ಕನ್ನಡ

ದೇವರ ಪ್ರೀತಿ

ಮೇ 22, 2022
ಪಾಸ್ಕ ಕಾಲದ ಆರನೆಯ ಭಾನುವಾರ (ವರ್ಷ C)
ಇಂದಿನ ವಾಚನಗಳು

ವೀಡಿಯೊ

ಯೇಸು ತಮ್ಮ ಶಿಷ್ಯರಿಗೆ ಹೇಳಿದರು: “ಯಾರು ನನ್ನನ್ನು ಪ್ರೀತಿಸುತ್ತಾರೋ ಅವರು ನನ್ನ ವಾಕ್ಯವನ್ನು ಪಾಲಿಸುವರು; ನನ್ನ ಪಿತರು ಅವರನ್ನು ಪ್ರೀತಿಸುವರು, ಮತ್ತು ನಾವು ಅವರ ಬಳಿಗೆ ಬಂದು ಅವರೊಡನೆ ವಾಸಮಾಡುವೆವು.”  ಯೋಹಾನ 14:23

ನಮ್ಮ ಪ್ರಭು ನಿಮ್ಮ ಬಳಿಗೆ ಬಂದು ನಿಮ್ಮ ಆತ್ಮದ ಆಳದಲ್ಲಿ ವಾಸಿಸಬೇಕೆಂದು ನೀವು ಬಯಸುವಿರಾ?  ಇದಕ್ಕೆ ಉತ್ತರ ಸುಲಭವಾಗಿ “ಹೌದು” ಎಂದೇ ಆಗಿರಬಹುದು.  ಇದು ನೆರವೇರುವ ಮಾರ್ಗವೆಂದರೆ ದೇವರನ್ನು ಪ್ರೀತಿಸುವುದು ಮತ್ತು ಅವರ ವಾಕ್ಯವನ್ನು ಪಾಲಿಸುವುದು.  ನೀವು ಹಾಗೆ ಮಾಡಿದಾಗ, ಪವಿತ್ರ ತ್ರಿತ್ವವು ಬಂದು ನಿಮ್ಮೊಳಗೆ ವಾಸಿಸುವುದು.

ದೇವರ ಪ್ರೀತಿಯು ನಾವು ಅವರನ್ನು ಪ್ರೀತಿಸುವುದರ ಮೇಲೆ ಅವಲಂಬಿತವಾಗಿರುವಂತೆ ತೋರುವುದು ಆಸಕ್ತಿಕರವಾಗಿದೆ.  ಬೇರೆ ಮಾತಿನಲ್ಲಿ ಹೇಳುವುದಾದರೆ, ಮೊದಲು ನಾವು ದೇವರನ್ನು ಪ್ರೀತಿಸಿದಾಗ ಮಾತ್ರವೇ ಅವರು ನಮ್ಮನ್ನು ಪ್ರೀತಿಸುತ್ತಾರೆಯೇ?  ನಿಖರವಾಗಿ ಹೇಳುವುದಾದರೆ, ನಾವು ದೇವರನ್ನು ಪ್ರೀತಿಸಲಿ ಅಥವಾ ಪ್ರೀತಿಸದಿರಲಿ, ಅವರು ನಮ್ಮನ್ನು ಪರಿಪೂರ್ಣ ಪ್ರೀತಿಯಿಂದ ಪ್ರೀತಿಸುತ್ತಾರೆ.  ಆದರೂ, ಪ್ರೀತಿಯನ್ನು ಸ್ವೀಕರಿಸಿ ಅದಕ್ಕೆ ಪ್ರತಿಯಾಗಿ ಪ್ರೀತಿಸಿದಾಗ ಅದು ಸಂಪೂರ್ಣ ಹೊಸ ರೂಪವನ್ನು ತಾಳುತ್ತದೆ.  ಆದ್ದರಿಂದ, ನಾವು ದೇವರನ್ನು ಪ್ರೀತಿಸಲು ನಿರ್ಧರಿಸಿದಾಗ, ಅವರ ಮೇಲಿನ ನಮ್ಮ ಪ್ರೀತಿಯು ಅವರು ನಮ್ಮೊಳಗೆ ಬಂದು ವಾಸಿಸಲು ಬಾಗಿಲು ತೆರೆಯುತ್ತದೆ ಎಂಬುದು ಇದ್ದಕ್ಕಿದ್ದಂತೆ ನಮಗೆ ಅರಿವಾಗುತ್ತದೆ. ಹೀಗೆ ಅವರು ನಮ್ಮನ್ನು ಪರಿವರ್ತಿಸಿ, ನಮ್ಮ ಹೃದಯವನ್ನು ತಮ್ಮ ಪವಿತ್ರ ಆಲಯವನ್ನಾಗಿ ಮಾಡುತ್ತಾರೆ.  ಎಂಥ ಮಹಿಮೆಯ ಕೊಡುಗೆ!

ದೇವರನ್ನು ಪ್ರೀತಿಸುವುದರಲ್ಲಿ ಅವರಿಗೆ ವಿಧೇಯರಾಗಿರುವುದೂ ಸೇರಿದೆ ಎಂಬುದನ್ನು ಗಮನಿಸುವುದು ಸಹ ಆಸಕ್ತಿಕರವಾಗಿದೆ.  ಆದರೆ ದೇವರ ಸ್ವಭಾವವೇ ಅಂಥದು.  ಅವರು ಪ್ರೀತಿಸ್ವರೂಪರೇ ಆಗಿದ್ದಾರೆ. ಆದ್ದರಿಂದ ಅವರನ್ನು ಪ್ರೀತಿಸುವುದರಲ್ಲಿ ನಿಮ್ಮ ಚಿತ್ತವನ್ನು ಅವರ ಚಿತ್ತಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಡುವುದು ಅನಿವಾರ್ಯವಾಗಿ ಸೇರಿದೆ.  ಎಲ್ಲ ವಿಷಯಗಳಲ್ಲಿಯೂ ಅವರಿಗೆ ಪರಿಪೂರ್ಣವಾಗಿ ವಿಧೇಯರಾಗಿರುವುದು ಅವರನ್ನು ಪ್ರೀತಿಸುವ ಒಂದು ಶಕ್ತಿಯುತ ಮಾರ್ಗವಾಗಿದೆ.  ಅದು ಅವರು ನಿಮ್ಮೊಳಗೆ ವಾಸಿಸಲು ಮತ್ತು ಆ ಮೂಲಕ ನಿಮ್ಮ ಚಿತ್ತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಅವಕಾಶ ನೀಡುವ ಮಾರ್ಗವಾಗಿದೆ.  ಆಗ ಮಾತ್ರ ನೀವು ನಿಮ್ಮ ಇಡೀ ಅಸ್ತಿತ್ವದಿಂದ ಅವರನ್ನು ಇನ್ನೂ ಹೆಚ್ಚು ಪೂರ್ಣವಾಗಿ ಪ್ರೀತಿಸಬಲ್ಲಿರಿ.

ಪರಮಪವಿತ್ರ ತ್ರಿತ್ವವು ಬಂದು ನಿಮ್ಮ ಆತ್ಮದಲ್ಲಿ ವಾಸಿಸಬೇಕೆಂಬ ನಿಮ್ಮ ಬಯಕೆಯ ಬಗ್ಗೆ ಇಂದು ವಿಶೇಷವಾಗಿ ಚಿಂತಿಸಿ.  ಇದೇ ನಮ್ಮ ಜೀವನದ ಪ್ರಧಾನ ಗುರಿಯಾಗಿರಬೇಕು.  ದೇವರು ನಮ್ಮೊಳಗೆ ವಾಸಿಸಿದರೆ, ಜೀವನದ ಉಳಿದೆಲ್ಲವೂ ಸರಿಯಾದ ಸ್ಥಾನವನ್ನು ಪಡೆಯುತ್ತವೆ.  ಎಲ್ಲವೂ ಒಳಿತಿಗಾಗಿಯೇ ನೆರವೇರುತ್ತವೆ ಮತ್ತು ನಮ್ಮಲ್ಲಿ ಹಾಗೂ ನಮ್ಮ ಮೂಲಕ ದೇವರು ಮಹಿಮೆ ಹೊಂದುವರು.  ಇಂದು ನಿಮ್ಮ ವಿಧೇಯತೆಯ ಮೂಲಕ ಅವರನ್ನು ಪ್ರೀತಿಸಲು ನಿರ್ಧರಿಸಿ; ಆಗ ಅವರೊಂದಿಗಿನ ನಿಮ್ಮ ಪ್ರೀತಿಯ ಸಂಬಂಧವು ಅಪಾರವಾಗಿ ಬೆಳೆಯುತ್ತದೆ.

ಪರಮಪವಿತ್ರ ತ್ರಿತ್ವವೇ, ನಾನು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ಇಂದು ನಿಮ್ಮನ್ನು ಇನ್ನಷ್ಟು ಪರಿಪೂರ್ಣವಾಗಿ ಪ್ರೀತಿಸಲು ಬಯಸುತ್ತೇನೆ.  ಎಲ್ಲ ವಿಷಯಗಳಲ್ಲಿಯೂ ನಿಮ್ಮ ಪರಿಪೂರ್ಣ ಚಿತ್ತಕ್ಕೆ ನನ್ನನ್ನು ಒಪ್ಪಿಸಿಕೊಡಲು ನನಗೆ ಸಹಾಯಮಾಡಿ.  ಸದಾ ನಿಮಗೆ ಪರಿಪೂರ್ಣವಾಗಿ ವಿಧೇಯನಾಗಿರಲು ನನಗೆ ಸಹಾಯಮಾಡಿ.  ಪ್ರೀತಿ ಮತ್ತು ಸಮರ್ಪಣೆಯ ಈ ಕ್ರಿಯೆಯಲ್ಲಿ, ಬಂದು ನನ್ನೊಳಗೆ ವಾಸಮಾಡಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಎಲ್ಲ ಭಾನುವಾರಗಳ ವೀಡಿಯೊ ಚಿಂತನೆಗಳು

ಪಾಸ್ಕ ಪ್ರಾರ್ಥನೆಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಎಲ್ಲ ಸಂತರು/ಹಬ್ಬಗಳು

ಇಂದಿನ ಸಂತರು –ಕ್ಯಾಸಿಯಾದ ಸಂತ ರೀಟಾ
ಈ ವರ್ಷ ಭಾನುವಾರದಂದು ಬರುವುದರಿಂದ ಧರ್ಮಾಚರಣೆಯಲ್ಲಿ ಸ್ಮರಣೆಯಾಗಿ ಆಚರಿಸಲಾಗುವುದಿಲ್ಲ

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಮೇಲೆ ಪ್ರದರ್ಶಿಸಿರುವ ಚಿತ್ರ: ಪಿತನಾದ ದೇವರು ಮತ್ತು ಪವಿತ್ರಾತ್ಮರೊಂದಿಗೆ ಪವಿತ್ರ ಕುಟುಂಬ. ಚಿತ್ರಕಾರ: ಕಾರ್ಲೊ ಡೋಲ್ಚಿ, ವಿಕಿಮೀಡಿಯಾ ಕಾಮನ್ಸ್ ಮೂಲಕ


  Subscribe to our YouTube channel  
  to be notified about new content.