ಕನ್ನಡ

ಯೇಸುವಿನೊಂದಿಗೆ ಆತ್ಮಗಳಿಗಾಗಿ ಬಲೆ ಬೀಸುವುದು

ಏಪ್ರಿಲ್ 17, 2020
ಪಾಸ್ಕ ಹಬ್ಬದ ಅಷ್ಟಕದ ಶುಕ್ರವಾರ
ಇಂದಿನ ವಾಚನಗಳು

“ದೋಣಿಯ ಬಲಗಡೆಯಲ್ಲಿ ಬಲೆ ಬೀಸಿ; ನಿಮಗೆ ಏನಾದರೂ ಸಿಗುತ್ತದೆ.” ಆಗ ಅವರು ಬಲೆ ಬೀಸಿದರು; ಮೀನುಗಳು ಎಷ್ಟೋ ಹೆಚ್ಚಾಗಿದ್ದುದರಿಂದ ಬಲೆಯನ್ನು ಎಳೆಯಲು ಅವರಿಗೆ ಸಾಧ್ಯವಾಗಲಿಲ್ಲ.  ಯೋಹಾನ 21:6

ಮೇಲಿನ ವಾಕ್ಯಭಾಗದಲ್ಲಿ ಯೇಸು ಪ್ರೇಷಿತರಿಗೆ ನೀಡಿದ ಅನುಭವವನ್ನು ಪಡೆಯಲು ಪ್ರತಿಯೊಬ್ಬ ಮೀನುಗಾರನೂ ಬಯಸುತ್ತಾನೆ.  ಪ್ರೇಷಿತರು ರಾತ್ರಿಯಿಡೀ ಮೀನು ಹಿಡಿಯಲು ಪ್ರಯತ್ನಿಸಿದರೂ ಏನೂ ಸಿಕ್ಕಿರಲಿಲ್ಲ.  ನಂತರ ಬೆಳಿಗ್ಗೆ ಯೇಸು ದಡದಲ್ಲಿ ಕಾಣಿಸಿಕೊಂಡರು; ಆದರೆ ಅದು ಅವರೇ ಎಂದು ಪ್ರೇಷಿತರಿಗೆ ತಿಳಿಯಲಿಲ್ಲ.  ಆಗ ಅವರು ದೋಣಿಯ ಬಲಗಡೆಯಲ್ಲಿ ಬಲೆ ಬೀಸುವಂತೆ ಅವರಿಗೆ ಒಂದು ಸರಳ ಆಜ್ಞೆಯನ್ನು ನೀಡಿದರು.  ಅವರು ಹಿಡಿದ ಮೀನುಗಳು ಎಷ್ಟೋ ಹೆಚ್ಚಾಗಿದ್ದುದರಿಂದ ಅವುಗಳನ್ನು ಎಳೆಯಲು ಅವರಿಗೆ ಸಾಧ್ಯವಾಗಲಿಲ್ಲ.  ಎಂಥ ರೋಮಾಂಚಕ ಮೀನುಗಾರಿಕೆ!

ಇಷ್ಟು ಮೀನುಗಳು ಸಿಕ್ಕಿದ್ದು, ಅವರ ಕೆಲಸದಲ್ಲಿ ಸಹಾಯ ಮಾಡಲು ಯೇಸು ತೋರಿದ ಉಪಕಾರಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಂದಿತ್ತು.  ಅದರಲ್ಲಿ ಬಹಳ ಆಳವಾದ ಸಾಂಕೇತಿಕ ಅರ್ಥವಿತ್ತು.  ಯೇಸು ಪ್ರೇಷಿತರಿಗೆ ಹೊಸ ಕರೆಯನ್ನು ನೀಡುತ್ತಿದ್ದರು ಎಂಬುದೇ ಅದರ ಮುಖ್ಯ ಸಾಂಕೇತಿಕ ಅರ್ಥ.  ಇನ್ನು ಮುಂದೆ ಅವರು ಕೇವಲ ಮೀನುಗಳಿಗಾಗಿ ಬಲೆ ಬೀಸುವವರಾಗಿರದೆ, ಆತ್ಮಗಳಿಗಾಗಿ ಬಲೆ ಬೀಸಬೇಕಾಗಿತ್ತು.  ಇಲ್ಲಿ ಮುಖ್ಯವಾದ ಸಂಗತಿಯೆಂದರೆ, ಅವರು ತಮ್ಮ ಸ್ವಂತ ಪ್ರಯತ್ನದಿಂದ ಇದನ್ನು ಮಾಡಲು ಯತ್ನಿಸಿದರೆ, ಬರಿಗೈಯಲ್ಲಿ ಹಿಂದಿರುಗಬೇಕಾಗುತ್ತಿತ್ತು.  ಆದರೆ ಪ್ರಭುವಿನ ಆಜ್ಞೆಯಂತೆ, ಅವರ ರೀತಿಯಲ್ಲಿ, ಅವರು ನಿಗದಿಪಡಿಸಿದ ಸಮಯದಲ್ಲಿ ಅದನ್ನು ಮಾಡಿದರೆ, ಅವರ ಪ್ರಯತ್ನಗಳು ಹೇರಳವಾದ ಒಳ್ಳೆಯ ಫಲವನ್ನು ನೀಡುತ್ತಿದ್ದವು.  ಅವರು ಊಹಿಸಬಹುದಾದುದಕ್ಕಿಂತಲೂ ಹೆಚ್ಚಿನ ಫಲವನ್ನು!

ಯೇಸುವಿನ ಈ ಅದ್ಭುತವು ಜಗತ್ತಿಗೆ ಸುವಾರ್ತೆ ಸಾರುವ ಆಜ್ಞೆಯನ್ನು ಪ್ರೇಷಿತರಿಗೆ (ಮತ್ತು ನಮಗೂ) ತಿಳಿಯಪಡಿಸಲು ಆರಂಭಿಸುತ್ತದೆ.  ತಮ್ಮ ರಕ್ಷಣಾ ಕಾರ್ಯವನ್ನು ನೆರವೇರಿಸಲು ಯೇಸು ಪ್ರೇಷಿತರಿಗೆ ಅಂತಿಮ ಸೂಚನೆಗಳನ್ನು ನೀಡುವಾಗ, ಅವರ ಪುನರುತ್ಥಾನದ ನಂತರ ಈ ಪ್ರಕಟಣೆ ದೊರಕುತ್ತದೆ.  ಶುಭಸಂದೇಶವನ್ನು ಹರಡಲು ನಮಗಿರುವ ಕರೆಯನ್ನು ನಾವು ಈ ಅದ್ಭುತದಲ್ಲಿ ಕಾಣಬೇಕು.  ಯೇಸುವಿನ ಆಜ್ಞೆಯ ಮೇರೆಗೆ ಮಾತ್ರ, ಅವರ ರೀತಿಯಲ್ಲಿ ಮತ್ತು ಅವರು ನಿಗದಿಪಡಿಸಿದ ಸಮಯದಲ್ಲಿ ಶುಭಸಂದೇಶವನ್ನು ಹರಡಬೇಕೆಂಬ ಆಜ್ಞೆಯನ್ನೂ ನಾವು ಈ ಅದ್ಭುತದಲ್ಲಿ ಕಾಣಬೇಕು.

ಕೆಲವೊಮ್ಮೆ ಕ್ರೈಸ್ತರು ಸುವಾರ್ತೆಯನ್ನು ಹರಡಲು ಅನೇಕ “ಒಳ್ಳೆಯ” ಆಲೋಚನೆಗಳನ್ನು ಮುಂದಿಡುತ್ತಾರೆ.  ಆದರೆ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ಪ್ರಭುವು ಮುಂದಾಗಿ ನಡೆಸುತ್ತಾ ಮಾರ್ಗದರ್ಶನ ನೀಡದಿದ್ದರೆ ಸುವಾರ್ತೆಯ ಶುಭಸಂದೇಶವನ್ನು ಹರಡಲು ನಮಗೆ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳುವುದೇ ಮುಖ್ಯ.  ನಾವು ಅವರಿಗಾಗಿ ಕಾದು, ಅವರು ಮಾತನಾಡಲು ಅವಕಾಶ ನೀಡಬೇಕು ಎಂಬುದನ್ನು ಇದು ತಿಳಿಸುತ್ತದೆ.  ನಾವು ಅವರ ಸ್ವರಕ್ಕೆ ಕಿವಿಗೊಟ್ಟು, ಅವರು ಮುನ್ನಡೆಸಿದಾಗ ಮಾತ್ರ ಸ್ಪಂದಿಸಬೇಕು.  ಸುವಾರ್ತಾ ಪ್ರಚಾರವು ನಮ್ಮ ಸ್ವಂತ ಪ್ರಯತ್ನದಿಂದ ಮಾಡುವ ಕೆಲಸಕ್ಕಿಂತಲೂ, ಯೇಸುವಿಗೆ ನಾವು ನೀಡುವ ಪ್ರತಿಸ್ಪಂದನೆಯಾಗಿದೆ.  ಈ ಅದ್ಭುತ ಘಟನೆಯ ಮುಖ್ಯ ಸಂದೇಶ ಇದೇ.

ನಾವು ಪಾಸ್ಕ ದಿನದ ಆಚರಣೆಯನ್ನು ಮುಂದುವರಿಸುತ್ತಿರುವಾಗ, ಸುವಾರ್ತೆ ಸಾರುವ ನಮ್ಮ ಸ್ವಂತ ಜವಾಬ್ದಾರಿಯನ್ನು ಕುರಿತು ಪ್ರತಿಯೊಬ್ಬರೂ ಚಿಂತಿಸಲು ಇದು ಒಳ್ಳೆಯ ಸಮಯ.  ಯೇಸುವಿನ ಈ ಕಾರ್ಯದಲ್ಲಿ ಪಾಲ್ಗೊಳ್ಳಲು ನಮ್ಮೆಲ್ಲರಿಗೂ ಕರೆಯಿದೆ.  ನಮ್ಮ ಜೀವನದ ಕರೆ ಮತ್ತು ಧ್ಯೇಯಕ್ಕೆ ಅನುಗುಣವಾಗಿ ಅದು ನಮ್ಮಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆ ರೂಪಗಳನ್ನು ತಾಳುತ್ತದೆ.  ಆದರೆ ನಿಜವಾದ ಪ್ರಶ್ನೆ ಇದು: “ಯೇಸು ನನಗೆ ತೋರಿಸುತ್ತಿರುವ ರೀತಿಯಲ್ಲಿ ಸುವಾರ್ತೆ ಸಾರಲು ಅವರು ನೀಡುವ ಕರೆಗೆ ನಾನು ಸ್ಪಂದಿಸುತ್ತಿದ್ದೇನೆಯೇ?”  ಇದು ಮುಖ್ಯವಾದ ಪ್ರಶ್ನೆ.  ಯೇಸು ನಮಗೆ ನೀಡುವ ನಿರ್ದಿಷ್ಟ ಕಾರ್ಯವನ್ನು ಬೇರೆ ಯಾರಿಗೂ ವಹಿಸಿಕೊಟ್ಟಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು.  ಅಲ್ಲದೆ, ಅವರು ನಿಜವಾಗಿಯೂ ನಮ್ಮನ್ನು ಬಳಸಿಕೊಳ್ಳಲು ಬಯಸುತ್ತಾರೆ.  

ನಮ್ಮ ಪ್ರಭು ಪ್ರೇಷಿತರಿಗೆ ನೀಡಿದ ಈ ಆಜ್ಞೆಯನ್ನು ಕುರಿತು ಇಂದು ಚಿಂತಿಸಿ. ತಮ್ಮ ಪವಿತ್ರ ಚಿತ್ತಕ್ಕೆ ಅನುಗುಣವಾಗಿ “ಆತ್ಮಗಳಿಗಾಗಿ ಬಲೆ ಬೀಸಲು” ನಿಮ್ಮನ್ನು ಕರೆಯುತ್ತಾ, ಅವರು ನಿಮಗೂ ಇದೇ ಆಜ್ಞೆಯನ್ನು ನೀಡುವುದನ್ನು ಆಲಿಸಿ.  ಈ ವಾರ ಪ್ರಭು ನಿಮ್ಮೊಂದಿಗೆ ಮಾತನಾಡಲು ಅವಕಾಶ ನೀಡಿ ಮತ್ತು ಅವರ ಮಾರ್ಗದರ್ಶನಕ್ಕೆ ತೆರೆದ ಮನಸ್ಸಿನವರಾಗಿರಿ.  ದೇವರು ನಿಮ್ಮನ್ನು ಬಳಸಿಕೊಳ್ಳಲು ಬಯಸುತ್ತಾರೆ; ಆದ್ದರಿಂದ ಅವರಿಗೆ ಅವಕಾಶ ನೀಡುವುದನ್ನು ಮರೆಯದಿರಿ!

ಪ್ರಭುವೇ, ನೀವು ನನ್ನನ್ನು ಬಳಸಿಕೊಳ್ಳಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ.  ನಿಮ್ಮ ಚಿತ್ತಕ್ಕೆ ಅನುಗುಣವಾಗಿ ಸುವಾರ್ತೆ ಸಾರಲು ನಾನು ನಿಜವಾಗಿಯೂ ಬಯಸುತ್ತೇನೆ.  ನಿಮ್ಮ ಕರೆಗೆ ಭರವಸೆಯಿಂದ ಸ್ಪಂದಿಸಲು ನನಗೆ ಸಹಾಯ ಮಾಡಿ; ನೀವು ನೀಡುವ ಮಾರ್ಗದರ್ಶನಕ್ಕೆ ಪ್ರಾಮಾಣಿಕವಾಗಿ ಕಿವಿಗೊಡಲು ನನಗೆ ಸಹಾಯ ಮಾಡಿ.  ಪ್ರಿಯ ಪ್ರಭುವೇ, ನಿಮ್ಮ ರಾಜ್ಯಕ್ಕಾಗಿ ಅನೇಕ ಆತ್ಮಗಳನ್ನು ರಕ್ಷಿಸಲು ನನ್ನನ್ನು ಬಳಸಿಕೊಳ್ಳಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಪಾಸ್ಕ ಹಬ್ಬಕ್ಕಾಗಿ ಇನ್ನಷ್ಟು

ಎಂಟನೇ ದಿನ: ದೈವಿಕ ಕರುಣೆಯ ಭಾನುವಾರದ ಸಿದ್ಧತೆಗಾಗಿ ನೊವೆನಾ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು



ದೈವಿಕ ಕರುಣೆಯ ಕುರಿತು ದೈನಂದಿನ ಚಿಂತನೆಗಳು:
ಸಂತ ಫೌಸ್ತೀನಾರೊಂದಿಗೆ 365 ದಿನಗಳು