ಕನ್ನಡ

ದೇವರ ಪರಿಪೂರ್ಣ ಯೋಜನೆ

ಡಿಸೆಂಬರ್ 17, 2019
ಮಂಗಳವಾರ, ಆಗಮನ ಕಾಲದ ವಾರದ ದಿನ
ಇಂದಿನ ವಾಚನಗಳು

ಎಲೆಯಾಜರನು ಮತ್ತಾನನ ತಂದೆಯಾದನು, ಮತ್ತಾನನು ಯಾಕೋಬನ ತಂದೆಯಾದನು, ಯಾಕೋಬನು ಮರಿಯಳ ಪತಿಯಾದ ಯೋಸೇಫನ ತಂದೆಯಾದನು.  ಅವಳಿಂದ ಕ್ರಿಸ್ತನೆಂದು ಕರೆಯಲ್ಪಡುವ ಯೇಸು ಜನಿಸಿದರು.  ಮತ್ತಾಯ 1:15b-16

ಕ್ರಿಸ್ತನ ಜನನಕ್ಕೆ ನೇರವಾದ ಸಿದ್ಧತೆಯ “ಅಷ್ಟದಿನಾವಧಿ”ಯನ್ನು ನಾವು ಇಂದು ಆರಂಭಿಸುತ್ತೇವೆ.  ಈ ಅಷ್ಟದಿನಾವಧಿಯ ನಂತರ ನಾವು ಮಹಿಮಾಭರಿತ ಕ್ರಿಸ್ತ ಜಯಂತಿಯ ಮಹೋತ್ಸವವನ್ನು ಪ್ರವೇಶಿಸುತ್ತೇವೆ!

ಇಂದು ಯೇಸುವಿನ ಪೂರ್ವಜರ ದೀರ್ಘ ವಂಶಾವಳಿಯನ್ನು ನಮ್ಮ ಮುಂದಿಡಲಾಗಿದೆ.  ಮತ್ತಾಯನ ಸುವಾರ್ತೆಯ ಮೊದಲ ಅಧ್ಯಾಯದ 2-16 ವಚನಗಳು ಹದಿನಾಲ್ಕು ಪೂರ್ವಜರ ಮೂರು ಸರಣಿಗಳನ್ನು ನಮಗೆ ನೀಡುತ್ತವೆ.  ಈ ವಂಶಾವಳಿ ಅಬ್ರಹಾಮನಿಂದ ಆರಂಭವಾಗಿ ಯೇಸುವಿನಲ್ಲಿ ಕೊನೆಗೊಳ್ಳುತ್ತದೆ.  ಈ ವಂಶಾವಳಿಯಿಂದಲೂ ಅದರಲ್ಲಿ ಹೆಸರಿಸಲಾದ ಎಲ್ಲರಿಂದಲೂ ಪವಿತ್ರ ಗ್ರಂಥದ ವಿದ್ವಾಂಸರು ಅನೇಕ ಆಸಕ್ತಿದಾಯಕ ಸಂಗತಿಗಳನ್ನು ಕಂಡುಕೊಳ್ಳಬಹುದಾದರೂ, ಇದರ ಅರ್ಥದ ತಿರುಳು ಮೊದಲನೆಯ ವಚನದಲ್ಲಿದೆ: “ದಾವೀದನ ಪುತ್ರರೂ ಅಬ್ರಹಾಮನ ಪುತ್ರರೂ ಆದ ಯೇಸು ಕ್ರಿಸ್ತರ ವಂಶಾವಳಿಯ ಪುಸ್ತಕ.”  ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನಕ್ಕೂ ದೇವಪುತ್ರರಲ್ಲಿ ಅದರ ನೆರವೇರಿಕೆಗೂ ಇರುವ ನೇರ ಸಂಬಂಧವನ್ನು ಇದು ತೋರಿಸುತ್ತದೆ.

ಈ ವಾಗ್ದಾನದ ನೆರವೇರಿಕೆಯಲ್ಲಿ ನಾವು ಕಾಣುವ ಒಂದು ಸಂಗತಿಯೆಂದರೆ, ದೇವರು ನಿಷ್ಠಾವಂತರು ಎಂಬ ಸತ್ಯ.  ಅಬ್ರಹಾಮನಿಗೆ ಅವರು ಮಾಡಿದ ವಾಗ್ದಾನವು ನೆರವೇರಲು ಶತಮಾನಗಳೇ ಬೇಕಾದವು ಎಂಬುದು ನಿಜ. ಆದರೆ ಅದು ನೆರವೇರಿತು. ತನ್ನ ವಂಶಸ್ಥರಲ್ಲೊಬ್ಬರು ಲೋಕದ ರಕ್ಷಕರಾಗಿ ಮಹಿಮೆಯಿಂದ ಜನಿಸುವುದನ್ನು ಕಂಡಾಗ ಅಬ್ರಹಾಮನು ಬಹಳವಾಗಿ ಆನಂದಿಸಿದನೆಂಬುದರಲ್ಲಿ ಸಂದೇಹವೇ ಇಲ್ಲವೆನ್ನಬಹುದು.  

ದೇವರ ಸಮಯವೂ ಅವರ ಮಾರ್ಗಗಳೂ ನಾವು ಮೊದಲಿಗೆ ಊಹಿಸುವುದಕ್ಕಿಂತ ಹೆಚ್ಚಾಗಿ ಭಿನ್ನವಾಗಿರುತ್ತವೆ ಎಂಬುದನ್ನೂ ಇದು ನಮಗೆ ತಿಳಿಸುತ್ತದೆ.  ನಾವು ಅನೇಕ “ಒಳ್ಳೆಯ” ಆಲೋಚನೆಗಳನ್ನು ರೂಪಿಸಿಕೊಂಡು ಅವು ನೆರವೇರುತ್ತವೆಂದು ಆಶಿಸಬಹುದು.  ಆದರೆ ನಾವು ಆಶಿಸಿದಂತೆ ಅವು ತಕ್ಷಣವೇ ನೆರವೇರದಿದ್ದಾಗ, ಅನೇಕ ಬಾರಿ ನಾವು ನಿರುತ್ಸಾಹಗೊಳ್ಳಬಹುದು.  

ದೇವರ ಪರಿಪೂರ್ಣ “ದೀರ್ಘಕಾಲೀನ” ಯೋಜನೆಯ ಪಾಠವನ್ನು ಇಂದು ಕಲಿಯಿರಿ.  ತಾವು ಏನು ಮಾಡುತ್ತಿದ್ದೇವೆಂದು ಅವರಿಗೆ ತಿಳಿದಿದೆ; ನಮ್ಮೆಲ್ಲರಿಗಾಗಿ ತಮ್ಮ ಯೋಜನೆಯನ್ನು ಅವರು ನೆರವೇರಿಸುತ್ತಿದ್ದಾರೆ.  ರಕ್ಷಣೆ ಮತ್ತು ಶಾಂತಿಯತ್ತ ಕೊಂಡೊಯ್ಯುವ ಹಾದಿಯಲ್ಲಿ ಅವರು ನಮ್ಮನ್ನು ನಿಧಾನವಾಗಿ, ಉದ್ದೇಶಪೂರ್ವಕವಾಗಿ ನಡೆಸುತ್ತಿದ್ದಾರೆ.  ಅದು ನಾವು ಕಾರ್ಯನಿರ್ವಹಿಸುವ ರೀತಿಯಲ್ಲಿರದಿರಬಹುದು, ಆದರೆ ಅದೇ ಪರಿಪೂರ್ಣ ಮಾರ್ಗ.  

ನಿಮ್ಮ ಜೀವನಕ್ಕಾಗಿ ದೇವರು ಹೊಂದಿರುವ ಯೋಜನೆಯ ಕುರಿತು ಇಂದು ಚಿಂತಿಸಿ.  ತಾಳ್ಮೆ ಮತ್ತು ದೀರ್ಘಸಹನೆಗೆ ಅವರು ನಿಮ್ಮನ್ನು ಕರೆಯುತ್ತಿದ್ದಾರೆಯೇ?  ಕಷ್ಟಕರವಾದರೂ ಸಂಪೂರ್ಣವಾದ ಭರವಸೆಯನ್ನು ಅವರು ನಿಮ್ಮಿಂದ ಬಯಸುತ್ತಿದ್ದಾರೆಯೇ?  ನಿಮ್ಮ ಸ್ವಂತ ಆಲೋಚನೆಗಳನ್ನೂ ಮಹತ್ವಾಕಾಂಕ್ಷೆಗಳನ್ನೂ ತ್ಯಜಿಸಿ ಶರಣಾಗಬೇಕೆಂದು ಅವರು ಬಯಸುತ್ತಿದ್ದಾರೆಯೇ?  ಹೌದು, ಇವೆಲ್ಲವನ್ನೂ ಇನ್ನೂ ಹೆಚ್ಚಿನದನ್ನೂ ಅವರು ಬಯಸುತ್ತಾರೆ.  ಸ್ವರ್ಗದಲ್ಲಿರುವ ನಮ್ಮ ತಂದೆಯ ಹೃದಯದಲ್ಲಿರುವ ಪರಿಪೂರ್ಣ ಯೋಜನೆಗೆ ನಿಮ್ಮನ್ನು ಮತ್ತೊಮ್ಮೆ ಸಮರ್ಪಿಸಿಕೊಳ್ಳಿರಿ; ಆಗ ಅವರು ದಾರಿಯ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮನ್ನು ನಡೆಸುವರು.

ಪ್ರಭುವೇ, ನಿನ್ನ ಮಾರ್ಗಗಳು ಪರಿಪೂರ್ಣವೆಂದೂ ನಿನ್ನ ಯೋಜನೆಗಳು ಅನೇಕ ಬಾರಿ ನನ್ನ ಯೋಜನೆಗಳಿಗಿಂತ ಭಿನ್ನವಾಗಿರುತ್ತವೆಂದೂ ನನಗೆ ತಿಳಿದಿದೆ.  ನನ್ನ ಸ್ವಂತ ಆಲೋಚನೆಗಳನ್ನೂ ಬಯಕೆಗಳನ್ನೂ ಬಿಟ್ಟುಬಿಡಲು ಮತ್ತು ನೀನು ನನಗಾಗಿ ಸಿದ್ಧಪಡಿಸಿರುವ ಎಲ್ಲದಕ್ಕೂ ಭರವಸೆಯಿಂದ ಇನ್ನೂ ಆಳವಾಗಿ ಶರಣಾಗಲು ನನಗೆ ಸಹಾಯ ಮಾಡು.  ಪ್ರಭುವೇ, ನಿನ್ನ ಜ್ಞಾನವು ಪರಿಪೂರ್ಣವಾಗಿದೆ.  ಇದನ್ನು ಪೂರ್ಣಹೃದಯದಿಂದ ನಂಬಲು ನನಗೆ ಸಹಾಯ ಮಾಡು.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಆಗಮನಕಾಲದ ಸಂಪನ್ಮೂಲಗಳು

ಇಂದಿನ ಸಂತರು/ಹಬ್ಬಗಳು