ಕನ್ನಡ

ನೀವು ಶ್ರೀಮಂತರಾಗಲು ಬಯಸುತ್ತೀರಾ?

ಸೋಮವಾರ, ಆಗಸ್ಟ್ 19, 2019

ಸಾಮಾನ್ಯ ಕಾಲದ ಇಪ್ಪತ್ತನೆಯ ವಾರದ ಸೋಮವಾರ

ಇಂದಿನ ವಾಚನಗಳು

ಸಂತ ಜಾನ್ ಯೂಡ್ಸ್, ಯಾಜಕ – ಐಚ್ಛಿಕ ಸ್ಮರಣೆ

“ನೀನು ಪರಿಪೂರ್ಣನಾಗಲು ಬಯಸಿದರೆ, ಹೋಗು, ನಿನ್ನಲ್ಲಿರುವುದನ್ನು ಮಾರಿ ಬಡವರಿಗೆ ಕೊಡು; ಆಗ ಸ್ವರ್ಗದಲ್ಲಿ ನಿನಗೆ ನಿಧಿ ದೊರೆಯುವುದು. ಅನಂತರ ಬಂದು ನನ್ನನ್ನು ಹಿಂಬಾಲಿಸು.”  ಈ ಮಾತನ್ನು ಕೇಳಿದಾಗ ಆ ಯುವಕನು ದುಃಖದಿಂದ ಹೊರಟುಹೋದನು; ಏಕೆಂದರೆ ಅವನಿಗೆ ಬಹಳ ಆಸ್ತಿಪಾಸ್ತಿಗಳಿದ್ದವು.  ಮತ್ತಾಯ 19:21-22

ಯೇಸು ನಿಮಗಾಗಲಿ ನನಗಾಗಲಿ ಈ ಮಾತನ್ನು ಹೇಳಲಿಲ್ಲವಲ್ಲ, ಸದ್ಯ!  ಅಲ್ಲವೇ?  ಅಥವಾ ಅವರು ನಮಗೂ ಇದನ್ನು ಹೇಳಿದ್ದಾರೆಯೇ?  ನಾವು ಪರಿಪೂರ್ಣರಾಗಲು ಬಯಸುವುದಾದರೆ, ಇದು ನಮ್ಮೆಲ್ಲರಿಗೂ ಅನ್ವಯಿಸುತ್ತದೆಯೇ?  ಉತ್ತರವು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು.

ನಿಜ, ತಮ್ಮ ಆಸ್ತಿಪಾಸ್ತಿಗಳನ್ನೆಲ್ಲ ನಿಜವಾಗಿಯೂ ಮಾರಿ, ಬಂದದ್ದನ್ನು ದಾನಮಾಡಲು ಯೇಸು ಕೆಲವರನ್ನು ಕರೆಯುತ್ತಾರೆ.  ಈ ಕರೆಗೆ ಓಗೊಡುವವರು ಎಲ್ಲ ಭೌತಿಕ ಸೊತ್ತುಗಳ ಮೇಲಿನ ವ್ಯಾಮೋಹವನ್ನು ತೊರೆಯುವುದರಲ್ಲಿ ಮಹತ್ತರ ಸ್ವಾತಂತ್ರ್ಯವನ್ನು ಕಂಡುಕೊಳ್ಳುತ್ತಾರೆ.  ಅವರ ಜೀವನದ ಕರೆಯು ನಮ್ಮಲ್ಲಿ ಪ್ರತಿಯೊಬ್ಬರೂ ಪಡೆದಿರುವ ಆಮೂಲಾಗ್ರ ಆಂತರಿಕ ಕರೆಯನ್ನು ನಮ್ಮೆಲ್ಲರಿಗೂ ತೋರಿಸುವ ಸಂಕೇತವಾಗಿದೆ.  ಆದರೆ ನಮ್ಮಲ್ಲಿ ಉಳಿದವರ ವಿಷಯವೇನು?  ನಮ್ಮ ಪ್ರಭು ನಮಗೆ ನೀಡಿರುವ ಆ ಆಮೂಲಾಗ್ರ ಆಂತರಿಕ ಕರೆ ಯಾವುದು?  ಅದು ಆಧ್ಯಾತ್ಮಿಕ ಬಡತನದ ಕರೆ.  “ಆಧ್ಯಾತ್ಮಿಕ ಬಡತನ” ಎಂದರೆ, ನಿಜವಾದ ಭೌತಿಕ ಬಡತನದಲ್ಲಿ ಜೀವಿಸಲು ಕರೆಹೊಂದಿದವರಷ್ಟೇ ಪೂರ್ಣವಾಗಿ ಈ ಲೋಕದ ವಸ್ತುಗಳ ಮೇಲಿನ ವ್ಯಾಮೋಹವನ್ನು ತೊರೆಯಲು ನಮ್ಮಲ್ಲಿ ಪ್ರತಿಯೊಬ್ಬರೂ ಕರೆಹೊಂದಿದ್ದೇವೆ ಎಂದರ್ಥ.  ಒಂದೇ ವ್ಯತ್ಯಾಸವೆಂದರೆ, ಒಂದು ಕರೆ ಆಂತರಿಕವೂ ಬಾಹ್ಯವೂ ಆಗಿದೆ; ಇನ್ನೊಂದು ಕರೆ ಕೇವಲ ಆಂತರಿಕವಾಗಿದೆ.  ಆದರೆ ಅದೂ ಅಷ್ಟೇ ಆಮೂಲಾಗ್ರವಾಗಿರಬೇಕು.

ಆಂತರಿಕ ಬಡತನ ಹೇಗಿರುತ್ತದೆ?  ಅದು ಒಂದು ಧನ್ಯವಚನವಾಗಿದೆ.  ಸಂತ ಮತ್ತಾಯರು ಹೇಳುವಂತೆ, “ಆತ್ಮದಲ್ಲಿ ಬಡವರಾಗಿರುವವರು ಧನ್ಯರು,” ಮತ್ತು ಸಂತ ಲೂಕರು ಹೇಳುವಂತೆ, “ಬಡವರು ಧನ್ಯರು.”  ಆಧ್ಯಾತ್ಮಿಕ ಬಡತನವೆಂದರೆ, ಈ ಕಾಲದ ಭೌತಿಕ ಆಕರ್ಷಣೆಗಳ ಮೇಲಿನ ವ್ಯಾಮೋಹವನ್ನು ತೊರೆಯುವ ಮೂಲಕ ಆಧ್ಯಾತ್ಮಿಕ ಸಂಪತ್ತಿನ ಆಶೀರ್ವಾದವನ್ನು ಕಂಡುಕೊಳ್ಳುವುದು.  ಇಲ್ಲ, ಭೌತಿಕ “ವಸ್ತುಗಳು” ಕೆಟ್ಟವುಗಳಲ್ಲ.  ಆದ್ದರಿಂದಲೇ ವೈಯಕ್ತಿಕ ಆಸ್ತಿಪಾಸ್ತಿಗಳನ್ನು ಹೊಂದಿರುವುದರಲ್ಲಿ ತಪ್ಪಿಲ್ಲ.  ಆದರೆ ಈ ಲೋಕದ ವಸ್ತುಗಳ ಮೇಲೆ ನಮಗೆ ಬಲವಾದ ವ್ಯಾಮೋಹವೂ ಇರುವುದು ತೀರ ಸಾಮಾನ್ಯ.  ಅನೇಕ ಬಾರಿ ನಾವು ಇನ್ನೂ ಹೆಚ್ಚು ಹೆಚ್ಚು ಬೇಕೆಂದು ಬಯಸುತ್ತೇವೆ ಮತ್ತು ಇನ್ನಷ್ಟು “ವಸ್ತುಗಳು” ನಮ್ಮನ್ನು ಸಂತೋಷಪಡಿಸುತ್ತವೆ ಎಂದು ಯೋಚಿಸುವ ಬಲೆಗೆ ಬೀಳುತ್ತೇವೆ.  ಅದು ನಿಜವಲ್ಲ; ನಮ್ಮ ಅಂತರಾಳದಲ್ಲಿ ಅದು ನಮಗೆ ತಿಳಿದಿದೆ. ಆದರೂ ಇನ್ನಷ್ಟು ಹಣ ಮತ್ತು ಆಸ್ತಿಪಾಸ್ತಿಗಳು ನಮ್ಮನ್ನು ತೃಪ್ತಿಪಡಿಸುತ್ತವೆ ಎಂಬಂತೆ ವರ್ತಿಸುವ ಬಲೆಗೆ ನಾವು ಬೀಳುತ್ತಲೇ ಇರುತ್ತೇವೆ.  ಹಳೆಯ ರೋಮನ್ ಧರ್ಮೋಪದೇಶ ಗ್ರಂಥವೊಂದು ಹೇಳುವಂತೆ, “ಹಣವಿರುವವನಿಗೆ ಎಂದಿಗೂ ಸಾಕಷ್ಟು ಹಣವಿರುವುದಿಲ್ಲ.”

ಈ ಲೋಕದ ವಸ್ತುಗಳ ಮೇಲೆ ವ್ಯಾಮೋಹ ಬೆಳೆಸಿಕೊಳ್ಳದೆ ಈ ಲೋಕದಲ್ಲಿ ಜೀವಿಸಲು ನಿಮಗೆ ದೊರೆತಿರುವ ಸ್ಪಷ್ಟ ಕರೆಯ ಕುರಿತು ಇಂದು ಚಿಂತಿಸಿ.  ಪವಿತ್ರ ಜೀವನವನ್ನು ನಡೆಸುವುದಕ್ಕೂ ನಿಮ್ಮ ಜೀವನದ ಉದ್ದೇಶವನ್ನು ಈಡೇರಿಸುವುದಕ್ಕೂ ಆಸ್ತಿಪಾಸ್ತಿಗಳು ಕೇವಲ ಸಾಧನಗಳಾಗಿವೆ.  ಇದರ ಅರ್ಥ, ನಿಮಗೆ ಅಗತ್ಯವಿರುವುದು ನಿಮ್ಮ ಬಳಿ ಇರುತ್ತದೆ; ಆದರೆ ಮಿತಿಮೀರಿದ ಸಂಗ್ರಹವನ್ನು ತಪ್ಪಿಸಲು ಮತ್ತು ವಿಶೇಷವಾಗಿ ಲೌಕಿಕ ಆಸ್ತಿಪಾಸ್ತಿಗಳ ಮೇಲಿನ ಆಂತರಿಕ ವ್ಯಾಮೋಹವನ್ನು ತೊರೆಯಲು ನೀವು ಶ್ರಮಿಸುತ್ತೀರಿ ಎಂಬುದೂ ಇದರ ಅರ್ಥವಾಗಿದೆ.

ಪ್ರಭುವೇ, ನನ್ನಲ್ಲಿರುವ ಮತ್ತು ನನ್ನ ಸ್ವಾಮ್ಯದಲ್ಲಿರುವ ಎಲ್ಲವನ್ನೂ ನಾನು ಸ್ವಇಚ್ಛೆಯಿಂದ ತ್ಯಜಿಸುತ್ತೇನೆ.  ಅವೆಲ್ಲವನ್ನೂ ಆಧ್ಯಾತ್ಮಿಕ ಬಲಿಯಾಗಿ ನಿಮಗೆ ಅರ್ಪಿಸುತ್ತೇನೆ.  ನನ್ನಲ್ಲಿರುವುದೆಲ್ಲವನ್ನೂ ಸ್ವೀಕರಿಸಿ, ನೀವು ಬಯಸುವ ರೀತಿಯಲ್ಲಿ ಮಾತ್ರ ಅವುಗಳನ್ನು ಬಳಸಲು ನನಗೆ ನೆರವಾಗಿ.  ಆ ನಿರ್ಲಿಪ್ತತೆಯಲ್ಲಿ, ನೀವು ನನಗಾಗಿ ಇಟ್ಟಿರುವ ನಿಜವಾದ ಸಂಪತ್ತನ್ನು ನಾನು ಕಂಡುಕೊಳ್ಳುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು – ಸಂತ ಜಾನ್ ಯೂಡ್ಸ್