ಕನ್ನಡ

ಪಾಪದಿಂದ ಮುಕ್ತಿ

ಏಪ್ರಿಲ್ 1, 2020
ತಪಸ್ಸುಕಾಲದ ಐದನೇ ವಾರದ ಬುಧವಾರ
ಇಂದಿನ ವಾಚನಗಳು

ಯೇಸು ಅವರಿಗೆ ಉತ್ತರಿಸಿದರು: “ಆಮೆನ್, ಆಮೆನ್, ನಾನು ನಿಮಗೆ ಹೇಳುತ್ತೇನೆ, ಪಾಪ ಮಾಡುವ ಪ್ರತಿಯೊಬ್ಬನೂ ಪಾಪಕ್ಕೆ ಗುಲಾಮನಾಗಿದ್ದಾನೆ.  ಗುಲಾಮನು ಮನೆಯಲ್ಲಿ ಎಂದೆಂದಿಗೂ ಉಳಿಯುವುದಿಲ್ಲ, ಆದರೆ ಮಗನು ಸದಾ ಉಳಿಯುತ್ತಾನೆ.  ಆದ್ದರಿಂದ ಪುತ್ರನು ನಿಮ್ಮನ್ನು ಮುಕ್ತಗೊಳಿಸಿದರೆ, ನೀವು ನಿಜವಾಗಿಯೂ ಸ್ವತಂತ್ರರಾಗುವಿರಿ.”  ಯೋಹಾನ 8:34–36

ಯೇಸು ನಿಮ್ಮನ್ನು ಮುಕ್ತಗೊಳಿಸಲು ಬಯಸುತ್ತಾರೆ. ಆದರೆ ನೀವು ಮುಕ್ತರಾಗಲು ಬಯಸುತ್ತೀರಾ?  ಬೌದ್ಧಿಕ ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಾಗಿರಬೇಕು.  ಖಂಡಿತವಾಗಿಯೂ ನೀವು ನಿಮ್ಮ ಸ್ವಾತಂತ್ರ್ಯವನ್ನು ಬಯಸುತ್ತೀರಿ!  ಯಾರು ತಾನೇ ಬಯಸುವುದಿಲ್ಲ?  ಆದರೆ ಪ್ರಾಯೋಗಿಕ ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರಿಸುವುದು ಹೆಚ್ಚು ಕಷ್ಟ.  ವಾಸ್ತವವಾಗಿ ಹೇಳುವುದಾದರೆ, ಅನೇಕರು ಪಾಪದಲ್ಲೇ ಬಹಳ ನೆಮ್ಮದಿಯಿಂದ ಬದುಕುತ್ತಿದ್ದಾರೆ.  ಪಾಪವು ಮೋಸಗೊಳಿಸುವ ತೃಪ್ತಿಯನ್ನು ನೀಡುತ್ತದೆ; ಅದರಿಂದ ವಿಮುಖರಾಗುವುದು ಕಷ್ಟವಾಗಬಹುದು.  ಪಾಪವು ಆ ಕ್ಷಣದಲ್ಲಿ ನಿಮಗೆ ಒಳ್ಳೆಯ “ಅನುಭವ” ನೀಡಬಹುದು; ಆದರೂ ದೀರ್ಘಾವಧಿಯಲ್ಲಿ ಅದು ನಿಮ್ಮ ಸ್ವಾತಂತ್ರ್ಯವನ್ನೂ ಆನಂದವನ್ನೂ ಕಸಿದುಕೊಳ್ಳುತ್ತದೆ.  ಆದರೆ ಅನೇಕರು ಮತ್ತೆ ಮತ್ತೆ ಅದರೆಡೆಗೆ ಮರಳಲು ಆ ಕ್ಷಣಿಕ “ತೃಪ್ತಿ”ಯೇ ಸಾಕಾಗುತ್ತದೆ.

ಹಾಗಾದರೆ ನಿಮ್ಮ ವಿಷಯವೇನು?  ಪರಮೋನ್ನತ ದೇವರ ಪುತ್ರ ಅಥವಾ ಪುತ್ರಿಯಾಗಿ ಬದುಕಲು ನೀವು ಸ್ವತಂತ್ರರಾಗಬೇಕೆಂದು ಬಯಸುತ್ತೀರಾ?  ನಿಮ್ಮ ಉತ್ತರ “ಹೌದು” ಎಂದಾದರೆ, ಇದು ನೋವುಂಟುಮಾಡಿದರೂ ಆನಂದದಾಯಕವಾಗಿರುತ್ತದೆ ಎಂಬುದಕ್ಕೆ ಸಿದ್ಧರಾಗಿರಿ.  ಪಾಪವನ್ನು ಜಯಿಸಲು ಶುದ್ಧೀಕರಣದ ಅಗತ್ಯವಿದೆ.  ಪಾಪವನ್ನು “ಬಿಟ್ಟುಬಿಡುವ” ಪ್ರಕ್ರಿಯೆಗೆ ನಿಜವಾದ ತ್ಯಾಗ ಮತ್ತು ಬದ್ಧತೆ ಬೇಕಾಗುತ್ತದೆ.  ಸಂಪೂರ್ಣ ಭರವಸೆಯಿಂದಲೂ ಆತ್ಮಸಮರ್ಪಣೆಯಿಂದಲೂ ನೀವು ಪ್ರಭುವಿನ ಕಡೆಗೆ ತಿರುಗಬೇಕಾಗುತ್ತದೆ.  ಹೀಗೆ ಮಾಡುವಾಗ, ನಿಮ್ಮ ಅಹಂಭಾವಕ್ಕೆ, ನಿಮ್ಮ ಉತ್ಕಟ ಬಯಕೆಗಳಿಗೆ ಮತ್ತು ನಿಮ್ಮ ಸ್ವಾರ್ಥಪರ ಇಚ್ಛೆಗೆ ಸಂಬಂಧಿಸಿದಂತೆ ಒಂದು ರೀತಿಯ ಮರಣವನ್ನು ಅನುಭವಿಸುತ್ತೀರಿ.  ಕನಿಷ್ಠಪಕ್ಷ ನಿಮ್ಮ ಪತನಗೊಂಡ ಮಾನವ ಸ್ವಭಾವದ ನೆಲೆಯಲ್ಲಾದರೂ ಇದು ನೋವುಂಟುಮಾಡುತ್ತದೆ.  ಆದರೆ ಇದು ಕ್ಯಾನ್ಸರ್ ಅಥವಾ ಯಾವುದಾದರೂ ಸೋಂಕನ್ನು ತೆಗೆದುಹಾಕುವ ಉದ್ದೇಶದಿಂದ ಮಾಡುವ ಶಸ್ತ್ರಚಿಕಿತ್ಸೆಯಂತಿದೆ.  ಶಸ್ತ್ರಚಿಕಿತ್ಸೆಯೇ ನೋವುಂಟುಮಾಡಬಹುದು, ಆದರೆ ನಿಮಗಿರುವ ಕಾಯಿಲೆಯಿಂದ ಮುಕ್ತರಾಗಲು ಅದೊಂದೇ ದಾರಿ.  ಪುತ್ರನು ದೈವಿಕ ಶಸ್ತ್ರಚಿಕಿತ್ಸಕ; ತಮ್ಮ ಸ್ವಂತ ಯಾತನೆ ಮತ್ತು ಮರಣದ ಮೂಲಕವೇ ಅವರು ನಿಮ್ಮನ್ನು ಮುಕ್ತಗೊಳಿಸುತ್ತಾರೆ.  ಯೇಸುವಿನ ಶಿಲುಬೆಗೇರಿಸುವಿಕೆ ಮತ್ತು ಮರಣವು ಲೋಕಕ್ಕೆ ಜೀವವನ್ನು ತಂದವು.  ಅವರ ಮರಣವು ಪಾಪವೆಂಬ ರೋಗವನ್ನು ನಾಶಮಾಡಿತು. ಅವರ ಮರಣವೆಂಬ ಪರಿಹಾರವನ್ನು ನಾವು ಮನಃಪೂರ್ವಕವಾಗಿ ಸ್ವೀಕರಿಸುವುದೆಂದರೆ, ಅವರ ಮರಣದ ಮೂಲಕ ನಮ್ಮೊಳಗಿನ ಪಾಪವೆಂಬ ರೋಗವನ್ನು ನಾಶಮಾಡಲು ನಾವು ಅವರಿಗೆ ಅವಕಾಶ ನೀಡಬೇಕು ಎಂದರ್ಥ.  ಒಂದು ರೀತಿಯಲ್ಲಿ ಹೇಳುವುದಾದರೆ, ನಮ್ಮ ಪ್ರಭು ಅದನ್ನು “ಕತ್ತರಿಸಿ ಹೊರತೆಗೆದು” ತೆಗೆದುಹಾಕಬೇಕು.  

ನಿಮ್ಮನ್ನು ಬಂಧನದಲ್ಲಿಡುವ ಸಂಗತಿಗಳನ್ನು ಗುರುತಿಸುವುದಕ್ಕಾಗಿ, ಇತರ ಎಲ್ಲ ಕಾಲಗಳಿಗಿಂತಲೂ ಹೆಚ್ಚಾಗಿ ನಿಮ್ಮ ಪಾಪದ ಕಡೆಗೆ ಪ್ರಾಮಾಣಿಕವಾಗಿ ಗಮನಹರಿಸಬೇಕಾದ ಕಾಲವೇ ತಪಸ್ಸುಕಾಲ. ಹೀಗೆ ದೈವಿಕ ವೈದ್ಯರು ನಿಮ್ಮ ಗಾಯಗಳೊಳಗೆ ಪ್ರವೇಶಿಸಿ ನಿಮ್ಮನ್ನು ಗುಣಪಡಿಸುವಂತೆ ನೀವು ಅವರನ್ನು ಆಹ್ವಾನಿಸಬಹುದು.  ನಿಮ್ಮ ಅಂತಃಕರಣವನ್ನು ಪ್ರಾಮಾಣಿಕವಾಗಿ, ಕೂಲಂಕಷವಾಗಿ ಪರೀಕ್ಷಿಸದೆ ಮತ್ತು ನಿಮ್ಮ ಪಾಪಗಳಿಗಾಗಿ ಪೂರ್ಣ ಹೃದಯದಿಂದ ಪಶ್ಚಾತ್ತಾಪಪಡದೆ ತಪಸ್ಸುಕಾಲವನ್ನು ಕಳೆದುಹೋಗಲು ಬಿಡಬೇಡಿ.  ನೀವು ಸ್ವತಂತ್ರರಾಗಿರಬೇಕೆಂದು ಪ್ರಭು ಬಯಸುತ್ತಾರೆ!  ನೀವೂ ಅದನ್ನು ಬಯಸಿರಿ ಮತ್ತು ಶುದ್ಧೀಕರಣದ ಪ್ರಕ್ರಿಯೆಯಲ್ಲಿ ಪ್ರವೇಶಿಸಿರಿ; ಆಗ ನಿಮ್ಮ ಭಾರವಾದ ಹೊರೆಗಳಿಂದ ನಿಮಗೆ ಬಿಡುಗಡೆ ದೊರೆಯುತ್ತದೆ.

ಇಂದು ನಿಮ್ಮ ಸ್ವಂತ ವೈಯಕ್ತಿಕ ಪಾಪಗಳ ಬಗ್ಗೆ ನಿಮಗಿರುವ ಮನೋಭಾವವನ್ನು ಕುರಿತು ಚಿಂತಿಸಿರಿ.  ಮೊದಲನೆಯದಾಗಿ, ನಿಮ್ಮ ಪಾಪವನ್ನು ನೀವು ವಿನಮ್ರತೆಯಿಂದ ಒಪ್ಪಿಕೊಳ್ಳಬಲ್ಲಿರಾ?  ನೆಪಗಳನ್ನು ನೀಡಿ ಅವುಗಳನ್ನು ಸಮರ್ಥಿಸಿಕೊಳ್ಳಬೇಡಿ ಅಥವಾ ಬೇರೆಯವರ ಮೇಲೆ ದೋಷ ಹೊರಿಸಬೇಡಿ.  ಅವುಗಳನ್ನು ಎದುರಿಸಿರಿ ಮತ್ತು ಅವು ನಿಮ್ಮದೇ ಪಾಪಗಳೆಂದು ಒಪ್ಪಿಕೊಳ್ಳಿರಿ.  ಎರಡನೆಯದಾಗಿ, ನಿಮ್ಮ ಪಾಪಗಳನ್ನು ನಿವೇದಿಸಿರಿ.  ಪುನರ್ಮಿಲನದ ಸಂಸ್ಕಾರದ ಬಗ್ಗೆ ನಿಮಗಿರುವ ಮನೋಭಾವವನ್ನು ಕುರಿತು ಚಿಂತಿಸಿರಿ.  ಇದು ಸ್ವಾತಂತ್ರ್ಯದ ಸಂಸ್ಕಾರ.  ಇದು ಬಹಳ ಸುಲಭ.  ಹೋಗಿ, ನಿಮ್ಮ ಎಲ್ಲ ಪಾಪಗಳನ್ನು ಒಪ್ಪಿಕೊಳ್ಳಿರಿ, ಪಶ್ಚಾತ್ತಾಪ ವ್ಯಕ್ತಪಡಿಸಿರಿ ಮತ್ತು ಮುಕ್ತರಾಗಿರಿ.  ಇದು ನಿಮಗೆ ಕಷ್ಟವೆನಿಸಿದರೆ, ನೀವು ಸತ್ಯಕ್ಕಿಂತ ಹೆಚ್ಚಾಗಿ ನಿಮ್ಮ ಸ್ವಂತ ಭಯದ ಭಾವನೆಗಳನ್ನೇ ನೆಚ್ಚಿಕೊಂಡಿದ್ದೀರಿ ಎಂದರ್ಥ.  ಮೂರನೆಯದಾಗಿ, ದೇವರ ಪುತ್ರನು ನಿಮಗೆ ನೀಡುವ ಸ್ವಾತಂತ್ರ್ಯದಲ್ಲಿ ಆನಂದಿಸಿರಿ.  ಇದು ನಾವು ಅರ್ಹರಾಗಿರುವ ಎಲ್ಲವನ್ನೂ ಮೀರಿದ ವರವಾಗಿದೆ.  ಇಂದು ಮತ್ತು ತಪಸ್ಸುಕಾಲದ ಉಳಿದ ದಿನಗಳಲ್ಲಿ ಈ ಮೂರು ವಿಷಯಗಳನ್ನು ಕುರಿತು ಚಿಂತಿಸಿರಿ. ಆಗ ನಿಮ್ಮ ಪಾಸ್ಕಹಬ್ಬವು ನಿಜವಾದ ಕೃತಜ್ಞತೆಯ ಹಬ್ಬವಾಗುತ್ತದೆ!

 ಪ್ರಭುವೇ, ನಿಮ್ಮ ಮಗುವಾಗಿರುವ ಸ್ವಾತಂತ್ರ್ಯದಲ್ಲಿ ನಾನು ಬದುಕುವಂತೆ, ಎಲ್ಲ ಪಾಪಗಳಿಂದ ಮುಕ್ತನಾಗಲು ನಿಜವಾಗಿಯೂ ಬಯಸುತ್ತೇನೆ.  ಪ್ರಿಯ ಪ್ರಭುವೇ, ಪ್ರಾಮಾಣಿಕತೆಯಿಂದಲೂ ಮುಕ್ತ ಮನಸ್ಸಿನಿಂದಲೂ ನನ್ನ ಪಾಪವನ್ನು ಎದುರಿಸಲು ನನಗೆ ಸಹಾಯಮಾಡಿ.  ಪುನರ್ಮಿಲನದ ಸಂಸ್ಕಾರದಲ್ಲಿ ನನ್ನ ಪಾಪವನ್ನು ಒಪ್ಪಿಕೊಳ್ಳಲು ಬೇಕಾದ ಧೈರ್ಯವನ್ನು ನನಗೆ ದಯಪಾಲಿಸಿ. ಹೀಗೆ ನಿಮ್ಮ ಯಾತನೆ ಮತ್ತು ಮರಣದ ಮೂಲಕ ನೀವು ನನಗೆ ದಯಪಾಲಿಸಿರುವ ಎಲ್ಲವುಗಳಲ್ಲಿ ನಾನು ಆನಂದಿಸುವಂತಾಗಲಿ.  ಯೇಸುವೇ, ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಶಿಲುಬೆಯ ಬುಡದಲ್ಲಿ 40 ದಿನಗಳು – ಚಿಂತನೆ ಮೂವತ್ತೈದು – “ಎಲ್ಲವೂ ನೆರವೇರಿತು”

ತಪಸ್ಸುಕಾಲದ ಸಂಪನ್ಮೂಲಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು