ಏಪ್ರಿಲ್ 20, 2020
ಪಾಸ್ಕಕಾಲದ ಎರಡನೆಯ ವಾರದ ಸೋಮವಾರ
ಇಂದಿನ ವಾಚನಗಳು

“ನಿಜವಾಗಿ, ನಿಜವಾಗಿ ನಾನು ನಿಮಗೆ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಜನಿಸದಿದ್ದರೆ ದೇವರ ರಾಜ್ಯವನ್ನು ಪ್ರವೇಶಿಸಲಾರನು.” ಯೋಹಾನ 3:5
ನೀವು ಹೊಸದಾಗಿ ಜನಿಸಿದ್ದೀರಾ? ಅನೇಕ ಇವಾಂಜೆಲಿಕಲ್ ಕ್ರೈಸ್ತರಲ್ಲಿ ಇದು ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ. ಆದರೆ ಇದು ನಾವೂ ನಮ್ಮನ್ನೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಹಾಗಾದರೆ, ನೀವು ಹೊಸದಾಗಿ ಜನಿಸಿದ್ದೀರಾ? ಅದರ ನಿಖರವಾದ ಅರ್ಥವೇನು?
ನಮ್ಮಲ್ಲಿ ಪ್ರತಿಯೊಬ್ಬರೂ ಆ ಪ್ರಶ್ನೆಗೆ ಪೂರ್ಣಹೃದಯದಿಂದ “ಹೌದು!” ಎಂದು ಉತ್ತರಿಸುತ್ತೇವೆಂದು ಆಶಿಸೋಣ. ನಾವು ಕ್ರಿಸ್ತನಲ್ಲಿ ಹೊಸ ಜನ್ಮವನ್ನು ಪಡೆಯಬೇಕೆಂದು ಪವಿತ್ರ ಗ್ರಂಥವು ಸ್ಪಷ್ಟವಾಗಿ ಹೇಳುತ್ತದೆ. ನಮ್ಮ ಹಳೆಯ ಸ್ವಭಾವ ಸಾಯಬೇಕು ಮತ್ತು ನಮ್ಮೊಳಗೆ ಹೊಸ ಮನುಷ್ಯನು ಜನಿಸಬೇಕು. ಕ್ರೈಸ್ತರಾಗುವುದರ ಅರ್ಥ ಇದೇ. ನಾವು ಕ್ರಿಸ್ತನಲ್ಲಿ ಹೊಸ ಜೀವನವನ್ನು ಪಡೆದುಕೊಳ್ಳುತ್ತೇವೆ.
ನೀರಿನಿಂದಲೂ ಪವಿತ್ರಾತ್ಮರಿಂದಲೂ ನಾವು ಹೊಸದಾಗಿ ಜನಿಸುತ್ತೇವೆ. ಇದು ಜ್ಞಾನಸ್ನಾನದಲ್ಲಿ ಸಂಭವಿಸುತ್ತದೆ. ನಾವು ಜ್ಞಾನಸ್ನಾನವನ್ನು ಪಡೆಯುವಾಗ ನೀರಿನಲ್ಲಿ ಪ್ರವೇಶಿಸಿ ಕ್ರಿಸ್ತನೊಂದಿಗೆ ಸಾಯುತ್ತೇವೆ. ನೀರಿನಿಂದ ಮೇಲೇಳುವಾಗ, ನಾವು ಅವರಲ್ಲಿ ಹೊಸದಾಗಿ ಜನಿಸುತ್ತೇವೆ. ಅಂದರೆ ಜ್ಞಾನಸ್ನಾನವು ನಮ್ಮಲ್ಲಿ ನಿಜಕ್ಕೂ ಅದ್ಭುತವಾದುದನ್ನು ಉಂಟುಮಾಡುತ್ತದೆ. ನಮ್ಮ ಜ್ಞಾನಸ್ನಾನದ ಫಲವಾಗಿ, ನಾವು ದತ್ತುಪುತ್ರಪುತ್ರಿಯರಾಗಿ ಪರಮಪವಿತ್ರ ತ್ರಿತ್ವದ ಜೀವನದಲ್ಲಿಯೇ ಪಾಲು ಪಡೆಯುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಶಿಶುಗಳಾಗಿದ್ದಾಗಲೇ ಜ್ಞಾನಸ್ನಾನವನ್ನು ಪಡೆದಿದ್ದೇವೆ. ನಾವು ಬಹಳ ಬಾರಿ ಯೋಚಿಸದಿರುವ ವಿಷಯಗಳಲ್ಲಿ ಇದೂ ಒಂದು. ಆದರೆ ನಾವು ಅದರ ಬಗ್ಗೆ ಯೋಚಿಸಬೇಕು.
ಜ್ಞಾನಸ್ನಾನವು ನಮ್ಮ ಜೀವನದಲ್ಲಿ ನಿರಂತರವೂ ಶಾಶ್ವತವೂ ಆದ ಪರಿಣಾಮವನ್ನು ಬೀರುವ ಸಂಸ್ಕಾರವಾಗಿದೆ. ಅದು ನಮ್ಮ ಆತ್ಮಗಳ ಮೇಲೆ ಅಳಿಸಲಾಗದ ಮುದ್ರೆಯನ್ನು ಒತ್ತುತ್ತದೆ. ಈ “ಮುದ್ರೆ” ನಮ್ಮ ಜೀವನದಲ್ಲಿ ಅನುಗ್ರಹದ ನಿರಂತರ ಮೂಲವಾಗಿದೆ. ಅದು ಎಂದಿಗೂ ಬತ್ತದ ಅನುಗ್ರಹದ ಬಾವಿಯಂತಿದೆ. ನಾವು ಯಾವ ಘನತೆಯಿಂದ ಬದುಕಲು ಕರೆಯಲ್ಪಟ್ಟಿದ್ದೇವೋ, ಅದಕ್ಕೆ ತಕ್ಕಂತೆ ಬದುಕಲು ಈ ಬಾವಿಯಿಂದ ನಿರಂತರವಾಗಿ ಪೋಷಣೆ ಪಡೆದು ನವೀಕರಿಸಲ್ಪಡುತ್ತೇವೆ. ಸ್ವರ್ಗದಲ್ಲಿರುವ ನಮ್ಮ ತಂದೆಯ ಪುತ್ರಪುತ್ರಿಯರಾಗಿ ಜೀವಿಸಲು ನಮಗೆ ಬೇಕಾದ ಅನುಗ್ರಹವು ಈ ಬಾವಿಯಿಂದ ದೊರೆಯುತ್ತದೆ.
ಇಂದು ನಿಮ್ಮ ಸ್ವಂತ ಜ್ಞಾನಸ್ನಾನದ ಕುರಿತು ಚಿಂತಿಸಿ. ಈ ಸಂಸ್ಕಾರವನ್ನು ನವೀಕರಿಸಲು ಬೇರೆಲ್ಲ ಕಾಲಗಳಿಗಿಂತಲೂ ಹೆಚ್ಚಾಗಿ ಪಾಸ್ಕಕಾಲದಲ್ಲಿ ನಾವು ಕರೆಯಲ್ಪಟ್ಟಿದ್ದೇವೆ. ಅದನ್ನು ಮಾಡಲು ತೀರ್ಥಜಲವನ್ನು ಬಳಸುವುದು ಒಂದು ಒಳ್ಳೆಯ ಮಾರ್ಗವಾಗಿದೆ. ಬಹುಶಃ ಮುಂದಿನ ಬಾರಿ ನೀವು ದೇವಾಲಯದಲ್ಲಿರುವಾಗ, ತೀರ್ಥಜಲದಿಂದ ನಿಮ್ಮ ಹಣೆಯ ಮೇಲೆ ಶಿಲುಬೆಯ ಗುರುತನ್ನು ಮಾಡಿಕೊಂಡು, ನಿಮ್ಮ ಜ್ಞಾನಸ್ನಾನವನ್ನೂ ಈ ಸಂಸ್ಕಾರದ ಮೂಲಕ ನಿಮಗೆ ನೀಡಲಾದ ಘನತೆ ಮತ್ತು ಅನುಗ್ರಹವನ್ನೂ ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಳ್ಳುವುದು ಒಳ್ಳೆಯದು. ಜ್ಞಾನಸ್ನಾನವು ನಿಮ್ಮನ್ನು ನೂತನ ಸೃಷ್ಟಿಯನ್ನಾಗಿ ಮಾಡಿದೆ. ಈ ಪಾಸ್ಕಕಾಲದಲ್ಲಿ, ನಿಮಗೆ ನೀಡಲಾದ ಆ ಹೊಸ ಜೀವನವನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ತಕ್ಕಂತೆ ಬದುಕಲು ಪ್ರಯತ್ನಿಸಿ.
ಸ್ವರ್ಗೀಯ ತಂದೆಯೇ, ಇಂದು ನಾನು ನನ್ನ ಜ್ಞಾನಸ್ನಾನವನ್ನು ನವೀಕರಿಸುತ್ತೇನೆ. ನಾನು ಪಾಪವನ್ನು ಸದಾಕಾಲಕ್ಕೂ ತ್ಯಜಿಸುತ್ತೇನೆ ಮತ್ತು ನಿಮ್ಮ ಪುತ್ರರಾದ ಕ್ರಿಸ್ತ ಯೇಸುವಿನಲ್ಲಿ ನನ್ನ ವಿಶ್ವಾಸವನ್ನು ಪ್ರಕಟಿಸುತ್ತೇನೆ. ನಾನು ಯಾವ ಘನತೆಯಿಂದ ಬದುಕಲು ಕರೆಯಲ್ಪಟ್ಟಿದ್ದೇನೋ, ಅದಕ್ಕೆ ತಕ್ಕಂತೆ ಬದುಕಲು ನನಗೆ ಬೇಕಾದ ಅನುಗ್ರಹವನ್ನು ದಯಪಾಲಿಸಿರಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ದೈವಿಕ ಕರುಣೆಯ ಕುರಿತು ದೈನಂದಿನ ಚಿಂತನೆಗಳು:
ಸಂತ ಫೌಸ್ತೀನಾರೊಂದಿಗೆ 365 ದಿನಗಳು




