ಬುಧವಾರ, ನವೆಂಬರ್ 9, 2022
ರೋಮ್ನ ಲಾತೆರನ್ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬ

ಯೇಸು ಯೆರೂಸಲೇಮಿಗೆ ಹೋದರು. ದೇವಾಲಯದ ಆವರಣದಲ್ಲಿ ಎತ್ತುಗಳು, ಕುರಿಗಳು ಮತ್ತು ಪಾರಿವಾಳಗಳನ್ನು ಮಾರುವವರನ್ನೂ, ಅಲ್ಲಿ ಕುಳಿತಿದ್ದ ಹಣ ವಿನಿಮಯ ಮಾಡುವವರನ್ನೂ ಅವರು ಕಂಡರು. ಹಗ್ಗಗಳಿಂದ ಚಾವಟಿಯನ್ನು ಮಾಡಿ, ಕುರಿ ಮತ್ತು ಎತ್ತುಗಳೊಂದಿಗೆ ಅವರೆಲ್ಲರನ್ನೂ ದೇವಾಲಯದ ಆವರಣದಿಂದ ಹೊರಗಟ್ಟಿದರು. ಹಣ ವಿನಿಮಯ ಮಾಡುವವರ ನಾಣ್ಯಗಳನ್ನು ಚೆಲ್ಲಿಬಿಟ್ಟು, ಅವರ ಮೇಜುಗಳನ್ನು ಉರುಳಿಸಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ಮಾರುಕಟ್ಟೆಯನ್ನಾಗಿ ಮಾಡುವುದನ್ನು ನಿಲ್ಲಿಸಿರಿ” ಎಂದರು. ಯೋಹಾನ 2:13b-16
ಯೇಸು ಕೋಪಗೊಂಡಿದ್ದರು. ಅವರು ಹಣ ವಿನಿಮಯ ಮಾಡುವವರನ್ನು ಛಡಿಯಿಂದ ದೇವಾಲಯದಿಂದ ಹೊರಗಟ್ಟಿದರು ಮತ್ತು ಅವರನ್ನು ಗದರಿಸುತ್ತಾ ಅವರ ಮೇಜುಗಳನ್ನು ಉರುಳಿಸಿದರು. ಅದು ಎಂಥ ದೃಶ್ಯವಾಗಿದ್ದಿರಬೇಕು!
ಇಲ್ಲಿ ಮುಖ್ಯವಾದುದೇನೆಂದರೆ, ಯೇಸುವಿನ “ಕೋಪ” ಯಾವ ರೀತಿಯದ್ದಾಗಿತ್ತು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಸಾಮಾನ್ಯವಾಗಿ ನಾವು ಕೋಪದ ಬಗ್ಗೆ ಮಾತನಾಡುವಾಗ, ನಮ್ಮ ಹತೋಟಿ ಮೀರಿ, ವಾಸ್ತವವಾಗಿ ನಮ್ಮನ್ನೇ ನಿಯಂತ್ರಿಸುವ ತೀವ್ರ ಭಾವನೆಯನ್ನು ಉದ್ದೇಶಿಸುತ್ತೇವೆ. ಅದು ಸ್ವನಿಯಂತ್ರಣವನ್ನು ಕಳೆದುಕೊಳ್ಳುವುದಾಗಿದೆ ಮತ್ತು ಪಾಪವಾಗಿದೆ. ಆದರೆ ಯೇಸುವಿನ ಕೋಪ ಇಂಥದ್ದಾಗಿರಲಿಲ್ಲ.
ಯೇಸು ಎಲ್ಲ ರೀತಿಯಲ್ಲೂ ಪರಿಪೂರ್ಣರಾಗಿದ್ದರು ಎಂಬುದು ಸ್ಪಷ್ಟ. ಆದ್ದರಿಂದ ಅವರ ಕೋಪವನ್ನು ನಮ್ಮ ಸಾಮಾನ್ಯ ಕೋಪದ ಅನುಭವಕ್ಕೆ ಸಮಾನವೆಂದು ಪರಿಗಣಿಸದಂತೆ ನಾವು ಬಹಳ ಎಚ್ಚರಿಕೆಯಿಂದಿರಬೇಕು. ಹೌದು, ಅವರಲ್ಲಿಯೂ ಅದು ತೀವ್ರ ಭಾವನೆಯಾಗಿತ್ತು, ಆದರೆ ಅದು ನಾವು ಸಾಮಾನ್ಯವಾಗಿ ಅನುಭವಿಸುವುದಕ್ಕಿಂತ ಭಿನ್ನವಾಗಿತ್ತು. ಅವರ ಕೋಪವು ಅವರ ಪರಿಪೂರ್ಣ ಪ್ರೀತಿಯಿಂದ ಉಂಟಾದ ಕೋಪವಾಗಿತ್ತು.
ಯೇಸುವಿನ ವಿಷಯದಲ್ಲಿ, ಪಾಪಿಯ ಮೇಲಿನ ಪ್ರೀತಿಯೂ, ಪಾಪಿಗಳು ಪಶ್ಚಾತ್ತಾಪಪಡಬೇಕೆಂಬ ಅವರ ಬಯಕೆಯೂ ಅವರ ತೀವ್ರ ಭಾವನೆಗೆ ಪ್ರೇರಣೆಯಾಗಿದ್ದವು. ಅವರ ಕೋಪವು ಆ ಜನರು ಮುಳುಗಿದ್ದ ಪಾಪದ ವಿರುದ್ಧವಾಗಿತ್ತು; ತಾವು ಕಂಡ ಕೆಡುಕನ್ನು ಅವರು ಸ್ವಇಚ್ಛೆಯಿಂದ, ಉದ್ದೇಶಪೂರ್ವಕವಾಗಿ ಎದುರಿಸಿದರು. ಹೌದು, ಇದನ್ನು ಕಂಡವರಿಗೆ ಆಘಾತವಾಗಿರಬಹುದು. ಆದರೆ ಆ ಸಂದರ್ಭದಲ್ಲಿ ಅವರನ್ನು ಪಶ್ಚಾತ್ತಾಪಕ್ಕೆ ಕರೆಯಲು ಅವರಿಗೆ ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿತ್ತು.
ಕೆಲವೊಮ್ಮೆ ಪಾಪವನ್ನು ಕಂಡು ನಾವೂ ಕೋಪಗೊಳ್ಳಬೇಕೆಂಬುದನ್ನು ಮನಗಾಣುತ್ತೇವೆ. ಆದರೆ ಎಚ್ಚರಿಕೆಯಿಂದಿರಿ! ನಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಕೋಪದ ಪಾಪಕ್ಕೆ ಬೀಳುವುದನ್ನು ಸಮರ್ಥಿಸಿಕೊಳ್ಳಲು ಯೇಸುವಿನ ಈ ಉದಾಹರಣೆಯನ್ನು ಬಳಸುವುದು ನಮಗೆ ಬಹಳ ಸುಲಭ. ಯೇಸು ತೋರಿಸಿದಂಥ ಧರ್ಮಸಮ್ಮತ ಕೋಪವು, ಗದರಿಸಲ್ಪಟ್ಟವರ ಬಗ್ಗೆ ಯಾವಾಗಲೂ ಶಾಂತಿಯ ಮತ್ತು ಪ್ರೀತಿಯ ಭಾವನೆಯನ್ನು ನಮ್ಮಲ್ಲಿ ಉಳಿಸುತ್ತದೆ. ನಿಜವಾದ ಪಶ್ಚಾತ್ತಾಪ ಕಂಡುಬಂದಾಗ ತಕ್ಷಣವೇ ಕ್ಷಮಿಸುವ ಸಿದ್ಧತೆಯೂ ಇರುತ್ತದೆ.
ದೇವರು ಕೆಲವೊಮ್ಮೆ ನಿಮ್ಮ ಹೃದಯದಲ್ಲಿ ಮೂಡಿಸಲು ಬಯಸುವ ಧರ್ಮಸಮ್ಮತ ಕೋಪದ ಬಗ್ಗೆ ಇಂದು ಧ್ಯಾನಿಸಿರಿ. ಮತ್ತೊಮ್ಮೆ ಹೇಳುವುದೇನೆಂದರೆ, ಅದನ್ನು ಸರಿಯಾಗಿ ವಿವೇಚಿಸಲು ಎಚ್ಚರಿಕೆಯಿಂದಿರಿ. ಈ ತೀವ್ರ ಭಾವನೆಯಿಂದ ನೀವು ಮೋಸಹೋಗದಿರಿ. ಬದಲಾಗಿ, ಇತರರ ಮೇಲಿನ ದೇವರ ಪ್ರೀತಿಯೇ ನಿಮ್ಮನ್ನು ಪ್ರೇರೇಪಿಸಲಿ; ಪಾಪದ ಬಗ್ಗೆ ಪವಿತ್ರ ದ್ವೇಷವು ಪವಿತ್ರವಾಗಿಯೂ ನ್ಯಾಯವಾಗಿಯೂ ನಡೆದುಕೊಳ್ಳಲು ನಿಮಗೆ ಮಾರ್ಗದರ್ಶನ ನೀಡಲಿ.
ಪ್ರಭುವೇ, ನನ್ನಲ್ಲಿ ಇರಬೇಕೆಂದು ನೀನು ಬಯಸುವ ಪವಿತ್ರವಾದ ಮತ್ತು ನೀತಿಯುತವಾದ ಕೋಪವನ್ನು ನನ್ನ ಹೃದಯದಲ್ಲಿ ಬೆಳೆಸಿಕೊಳ್ಳಲು ನನಗೆ ಸಹಾಯ ಮಾಡು. ಯಾವುದು ಪಾಪಮಯ, ಯಾವುದು ನೀತಿಯುತ ಎಂಬುದನ್ನು ವಿವೇಚಿಸಲು ನನಗೆ ಸಹಾಯ ಮಾಡು. ಈ ತೀವ್ರ ಭಾವನೆಯೂ ನನ್ನೆಲ್ಲ ತೀವ್ರ ಭಾವನೆಗಳೂ ಸದಾ ನಿನ್ನ ಪವಿತ್ರ ಚಿತ್ತವನ್ನು ನೆರವೇರಿಸುವತ್ತಲೇ ನಿರ್ದೇಶಿತವಾಗಿರಲಿ. ಯೇಸುವೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ.
ಆಗಮನಕಾಲ ಮತ್ತು ಕ್ರಿಸ್ಮಸ್ಗಾಗಿ ಹೊಸದು!
ಆಗಮನಕಾಲ ಮತ್ತು ಕ್ರಿಸ್ಮಸ್ ಧ್ಯಾನಗಳು
ಇಂದಿನ ಹಬ್ಬ – ಲಾತೆರನ್ ಬಸಿಲಿಕಾದ ಪ್ರತಿಷ್ಠಾಪನೆ





