ಕನ್ನಡ

ಪಾಪದಿಂದ ನಿಶ್ಚೇಷ್ಟಿತರು

ಮಾರ್ಚ್ 29, 2022
ತಪಸ್ಸುಕಾಲದ ನಾಲ್ಕನೇ ವಾರದ ಮಂಗಳವಾರ
ಇಂದಿನ ವಾಚನಗಳು

ವೀಡಿಯೊ

ಯೇಸು ಅವನಿಗೆ, “ಎದ್ದು, ನಿನ್ನ ಚಾಪೆಯನ್ನು ಎತ್ತಿಕೊಂಡು ನಡೆ” ಎಂದರು.  ತಕ್ಷಣವೇ ಆ ಮನುಷ್ಯನು ಗುಣಮುಖನಾಗಿ, ತನ್ನ ಚಾಪೆಯನ್ನು ಎತ್ತಿಕೊಂಡು ನಡೆದನು.  ಯೋಹಾನ 5:8–9

ಮೇಲಿನ ವಾಕ್ಯಭಾಗದ ಸ್ಪಷ್ಟವಾದ ಸಾಂಕೇತಿಕ ಅರ್ಥಗಳಲ್ಲಿ ಒಂದನ್ನು ನೋಡೋಣ.  ಯೇಸು ಗುಣಪಡಿಸಿದ ಮನುಷ್ಯನು ಪಾರ್ಶ್ವವಾಯುವಿಗೆ ತುತ್ತಾಗಿ, ನಡೆಯಲೂ ತನ್ನ ಆರೈಕೆ ಮಾಡಿಕೊಳ್ಳಲೂ ಅಸಮರ್ಥನಾಗಿದ್ದನು.  ದಯೆ ಮತ್ತು ಕಾಳಜಿಯನ್ನು ನಿರೀಕ್ಷಿಸುತ್ತಾ ಅವನು ಆ ಕೊಳದ ಬಳಿ ಕುಳಿತಿದ್ದಾಗ ಇತರರು ಅವನನ್ನು ಕಡೆಗಣಿಸಿದರು.  ಯೇಸು ಅವನನ್ನು ನೋಡಿ ತಮ್ಮ ಸಂಪೂರ್ಣ ಗಮನವನ್ನು ಅವನಿಗೆ ನೀಡುತ್ತಾರೆ.  ಸ್ವಲ್ಪ ಮಾತುಕತೆಯ ನಂತರ, ಯೇಸು ಅವನನ್ನು ಗುಣಪಡಿಸಿ ಎದ್ದು ನಡೆಯಲು ಹೇಳುತ್ತಾರೆ. 

ಅವನ ದೈಹಿಕ ನಿಶ್ಚೇಷ್ಟತೆಯು ನಮ್ಮ ಜೀವನದಲ್ಲಿ ಪಾಪವು ಉಂಟುಮಾಡುವ ಪರಿಣಾಮದ ಪ್ರತಿರೂಪವಾಗಿದೆ ಎಂಬುದು ಇಲ್ಲಿರುವ ಒಂದು ಸ್ಪಷ್ಟವಾದ ಸಾಂಕೇತಿಕ ಸಂದೇಶ.  ನಾವು ಪಾಪ ಮಾಡಿದಾಗ ನಮ್ಮನ್ನೇ “ನಿಶ್ಚೇಷ್ಟಿತರನ್ನಾಗಿ” ಮಾಡಿಕೊಳ್ಳುತ್ತೇವೆ.  ಪಾಪವು ನಮ್ಮ ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ; ಅವುಗಳಲ್ಲಿ ಅತ್ಯಂತ ಸ್ಪಷ್ಟವಾದ ಪರಿಣಾಮವೆಂದರೆ, ನಾವು ಎದ್ದು ದೇವರ ಮಾರ್ಗಗಳಲ್ಲಿ ನಡೆಯಲು ಅಸಮರ್ಥರಾಗುತ್ತೇವೆ.  ವಿಶೇಷವಾಗಿ ಗಂಭೀರ ಪಾಪವು, ಪ್ರೀತಿಸಲು ಮತ್ತು ನಿಜವಾದ ಸ್ವಾತಂತ್ರ್ಯದಲ್ಲಿ ಬದುಕಲು ನಮ್ಮನ್ನು ಶಕ್ತಿಹೀನರನ್ನಾಗಿ ಮಾಡುತ್ತದೆ.  ಅದು ನಮ್ಮನ್ನು ಬಂಧಿಸಿಟ್ಟು, ನಮ್ಮ ಸ್ವಂತ ಆಧ್ಯಾತ್ಮಿಕ ಜೀವನವನ್ನಾಗಲಿ ಇತರರನ್ನಾಗಲಿ ಯಾವುದೇ ರೀತಿಯಲ್ಲಿ ಆರೈಕೆ ಮಾಡಲು ಅಸಮರ್ಥರನ್ನಾಗಿ ಮಾಡುತ್ತದೆ.  ಪಾಪದ ಪರಿಣಾಮಗಳನ್ನು ಅರಿತುಕೊಳ್ಳುವುದು ಮುಖ್ಯ.  ಸಣ್ಣ ಪಾಪಗಳೂ ಸಹ ನಮ್ಮ ಸಾಮರ್ಥ್ಯಗಳಿಗೆ ಅಡ್ಡಿಯಾಗುತ್ತವೆ, ನಮ್ಮ ಶಕ್ತಿಯನ್ನು ಕಸಿದುಕೊಳ್ಳುತ್ತವೆ ಮತ್ತು ಒಂದಲ್ಲ ಒಂದು ಮಟ್ಟಿಗೆ ನಮ್ಮನ್ನು ಆಧ್ಯಾತ್ಮಿಕವಾಗಿ ಅಂಗವಿಕಲರನ್ನಾಗಿ ಮಾಡುತ್ತವೆ. 

ನಿಮಗೆ ಇದು ಈಗಾಗಲೇ ತಿಳಿದಿದೆ ಮತ್ತು ಇದು ನಿಮಗೆ ಹೊಸದಾಗಿ ತಿಳಿದುಬಂದ ವಿಷಯವಲ್ಲ ಎಂದು ಭಾವಿಸುತ್ತೇನೆ.  ಆದರೆ ನಿಮ್ಮಲ್ಲಿ ಹೊಸದಾಗಿ ಮೂಡಬೇಕಾದದ್ದು, ಈಗ ನಿಮ್ಮಲ್ಲಿರುವ ಪಾಪದೋಷದ ಪ್ರಾಮಾಣಿಕ ಒಪ್ಪಿಗೆ.  ಈ ಕಥೆಯಲ್ಲಿ ನೀವು ನಿಮ್ಮನ್ನೇ ಕಾಣಬೇಕು.  ಯೇಸು ಈ ಮನುಷ್ಯನನ್ನು ಗುಣಪಡಿಸಿದ್ದು ಕೇವಲ ಅವನೊಬ್ಬನ ಒಳಿತಿಗಾಗಿ ಮಾತ್ರವಲ್ಲ.  ನಿಮ್ಮ ಪಾಪದ ಪರಿಣಾಮಗಳನ್ನು ನೀವು ಅನುಭವಿಸುತ್ತಿರುವಾಗ, ನಿಮ್ಮ ಜರ್ಜರಿತ ಸ್ಥಿತಿಯಲ್ಲಿ ಅವರು ನಿಮ್ಮನ್ನು ನೋಡುತ್ತಾರೆ ಎಂದು ನಿಮಗೆ ತಿಳಿಸುವುದೂ ಅವನನ್ನು ಗುಣಪಡಿಸಿದ್ದರ ಒಂದು ಉದ್ದೇಶವಾಗಿತ್ತು.  ನಿಮಗೆ ನೆರವಿನ ಅಗತ್ಯವಿರುವುದನ್ನು ಅವರು ಕಾಣುತ್ತಾರೆ, ನಿಮ್ಮತ್ತ ನೋಡಿ ಎದ್ದು ನಡೆಯಲು ನಿಮ್ಮನ್ನು ಕರೆಯುತ್ತಾರೆ.  ನಿಮ್ಮ ಜೀವನದಲ್ಲಿ ಗುಣಪಡಿಸುವ ಕಾರ್ಯವನ್ನು ಮಾಡಲು ಅವರಿಗೆ ಅವಕಾಶ ನೀಡುವುದರ ಮಹತ್ವವನ್ನು ಕಡಿಮೆ ಅಂದಾಜು ಮಾಡಬೇಡಿ.  ನಿಮ್ಮ ಮೇಲೆ ಪರಿಣಾಮ ಬೀರುವ ಅತಿ ಸಣ್ಣ ಪಾಪವನ್ನೂ ಗುರುತಿಸಲು ನಿರ್ಲಕ್ಷ್ಯ ಮಾಡಬೇಡಿ.  ನಿಮ್ಮ ಪಾಪವನ್ನು ನೋಡಿ, ಅದನ್ನು ನೋಡಲು ಯೇಸುವಿಗೆ ಅವಕಾಶ ನೀಡಿ, ಗುಣಪಡಿಸುವ ಮತ್ತು ಸ್ವಾತಂತ್ರ್ಯವನ್ನು ನೀಡುವ ಅವರ ಮಾತುಗಳನ್ನು ಆಲಿಸಿ.

ನಿಶ್ಚೇಷ್ಟಿತನಾಗಿದ್ದ ಈ ಮನುಷ್ಯನಿಗೆ ಯೇಸುವಿನೊಂದಿಗೆ ಆದ ಈ ಶಕ್ತಿಯುತ ಭೇಟಿಯ ಕುರಿತು ಇಂದು ಧ್ಯಾನಿಸಿ.  ಆ ದೃಶ್ಯದಲ್ಲಿ ನಿಮ್ಮನ್ನೇ ಇರಿಸಿಕೊಂಡು, ಈ ಗುಣಪಡಿಸುವಿಕೆಯು ನಿಮಗಾಗಿಯೂ ನಡೆಯುತ್ತಿದೆ ಎಂಬುದನ್ನು ಅರಿತುಕೊಳ್ಳಿ.  ಈ ತಪಸ್ಸುಕಾಲದಲ್ಲಿ ನೀವು ಇನ್ನೂ ಪಾಪನಿವೇದನೆ ಮಾಡದಿದ್ದರೆ, ಪಾಪನಿವೇದನೆಗೆ ಹೋಗಿ ಮತ್ತು ಆ ಸಂಸ್ಕಾರದಲ್ಲಿ ಯೇಸು ನೀಡುವ ಗುಣಪಡಿಸುವಿಕೆಯನ್ನು ಕಂಡುಕೊಳ್ಳಿ.  ನಿಮಗಾಗಿ ಕಾಯುತ್ತಿರುವ ಸ್ವಾತಂತ್ರ್ಯವನ್ನು ಪಡೆಯಲು ಪಾಪನಿವೇದನೆಯೇ ಉತ್ತರವಾಗಿದೆ; ವಿಶೇಷವಾಗಿ ಅದನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಮಾಡಿದಾಗ.

ಅತ್ಯಂತ ಕರುಣಾಮಯ ಪ್ರಭುವೇ, ದಯವಿಟ್ಟು ನನ್ನ ಪಾಪಗಳನ್ನು ಕ್ಷಮಿಸಿರಿ.  ಅವುಗಳನ್ನು ಗುರುತಿಸಲು ಮತ್ತು ಅವು ನನ್ನ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಒಪ್ಪಿಕೊಳ್ಳಲು ನಾನು ಬಯಸುತ್ತೇನೆ.  ಈ ಹೊರೆಗಳಿಂದ ನನ್ನನ್ನು ಮುಕ್ತಗೊಳಿಸಲು ಮತ್ತು ಅವುಗಳ ಮೂಲದಲ್ಲಿಯೇ ಗುಣಪಡಿಸಲು ನೀವು ಬಯಸುತ್ತೀರಿ ಎಂದು ನನಗೆ ತಿಳಿದಿದೆ.  ಪ್ರಭುವೇ, ವಿಶೇಷವಾಗಿ ಸಂಧಾನ ಸಂಸ್ಕಾರದಲ್ಲಿ ನನ್ನ ಪಾಪಗಳನ್ನು ನಿಮ್ಮ ಮುಂದೆ ನಿವೇದಿಸಲು ನನಗೆ ಧೈರ್ಯವನ್ನು ದಯಪಾಲಿಸಿರಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ನಮ್ಮ ಪೂಜ್ಯ ಮಾತೆಯ ಹೃದಯದಿಂದ ಪ್ರೀತಿಯ ನೋಟ
ಧ್ಯಾನ ಇಪ್ಪತ್ತೈದು – ಯೇಸು ಬೀಳುತ್ತಾರೆ
(ತಪಸ್ಸುಕಾಲದ ನಾಲ್ಕನೇ ವಾರದ ಮಂಗಳವಾರ)

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ತಪಸ್ಸುಕಾಲದ ಸಂಪನ್ಮೂಲಗಳು

ತಪಸ್ಸುಕಾಲಕ್ಕಾಗಿ ಪವಿತ್ರ ಗ್ರಂಥದ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲಿನ ಆಯ್ದ ಚಿತ್ರ: ಬೆಥೆಸ್ದಾ ಕೊಳದ ಬಳಿ ಕುಂಟನನ್ನು ಗುಣಪಡಿಸುತ್ತಿರುವ ಕ್ರಿಸ್ತರು. ಚಿತ್ರಕಾರ: ಪೀಟರ್ ವಾನ್ ಲಿಂಟ್, ವಿಕಿಮೀಡಿಯಾ ಕಾಮನ್ಸ್ ಮೂಲಕ