ಕನ್ನಡ

ಸ್ತ್ರೀಯರಲ್ಲಿ ಅತ್ಯಂತ ಧನ್ಯರು ನೀವು!

ಶುಕ್ರವಾರ, ಮೇ 31, 2019

ಪೂಜ್ಯ ಕನ್ಯಾಮರಿಯಮ್ಮನ ಭೇಟಿಯ ಹಬ್ಬ

ಇಂದಿನ ವಾಚನಗಳು

ಪವಿತ್ರಾತ್ಮರಿಂದ ತುಂಬಿದ ಎಲಿಜಬೇತ್ ಗಟ್ಟಿಯಾದ ಸ್ವರದಲ್ಲಿ ಉದ್ಗರಿಸಿ, “ಸ್ತ್ರೀಯರಲ್ಲಿ ನೀವು ಆಶೀರ್ವದಿತರು; ನಿಮ್ಮ ಗರ್ಭದ ಫಲವೂ ಆಶೀರ್ವದಿತವಾಗಿದೆ.  ನನ್ನ ಪ್ರಭುವಿನ ತಾಯಿ ನನ್ನ ಬಳಿಗೆ ಬರುವ ಈ ಭಾಗ್ಯ ನನಗೆ ಹೇಗೆ ದೊರೆಯಿತು?” ಎಂದಳು.  ಲೂಕ 1:41b-43

ಯೇಸುವಿನ ತಾಯಿಯಾದ ನಮ್ಮ ಪೂಜ್ಯ ಮಾತೆ ನಮ್ಮನ್ನು ಭೇಟಿಯಾಗಲು ಬಂದರೆ ಅದು ಎಂಥ ಗೌರವ!  ಎಲಿಜಬೇತ್ ಈ ಗೌರವವನ್ನು ಆಳವಾಗಿ ಅರಿತಿದ್ದಳು. ಆದ್ದರಿಂದಲೇ ಅವಳು ದೈವಪ್ರೇರಣೆಯಿಂದ ಆ ಸತ್ಯವನ್ನು ಒಪ್ಪಿಕೊಂಡು ಉದ್ಗರಿಸಿದಳು. 

ತಮ್ಮ ಪ್ರಭುವಿನ ತಾಯಿ ತಮ್ಮ ಬಳಿಗೆ ಬಂದದ್ದು ಎಲಿಜಬೆತ್ ಅವರಿಗೆ ದೊರೆತ ಒಂದು ವಿಶಿಷ್ಟ ಕೊಡುಗೆಯಾಗಿದ್ದರೂ, ದೇವಮಾತೆಯ ಸಾನ್ನಿಧ್ಯವನ್ನು ಪ್ರತಿದಿನ ನಮ್ಮ ಜೀವನದಲ್ಲಿ ಆಹ್ವಾನಿಸುವ ಅವಕಾಶದಿಂದ ನಾವೆಲ್ಲರೂ ಅಷ್ಟೇ ಧನ್ಯರಾಗಿದ್ದೇವೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಮರಿಯ ಮಾತೆ ಎಲ್ಲ ಸಂತರ ರಾಣಿಯಾಗಿದ್ದಾರೆ; ಆದರೆ ಅವರು ಎಲ್ಲ ಪಾಪಿಗಳ ರಾಣಿಯೂ, ಪವಿತ್ರತೆಗಾಗಿ ಶ್ರಮಿಸುತ್ತಿರುವವರ ರಾಣಿಯೂ ಆಗಿದ್ದಾರೆ.  ಅವರು ಜೀವಂತರೆಲ್ಲರ ತಾಯಿಯೂ, ಧರ್ಮಸಭೆಯ ತಾಯಿಯೂ ಆಗಿದ್ದಾರೆ.  ದೇವರ ಪರಿಪಾಲನೆಯಲ್ಲಿ, ಅಗತ್ಯದಲ್ಲಿರುವವರನ್ನು ಪ್ರತಿದಿನ ಭೇಟಿಮಾಡುವ ತಮ್ಮ ವಿಶಿಷ್ಟ ಪಾತ್ರವನ್ನು ಅವರು ಮುಂದುವರಿಸುತ್ತಿದ್ದಾರೆ.  ಎಲಿಜಬೆತ್ ಅವರನ್ನು ಭೇಟಿಮಾಡಿದ್ದಕ್ಕಿಂತಲೂ ಹೆಚ್ಚು ಆಳವಾದ ಮತ್ತು ಪರಿವರ್ತನೆಯನ್ನು ಉಂಟುಮಾಡುವ ರೀತಿಯಲ್ಲಿ ಅವರು ಇದನ್ನು ಮಾಡುತ್ತಾರೆ.  ತಮ್ಮ ಮಕ್ಕಳಾದ ನಮ್ಮ ಬಳಿಗೆ ಮರಿಯ ಮಾತೆ ನೀಡುವ ಭೇಟಿಗಳು ಈಗ ಅನುಗ್ರಹದ ವ್ಯವಸ್ಥೆಯಲ್ಲಿ ನಡೆಯುತ್ತವೆ.

ನಮ್ಮ ಧನ್ಯ ಮಾತೆ ಅನುಗ್ರಹದ ವ್ಯವಸ್ಥೆಯಲ್ಲಿ ನಮ್ಮನ್ನು ಭೇಟಿಮಾಡುತ್ತಾರೆ ಎಂದು ನಾವು ಹೇಳುವಾಗ ಅದರ ಅರ್ಥವೇನು?  ಅವರೊಂದಿಗಿನ ನಮ್ಮ ಸಂಬಂಧವು ದೇವರ ದೈವಿಕ ಚಿತ್ತ ಮತ್ತು ಯೋಜನೆಯನ್ನು ಆಧರಿಸಿದೆ ಎಂಬುದೇ ಅದರ ಅರ್ಥ.  ಅವರೊಂದಿಗೆ ನಾವು ಸಂಬಂಧವನ್ನು ಹೊಂದಲು ಸಾಧ್ಯವಿದೆ ಮತ್ತು ಆ ಸಂಬಂಧದ ಮೂಲಕ ಅವರು ತಮ್ಮ ಪುತ್ರನಿಂದ ಅಸಂಖ್ಯಾತ ಕರುಣೆಯ ವರಗಳನ್ನು ನಮಗೆ ತಲುಪಿಸುತ್ತಾರೆ ಎಂಬುದು ಅದರ ಅರ್ಥ.  ಜಗತ್ತು ಇದುವರೆಗೆ ಕಂಡಿರುವ ಅನುಗ್ರಹದ ಅತ್ಯಂತ ಶಕ್ತಿಶಾಲಿ ಮಧ್ಯಸ್ಥೆಯಾಗಿ ಅವರು ನಮಗಾಗಿ ಇರುತ್ತಾರೆ ಎಂಬುದು ಅದರ ಅರ್ಥ.  ನಮ್ಮ ಜೀವನದಲ್ಲಿ ಅವರ ಪ್ರಭಾವವು ಆಳವಾದದ್ದು, ಗಹನವಾದದ್ದು, ಪರಿವರ್ತನೆಯನ್ನು ಉಂಟುಮಾಡುವಂಥದ್ದು ಮತ್ತು ಆಪ್ತವಾಗಿ ವೈಯಕ್ತಿಕವಾದದ್ದು ಎಂಬುದು ಅದರ ಅರ್ಥ.

ನಮ್ಮ ಪೂಜ್ಯ ಮಾತೆಯೊಂದಿಗಿನ ಸಂಬಂಧದಲ್ಲಿ ಕಷ್ಟಕರವಾದ ಅಂಶವೆಂದರೆ, ಅದು ಶಾರೀರಿಕ ಮತ್ತು ಬಾಹ್ಯ ಮಟ್ಟದಲ್ಲಿ ನಡೆಯದೆ, ಆಧ್ಯಾತ್ಮಿಕ ಮತ್ತು ಆಂತರಿಕ ಮಟ್ಟದಲ್ಲಿ ನಡೆಯಬೇಕಾಗಿರುವುದು.  ಆದರೆ ಹೀಗಿದೆ ಎಂಬ ಕಾರಣಕ್ಕೆ, ಅವರನ್ನು ಅರಿಯುವ ಮತ್ತು ಪ್ರೀತಿಸುವ ನಮ್ಮ ಸಾಮರ್ಥ್ಯ ಕಡಿಮೆಯಾಗಿದೆ ಎಂದು ನಾವು ಭಾವಿಸಬಾರದು.  ವಾಸ್ತವವಾಗಿ, ಅನುಗ್ರಹದ ಮೂಲಕ ನಮ್ಮ ಪೂಜ್ಯ ಮಾತೆಯೊಂದಿಗೆ ನಾವು ಈಗ ಹೊಂದಬಹುದಾದ ಸಂಬಂಧವು, ಅವರ ಸಂದರ್ಶನದ ಸಂದರ್ಭದಲ್ಲಿ ಎಲಿಜಬೇತ್ ಅವರೊಂದಿಗೆ ಹೊಂದಲು ಸಾಧ್ಯವಾದ ಸಂಬಂಧಕ್ಕಿಂತಲೂ ಬಹಳ ಆಳವಾದದ್ದೂ ಗಾಢವಾದದ್ದೂ ಆಗಿದೆ. 

ಇಂದು ದೇವಮಾತೆಯೊಂದಿಗಿನ ನಿಮ್ಮ ಸಂಬಂಧದ ಕುರಿತು ಚಿಂತಿಸಿ.  ಬಹಳ ಹಿಂದೆಯೇ ಅವರು ಎಲಿಜಬೆತ್ ಅವರನ್ನು ಭೇಟಿಮಾಡಿದರು; ಈಗ ತಮ್ಮ ಪುತ್ರನ ಅನುಗ್ರಹ ಮತ್ತು ಕರುಣೆಯನ್ನು ನಿಮಗೆ ತರಲು ನಿಮ್ಮ ಆತ್ಮವನ್ನು ಭೇಟಿಮಾಡಲು ಬಯಸುತ್ತಾರೆ.  ಅನುಗ್ರಹದ ವ್ಯವಸ್ಥೆಯಲ್ಲಿ ಅವರೊಂದಿಗೆ ಈ ಸುಂದರ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸಿ.  ಅವರನ್ನು ಆಹ್ವಾನಿಸಿ, ಅವರ ಮಾತಿಗೆ ಕಿವಿಗೊಡಿ, ಅವರು ನಿಮಗೆ ತರುವ ಅನುಗ್ರಹವನ್ನು ಸ್ವೀಕರಿಸಲು ಮನಸ್ಸನ್ನು ತೆರೆಯಿರಿ ಮತ್ತು ನಿಮ್ಮ ಪ್ರಭುವಿನ ತಾಯಿ ನಿಮ್ಮ ಬಳಿಗೆ ಬರುತ್ತಾರೆ ಎಂಬುದಕ್ಕಾಗಿ ಎಲಿಜಬೆತ್ ಅವರೊಂದಿಗೆ ಆನಂದಿಸಿ.

ಅತ್ಯಂತ ಪ್ರೀತಿಯ ಮಾತೆ ಮರಿಯಮ್ಮನವರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ಮಾತೃಸಹಜ ಆರೈಕೆ ಮತ್ತು ಮಧ್ಯಸ್ಥಿಕೆಯಲ್ಲಿ ಭರವಸೆಯಿಟ್ಟು ನನ್ನ ಜೀವನವನ್ನು ನಿಮಗೆ ಸಮರ್ಪಿಸುತ್ತೇನೆ.  ಪ್ರೀತಿಯ ಮಾತೆಯೇ, ನಿಮ್ಮ ಪುತ್ರ ಯೇಸುವಿನಿಂದ ನೀವು ನನಗೆ ತರಲು ಬಯಸುವ ಎಲ್ಲವನ್ನೂ ಸ್ವೀಕರಿಸಲು ನನ್ನ ಹೃದಯವನ್ನು ತೆರೆಯುವಂತೆ ನನಗೆ ಸಹಾಯಮಾಡಿರಿ.  ನೀವು ನನ್ನ ಬಗ್ಗೆ ಕಾಳಜಿವಹಿಸಿ, ನಿಮ್ಮ ಪುತ್ರ ಯೇಸುವಿನ ಹೃದಯದ ಕರುಣೆಯನ್ನು ನನಗೆ ತರಲು ಬಯಸುತ್ತೀರಿ ಎಂಬುದು ನನಗೆ ಗೌರವವನ್ನು ತರುವುದರ ಜೊತೆಗೆ ನನ್ನನ್ನು ವಿನಮ್ರನನ್ನಾಗಿಸುತ್ತದೆ.  ಮಾತೆ ಮರಿಯಮ್ಮನವರೇ, ನಮಗಾಗಿ ಪ್ರಾರ್ಥಿಸಿರಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಹೆಚ್ಚಿನ ಓದಿಗಾಗಿ – ಪೂಜ್ಯ ಕನ್ಯಾಮರಿಯಮ್ಮನವರ ಸಂದರ್ಶನ

ನಮ್ಮ ಪೂಜ್ಯ ಮಾತೆಗೆ ಪ್ರಾರ್ಥನೆಗಳು