪವಿತ್ರ ಗ್ರಂಥದೊಂದಿಗೆ)

ದೈವಿಕ ಕರುಣೆಯ ಕುರಿತು ದೈನಂದಿನ ಧ್ಯಾನಗಳು

ಸಂತ ಫೌಸ್ತೀನಾರ ದೈವಿಕ ಕರುಣೆಯ ಲಿತನಿ

ದೈವಿಕ ಕರುಣೆಯಲ್ಲಿ ಭರವಸೆ

ಕರುಣೆಯ ವರ್ಷಕ್ಕಾಗಿ ಪ್ರಾರ್ಥನೆ

ದೈವಿಕ ಕರುಣೆಯ ಜಪಮಾಲೆ

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲೆ ಪ್ರದರ್ಶಿಸಿರುವ ಚಿತ್ರ: ಮಗ್ದಲದ ಮರಿಯಳಿಗೆ ಯೇಸು ಕ್ರಿಸ್ತರ ದರ್ಶನ ಚಿತ್ರಕಾರ: ಅಲೆಕ್ಸಾಂಡರ್ ಇವಾನೋವ್, ವಿಕಿಮೀಡಿಯಾ ಕಾಮನ್ಸ್ ಮೂಲಕ


ಇ-ಪುಸ್ತಕ ಮತ್ತು ಕಾಗದದ ಹೊದಿಕೆಯ ಪುಸ್ತಕ ರೂಪಗಳಲ್ಲಿ ಲಭ್ಯವಿದೆ:

Amazon –  Barnes and Noble – Google Play – iTunes

ದೈವಿಕ ಕರುಣೆಯ ಕುರಿತು ದೈನಂದಿನ ಧ್ಯಾನಗಳು:
ಸಂತ ಫೌಸ್ತೀನಾರೊಂದಿಗೆ 365 ದಿನಗಳು


  Subscribe to our YouTube channel  
  to be notified about new content.