ಕನ್ನಡ

ದೇವರ ಕಾಳಜಿಪೂರ್ವಕ ಗಮನ

ಅಕ್ಟೋಬರ್ 16, 2020
ಸಾಮಾನ್ಯ ಕಾಲದ ಇಪ್ಪತ್ತೆಂಟನೆಯ ವಾರದ ಶುಕ್ರವಾರ
ಇಂದಿನ ವಾಚನಗಳು

ಸಂತ ಹೆಡ್ವಿಗ್, ಸನ್ಯಾಸಿನಿ—ಐಚ್ಛಿಕ ಸ್ಮರಣೆ

ಸಂತ ಮಾರ್ಗರೇಟ್ ಮೇರಿ ಅಲಕೋಕ್, ಕನ್ಯೆ—ಐಚ್ಛಿಕ ಸ್ಮರಣೆ

“ಐದು ಗುಬ್ಬಚ್ಚಿಗಳನ್ನು ಎರಡು ಸಣ್ಣ ನಾಣ್ಯಗಳಿಗೆ ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದೂ ದೇವರ ಗಮನದಿಂದ ತಪ್ಪಿಹೋಗಿಲ್ಲ. ನಿಮ್ಮ ತಲೆಯ ಕೂದಲುಗಳನ್ನೂ ಎಣಿಸಲಾಗಿದೆ. ಭಯಪಡಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”  ಲೂಕ 12:6-7

“ಭಯಪಡಬೇಡಿ.”  ಪವಿತ್ರ ಗ್ರಂಥದಲ್ಲಿ ಈ ಮಾತುಗಳು ಆಗಾಗ್ಗೆ ಮರುಕಳಿಸುತ್ತವೆ.  ಸ್ವರ್ಗದಲ್ಲಿರುವ ತಂದೆಯು ನಮ್ಮ ಜೀವನದ ಪ್ರತಿಯೊಂದು ಅತಿ ಚಿಕ್ಕ ವಿವರಕ್ಕೂ ಗಮನಕೊಡುವುದರಿಂದ ನಾವು ಭಯಪಡಬಾರದೆಂದು ಈ ವಾಕ್ಯಭಾಗದಲ್ಲಿ ಯೇಸು ಹೇಳುತ್ತಾರೆ.  ಯಾವುದೂ ದೇವರ ಗಮನದಿಂದ ತಪ್ಪಿಹೋಗಿಲ್ಲ.  ದೇವರು ಗುಬ್ಬಚ್ಚಿಗಳಿಗೂ ಗಮನಕೊಡುತ್ತಾರೆಂದರೆ, ನಮಗೆ ಇನ್ನೂ ಹೆಚ್ಚು ಗಮನಕೊಡುತ್ತಾರೆ.  ಇದು ನಮಗೆ ಶಾಂತಿ ಮತ್ತು ಭರವಸೆಯ ಭಾವವನ್ನು ನೀಡಬೇಕು.

ಆದರೂ, ಇದನ್ನು ನಂಬುವುದು ಕಷ್ಟವಾಗಲು ಒಂದು ಕಾರಣವೆಂದರೆ, ದೇವರು ಬಹಳ ದೂರದಲ್ಲಿದ್ದಾರೆ ಮತ್ತು ನಮ್ಮ ಜೀವನದ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಅನೇಕ ಬಾರಿ ನಮಗೆ ಅನಿಸುವುದು.  ಹೀಗೆ ಅನಿಸಿದಾಗಲೆಲ್ಲ, ಅದು ಕೇವಲ ನಮ್ಮ ಭಾವನೆಯೇ ಹೊರತು ವಾಸ್ತವವಲ್ಲ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯ.  ವಾಸ್ತವವೇನೆಂದರೆ, ನಾವು ಊಹಿಸಬಹುದಾದುದಕ್ಕಿಂತಲೂ ಅನಂತವಾಗಿ ಹೆಚ್ಚು ಗಮನವನ್ನು ದೇವರು ನಮ್ಮ ಜೀವನದ ವಿವರಗಳಿಗೆ ಕೊಡುತ್ತಾರೆ.  ನಿಜಕ್ಕೂ, ನಾವು ನಮ್ಮ ಬಗ್ಗೆ ಗಮನಕೊಡುವುದಕ್ಕಿಂತ ಎಷ್ಟೋ ಹೆಚ್ಚು ಗಮನವನ್ನು ಅವರು ನಮಗೆ ಕೊಡುತ್ತಾರೆ!  ಅವರು ಪ್ರತಿಯೊಂದು ವಿವರಕ್ಕೂ ಗಮನಕೊಡುವುದು ಮಾತ್ರವಲ್ಲ, ಪ್ರತಿಯೊಂದು ವಿವರವನ್ನೂ ಕುರಿತು ಆಳವಾದ ಕಾಳಜಿಯನ್ನು ಹೊಂದಿದ್ದಾರೆ.

ಹಾಗಾದರೆ, ಕೆಲವೊಮ್ಮೆ ದೇವರು ದೂರದಲ್ಲಿದ್ದಾರೆಂದು ಏಕೆ ಅನಿಸಬಹುದು?  ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಯಾವಾಗಲೂ ಒಂದು ಕಾರಣವಿರುತ್ತದೆ ಎಂಬುದರಲ್ಲಿ ನಮಗೆ ನಿಶ್ಚಯವಿರಬೇಕು.  ಬಹುಶಃ ನಾವು ಅವರಿಗೆ ಕಿವಿಗೊಡುತ್ತಿಲ್ಲ ಮತ್ತು ಪ್ರಾರ್ಥಿಸಬೇಕಾದ ರೀತಿಯಲ್ಲಿ ಪ್ರಾರ್ಥಿಸುತ್ತಿಲ್ಲ; ಹೀಗಾಗಿ ಅವರ ಗಮನವನ್ನೂ ಮಾರ್ಗದರ್ಶನವನ್ನೂ ನಾವು ಗುರುತಿಸಲು ವಿಫಲರಾಗುತ್ತಿದ್ದೇವೆ.  ಬಹುಶಃ ನಮ್ಮನ್ನು ತಮ್ಮ ಬಳಿಗೆ ಇನ್ನಷ್ಟು ಸೆಳೆಯಲು ಅವರು ಯಾವುದೋ ಒಂದು ವಿಷಯದಲ್ಲಿ ಮೌನವಾಗಿರಲು ಆರಿಸಿಕೊಂಡಿರಬಹುದು.  ಬಹುಶಃ ಅವರ ಮೌನವೇ ವಾಸ್ತವವಾಗಿ ಅವರ ಸಾನ್ನಿಧ್ಯ ಮತ್ತು ಚಿತ್ತದ ಬಹಳ ಸ್ಪಷ್ಟವಾದ ಸೂಚನೆಯಾಗಿರಬಹುದು.  

ಕೆಲವೊಮ್ಮೆ ನಮಗೆ ಹೇಗೇ ಅನಿಸಿದರೂ, ಮೇಲಿನ ವಾಕ್ಯಭಾಗದ ಸತ್ಯದಲ್ಲಿ ನಮಗೆ ನಿಶ್ಚಯವಿರಬೇಕು ಎಂಬುದನ್ನು ಇಂದು ಧ್ಯಾನಿಸಿ.  “ನೀವು ಅನೇಕ ಗುಬ್ಬಚ್ಚಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”  ದೇವರು ನಿಮ್ಮ ತಲೆಯ ಕೂದಲುಗಳನ್ನೂ ಎಣಿಸಿದ್ದಾರೆ.  ನಿಮ್ಮ ಜೀವನದ ಪ್ರತಿಯೊಂದು ಅಂಶವೂ ಅವರಿಗೆ ಸಂಪೂರ್ಣವಾಗಿ ತಿಳಿದಿದೆ.  ನಿಮ್ಮ ಬಗ್ಗೆ ಗಮನಹರಿಸುವ ಈ ದೇವರು ಪರಿಪೂರ್ಣ ಪ್ರೀತಿ ಮತ್ತು ಕರುಣೆಯ ದೇವರೂ ಆಗಿದ್ದಾರೆ, ಮತ್ತು ಜೀವನದಲ್ಲಿ ನಿಮಗೆ ಬೇಕಾದುದೆಲ್ಲವನ್ನೂ ಒದಗಿಸುತ್ತಾರೆ ಎಂಬ ಅರಿವಿನಲ್ಲಿ, ಈ ಸತ್ಯಗಳು ನಿಮಗೆ ಸಾಂತ್ವನ ಮತ್ತು ನಿರೀಕ್ಷೆಯನ್ನು ನೀಡಲು ಅವಕಾಶಕೊಡಿ.

ಪ್ರಭುವೇ, ನೀವು ನನ್ನನ್ನು ಪ್ರೀತಿಸುತ್ತೀರಿ ಮತ್ತು ನನ್ನ ಜೀವನದ ಪ್ರತಿಯೊಂದು ಭಾವನೆ, ಆಲೋಚನೆ ಹಾಗೂ ಅನುಭವವನ್ನು ಅರಿತಿದ್ದೀರಿ ಎಂದು ನನಗೆ ತಿಳಿದಿದೆ.  ನನ್ನ ಪ್ರತಿಯೊಂದು ಸಮಸ್ಯೆ ಮತ್ತು ಚಿಂತೆಯೂ ನಿಮಗೆ ತಿಳಿದಿದೆ.  ನಿಮ್ಮ ಪರಿಪೂರ್ಣ ಪ್ರೀತಿ ಮತ್ತು ಮಾರ್ಗದರ್ಶನವನ್ನು ಅರಿತು, ಎಲ್ಲ ವಿಷಯಗಳಲ್ಲಿಯೂ ನಿರಂತರವಾಗಿ ನಿಮ್ಮ ಕಡೆಗೆ ತಿರುಗಲು ನನಗೆ ಸಹಾಯಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಹೊಸದು! ಸಂತ ಇಗ್ನೇಷಿಯಸ್ ಅವರ ಆಧ್ಯಾತ್ಮಿಕ ಸಾಧನೆಗಳನ್ನು ವರ್ಷವಿಡೀ ಅನುಸರಿಸಲು ನೆರವಾಗುವ ಆಳಗಳನ್ನು ಶೋಧಿಸುವುದು, ಎಂಬ ಕೃತಿಯನ್ನು ಆರಂಭಿಸಲು ಅಕ್ಟೋಬರ್ ವರ್ಷದ ಅತ್ಯಂತ ಸೂಕ್ತ ಸಮಯ!

ಆಳವನ್ನು ಅನ್ವೇಷಿಸುವುದು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಸಂತ ಹೆಡ್ವಿಗ್, ಸನ್ಯಾಸಿನಿ ಹಾಗೂ ಸಂತ ಮಾರ್ಗರೇಟ್ ಮೇರಿ ಅಲಕೋಕ್, ಕನ್ಯೆ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಸಂತ ಸ್ನಾನಿಕ ಯೋಹಾನರ ಆಂಗ್ಲಿಕನ್ ದೇವಾಲಯದಲ್ಲಿ ಆಲ್ಫ್ರೆಡ್ ಹ್ಯಾಂಡಲ್ ರಚಿಸಿದ ವರ್ಣಗಾಜಿನ ಕಲಾಕೃತಿ