ಕನ್ನಡ

ಕರೆಗೆ ಸ್ಪಂದಿಸುವುದು

ಬುಧವಾರ, ಸೆಪ್ಟೆಂಬರ್ 21, 2022

ಅಪೊಸ್ತಲರೂ ಸುವಾರ್ತಾಬೋಧಕರೂ ಆದ ಸಂತ ಮತ್ತಾಯರ ಹಬ್ಬ

ಇಂದಿನ ವಾಚನಗಳು

ವೀಡಿಯೊ

ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ, ಸುಂಕ ವಸೂಲಿ ಮಾಡುವ ಸ್ಥಳದಲ್ಲಿ ಕುಳಿತಿದ್ದ ಮತ್ತಾಯ ಎಂಬ ಒಬ್ಬ ಮನುಷ್ಯನನ್ನು ಕಂಡರು. ಅವರು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದರು. ಅವನು ಎದ್ದು ಅವರನ್ನು ಹಿಂಬಾಲಿಸಿದನು.  ಮತ್ತಾಯ 9:9

ಸಂತ ಮತ್ತಾಯರು ತಮ್ಮ ಕಾಲದಲ್ಲಿ ಶ್ರೀಮಂತರೂ “ಪ್ರಮುಖ” ವ್ಯಕ್ತಿಯೂ ಆಗಿದ್ದರು.  ಸುಂಕ ವಸೂಲಿಗಾರರಾಗಿದ್ದುದರಿಂದ ಅನೇಕ ಯೆಹೂದ್ಯರು ಅವರನ್ನು ಇಷ್ಟಪಡುತ್ತಿರಲಿಲ್ಲ.  ಆದರೆ ಯೇಸುವಿನ ಕರೆಗೆ ತಕ್ಷಣವೇ ಸ್ಪಂದಿಸುವ ಮೂಲಕ ಅವರು ತಾವು ಒಳ್ಳೆಯ ವ್ಯಕ್ತಿ ಎಂಬುದನ್ನು ತೋರಿಸಿದರು.

ಈ ಘಟನೆಯ ಅನೇಕ ವಿವರಗಳು ನಮಗೆ ತಿಳಿದಿಲ್ಲ; ಆದರೆ ಮುಖ್ಯವಾದ ವಿವರಗಳು ನಮಗೆ ತಿಳಿದಿವೆ.  ಮತ್ತಾಯರು ಸುಂಕ ವಸೂಲಿ ಮಾಡುವ ಕೆಲಸದಲ್ಲಿರುವುದನ್ನು ನಾವು ಕಾಣುತ್ತೇವೆ.  ಯೇಸು ಅವರ ಬಳಿಯಿಂದ ಹಾದುಹೋಗುತ್ತಾ ಅವರನ್ನು ಕರೆಯುವುದನ್ನು ನಾವು ಕಾಣುತ್ತೇವೆ.  ಮತ್ತಾಯರು ತಕ್ಷಣವೇ ಎದ್ದು, ಎಲ್ಲವನ್ನೂ ಬಿಟ್ಟು, ಯೇಸುವನ್ನು ಹಿಂಬಾಲಿಸುವುದನ್ನು ನಾವು ಕಾಣುತ್ತೇವೆ.  ಇದು ನಿಜಕ್ಕೂ ಮಹತ್ತರವಾದ ಮನಃಪರಿವರ್ತನೆ.

ಹೆಚ್ಚಿನ ಜನರು ಈ ರೀತಿ ತಕ್ಷಣವೇ ಸ್ಪಂದಿಸುವುದಿಲ್ಲ.  ಹೆಚ್ಚಿನವರು ಮೊದಲು ಯೇಸುವನ್ನು ಅರಿತುಕೊಳ್ಳಬೇಕು, ಅವರ ಮಾತುಗಳಿಂದ ಮನವರಿಕೆಯಾಗಬೇಕು, ತಮ್ಮ ಕುಟುಂಬದವರೊಡನೆ ಮತ್ತು ಸ್ನೇಹಿತರೊಡನೆ ಮಾತನಾಡಬೇಕು, ಆಲೋಚಿಸಬೇಕು, ಚಿಂತಿಸಬೇಕು; ಆಮೇಲೆ ಯೇಸುವನ್ನು ಹಿಂಬಾಲಿಸುವುದು ಒಳ್ಳೆಯದೇ ಎಂದು ನಿರ್ಧರಿಸಬೇಕು.  ಹೆಚ್ಚಿನ ಜನರು ದೇವರ ಚಿತ್ತಕ್ಕೆ ಸ್ಪಂದಿಸುವ ಮೊದಲು ಅದನ್ನು ತಮ್ಮ ತರ್ಕಕ್ಕೆ ಹೊಂದಿಸಿಕೊಳ್ಳಲು ಬಹಳ ಸಮಯ ಕಳೆಯುತ್ತಾರೆ.  ನೀವೂ ಹಾಗೆಯೇ ಮಾಡುತ್ತೀರಾ?

ಪ್ರತಿದಿನ ದೇವರು ನಮ್ಮನ್ನು ಕರೆಯುತ್ತಿದ್ದಾರೆ.  ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಪೂರ್ಣ ಸಮರ್ಪಣೆಯಿಂದ ಮತ್ತು ಸಂಪೂರ್ಣವಾಗಿ ತಮ್ಮ ಸೇವೆ ಮಾಡಲು ಅವರು ನಮ್ಮನ್ನು ಕರೆಯುತ್ತಾರೆ.  ಮತ್ತಾಯರು ಮಾಡಿದಂತೆಯೇ ಸ್ಪಂದಿಸುವ ಅವಕಾಶ ನಮಗೆ ಪ್ರತಿದಿನವೂ ಇದೆ.  ಇದಕ್ಕೆ ಎರಡು ಅಗತ್ಯ ಗುಣಗಳನ್ನು ಹೊಂದಿರುವುದು ಮುಖ್ಯ.  ಮೊದಲನೆಯದಾಗಿ, ನಾವು ಯೇಸುವಿನ ಸ್ವರವನ್ನು ಸ್ಪಷ್ಟವಾಗಿ, ತಪ್ಪಿಲ್ಲದೆ ಗುರುತಿಸಬೇಕು.  ಅವರು ನಮ್ಮೊಡನೆ ಮಾತನಾಡುವಾಗ, ಅವರು ನಮಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ನಾವು ವಿಶ್ವಾಸದಲ್ಲಿ ಅರಿಯಬೇಕು.  ಎರಡನೆಯದಾಗಿ, ಯೇಸು ನಮ್ಮನ್ನು ಯಾವುದಕ್ಕೆ ಕರೆದರೂ ಅಥವಾ ಏನನ್ನು ಮಾಡಲು ಪ್ರೇರೇಪಿಸಿದರೂ, ಅದು ಮಾಡಲು ಯೋಗ್ಯವಾದದ್ದು ಎಂಬ ಖಚಿತತೆ ನಮಗಿರಬೇಕು.  ಈ ಎರಡು ಗುಣಗಳನ್ನು ನಾವು ಪರಿಪೂರ್ಣಗೊಳಿಸಿಕೊಂಡರೆ, ಸಂತ ಮತ್ತಾಯರ ತ್ವರಿತವಾದ ಮತ್ತು ಸಂಪೂರ್ಣವಾದ ಸ್ಪಂದನೆಯನ್ನು ಅನುಕರಿಸಲು ನಮಗೆ ಸಾಧ್ಯವಾಗುತ್ತದೆ.

ಈ ಅಪೊಸ್ತಲರನ್ನು ಅನುಕರಿಸಲು ನಿಮಗಿರುವ ಸಿದ್ಧತೆಯ ಬಗ್ಗೆ ಇಂದು ಚಿಂತಿಸಿ.  ಪ್ರತಿದಿನ ದೇವರು ನಿಮ್ಮನ್ನು ಕರೆಯುವಾಗ ನೀವು ಏನು ಹೇಳುತ್ತೀರಿ, ಏನು ಮಾಡುತ್ತೀರಿ?  ನಿಮ್ಮಲ್ಲಿ ಕೊರತೆ ಕಂಡುಬರುವ ಕಡೆ, ಕ್ರಿಸ್ತನನ್ನು ಇನ್ನಷ್ಟು ಪೂರ್ಣ ಸಮರ್ಪಣೆಯಿಂದ ಹಿಂಬಾಲಿಸಲು ನಿಮ್ಮನ್ನು ಪುನಃ ಸಮರ್ಪಿಸಿಕೊಳ್ಳಿ.  ಅದಕ್ಕಾಗಿ ನೀವು ವಿಷಾದಿಸುವುದಿಲ್ಲ.

ಪ್ರಭುವೇ, ಪ್ರತಿಬಾರಿಯೂ ನೀವು ಮಾತನಾಡುವುದನ್ನು ನಾನು ಆಲಿಸಿ, ಪೂರ್ಣ ಹೃದಯದಿಂದ ನಿಮಗೆ ಸ್ಪಂದಿಸುವಂತಾಗಲಿ.  ನೀವು ಎಲ್ಲಿಗೆ ನಡೆಸಿದರೂ ನಾನು ನಿಮ್ಮನ್ನು ಹಿಂಬಾಲಿಸುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ನಾಳೆಯಿಂದ ಲಿಸಿಯೆಯ ಸಂತ ತೆರೇಸಾ – ಪುಟ್ಟ ಪುಷ್ಪ ಇವರ ನವೇನಾ ಆರಂಭವಾಗುತ್ತದೆ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು – ಸುವಾರ್ತಾಬೋಧಕ ಸಂತ ಮತ್ತಾಯರು, ಪ್ರೇಷಿತರು, ಸುವಾರ್ತಾಬೋಧಕರು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಪ್ರಮುಖ ಚಿತ್ರ: ಹೆಂಡ್ರಿಕ್ ಟೆರ್ ಬ್ರುಗೆನ್ ರಚಿಸಿದ ಸಂತ ಮತ್ತಾಯರ ಕರೆ, Wikimedia Commons ಮೂಲಕ