ಕನ್ನಡ

ಆಂತರಿಕ ಪರಿವರ್ತನೆ

ಅಕ್ಟೋಬರ್ 12, 2021
ಸಾಮಾನ್ಯ ಕಾಲದ ಇಪ್ಪತ್ತೆಂಟನೆಯ ವಾರದ ಮಂಗಳವಾರ
ಇಂದಿನ ವಾಚನಗಳು

ವೀಡಿಯೊ

ಯೇಸು ಮಾತನಾಡಿದ ಬಳಿಕ ಒಬ್ಬ ಫರಿಸಾಯನು ಅವರನ್ನು ತನ್ನ ಮನೆಯಲ್ಲಿ ಊಟಕ್ಕೆ ಆಹ್ವಾನಿಸಿದನು. ಅವರು ಒಳಗೆ ಹೋಗಿ ಊಟಕ್ಕೆ ಒರಗಿ ಕುಳಿತುಕೊಂಡರು. ಊಟಕ್ಕೆ ಮೊದಲು ನಿಯಮದ ಪ್ರಕಾರ ಅವರು ಕೈತೊಳೆದುಕೊಳ್ಳಲಿಲ್ಲವೆಂಬುದನ್ನು ನೋಡಿ ಆ ಫರಿಸಾಯನು ಆಶ್ಚರ್ಯಪಟ್ಟನು. ಪ್ರಭು ಅವನಿಗೆ, “ಓ ಫರಿಸಾಯರೇ! ನೀವು ಬಟ್ಟಲಿನ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಗೊಳಿಸುತ್ತೀರಿ; ಆದರೆ ನಿಮ್ಮ ಅಂತರಂಗವು ಸುಲಿಗೆಯಿಂದಲೂ ದುಷ್ಟತನದಿಂದಲೂ ತುಂಬಿದೆ. ಮೂರ್ಖರೇ!” ಎಂದರು.  ಲೂಕ 11:37–40

ಯೇಸು ಯಾರನ್ನಾದರೂ ಮೂರ್ಖನೆಂದು ಕರೆಯುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಅವರು ಮಾಡಿದ್ದು ಅದನ್ನೇ. ಈ ಫರಿಸಾಯನು ಯೇಸುವಿನ ಉಪದೇಶಗಳ ಸರಣಿಯನ್ನು ಆಗಷ್ಟೇ ಕೇಳಿ ಮುಗಿಸಿದ್ದನು. ಬಳಿಕ ದಯೆಯ ಸೂಚನೆಯಂತೆ ತೋರುವ ರೀತಿಯಲ್ಲಿ ನಮ್ಮ ಪ್ರಭುವನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿದನು. ಆದರೆ ಈ ವಾಕ್ಯಭಾಗವನ್ನು ಓದುತ್ತಾ ಹೋದಂತೆ, ಈ ಫರಿಸಾಯನು ಯೇಸುವಿನ ಮಿತ್ರನಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದಲಾಗಿ, ಅವನ ಆತಿಥ್ಯ ಮತ್ತು ದಯೆ ಅವನ ಆತ್ಮದೊಳಗಿನ ದುಷ್ಟತನವನ್ನು ಮರೆಮಾಚುವ ಹೊದಿಕೆಯಾಗಿವೆ.

ಯೇಸು ಆ ಫರಿಸಾಯನನ್ನು ಮೂರ್ಖನೆಂದು ಕರೆಯುತ್ತಾ ಇಷ್ಟು ತೀವ್ರವಾಗಿ ಪ್ರತಿಕ್ರಿಯಿಸುವುದೇಕೆ? ಏಕೆಂದರೆ ಈ ಫರಿಸಾಯನು ಕಪಟದಿಂದ ತುಂಬಿದ್ದಾನೆ. ಅವನ ಬಾಹ್ಯ ಕ್ರಿಯೆಗಳು ಪ್ರೀತಿ ಮತ್ತು ವಿಶ್ವಾಸದಿಂದ ತುಂಬಿದ ಹೃದಯದಿಂದ ಹೊರಹೊಮ್ಮುವುದಿಲ್ಲ. ಬದಲಾಗಿ, ಅವನ ಬಾಹ್ಯ ಕ್ರಿಯೆಗಳು ಕೇವಲ ತೋರಿಕೆ. ಅವನು ಒಬ್ಬ ವಂಚಕ. ಅನೇಕ ಫರಿಸಾಯರಂತೆ ಅವನೂ ಊಟಕ್ಕೆ ಮೊದಲು ಬಹಳ ಕಟ್ಟುನಿಟ್ಟಾಗಿ ಕೈತೊಳೆದುಕೊಳ್ಳುವುದರಂಥ ವಿವಿಧ ಬಾಹ್ಯ ಆಚರಣೆಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದನು. ಹೀಗೆ ಮಾಡುವುದು ತನ್ನ ಪವಿತ್ರತೆಗೆ ಮತ್ತು ದೇವರೊಂದಿಗಿನ ನಿಕಟತೆಗೆ ಗುರುತು ಎಂದು ಅವನು ನಂಬಿದ್ದನು. ಆದರೆ ಅದು ಹಾಗಿರಲಿಲ್ಲ. ಅವನ ಹೃದಯವು ಇತರರ ಬಗ್ಗೆ ತೀರ್ಪು ನೀಡುವ ಮನೋಭಾವದಿಂದಲೂ ತಾನೇ ನೀತಿವಂತನೆಂಬ ಭಾವದಿಂದಲೂ ತುಂಬಿತ್ತು. ಅವನು ಇತರರನ್ನು ಕೀಳಾಗಿ ಕಂಡು ತನ್ನನ್ನು ತಾನೇ ಮೇಲೇರಿಸಿಕೊಳ್ಳುತ್ತಿದ್ದನು. ಹೀಗೆ ಮಾಡುತ್ತಾ, ಅವನು ಇತರರನ್ನು ವಂಚಿಸಿದನು; ತನ್ನನ್ನೂ ತಾನೇ ವಂಚಿಸಿಕೊಂಡನು.

ಇದರಿಂದ ನಾವು ಸ್ವೀಕರಿಸಬೇಕಾದ ಮುಖ್ಯ ಸಂದೇಶವೆಂದರೆ, ನಮ್ಮ ಹೃದಯದಲ್ಲಿರುವುದರ ಮೇಲೆ ನಾವು ಶ್ರದ್ಧೆಯಿಂದ ಗಮನಹರಿಸಬೇಕು ಎಂಬುದು. ನಮ್ಮ ಹೃದಯಗಳು, ನಮ್ಮ ಆಂತರಿಕ ಜೀವನ, ದೇವರ ಮತ್ತು ಇತರರ ಮೇಲಿನ ಪ್ರೀತಿಯಿಂದ ಅರಳುತ್ತಿರಬೇಕು. ನಮ್ಮ ಅಂತರಂಗದಲ್ಲಿ ಪ್ರಾಮಾಣಿಕವಾದ ಸದ್ಗುಣದ ಬದುಕನ್ನು ಬೆಳೆಸಲು ನಮ್ಮೆಲ್ಲ ಪ್ರಯತ್ನಗಳನ್ನು ಮುಡಿಪಾಗಿಡಬೇಕು. ಪ್ರಾರ್ಥನೆ ಮತ್ತು ದೀನತೆಯ ಮೂಲಕ ಇದು ಸಾಧ್ಯವಾಗುತ್ತದೆ. ನಾವು ನಿಜವಾಗಿಯೂ ಯಾರು ಎಂಬ ಸತ್ಯವನ್ನು ಕಾಣಲು ದೀನತೆಯು ನಮ್ಮ ಕಣ್ಣುಗಳನ್ನು ತೆರೆಯುತ್ತದೆ. ನಮ್ಮೊಳಗೆ ಯಾವುದನ್ನು ಬದಲಿಸಿಕೊಳ್ಳಬೇಕೆಂಬುದನ್ನು ನಾವು ಕಂಡಾಗ, ಬದಲಾಗಲು ಪ್ರಾರ್ಥನೆಯು ನಮಗೆ ಬಲವನ್ನು ನೀಡುತ್ತದೆ. ನಾವು ಯಾರು ಎಂಬ ಸತ್ಯವನ್ನು ಸ್ಪಷ್ಟವಾಗಿ ಕಂಡು, ಪ್ರಾರ್ಥನೆಯಿಂದ ಪಡೆದ ಅನುಗ್ರಹದ ಮೇಲೆ ಪ್ರಾರ್ಥನಾಪೂರ್ವಕವಾಗಿ ಅವಲಂಬಿಸಿದಾಗ ಮಾತ್ರ ನಾವು ನಿಜವಾದ ಪ್ರಾಮಾಣಿಕತೆ ಮತ್ತು ಪವಿತ್ರತೆಯುಳ್ಳವರಾಗಲು ಸಾಧ್ಯ. ಆಗ ಮಾತ್ರ ನಮ್ಮ ಆಂತರಿಕ ಪವಿತ್ರತೆಯು ನಮ್ಮ ಬಾಹ್ಯ ಕ್ರಿಯೆಗಳಲ್ಲಿ ವ್ಯಕ್ತವಾಗುತ್ತದೆ.

“ಮೂರ್ಖರೇ!” ಎಂಬ ಯೇಸುವಿನ ಈ ಪ್ರಬಲ ಮಾತುಗಳ ಬಗ್ಗೆ ಇಂದು ಚಿಂತಿಸಿ. ಈ ಮಾತುಗಳಿಂದ ಮನನೊಂದುಕೊಳ್ಳಬೇಡಿ; ಇವು ನಮ್ಮ ಪ್ರಭುವಿನ ಪ್ರೀತಿಯ ಮಾತುಗಳು. ಈ ಫರಿಸಾಯನನ್ನು ಎಚ್ಚರಗೊಳಿಸಿ, ಅವನ ಕಪಟದಿಂದ ದೂರಕ್ಕೆ ನಡೆಸಲು ಅವರು ಮಾಡಿದ ತೀವ್ರ ಪ್ರಯತ್ನವೇ ಈ ಮಾತುಗಳು. ಈ ಮಾತುಗಳನ್ನು ನಿಮಗೂ ಹೇಳಿದಂತೆ ಆಲಿಸಿ. ಯೇಸುವಿನ ಈ ಪ್ರೀತಿಯ ತಿದ್ದುವಿಕೆಯಿಂದ ನಮ್ಮಲ್ಲಿ ಪ್ರತಿಯೊಬ್ಬರೂ ದೀನತೆಯಿಂದ ಪ್ರಯೋಜನ ಪಡೆಯಬಹುದು. ನಮ್ಮಲ್ಲಿ ಪ್ರತಿಯೊಬ್ಬರೂ ದೀನತೆಯಿಂದ ನಮ್ಮ ಅಂತರಂಗದಲ್ಲಿ ಇನ್ನಷ್ಟು ಪೂರ್ಣವಾಗಿ ಪರಿವರ್ತಿತರಾಗಬೇಕು. ಯೇಸುವಿನ ಮಾತುಗಳು ನಿಮ್ಮ ಹೃದಯದೊಂದಿಗೆ ಮಾತನಾಡಿ, ನೀವು ಯಾವ ರೀತಿಗಳಲ್ಲಿ ಬದಲಾಗಬೇಕು ಎಂಬುದನ್ನು ನಿಮಗೆ ತೋರಿಸಲಿ. ಬಹುಶಃ ನಿಮ್ಮ ಅಹಂಕಾರವು ನಿಮ್ಮ ಅಂತರಂಗದಲ್ಲಿ ಇತರರ ಬಗ್ಗೆ ತೀರ್ಪು ನೀಡುವ ಅಭ್ಯಾಸಕ್ಕೆ ನಿಮ್ಮನ್ನು ನಡೆಸಿರಬಹುದು. ಬಹುಶಃ ನೀವು ಪಾಪನಿವೇದನೆ ಮಾಡಬೇಕಾದ ಪಾಪಗಳನ್ನು ಕಾಣದಂತೆ ಅದು ನಿಮ್ಮನ್ನು ಕುರುಡಾಗಿಸಿರಬಹುದು. ಈ ಮಾತುಗಳನ್ನು ನಿಮಗೇ ಹೇಳಿದಂತೆ ನೀವು ಆಲಿಸಲು ಸಾಧ್ಯವಾದರೆ, ಯೇಸುವಿನ ಉತ್ಕಟತೆಯು ನಿಮ್ಮನ್ನು ತಲುಪುತ್ತದೆ; ನಿಮ್ಮ ಆತ್ಮದಲ್ಲಿ ಬದಲಾಗಬೇಕಾದುದನ್ನು ಕಾಣಲು ನಿಮ್ಮ ಕಣ್ಣುಗಳು ತೆರೆಯುತ್ತವೆ. ಇದನ್ನು ಕಂಡೂ ಕಾಣದಂತೆ ಇರಬೇಡಿ. ತೆರೆದ ಮನಸ್ಸಿನಿಂದಿರಿ, ದೀನರಾಗಿರಿ ಮತ್ತು ಆಲಿಸಿರಿ.

ಉತ್ಕಟ ಪ್ರೀತಿಯ ನನ್ನ ಪ್ರಭುವೇ, ನೀವು ಅನೇಕ ರೀತಿಗಳಲ್ಲಿ ಪ್ರೀತಿಯ ಮಾತುಗಳನ್ನು ಆಡಿದ್ದೀರಿ. ಕೆಲವೊಮ್ಮೆ ನೀವು ಸೌಮ್ಯರಾಗಿದ್ದಿರಿ, ಕೆಲವೊಮ್ಮೆ ದೃಢರಾಗಿದ್ದಿರಿ. ಪ್ರೀತಿಯಿಂದ ಕೂಡಿದ ನಿಮ್ಮ ದೃಢವಾದ ಖಂಡನೆಗಳನ್ನು ಸ್ವೀಕರಿಸಲು ನನಗೆ ಬೇಕಾದ ಅನುಗ್ರಹವನ್ನೂ ದೀನತೆಯನ್ನೂ ದಯಪಾಲಿಸಿ. ನಿಮ್ಮ ಅನುಗ್ರಹವು ನನ್ನ ಆಂತರಿಕ ಜೀವನವನ್ನು ಪರಿವರ್ತಿಸಿ, ನನ್ನ ಕ್ರಿಯೆಗಳಲ್ಲಿಯೂ ಹರಿಯುವಂತೆ, ನನ್ನ ಬದುಕನ್ನು ಯಾವ ರೀತಿಗಳಲ್ಲಿ ಬದಲಿಸಿಕೊಳ್ಳಬೇಕು ಎಂಬುದನ್ನು ಪ್ರಾಮಾಣಿಕವಾಗಿ ಕಾಣಲು ನನಗೆ ಸಹಾಯಮಾಡಿ. ಪ್ರಿಯ ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮನ್ನು ಇನ್ನಷ್ಟು ಪ್ರೀತಿಸಲು ನನಗೆ ಸಹಾಯಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲೆ ಪ್ರದರ್ಶಿಸಿರುವ ಚಿತ್ರ: ಫರಿಸಾಯನಾದ ಸಿಮೋನನ ಮನೆಯಲ್ಲಿ ಕ್ರಿಸ್ತ — ಚಿತ್ರಕಾರ: ಲೂಕಾ ಸಿನ್ಯೊರೆಲ್ಲಿ, ವಿಕಿಮೀಡಿಯ ಕಾಮನ್ಸ್ ಮೂಲಕ