ಕನ್ನಡ

ಸುವಾರ್ತೆಗೆ ಮನತೆರೆಯುವುದು

ಅಕ್ಟೋಬರ್ 4, 2021
ಸಾಮಾನ್ಯ ಕಾಲದ ಇಪ್ಪತ್ತೇಳನೆಯ ವಾರದ ಸೋಮವಾರ
ಇಂದಿನ ವಾಚನಗಳು

ಅಸ್ಸಿಸಿಯ ಸಂತ ಫ್ರಾನ್ಸಿಸ್—ಸ್ಮರಣೆ

ವೀಡಿಯೊ

ಒಬ್ಬ ಧರ್ಮಶಾಸ್ತ್ರ ಪಂಡಿತನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಗುರುಗಳೇ, ನಿತ್ಯಜೀವವನ್ನು ಬಾಧ್ಯವಾಗಿ ಪಡೆಯಲು ನಾನೇನು ಮಾಡಬೇಕು?” ಎಂದು ಕೇಳಿದನು. ಲೂಕ 10:25

ಈ ಪ್ರಶ್ನೆ ಬಹಳ ಒಳ್ಳೆಯದು. ನಿತ್ಯಜೀವವನ್ನು ಬಾಧ್ಯವಾಗಿ ಪಡೆಯಲು ನಾವೇನು ಮಾಡಬೇಕೆಂಬುದನ್ನು ಅರಿತುಕೊಳ್ಳಲು ನಾವೆಲ್ಲರೂ ಪೂರ್ಣಹೃದಯದಿಂದ ಪ್ರಯತ್ನಿಸಬೇಕು. ಆದರೆ ಸಮಸ್ಯೆಯೇನೆಂದರೆ, ಈ ಧರ್ಮಶಾಸ್ತ್ರ ಪಂಡಿತನು ಪ್ರಾಮಾಣಿಕತೆಯಿಂದಲೂ ತೆರೆದ ಮನಸ್ಸಿನಿಂದಲೂ ಈ ಪ್ರಶ್ನೆಯನ್ನು ಕೇಳಲಿಲ್ಲ. ಬದಲಾಗಿ, ನಮ್ಮ ಪ್ರಭುವನ್ನು ಪರೀಕ್ಷಿಸಲು ಅವನು ಯೇಸುವಿಗೆ ಈ ಪ್ರಶ್ನೆಯನ್ನು ಕೇಳಿದನು. ಈ ಪಂಡಿತನು ಇತರ ಶಾಸ್ತ್ರಿಗಳು, ಫರಿಸಾಯರು, ಸದ್ದುಕಾಯರು ಮತ್ತು ಹಿರಿಯರಂತೆ ಯೇಸುವಿನ ಬಗ್ಗೆ ಅಸೂಯೆಪಟ್ಟು, ಅವರಲ್ಲಿ ತಪ್ಪು ಹುಡುಕಲು ಪ್ರಯತ್ನಿಸುತ್ತಿದ್ದನು. ಯೇಸು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿ ಬೋಧಿಸುತ್ತಿದ್ದಾರೆ ಎಂಬ ಕಾಳಜಿ ಈ ಪಂಡಿತನಿಗಿರುವಂತೆ ತೋರುತ್ತಿತ್ತು. ಆದರೆ ನಮ್ಮ ಪ್ರಭು ಏನು ಮಾಡುತ್ತಾರೆ? ಆ ಪ್ರಶ್ನೆಯನ್ನೇ ಪಂಡಿತನಿಗೆ ಹಿಂದಿರುಗಿಸಿ, “ಧರ್ಮಶಾಸ್ತ್ರದಲ್ಲಿ ಏನು ಬರೆಯಲಾಗಿದೆ? ನೀನು ಅದನ್ನು ಹೇಗೆ ಓದಿ ಅರ್ಥಮಾಡಿಕೊಳ್ಳುತ್ತೀಯೆ?” ಎಂದು ಕೇಳುವುದನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಪಂಡಿತನು ಸರಿಯಾಗಿ ಉತ್ತರಿಸುತ್ತಾನೆ. ಆಗ ಯೇಸು ಅವನಿಗೆ, “ನೀನು ಸರಿಯಾಗಿ ಉತ್ತರಿಸಿದ್ದೀಯೆ; ಅದರಂತೆ ಮಾಡು, ಆಗ ನೀನು ಜೀವಿಸುವೆ” ಎಂದು ಹೇಳುತ್ತಾರೆ. ಹೀಗೆ, ಯೇಸು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಈ ಸಂಭಾಷಣೆಯಲ್ಲಿ ಆಸಕ್ತಿಕರವೂ ಚಿಂತನೆಗೆ ಸಹಾಯಕವೂ ಆಗಿರುವುದು ಯೇಸು ಈ ಪಂಡಿತನಿಗೆ ಪ್ರತಿಕ್ರಿಯಿಸುವ ರೀತಿ. ಯೇಸುವಿಗೆ ಆ ಪಂಡಿತನ ಹೃದಯ ತಿಳಿದಿತ್ತು; ಅವನು ನಮ್ರತೆಯಿಂದಲೂ ತೆರೆದ ಮನಸ್ಸಿನಿಂದಲೂ ಕೇಳುತ್ತಿಲ್ಲ ಎಂಬುದೂ ತಿಳಿದಿತ್ತು. ಆದ್ದರಿಂದ ಯೇಸು ಬಹಳ ವಿವೇಕದಿಂದ ಪ್ರತಿಕ್ರಿಯಿಸಿ, ಆ ಧರ್ಮಶಾಸ್ತ್ರ ಪಂಡಿತನೇ ತನ್ನ ಪ್ರಶ್ನೆಗೆ ಉತ್ತರಿಸುವಂತೆ ಆಹ್ವಾನಿಸಿದರು. ನಮ್ಮ ಪ್ರಭುವಿನಂತೆ ಬೇರೆಯವರ ಹೃದಯವನ್ನು ಓದಲು ನಮಗೆ ಸಾಧ್ಯವಿಲ್ಲ. ಆದರೂ, ನಮ್ಮೊಂದಿಗೆ ಭಿನ್ನಾಭಿಪ್ರಾಯವಿರುವಾಗ ನಮ್ಮನ್ನು ವಂಚಿಸಲು, ಬಲೆಗೆ ಬೀಳಿಸಲು, ಪರೀಕ್ಷಿಸಲು ಮತ್ತು ನಮ್ಮ ಮಾತುಗಳನ್ನು ತಿರುಚಲು ಉದ್ದೇಶಿಸುವವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಪಾಠವನ್ನು ನಾವು ಅವರಿಂದ ಕಲಿಯಬೇಕು. ವಿಶ್ವಾಸ ಮತ್ತು ನೈತಿಕತೆಗೆ ಸಂಬಂಧಿಸಿದ ವಿಷಯಗಳಲ್ಲಿ ಇದು ವಿಶೇಷವಾಗಿ ಮುಖ್ಯವಾಗಿದೆ. ನೀವು ಪೂರ್ಣಹೃದಯದಿಂದ ಸುವಾರ್ತೆಯಂತೆ ಜೀವಿಸಲು ಶ್ರಮಿಸುತ್ತಿದ್ದರೆ, ಮತ್ತು ನೀವು ಅನುಸರಿಸಲು ಪ್ರಯತ್ನಿಸುತ್ತಿರುವ ಆ ಪವಿತ್ರ ಜೀವನದ ಕಾರಣದಿಂದ ಇತರರ “ಪರೀಕ್ಷೆ”ಯನ್ನು ಎದುರಿಸುತ್ತಿದ್ದರೆ, ಇಲ್ಲಿ ಯೇಸು ನಡೆದುಕೊಂಡ ರೀತಿಯನ್ನು ಚಿಂತಿಸಿ. ಬೇರೊಬ್ಬರು ನಮಗೆ ಸವಾಲೊಡ್ಡಿದಾಗ ಅಥವಾ ನಮ್ಮನ್ನು ಪರೀಕ್ಷಿಸಿದಾಗ, ನಾವು ಅನೇಕ ಬಾರಿ ನಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತೇವೆ; ಮನಸ್ಸಿಗೂ ನೋವು ಮಾಡಿಕೊಳ್ಳುತ್ತೇವೆ. ಇದರ ಪರಿಣಾಮವಾಗಿ, ಅಲ್ಪ ಫಲವನ್ನೋ ಯಾವುದೇ ಫಲವನ್ನೂ ನೀಡದ ವಾದಪ್ರತಿವಾದಗಳಲ್ಲಿ ನಾವು ತೊಡಗಬಹುದು. ಯೇಸು ವಾದಿಸಲಿಲ್ಲ. ಈ ಪರೀಕ್ಷೆಯು ತಮ್ಮನ್ನು ಎಡವಿಸುವಂತೆ ಅವರು ಬಿಡಲಿಲ್ಲ. ಬದಲಾಗಿ, ಸಂದೇಹಕ್ಕೆ ಆಸ್ಪದವಿಲ್ಲದ ಉತ್ತರಗಳನ್ನು ಮಾತ್ರ ನೀಡಿದರು. ಈ ಪಂಡಿತನಿಗೆ ಅತ್ಯಂತ ಆಳವಾದ ಆಧ್ಯಾತ್ಮಿಕ ಸತ್ಯಗಳಲ್ಲಿ ಆಸಕ್ತಿಯಿಲ್ಲವೆಂದು ಯೇಸುವಿಗೆ ತಿಳಿದಿತ್ತು. ಅವನಿಗೆ ತಪ್ಪು ಹುಡುಕುವುದರಲ್ಲಿ ಮಾತ್ರ ಆಸಕ್ತಿಯಿತ್ತು. ಆದ್ದರಿಂದ, ಸುವಾರ್ತೆಯ ಇನ್ನಷ್ಟು ಆಳವಾದ ಮತ್ತು ಪೂರ್ಣವಾದ ಸಂದೇಶವನ್ನು ಅವನಿಗೆ ನೀಡಲು ಸಾಧ್ಯವಾಗಲಿಲ್ಲ.

ಜೀವನದ ಅತ್ಯಂತ ಆಳವಾದ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಗಳನ್ನು ಹುಡುಕುತ್ತಾ, ತೆರೆದ ಹೃದಯದಿಂದ ಯೇಸುವಿನ ಬಳಿಗೆ ಬರುವುದು ಎಷ್ಟು ಮುಖ್ಯವೆಂಬುದನ್ನೂ ಈ ಭಾಗದಿಂದ ನಾವು ಕಲಿಯಬೇಕು. ನಾವು ಎಂದಿಗೂ ಯೇಸುವನ್ನು ಪರೀಕ್ಷಿಸಬಾರದು. ಬದಲಾಗಿ, ಅವರೇ ಎಲ್ಲ ಸತ್ಯದ ಮೂಲವೆಂದೂ, ಜೀವನದಲ್ಲಿ ನಾವು ಹುಡುಕುವ ಪ್ರತಿಯೊಂದು ಉತ್ತರವೂ ಅವರಲ್ಲಿದೆಯೆಂದೂ ನಮ್ರತೆಯಿಂದ ವಿಶ್ವಾಸಿಸಬೇಕು.

ಇಂದು ಎರಡು ವಿಷಯಗಳನ್ನು ಚಿಂತಿಸಿ. ಮೊದಲನೆಯದಾಗಿ, ಯೇಸು ಹೇಳಬೇಕೆಂದಿರುವ ಎಲ್ಲವನ್ನೂ ಸ್ವೀಕರಿಸಲು ನೀವು ಎಷ್ಟು ಸಂಪೂರ್ಣವಾಗಿ ಮನತೆರೆದಿದ್ದೀರಿ ಎಂಬುದನ್ನು ಚಿಂತಿಸಿ. “ನಿತ್ಯಜೀವವನ್ನು ಬಾಧ್ಯವಾಗಿ ಪಡೆಯಲು ನಾನೇನು ಮಾಡಬೇಕು?” ಎಂಬ ಈ ಪ್ರಶ್ನೆಯನ್ನು ನೀವು ನಮ್ಮ ಪ್ರಭುವಿಗೆ ಕೇಳಿದರೆ, ಯೇಸು ನಿಮಗೆ ಏನು ಹೇಳುತ್ತಿದ್ದರು? ಪ್ರಶ್ನೆಗಳ ರೂಪದಲ್ಲಿ ಸಾಮಾನ್ಯ ಉತ್ತರಗಳನ್ನು ಮಾತ್ರ ನೀಡಲು ಅವರಿಗೆ ಸಾಧ್ಯವಾಗುತ್ತಿತ್ತೇ? ಅಥವಾ ನಿಮ್ಮ ಹೃದಯದ ಮುಕ್ತತೆಯನ್ನೂ ಪ್ರಾಮಾಣಿಕತೆಯನ್ನೂ ಕಂಡು ಯೇಸು ನಿಮ್ಮೊಂದಿಗೆ ಬಹಳ ಆಳವಾಗಿ ಮತ್ತು ವಿವರವಾಗಿ ಮಾತನಾಡಲು ಸಾಧ್ಯವಾಗುತ್ತಿತ್ತೇ? ಎರಡನೆಯದಾಗಿ, ನಿಮ್ಮ ವಿಶ್ವಾಸವನ್ನು ಆಚರಿಸುವುದಕ್ಕಾಗಿ ಯಾರ ಮುಂದೆ ನೀವು ಪದೇಪದೇ ನಿಮ್ಮನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆಯೋ ಅವರನ್ನು ಕುರಿತು ಚಿಂತಿಸಿ. ಇದು ನಿಮ್ಮ ಅನುಭವವಾಗಿದ್ದರೆ, ಬಹುಶಃ ನಿಮ್ಮ ಧೋರಣೆಯನ್ನು ಮತ್ತೊಮ್ಮೆ ಪರಿಶೀಲಿಸಿ. ನಿಮ್ಮ ವಿಶ್ವಾಸದ ಅತ್ಯಂತ ಆಳವಾದ ಮುತ್ತುಗಳನ್ನು, ಪ್ರಾಮಾಣಿಕವಾಗಿ ಮನತೆರೆದು ಅವುಗಳನ್ನು ಪೂರ್ಣಹೃದಯದಿಂದ ಸ್ವೀಕರಿಸಲು ಬಯಸುವವರೊಂದಿಗೆ ಮಾತ್ರ ಹಂಚಿಕೊಳ್ಳಬೇಕೆಂಬುದನ್ನು ಅರಿತುಕೊಳ್ಳಿ.

ಆಳವಾದ ಜ್ಞಾನವಿವೇಕವುಳ್ಳ ನನ್ನ ಪ್ರಭುವೇ, ನಿಮ್ಮಲ್ಲಿ, ನಿಮ್ಮಲ್ಲಿ ಮಾತ್ರವೇ ಜೀವನದ ಪ್ರತಿಯೊಂದು ಉತ್ತರವೂ ಇದೆ. ಪವಿತ್ರತೆಯನ್ನೂ ಪರಿಪೂರ್ಣತೆಯನ್ನೂ ಸಾಧಿಸಲು ಜೀವನದಲ್ಲಿ ನಾನು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೀವು, ನೀವು ಮಾತ್ರವೇ ನನಗೆ ಪ್ರಕಟಿಸಬಲ್ಲಿರಿ. ದಯವಿಟ್ಟು ನನ್ನ ಹೃದಯವನ್ನು ತೆರೆಯಿರಿ. ಆಗ ನೀವು ನನಗೆ ಪ್ರಕಟಿಸಲು ಬಯಸುವ ಎಲ್ಲವನ್ನೂ ಸ್ವೀಕರಿಸಲು ಮನತೆರೆದು, ನಮ್ರತೆಯಿಂದಲೂ ಪ್ರಾಮಾಣಿಕತೆಯಿಂದಲೂ ನಾನು ನಿಮ್ಮ ಬಳಿಗೆ ಬರಬಲ್ಲೆ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತ – ಅಸ್ಸಿಸಿಯ ಸಂತ ಫ್ರಾನ್ಸಿಸ್

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ವಿಶೇಷ ಚಿತ್ರ:  ಯೇಸುವನ್ನು ಪರೀಕ್ಷಿಸಲು ಬರುವ ಫರಿಸಾಯರು ಮತ್ತು ಸದ್ದುಕಾಯರು — ಜೇಮ್ಸ್ ಟಿಸ್ಸೊ ಅವರ ಕೃತಿ, Wikimedia Commons ಮೂಲಕ