ಕನ್ನಡ

ಪವಿತ್ರ ಕುತೂಹಲ

ಸೆಪ್ಟೆಂಬರ್ 22, 2022
ಸಾಮಾನ್ಯ ಕಾಲದ ಇಪ್ಪತ್ತೈದನೆಯ ವಾರದ ಗುರುವಾರ
ಇಂದಿನ ವಾಚನಗಳು

ವೀಡಿಯೊ

ಆದರೆ ಹೆರೋದನು, “ಯೋಹಾನನ ಶಿರಚ್ಛೇದನ ಮಾಡಿಸಿದವನು ನಾನೇ. ಹಾಗಾದರೆ, ಯಾರ ಬಗ್ಗೆ ನಾನು ಇಂಥ ಸಂಗತಿಗಳನ್ನು ಕೇಳುತ್ತಿದ್ದೇನೋ ಅವನು ಯಾರು?” ಎಂದನು. ಅವನು ಯೇಸುವನ್ನು ನೋಡಲು ಪ್ರಯತ್ನಿಸುತ್ತಲೇ ಇದ್ದನು. ಲೂಕ 9:9

ಹೆರೋದನಿಂದ ನಾವು ಕೆಲವು ಕೆಟ್ಟ ಗುಣಗಳನ್ನೂ ಕೆಲವು ಒಳ್ಳೆಯ ಗುಣಗಳನ್ನೂ ಕಲಿಯಬಹುದು.  ಕೆಟ್ಟ ಗುಣಗಳು ಬಹಳ ಸ್ಪಷ್ಟವಾಗಿವೆ.  ಹೆರೋದನು ಅತ್ಯಂತ ಪಾಪಮಯ ಜೀವನವನ್ನು ನಡೆಸುತ್ತಿದ್ದನು. ಕೊನೆಗೆ, ಅವನ ಅಂಕೆತಪ್ಪಿದ ಜೀವನವು ಸ್ನಾನಿಕ ಸಂತ ಯೋಹಾನನ ಶಿರಚ್ಛೇದನ ಮಾಡಿಸುವಂತೆ ಅವನನ್ನು ಪ್ರೇರೇಪಿಸಿತು.  ಆದರೆ ಮೇಲಿನ ಪವಿತ್ರ ಗ್ರಂಥದ ವಚನವು ನಾವು ಅನುಕರಿಸಲು ಪ್ರಯತ್ನಿಸಬೇಕಾದ ಒಂದು ಆಸಕ್ತಿಕರ ಗುಣವನ್ನು ತೋರಿಸುತ್ತದೆ.

ಹೆರೋದನಿಗೆ ಯೇಸುವಿನ ಬಗ್ಗೆ ಆಸಕ್ತಿ ಇತ್ತು.  “ಅವನು ಯೇಸುವನ್ನು ನೋಡಲು ಪ್ರಯತ್ನಿಸುತ್ತಲೇ ಇದ್ದನು” ಎಂದು ಪವಿತ್ರ ಗ್ರಂಥ ಹೇಳುತ್ತದೆ.  ಇದು ಕೊನೆಗೂ ಹೆರೋದನು ಸ್ನಾನಿಕ ಯೋಹಾನನ ಮೂಲ ಸಂದೇಶವನ್ನು ಸ್ವೀಕರಿಸಿ ಪಶ್ಚಾತ್ತಾಪಪಡಲು ಕಾರಣವಾಗದಿದ್ದರೂ, ಕನಿಷ್ಠ ಒಂದು ಮೊದಲ ಹೆಜ್ಜೆಯಾಗಿತ್ತು.

ಇದಕ್ಕಿಂತ ಸೂಕ್ತವಾದ ಪದ ಸಿಗದ ಕಾರಣ, ಹೆರೋದನ ಈ ಬಯಕೆಯನ್ನು ಬಹುಶಃ ನಾವು “ಪವಿತ್ರ ಕುತೂಹಲ” ಎಂದು ಕರೆಯಬಹುದು.  ಯೇಸುವಿನಲ್ಲಿ ಏನೋ ವಿಶಿಷ್ಟವಾದದ್ದು ಇದೆ ಎಂದು ಅವನಿಗೆ ತಿಳಿದಿತ್ತು; ಅದನ್ನು ಅರ್ಥಮಾಡಿಕೊಳ್ಳಲು ಅವನು ಬಯಸಿದನು.  ಯೇಸು ಯಾರೆಂದು ತಿಳಿದುಕೊಳ್ಳಲು ಅವನು ಬಯಸಿದನು; ಯೇಸುವಿನ ಸಂದೇಶವು ಅವನಲ್ಲಿ ಕುತೂಹಲ ಮೂಡಿಸಿತ್ತು.

ಸತ್ಯವನ್ನು ಹುಡುಕುವಲ್ಲಿ ಹೆರೋದನಿಗಿಂತ ಬಹಳ ಮುಂದೆ ಸಾಗಲು ನಾವೆಲ್ಲರೂ ಕರೆಯಲ್ಪಟ್ಟಿದ್ದರೂ, ನಮ್ಮ ಸಮಾಜದ ಅನೇಕರ ಮನೋಭಾವವನ್ನು ಹೆರೋದನು ಚೆನ್ನಾಗಿ ಪ್ರತಿಬಿಂಬಿಸುತ್ತಾನೆ ಎಂಬುದನ್ನು ನಾವು ಗುರುತಿಸಬಹುದು.  ಸುವಾರ್ತೆ ಮತ್ತು ನಮ್ಮ ವಿಶ್ವಾಸವು ಮುಂದಿಡುವ ಎಲ್ಲ ವಿಷಯಗಳು ಅನೇಕರಲ್ಲಿ ಕುತೂಹಲ ಮೂಡಿಸುತ್ತವೆ. ಪೋಪ್ ಏನು ಹೇಳುತ್ತಾರೆ ಮತ್ತು ಜಗತ್ತಿನ ಅನ್ಯಾಯಗಳಿಗೆ ಧರ್ಮಸಭೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅವರು ಕುತೂಹಲದಿಂದ ಆಲಿಸುತ್ತಾರೆ.  ಅಲ್ಲದೆ, ಸಮಾಜವು ಒಟ್ಟಾರೆಯಾಗಿ ನಮ್ಮನ್ನೂ ನಮ್ಮ ವಿಶ್ವಾಸವನ್ನೂ ಅನೇಕ ಬಾರಿ ಖಂಡಿಸುತ್ತದೆ ಮತ್ತು ಟೀಕಿಸುತ್ತದೆ.  ಆದರೂ, ದೇವರು ವಿಶೇಷವಾಗಿ ನಮ್ಮ ಧರ್ಮಸಭೆಯ ಮೂಲಕ ಹೇಳುವುದನ್ನು ಕೇಳಲು ಸಮಾಜಕ್ಕೆ ಆಸಕ್ತಿ ಮತ್ತು ಬಯಕೆ ಇದೆ ಎಂಬುದರ ಸೂಚನೆಯನ್ನು ಇದು ತೋರಿಸುತ್ತದೆ.

ಇಂದು ಎರಡು ವಿಷಯಗಳ ಬಗ್ಗೆ ಚಿಂತಿಸಿ.  ಮೊದಲನೆಯದಾಗಿ, ಇನ್ನಷ್ಟು ತಿಳಿದುಕೊಳ್ಳಬೇಕೆಂಬ ನಿಮ್ಮ ಸ್ವಂತ ಬಯಕೆಯ ಬಗ್ಗೆ ಚಿಂತಿಸಿ.  ಈ ಬಯಕೆಯನ್ನು ನೀವು ಕಂಡುಕೊಂಡಾಗ ಅಲ್ಲಿಗೇ ನಿಲ್ಲಬೇಡಿ.  ಅದು ನಿಮ್ಮನ್ನು ನಮ್ಮ ಪ್ರಭುವಿನ ಸಂದೇಶದ ಹತ್ತಿರಕ್ಕೆ ಸೆಳೆಯಲು ಅವಕಾಶ ನೀಡಿ.  ಎರಡನೆಯದಾಗಿ, ನಿಮ್ಮ ಸುತ್ತಲಿರುವವರ “ಪವಿತ್ರ ಕುತೂಹಲ”ಕ್ಕೆ ಗಮನಕೊಡಿ.  ಬಹುಶಃ ನೆರೆಹೊರೆಯವರು, ಕುಟುಂಬದ ಸದಸ್ಯರು ಅಥವಾ ಸಹೋದ್ಯೋಗಿಗಳು ನಿಮ್ಮ ವಿಶ್ವಾಸ ಮತ್ತು ನಮ್ಮ ಧರ್ಮಸಭೆ ಹೇಳುವ ವಿಷಯಗಳಲ್ಲಿ ಆಸಕ್ತಿ ತೋರಿರಬಹುದು.  ನೀವು ಅದನ್ನು ಕಂಡಾಗ, ಅವರಿಗಾಗಿ ಪ್ರಾರ್ಥಿಸಿ. ದೇವರು ತನ್ನ ಸಂದೇಶವನ್ನು ಹುಡುಕುವ ಎಲ್ಲರಿಗೂ ಅದನ್ನು ತಲುಪಿಸಲು ಸ್ನಾನಿಕ ಯೋಹಾನನನ್ನು ಬಳಸಿಕೊಂಡಂತೆ ನಿಮ್ಮನ್ನೂ ಬಳಸಿಕೊಳ್ಳಲಿ ಎಂದು ಬೇಡಿಕೊಳ್ಳಿ.

ಪ್ರಭುವೇ, ಎಲ್ಲದರಲ್ಲಿಯೂ ಎಲ್ಲ ಸಮಯದಲ್ಲಿಯೂ ನಿಮ್ಮನ್ನು ಹುಡುಕಲು ನನಗೆ ಸಹಾಯಮಾಡಿ.  ಕತ್ತಲೆ ಆವರಿಸಿದಾಗ, ನೀವು ಪ್ರಕಟಿಸಿದ ಬೆಳಕನ್ನು ಕಂಡುಕೊಳ್ಳಲು ನನಗೆ ಸಹಾಯಮಾಡಿ.  ನಂತರ, ನೆರವಿನ ತೀವ್ರ ಅಗತ್ಯವಿರುವ ಜಗತ್ತಿಗೆ ಆ ಬೆಳಕನ್ನು ತಲುಪಿಸಲು ನನಗೆ ಸಹಾಯಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಮೊದಲನೆಯ ದಿನ: ಲಿಸಿಯ ಸಂತ ತೆರೇಸಾ ಅವರಿಗೆ ನೊವೇನಾ – ಪುಟ್ಟ ಹೂವು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಹೆರೋದ ಅಂತಿಪಾಸನ ಮುಂದೆ ಕ್ರಿಸ್ತರು — ನಿಕೊಲಾವಸ್ ಕ್ನುಪ್ಫರ್ ಅವರ ಕೃತಿ, ವಿಕಿಮೀಡಿಯಾ ಕಾಮನ್ಸ್ ಮೂಲಕ