ಮಾರ್ಚ್ 17, 2026
ತಪಸ್ಸುಕಾಲದ ನಾಲ್ಕನೇ ವಾರದ ಮಂಗಳವಾರ
ಇಂದಿನ ವಾಚನಗಳು
ಸಂತ ಪ್ಯಾಟ್ರಿಕ್, ಧರ್ಮಾಧ್ಯಕ್ಷ—ಐಚ್ಛಿಕ ಸ್ಮರಣೆ
ಯೇಸು ಅವನು ಅಲ್ಲಿ ಮಲಗಿರುವುದನ್ನು ಕಂಡು, ಅವನು ಬಹುಕಾಲದಿಂದ ಅಸ್ವಸ್ಥನಾಗಿದ್ದನೆಂದು ತಿಳಿದು, “ನೀನು ಗುಣಹೊಂದಲು ಬಯಸುತ್ತೀಯಾ?” ಎಂದು ಅವನನ್ನು ಕೇಳಿದರು. ಅಸ್ವಸ್ಥನು ಅವರಿಗೆ, “ಸ್ವಾಮೀ, ನೀರು ಕಲಕಿದಾಗ ನನ್ನನ್ನು ಕೊಳದೊಳಗೆ ಇಳಿಸಲು ನನಗೆ ಯಾರೂ ಇಲ್ಲ; ನಾನು ಹೋಗುತ್ತಿರುವಾಗಲೇ ಬೇರೊಬ್ಬನು ನನಗಿಂತ ಮೊದಲು ಅದರಲ್ಲಿ ಇಳಿಯುತ್ತಾನೆ” ಎಂದು ಉತ್ತರಿಸಿದನು. ಯೇಸು ಅವನಿಗೆ, “ಎದ್ದು, ನಿನ್ನ ಚಾಪೆಯನ್ನು ಎತ್ತಿಕೊಂಡು ನಡೆ” ಎಂದರು. ಕೂಡಲೇ ಆ ಮನುಷ್ಯನು ಗುಣಹೊಂದಿ, ತನ್ನ ಚಾಪೆಯನ್ನು ಎತ್ತಿಕೊಂಡು ನಡೆದನು. ಯೋಹಾನ 5:6–8
ಮೂವತ್ತೆಂಟು ವರ್ಷಗಳ ಕಾಲ ಅಸ್ವಸ್ಥನಾಗಿದ್ದ ಬಳಿಕ ಗುಣಹೊಂದಿದ ಈ ಮನುಷ್ಯನ ಅಪಾರ ಆನಂದವನ್ನು ಕಲ್ಪಿಸಿಕೊಳ್ಳುವುದರೊಂದಿಗೆ ಆರಂಭಿಸೋಣ. ಅವನು ಬೆಥೆಸ್ದಾ ಕೊಳದ ಬಳಿ ಚಾಪೆಯ ಮೇಲೆ ಮಲಗಿದ್ದನು. ಅಲ್ಲಿನ ನೀರು ಕಲಕಿದ ಬಳಿಕ ಅದರಲ್ಲಿ ಮೊದಲು ಇಳಿಯುವವನು ಗುಣಹೊಂದುತ್ತಾನೆ ಎಂಬ ನಂಬಿಕೆ ಪರಂಪರೆಯಲ್ಲಿತ್ತು. ನಂತರದ ಕೆಲವು ಪರಂಪರೆಗಳು ನೀರು ಕಲಕುವುದನ್ನು ಪ್ರಧಾನದೂತ ರಫಾಯೇಲರೊಂದಿಗೆ ಸಂಬಂಧಿಸಿವೆ. ಅವರ ಹೆಸರಿನ ಅರ್ಥ ‘ದೇವರ ಗುಣಪಡಿಸುವಿಕೆ’. ಪವಿತ್ರ ಗ್ರಂಥವು ರಫಾಯೇಲರನ್ನು ಈ ಘಟನೆಯೊಂದಿಗೆ ಸಂಬಂಧಿಸದಿದ್ದರೂ, ಇತರ ಬೈಬಲ್ ಪರಂಪರೆಗಳಲ್ಲಿ ಕಂಡುಬರುವ ಅವರ ಗುಣಪಡಿಸುವ ಸ್ವಭಾವವು ಈ ಸಂಬಂಧವನ್ನು ಧ್ಯಾನಕ್ಕೆ ಅರ್ಥಪೂರ್ಣವಾಗಿಸುತ್ತದೆ.
ಯೇಸು ಪಾರ್ಶ್ವವಾಯು ಪೀಡಿತನ ಬಳಿಗೆ ಬಂದು, “ನೀನು ಗುಣಹೊಂದಲು ಬಯಸುತ್ತೀಯಾ?” ಎಂದು ಕೇಳಿದಾಗ, ಆ ಪ್ರಶ್ನೆ ಬಹುತೇಕ ಅನಗತ್ಯವೆಂದು ತೋರುತ್ತದೆ. ಇಷ್ಟು ದೀರ್ಘಕಾಲ ನರಳಿದ ಮೇಲೆ ಗುಣಹೊಂದಲು ಯಾರು ತಾನೇ ಬಯಸುವುದಿಲ್ಲ? ಆದರೂ ಈ ಪ್ರಶ್ನೆ ಇನ್ನೂ ಆಳವಾದ ವಾಸ್ತವವನ್ನು ಸೂಚಿಸುತ್ತದೆ—ಅದು ದೈಹಿಕ ಅಸ್ವಸ್ಥತೆಯನ್ನು ಮೀರಿದ ವಾಸ್ತವ. ಆ ಮನುಷ್ಯನ ಸ್ಥಿತಿ ಮತ್ತು ಯೇಸುವಿನ ಪ್ರಶ್ನೆ, ರೂಢಿಯಾದ ಪಾಪದಲ್ಲಿ ಸಿಲುಕಿರುವ ಯಾವುದೇ ಆತ್ಮವನ್ನು ಬಾಧಿಸಬಹುದಾದ ಆಧ್ಯಾತ್ಮಿಕ ಪಾರ್ಶ್ವವಾಯುವನ್ನು ಸಂಕೇತಿಸುತ್ತವೆ. ಆ ಮನುಷ್ಯನು ತನ್ನನ್ನು ತಾನೇ ಗುಣಪಡಿಸಿಕೊಳ್ಳಲು ಸಾಧ್ಯವಾಗದಿದ್ದಂತೆ, ದೈವಿಕ ಹಸ್ತಕ್ಷೇಪವಿಲ್ಲದೆ ಪಾಪದ ಭಾರದಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಲು ನಮಗೂ ಸಾಧ್ಯವಿಲ್ಲ. ಇಂದು ಯೇಸು ನಮಗೂ ಅದೇ ಪ್ರಶ್ನೆಯನ್ನು ಕೇಳುತ್ತಾರೆ: ನಮ್ಮ ಆಧ್ಯಾತ್ಮಿಕ ಪಾರ್ಶ್ವವಾಯುವಿನಿಂದ ಮುಕ್ತರಾಗಲು ನಾವು ನಿಜವಾಗಿಯೂ ಬಯಸುತ್ತೇವೆಯೇ?
ಯೇಸುವಿಗೆ ಆ ಮನುಷ್ಯನು ನೀಡಿದ ಉತ್ತರವೂ ಒಂದು ಮುಖ್ಯವಾದ ಸತ್ಯವನ್ನು ಪ್ರಕಟಿಸುತ್ತದೆ. ಅವನು ಹೇಳುತ್ತಾನೆ, “ಸ್ವಾಮೀ, ನೀರು ಕಲಕಿದಾಗ ನನ್ನನ್ನು ಕೊಳದೊಳಗೆ ಇಳಿಸಲು ನನಗೆ ಯಾರೂ ಇಲ್ಲ; ನಾನು ಹೋಗುತ್ತಿರುವಾಗಲೇ ಬೇರೊಬ್ಬನು ನನಗಿಂತ ಮೊದಲು ಅದರಲ್ಲಿ ಇಳಿಯುತ್ತಾನೆ.” ಈ ಒಪ್ಪಿಗೆಯು ರೂಢಿಯಾದ ಪಾಪದೊಂದಿಗೆ ಹೋರಾಡುವವರು ಅನೇಕ ಬಾರಿ ಅನುಭವಿಸುವ ಆಳವಾದ ನಿರಾಶೆಯನ್ನು ಪ್ರತಿಬಿಂಬಿಸುತ್ತದೆ. ಪಾಪವನ್ನು ಜಯಿಸುವಲ್ಲಿ ವರ್ಷಗಟ್ಟಲೆ ಎದುರಾಗುವ ವೈಫಲ್ಯವು ಧೃತಿಗೆಡಿಸಬಹುದು, ಪಾಪಕ್ಕೆ ಶರಣಾಗುವ ಸ್ಥಿತಿಗೂ ತಳ್ಳಬಹುದು. ಆದರೆ ಈ ಧೃತಿಗೆಟ್ಟ ಸ್ಥಿತಿಯಲ್ಲಿಯೇ ಅನುಗ್ರಹವು ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ನಮ್ಮನ್ನು ನಾವೇ ಗುಣಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಒಪ್ಪಿಕೊಳ್ಳುವಾಗ, ಕ್ರಿಸ್ತನ ಗುಣಪಡಿಸುವ ಶಕ್ತಿಗೆ ನಾವು ಬಾಗಿಲು ತೆರೆಯುತ್ತೇವೆ.
ಬಹುಶಃ ಈ ಮನುಷ್ಯನು ಎಲ್ಲ ನಿರೀಕ್ಷೆಯನ್ನೂ ಕಳೆದುಕೊಂಡಿದ್ದ ಕಾರಣಕ್ಕಾಗಿಯೇ ಯೇಸು ಅವನನ್ನು ಆರಿಸಿಕೊಂಡಿರಬಹುದು. ಮೂವತ್ತೆಂಟು ವರ್ಷಗಳ ಯಾತನೆಯ ಬಳಿಕ, ಅವನಿಗೆ ಸಹಾಯ ಮಾಡಲು ಯಾರೂ ಇರಲಿಲ್ಲ; ಗುಣಹೊಂದುವ ನಿರೀಕ್ಷೆಯೂ ಅವನಿಗಿರಲಿಲ್ಲ. ಆದರೂ ಯೇಸು ತಮ್ಮ ಕರುಣೆಯಿಂದ ಮಧ್ಯಪ್ರವೇಶಿಸಿದರು. ಪಾಪದೊಂದಿಗೆ ಹೋರಾಡುತ್ತಾ, ಅದನ್ನು ಜಯಿಸುವ ನಿರೀಕ್ಷೆಯನ್ನೇ ಕಳೆದುಕೊಂಡಿರುವ ಎಲ್ಲರಿಗೂ ಇದು ಶಕ್ತಿಯುತ ಸಂದೇಶ: ಕ್ರಿಸ್ತನಲ್ಲಿ ಸದಾ ನಿರೀಕ್ಷೆಯಿದೆ. ನಾವು ಮುಂದಾಗಲು ಸಾಧ್ಯವಾಗದಾಗ ಅವರೇ ಮುಂದಾಗುತ್ತಾರೆ; ನಾವು ಅತಿ ಕಡಿಮೆ ನಿರೀಕ್ಷಿಸುವಲ್ಲಿ ಗುಣಪಡಿಸುವಿಕೆಯನ್ನು ತರುತ್ತಾರೆ.
ಕ್ರಿಸ್ತನು ಇಂದು ನಿಮ್ಮ ಬಳಿಗೆ ಬಂದು, “ನೀನು ಗುಣಹೊಂದಲು ಬಯಸುತ್ತೀಯಾ?” ಎಂದು ಕೇಳುತ್ತಿರುವುದನ್ನು ಕಲ್ಪಿಸಿಕೊಳ್ಳಿ. ನಮ್ಮ ಉತ್ತರವು ಆ ಮನುಷ್ಯನ ದೀನತೆಯನ್ನು ಪ್ರತಿಬಿಂಬಿಸಬೇಕು: ಪ್ರಭುವೇ, ನನ್ನ ಪಾಪದಿಂದ ನನ್ನನ್ನು ನಾನೇ ಮುಕ್ತಗೊಳಿಸಿಕೊಳ್ಳಲು ನನಗೆ ಶಕ್ತಿಯಿಲ್ಲ. ಹೀಗೆ ನಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳುವಾಗ, ಕ್ರಿಸ್ತನು ನಮ್ಮಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತೇವೆ. ನಮ್ಮ ದೀನತೆಯ ಮೂಲಕವೇ ನಾವು ಅವರ ಅನುಗ್ರಹವನ್ನು ಸ್ವೀಕರಿಸಲು ಸಿದ್ಧರಾಗುತ್ತೇವೆ.
ನಿಮ್ಮ ಜೀವನದಲ್ಲಿ ರೂಢಿಯಾಗಿರುವ ಯಾವುದೇ ಪಾಪದ ಕುರಿತು—ಅದು ಲಘುಪಾಪವಾಗಿರಲಿ ಅಥವಾ ಗುರುತರ ಪಾಪವಾಗಿರಲಿ—ಇಂದು ಚಿಂತಿಸಿ. ಈ ಪಾಪಗಳನ್ನು ಜಯಿಸುವುದು ಅಸಾಧ್ಯವೆಂದು ಭಾವಿಸಿ ನೀವು ಅವುಗಳಿಗೆ ಶರಣಾಗಿದ್ದೀರಾ? ಕೆಲವು ಪಾಪಗಳಿಗೆ ನೀವು ಎಷ್ಟು ಒಗ್ಗಿಕೊಂಡಿದ್ದೀರೆಂದರೆ, ಅವುಗಳಿಂದಾಗುವ ಆಧ್ಯಾತ್ಮಿಕ ಹಾನಿಯನ್ನು ಈಗ ಗುರುತಿಸುತ್ತಲೇ ಇಲ್ಲವೇ? ಕ್ರಿಸ್ತನು ಇಂದು ನಿಮ್ಮನ್ನು ಕೇಳುತ್ತಾರೆ: ನೀನು ಗುಣಹೊಂದಲು ಬಯಸುತ್ತೀಯಾ? ನಿಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳಿ, ನಿಮ್ಮನ್ನು ನೀವೇ ಗುಣಪಡಿಸಿಕೊಳ್ಳಲು ಅಸಮರ್ಥರೆಂದು ಅರಿಕೆ ಮಾಡಿ, ಪ್ರಭುವಿಗಾಗಿ ಕಾದಿರಿ. ಗಮನವಿಟ್ಟಿರಿ; ನಿಮಗೆ ಇನ್ನೂ ಅರಿವಾಗದಿರಬಹುದಾದ ರೀತಿಗಳಲ್ಲಿ ಕಾರ್ಯನಿರ್ವಹಿಸುತ್ತಾ, ಅವರೇ ಈಗಾಗಲೇ ದೈವಿಕ ಮುನ್ನಡೆ ತೆಗೆದುಕೊಳ್ಳುತ್ತಿರುವುದನ್ನು ನೀವು ಕಾಣುವಿರಿ.
ನನ್ನ ಬಗ್ಗೆ ಕಾಳಜಿವಹಿಸುವ ಪ್ರಭುವೇ, ನನ್ನ ಪಾಪವನ್ನೂ ಅದು ನನ್ನ ಮೇಲೆ ಹೇರುವ ಭಾರವನ್ನೂ ನೀನು ಸಂಪೂರ್ಣವಾಗಿ ಬಲ್ಲೆ. ನಾನು ಗುಣಹೊಂದಲು ಬಯಸುತ್ತೇನೆಯೇ ಎಂದು ಕೇಳುತ್ತಾ ನೀನು ಹಗಲಿರುಳು ನನ್ನ ಬಳಿಗೆ ಬರುತ್ತೀಯೆ. ನಿನಗೂ ನಿನ್ನ ಸೌಮ್ಯ ಆಹ್ವಾನಗಳಿಗೂ ಗಮನಕೊಡಲು ದಯಮಾಡಿ ನನಗೆ ಸಹಾಯಮಾಡು. ನಾನು ಬದಲಾಗಬಲ್ಲೆ, ನಿನಗೆ ಇನ್ನೂ ಹತ್ತಿರವಾಗಬಲ್ಲೆ ಮತ್ತು ನಾನು ಯಾವ ಸಂತನಾಗಬೇಕೆಂದು ನೀನು ಬಯಸುತ್ತೀಯೋ ಆ ಸಂತನಾಗಬಲ್ಲೆ ಎಂಬ ನಿರೀಕ್ಷೆಯನ್ನು ಹೊಂದಲು ನನಗೆ ಸಹಾಯಮಾಡು. ಯೇಸುವೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೇನೆ.
ಇಪ್ಪತ್ತನಾಲ್ಕನೆಯ ದಿನ ಧ್ಯಾನಗಳು:
ಮರುಭೂಮಿಯಲ್ಲಿ 40 ದಿನಗಳು & ಶಿಲುಬೆಯ ಬಳಿ 40 ದಿನಗಳು
ಸಂತ ಜೋಸೆಫರಿಗೆ ನೊವೇನಾ. ಮಾರ್ಚ್ 10-18 ರವರೆಗೆ ಪ್ರಾರ್ಥಿಸಲಾಗುತ್ತದೆ.
ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು
ಇಂದಿನ ಸಂತ – ಸಂತ ಪ್ಯಾಟ್ರಿಕ್, ಧರ್ಮಾಧ್ಯಕ್ಷ






