ಕನ್ನಡ

ಪಾಪದಿಂದ ವಿಮುಖರಾಗಿ

December 15, 2024
ಆಗಮನಕಾಲದ ಮೂರನೇ ಭಾನುವಾರ (ವರ್ಷ C)
ಇಂದಿನ ವಾಚನಗಳು

“ಪಶ್ಚಾತ್ತಾಪಪಡಿ, ಏಕೆಂದರೆ ಸ್ವರ್ಗರಾಜ್ಯವು ಸಮೀಪಿಸಿದೆ!” Qui es in Caelis ರಚನೆ: Lawrence OP, ಪರವಾನಗಿ CC BY-NC-ND 2.0.

ವೀಡಿಯೊ

ಜನಸಮೂಹವು ಸ್ನಾಪಕ ಯೋಹಾನನನ್ನು, “ನಾವು ಏನು ಮಾಡಬೇಕು?” ಎಂದು ಕೇಳಿತು. ಲೂಕ 3:10

ಸ್ನಾಪಕ ಸಂತ ಯೋಹಾನನಿಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದ ಜನಸಮೂಹದಲ್ಲಿ ಸುಂಕದವರು, ಸೈನಿಕರು ಮತ್ತು ಸಾಮಾನ್ಯ ಜನರು ಇದ್ದರು. ಯೋಹಾನನು ಅವರೆಲ್ಲರಿಗೂ ಉತ್ತರಿಸುತ್ತಾ, ಅವರು ಯಾವ ಪಾಪಗಳೊಂದಿಗೆ ಹೆಚ್ಚು ಹೋರಾಡುತ್ತಿದ್ದರೋ ಆ ಪಾಪಗಳಿಂದ ಮೊದಲು ವಿಮುಖರಾಗಬೇಕೆಂದು ಹೇಳಿದನು. ಪಾಪವು ಅನೇಕ ರೂಪಗಳನ್ನು ತಾಳುತ್ತದೆ ಮತ್ತು ಅನೇಕವೇಳೆ ನಮ್ಮ ದೈನಂದಿನ ಜೀವನದ ಕರ್ತವ್ಯಗಳೊಂದಿಗೆ ನಿಕಟ ಸಂಬಂಧ ಹೊಂದಿರುತ್ತದೆ. ಕೆಲವು ಪಾಪಗಳು ಉದ್ದೇಶಪೂರ್ವಕವಾಗಿ ಮಾಡುವ ಕೃತ್ಯಗಳ ಮೂಲಕ ಎಸಗುವ ಪಾಪಗಳಾಗಿವೆ. ಇನ್ನು ಕೆಲವು ಪಾಪಗಳು ಕರ್ತವ್ಯಲೋಪದ ಪಾಪಗಳಾಗಿವೆ; ಅಂದರೆ ಕೆಲವು ಸದ್ಗುಣಗಳ ಕೊರತೆ ಅಥವಾ ನಾವು ಮಾಡಬೇಕಾದುದನ್ನು ಮಾಡದೆ ಬಿಡುವುದು.

ಜನಸಮೂಹದಲ್ಲಿದ್ದವರು ಹೋರಾಡುತ್ತಿದ್ದ ನಿರ್ದಿಷ್ಟ ಪಾಪಗಳ ಕುರಿತು ಮಾತನಾಡಿದ ಬಳಿಕ, ಯೋಹಾನನು ಅವರ ಗಮನವನ್ನು ಕ್ರಿಸ್ತನ ಕಡೆಗೆ ತಿರುಗಿಸುತ್ತಾನೆ. “ನನಗಿಂತ ಬಲಿಷ್ಠನಾದವರು ಬರುತ್ತಿದ್ದಾರೆ” ಮತ್ತು “ಅವರು ನಿಮಗೆ ಪವಿತ್ರಾತ್ಮರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ನೀಡುವರು” ಎಂದು ಅವನು ಅವರಿಗೆ ಹೇಳುತ್ತಾನೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಯೋಹಾನನು ಜನರಿಗೆ ಎರಡು ಆಜ್ಞೆಗಳನ್ನು ನೀಡುತ್ತಿದ್ದನು. ಮೊದಲನೆಯದು, ಪಾಪವನ್ನು ಜಯಿಸಲು ಶ್ರಮಿಸಿ. ಎರಡನೆಯದು, ನಿಮ್ಮ ಬಳಿಗೆ ಬರುತ್ತಿರುವವರ ಕಡೆಗೆ ನಿಮ್ಮ ದೃಷ್ಟಿಯನ್ನು ತಿರುಗಿಸಿ. ಪಾಪಕ್ಕಾಗಿ ಪಶ್ಚಾತ್ತಾಪಪಡುವುದಷ್ಟೇ ಸಾಕಾಗುವುದಿಲ್ಲ. ನಾವು ಪಶ್ಚಾತ್ತಾಪಪಟ್ಟ ಬಳಿಕ, ನಮ್ಮ ಆತ್ಮಗಳೊಳಗಿನ ಖಾಲಿತನವನ್ನು ಕ್ರಿಸ್ತನ ಸಾನ್ನಿಧ್ಯದಿಂದ ತುಂಬಿಸಬೇಕು.

ತಪಸ್ಸುಕಾಲದಂತೆಯೇ ಆಗಮನಕಾಲವೂ ಈ ಸಂದೇಶಗಳಿಗೆ ಕಿವಿಗೊಡಲು ನಮ್ಮ ಧಾರ್ಮಿಕ ವಿಧಿವರ್ಷದಲ್ಲಿನ ಒಂದು ಮಹತ್ವದ ಕಾಲವಾಗಿದೆ. ವರ್ಷದ ಪ್ರತಿದಿನವೂ ನಾವು ಪಾಪವನ್ನು ಜಯಿಸಲು ಶ್ರಮಿಸಬೇಕು ಮತ್ತು ಕ್ರಿಸ್ತನ ಕಡೆಗೆ ತಿರುಗಬೇಕು ಎಂಬುದು ನಿಜವಾದರೂ, ಈ ಆಧ್ಯಾತ್ಮಿಕ ಪ್ರಯತ್ನಗಳಿಗೆ ನಾವು ಒಗ್ಗೂಡಿದ ಶ್ರಮವನ್ನು ನೀಡಲು ಪ್ರತಿ ವರ್ಷವೂ ಒಂದು ವಿಶೇಷ ಕಾಲ ನಮಗೆ ಅಗತ್ಯವೆಂದು ದೇವರಿಗೆ ತಿಳಿದಿದೆ. ಆದ್ದರಿಂದ ಆಗಮನಕಾಲವು ಕಳೆದುಹೋಗುವ ಮುನ್ನ, ಸ್ನಾಪಕ ಯೋಹಾನನ ಮಾತುಗಳಿಗೆ ಕಿವಿಗೊಡಿ ಮತ್ತು ನಿಮ್ಮ ಅಂತಃಕರಣವನ್ನು ಕೂಲಂಕಷವಾಗಿ ಪರಿಶೀಲಿಸಲು ಸ್ವಲ್ಪ ಸಮಯ ಮೀಸಲಿಡಿ. ಇದಕ್ಕಾಗಿ ದಶಾಜ್ಞೆಗಳ ಅಥವಾ ಏಳು ಪ್ರಧಾನ ಪಾಪಗಳ ವಿವರವಾದ ಪಟ್ಟಿಯನ್ನು ಬಳಸಬಹುದು. ಅದನ್ನು ಮಾಡಿದ ಬಳಿಕ, ಪಾಪನಿವಾರಣ ಸಂಸ್ಕಾರವನ್ನು ಸ್ವೀಕರಿಸುವ ಅವಕಾಶವನ್ನು ಹುಡುಕಿಕೊಳ್ಳಿ. ಫಲಪ್ರದವಾದ ಆಗಮನಕಾಲಕ್ಕೆ ಹೀಗೆ ಮಾಡುವುದು ಅತ್ಯಗತ್ಯ.

ಪ್ರಸ್ತುತ ನೀವು ಅತಿ ಹೆಚ್ಚು ಹೋರಾಡುತ್ತಿರುವ ಪಾಪಗಳಿಗಾಗಿ ಪೂರ್ಣ ಹೃದಯದಿಂದ ಪಶ್ಚಾತ್ತಾಪಪಟ್ಟ ಬಳಿಕ, ಈ ಆಗಮನಕಾಲದಲ್ಲಿ ಮಾನವಾವತಾರದ ಅದ್ಭುತಕ್ಕೆ ವಿಶೇಷ ಗಮನಕೊಟ್ಟು ಲೋಕದ ರಕ್ಷಕರ ಕಡೆಗೆ ತಿರುಗಿ. ಚಿಕ್ಕ ಮಗುವಿನ ರೂಪದಲ್ಲಿ ನಮ್ಮ ಬಳಿಗೆ ಬಂದ ದೇವರನ್ನು ಆರಾಧಿಸಲು ಸಮಯ ಕಳೆಯಿರಿ. ಈ ಕೊಡುಗೆಯ ಕುರಿತು ಧ್ಯಾನಿಸಿ. ಪ್ರಾರ್ಥನಾಪೂರ್ವಕವಾಗಿ ಗೋದಲಿಯ ದೃಶ್ಯವನ್ನು ನೋಡಿ. ಕ್ರಿಸ್ತನ ಜನನದ ಕುರಿತ ಪವಿತ್ರ ಗ್ರಂಥದ ಭಾಗಗಳನ್ನು ಓದಿ. ಕಣ್ಣುಗಳನ್ನು ಮುಚ್ಚಿ, ಅವರ ಜನನದ ಸಮಯದಲ್ಲಿ ನೀವೂ ಅಲ್ಲಿರುವಂತೆ ಕಲ್ಪಿಸಿಕೊಳ್ಳಿ.

ಇಂದು, ಯೋಹಾನನ ಈ ಎರಡು ಕರೆಗಳ ಕುರಿತು ಚಿಂತಿಸಿ ಮತ್ತು ಅವುಗಳನ್ನು ನಿಮ್ಮ ಆಗಮನಕಾಲದ ಸಿದ್ಧತೆಗಳಲ್ಲಿ ಅಳವಡಿಸಿಕೊಳ್ಳಿ. ಈ ಆಗಮನಕಾಲದಲ್ಲಿ ನಿಮ್ಮ ಆತ್ಮವನ್ನು ಎಲ್ಲ ಪಾಪಗಳಿಂದ ವಿಶೇಷ ರೀತಿಯಲ್ಲಿ ಶುದ್ಧಗೊಳಿಸಿ. ಬಳಿಕ, ನಾವು ಆಚರಿಸಲು ಸಿದ್ಧರಾಗುತ್ತಿರುವ ಈ ವಾಸ್ತವದ ಕುರಿತು ಪ್ರಾರ್ಥನಾಪೂರ್ವಕವಾಗಿ ಚಿಂತಿಸಿ, ಧ್ಯಾನಿಸಿ. ಯೋಹಾನನು ಹೇಳುವಂತೆ, ಈ ಆಗಮನಕಾಲದಲ್ಲಿ ಇನ್ನಷ್ಟು ಗಾಢವಾಗುವ ನಿಮ್ಮ ಭಕ್ತಿ ಮತ್ತು ಪ್ರಾರ್ಥನೆಯ ಮೂಲಕ ಬಾಲ ಯೇಸು ನಿಮಗೆ ನಿಜವಾಗಿಯೂ “ಪವಿತ್ರಾತ್ಮರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ” ನೀಡಲು ಅವಕಾಶಕೊಡಿ.

ನನ್ನ ಪ್ರಿಯ ಯೇಸುವೇ, ನನ್ನ ಪಾಪಗಳನ್ನು ನೀನು ನೋಡುವಂತೆಯೇ ನಾನೂ ನೋಡಲು ದಯವಿಟ್ಟು ನನಗೆ ನೆರವಾಗು. ನಾನು ಎಸಗುವ ಪ್ರತಿಯೊಂದು ಪಾಪಕೃತ್ಯದ ಬಗ್ಗೆಯೂ, ಮಾಡಬೇಕಾದುದನ್ನು ಮಾಡದೆ ಬಿಡುವ ಸಣ್ಣ ಪಾಪಗಳ ಬಗ್ಗೆಯೂ ಎಚ್ಚರದಿಂದಿರಲು ನನಗೆ ಸಹಾಯಮಾಡು. ನನ್ನ ಪಾಪದ ಕುರಿತು ನಾನು ಚಿಂತಿಸುವಾಗ, ದಯವಿಟ್ಟು ನನ್ನನ್ನು ನಿನ್ನ ಕರುಣೆ ಮತ್ತು ಅನುಗ್ರಹದ ಕಡೆಗೆ ಸೆಳೆದುಕೊ. ಆಗ ಈ ಆಗಮನಕಾಲದಲ್ಲಿ ನಿನ್ನನ್ನು ಕಾಣಲು ನನ್ನ ಆತ್ಮದ ಕಣ್ಣುಗಳನ್ನು ಇನ್ನಷ್ಟು ವಿಶಾಲವಾಗಿ ತೆರೆಯಲು ಮತ್ತು ನಿನ್ನನ್ನು ಇನ್ನಷ್ಟು ಪೂರ್ಣವಾಗಿ ಆರಾಧಿಸಲು ನನಗೆ ಸಾಧ್ಯವಾಗಲಿ. ಯೇಸುವೇ, ನಿನ್ನಲ್ಲಿ ನಾನು ಭರವಸೆಯಿಡುತ್ತೇನೆ.

ಸಂತ ಅಂದ್ರೇಯರ ಕ್ರಿಸ್ಮಸ್ ನೊವೆನಾ
ಸಾಂಪ್ರದಾಯಿಕವಾಗಿ ನವೆಂಬರ್ 30ರಿಂದ ಕ್ರಿಸ್ಮಸ್ ಮುನ್ನಾದಿನದವರೆಗೆ ದಿನಕ್ಕೆ 15 ಬಾರಿ ಈ ಪ್ರಾರ್ಥನೆಯನ್ನು ಮಾಡಲಾಗುತ್ತದೆ.

ನಮ್ಮ ಎಲ್ಲ ಆಗಮನಕಾಲದ ಸಂಪನ್ಮೂಲಗಳನ್ನು ನೋಡಿ

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಆಗಮನಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು


  Subscribe to our YouTube channel  
  to be notified about new content.