ಕನ್ನಡ

ಸಿದ್ಧರಾಗಿರುವುದು ಮತ್ತು ಸಿದ್ಧಮನಸ್ಸು ಹೊಂದಿರುವುದು

ಜೂನ್ 27, 2022
ಸಾಮಾನ್ಯ ಕಾಲದ ಹದಿಮೂರನೆಯ ವಾರದ ಸೋಮವಾರ
ಇಂದಿನ ವಾಚನಗಳು

ಅಲೆಕ್ಸಾಂಡ್ರಿಯಾದ ಸಂತ ಸಿರಿಲ್, ಧರ್ಮಾಧ್ಯಕ್ಷ ಮತ್ತು ಸಭಾಪಂಡಿತ—ಐಚ್ಛಿಕ ಸ್ಮರಣೆ

ವೀಡಿಯೊ

ಒಬ್ಬ ಶಾಸ್ತ್ರಿ ಯೇಸುವಿನ ಬಳಿಗೆ ಬಂದು, “ಗುರುಗಳೇ, ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುತ್ತೇನೆ” ಎಂದನು. ಮತ್ತಾಯ 8:19

ಈ ಶಾಸ್ತ್ರಿ ಯೇಸುವಿಗೆ ಸರಿಯಾದ ಮಾತನ್ನೇ ಹೇಳಿದನು. ನಮ್ಮ ಪ್ರಭುವಿನ ಬಗ್ಗೆ ನಾವೆಲ್ಲರೂ ಹೊಂದಿರಬೇಕಾದ ಮನೋಭಾವ ಇದೇ. ಏನೇ ಆದರೂ ಅವರನ್ನು ಹಿಂಬಾಲಿಸಲು ನಾವು ಸಿದ್ಧರಾಗಿರಬೇಕು ಮತ್ತು ಸಿದ್ಧಮನಸ್ಸು ಹೊಂದಿರಬೇಕು. ಆದರೆ, ಈ ಶಾಸ್ತ್ರಿಗೆ ಯೇಸು ನೀಡಿದ ಉತ್ತರ ಆಸಕ್ತಿಕರವಾಗಿದೆ. ಅವರು ಹೀಗೆ ಹೇಳಿದರು: “ನರಿಗಳಿಗೆ ಗುಹೆಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ, ಆದರೆ ಮನುಷ್ಯಕುಮಾರನಿಗೆ ತಲೆಯಿಡಲು ಸ್ಥಳವೂ ಇಲ್ಲ” (ಮತ್ತಾಯ 8:20).

ಈ ಉತ್ತರದಿಂದ ನಾವು ಏನನ್ನು ಅರಿತುಕೊಳ್ಳಬೇಕು? “ಏನೇ ಆದರೂ ನನ್ನನ್ನು ಹಿಂಬಾಲಿಸಲು ನೀನು ನಿಜವಾಗಿಯೂ ಸಿದ್ಧನಾಗಿದ್ದೀಯಾ, ಸಿದ್ಧಮನಸ್ಸು ಹೊಂದಿದ್ದೀಯಾ?” ಎಂದು ಯೇಸು ಆ ಶಾಸ್ತ್ರಿಯನ್ನು ಕೇಳುವ ರೀತಿಯಂತೆ ಇದು ಕಾಣುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಯೇಸುವನ್ನು ಹಿಂಬಾಲಿಸಲು ಅವರಲ್ಲಿ ಸಂಪೂರ್ಣ ಭರವಸೆ ಇಡಬೇಕಾಗುತ್ತದೆ ಎಂಬ ಅರ್ಥದಲ್ಲಿ ಮಾತ್ರ, ಅವರನ್ನು ಹಿಂಬಾಲಿಸುವ ಆಯ್ಕೆಯು ಅಪಾಯಭರಿತವಾದ ದಾರಿಯಲ್ಲಿ ಸಾಗುವ ಬದ್ಧತೆ ಎಂಬುದನ್ನು ಯೇಸು ಆ ಶಾಸ್ತ್ರಿಗೆ ತಿಳಿಸಲು ಬಯಸುತ್ತಾರೆ. ನಮ್ಮ ಪ್ರಭು ನಮ್ಮನ್ನು ಎಲ್ಲಿಗೆ ಕರೆದೊಯ್ಯುವರು, ನಮ್ಮಿಂದ ಏನನ್ನು ಕೇಳುವರು ಎಂಬುದನ್ನು ನಮಗೆ ಮುಂಚಿತವಾಗಿ ತಿಳಿಸಲಾಗುವುದಿಲ್ಲ. ಬದಲಾಗಿ, ನಾವು ಯಾವುದೇ ಹಿಂಜರಿಕೆಯಿಲ್ಲದೆ ಯೇಸುವನ್ನು ಹಿಂಬಾಲಿಸಲು ನಿರ್ಧರಿಸಿದಾಗ, ಅವರ ವ್ಯಕ್ತಿತ್ವದಲ್ಲೇ ನಮ್ಮ ಭರವಸೆಯನ್ನು ಇಡುತ್ತೇವೆ; ಅವರ ಚಿತ್ತ ಏನೇ ಆಗಿರಲಿ, ಅದನ್ನು ಸ್ವೀಕರಿಸುತ್ತೇವೆ ಎಂದು ಅವರಿಗೆ ಹೇಳುತ್ತೇವೆ. ಯೇಸು ಬಯಸುವುದಕ್ಕೆ ಇಂತಹ ಭರವಸೆಯೇ ಕೀಲಿಕೈಯಾಗಿದೆ.

ಇಂದು ಎರಡು ವಿಷಯಗಳ ಕುರಿತು ಚಿಂತಿಸಿ. ಮೊದಲನೆಯದಾಗಿ, ಈ ಶಾಸ್ತ್ರಿಯ ಮಾತುಗಳ ಕುರಿತು ಚಿಂತಿಸಿ; ನಿಮ್ಮ ಸ್ವಂತ ಜೀವನದಲ್ಲಿ ಈ ಮಾತುಗಳನ್ನು ದೃಢವಾಗಿ ಹೇಳಬಲ್ಲಿರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಅವುಗಳನ್ನು ಮತ್ತೆ ಮತ್ತೆ ಹೇಳಿ; ನಿಮ್ಮ ಜೀವನಕ್ಕಾಗಿ ಪ್ರಭು ಹೊಂದಿರುವ ಯೋಜನೆಯನ್ನು ಮನಃಪೂರ್ವಕವಾಗಿ ಸ್ವೀಕರಿಸುವಂತೆ, ಆ ಮಾತುಗಳು ನಿಮ್ಮ ಬುದ್ಧಿಯಿಂದ ಹೃದಯಕ್ಕೆ ಇಳಿಯಲು ಪ್ರಯತ್ನಿಸಿ. ಎರಡನೆಯದಾಗಿ, ಇಂತಹ ಪ್ರತಿಕ್ರಿಯೆಯು ನಿಮ್ಮ ಸ್ವಂತ ಜೀವನದಲ್ಲಿ ಉಂಟುಮಾಡುವ ಪರಿಣಾಮಗಳ ಕುರಿತು ಚಿಂತಿಸಿ. ಈ ಮಾತುಗಳನ್ನು ಹೇಳುವುದಷ್ಟೇ ಅಲ್ಲದೆ, ಇಂತಹ ಬದ್ಧತೆಯಿಂದ ಮುಂದೆ ಬರುವ ಎಲ್ಲವನ್ನೂ ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ನಿಮ್ಮ ಇಡೀ ಜೀವನವನ್ನು ಪ್ರಭುವಿಗೆ ಒಪ್ಪಿಸಿ ಅವರಲ್ಲಿ ಭರವಸೆ ಇಡಲು ನೀವು ಸಿದ್ಧರಿದ್ದೀರಾ? ಈ ದೃಢಸಂಕಲ್ಪವನ್ನು ಮಾಡಲು ಶ್ರಮಿಸಿ; ಈ ಸಂಕಲ್ಪವು ನಿಮ್ಮನ್ನು ಅಪಾರ ಆನಂದದ ಹಾದಿಯಲ್ಲಿ ಮುನ್ನಡೆಸುತ್ತದೆ.

ನನ್ನ ಭರವಸೆಗೆ ಪಾತ್ರರಾದ ಪ್ರಭುವೇ, ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಲು ನನ್ನನ್ನೇ ಸಮರ್ಪಿಸಿಕೊಳ್ಳುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಪರಮಪವಿತ್ರ ಚಿತ್ತವನ್ನೇ ನಾನು ಆರಿಸಿಕೊಳ್ಳುತ್ತೇನೆ. ನಿಮ್ಮ ದಿವ್ಯಚಿತ್ತಕ್ಕೆ ಅನುಗುಣವಾಗಿ ನಿಷ್ಠೆಯಿಂದ ಬದುಕಲು ಮತ್ತು ಪ್ರತಿದಿನ ನಿಮಗೆ “ಹೌದು” ಎಂದು ಹೇಳಲು ನನಗೆ ನೆರವಾಗಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

Roe v. Wade ರದ್ದಾದುದಕ್ಕಾಗಿ ಕೃತಜ್ಞತಾ ಪ್ರಾರ್ಥನೆ!

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಸಾಮಾನ್ಯ ಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಅಲೆಕ್ಸಾಂಡ್ರಿಯಾದ ಸಂತ ಸಿರಿಲ್, ಧರ್ಮಾಧ್ಯಕ್ಷ ಮತ್ತು ಸಭಾಪಂಡಿತ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ವಿಶೇಷ ಚಿತ್ರ: ಟಿಶಿಯನ್ ರಚಿಸಿದ ‘ಆಶೀರ್ವದಿಸುತ್ತಿರುವ ಕ್ರಿಸ್ತ’, ವಿಕಿಮೀಡಿಯಾ ಕಾಮನ್ಸ್ ಮೂಲಕ