ಕನ್ನಡ

ದೇವರು ನಿಮ್ಮನ್ನು ಏನನ್ನು ತ್ಯಜಿಸಲು ಕರೆಯುತ್ತಿದ್ದಾರೆ?

ಮಂಗಳವಾರ, ಮಾರ್ಚ್ 5, 2019

ಸಾಮಾನ್ಯ ಕಾಲದ ಎಂಟನೆಯ ವಾರದ ಮಂಗಳವಾರ

ಇಂದಿನ ವಾಚನಗಳು

ಇಂದಿನ ಎಲ್ಲ ಸಂತರು

ಪೇತ್ರನು ಯೇಸುವಿಗೆ, “ನಾವು ಎಲ್ಲವನ್ನೂ ಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವೆ” ಎಂದು ಹೇಳತೊಡಗಿದನು. ಮಾರ್ಕ 10:28

ಹೆಚ್ಚಿನದನ್ನು ತ್ಯಜಿಸಿ ಕ್ರಿಸ್ತನನ್ನು ಹಿಂಬಾಲಿಸಲು ಕೆಲವರು ಕರೆಹೊಂದಿದ್ದಾರೆ.  ಉದಾಹರಣೆಗೆ, ಕೆಲವರು ಮಠಜೀವನಕ್ಕೆ ಅಥವಾ ಬಾಹ್ಯಲೋಕದಿಂದ ಪ್ರತ್ಯೇಕವಾದ ಮಠದಲ್ಲಿ ಧರ್ಮಭಗಿನಿಯಾಗಿ ಜೀವಿಸಲು ಕರೆಹೊಂದಿದ್ದಾರೆ.  ಇಂತಹ ಆಮೂಲಾಗ್ರ ರೀತಿಯಲ್ಲಿ ಕ್ರಿಸ್ತನನ್ನು ಹಿಂಬಾಲಿಸುವಂತೆ ಆತನು ನೀಡುವ ಆಹ್ವಾನವನ್ನು ಅರಸಿ, ಅದನ್ನು ಅನುಸರಿಸಲು ಅವರು ನಿಜವಾಗಿಯೂ ಈ ಲೋಕದ ಎಲ್ಲವನ್ನೂ ತ್ಯಜಿಸುತ್ತಾರೆ. 

ಆದರೆ, ಕ್ರಿಸ್ತನನ್ನು ನಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹಿಂಬಾಲಿಸಲು ನಾವೆಲ್ಲರೂ “ಎಲ್ಲವನ್ನೂ” ತ್ಯಜಿಸಲು ಕರೆಯಲ್ಪಟ್ಟಿದ್ದೇವೆ.  ಎಲ್ಲವನ್ನೂ ತ್ಯಜಿಸುವುದೆಂದರೆ, ಕ್ರಿಸ್ತನ ದೈವಿಕ ಯೋಜನೆಗೆ ಅನುಸಾರವಾಗಿ ಆತನ ಸೇವೆ ಮಾಡಲು ನಮ್ಮ ಸ್ವಂತ ಇಚ್ಛೆಯನ್ನೂ ಜೀವನದ ಆದ್ಯತೆಗಳನ್ನೂ ಸಂಪೂರ್ಣವಾಗಿ ಸಮರ್ಪಿಸುವುದಾಗಿದೆ.  ಇದು ಅನೇಕ ರೂಪಗಳನ್ನು ತಾಳಬಹುದು; ಆದರೆ ಅಂತಿಮವಾಗಿ ಇದು ಯಾವಾಗಲೂ ಎಲ್ಲವನ್ನೂ ತ್ಯಜಿಸುವ ಕರೆಯೇ ಆಗಿದೆ.

ಸಂತೋಷದ ಸಂಗತಿಯೆಂದರೆ, “ಎಲ್ಲವನ್ನೂ ತ್ಯಜಿಸುವುದು” ಎಂದರೆ ಜೀವನದಲ್ಲಿ ನಮ್ಮ ಸ್ವಾರ್ಥಪರ ಆದರ್ಶಗಳನ್ನೂ ಆದ್ಯತೆಗಳನ್ನೂ ತ್ಯಜಿಸುವುದೇ ಹೊರತು ಬೇರೇನೂ ಅಲ್ಲ.  ಇನ್ನೂ ಸಂತೋಷದ ಸಂಗತಿಯೆಂದರೆ, ಆತನು ನಮಗಾಗಿ ಸಿದ್ಧಪಡಿಸಿರುವ ಜೀವನವು ನಾವು ಕನಸು ಕಾಣುವುದಕ್ಕಿಂತಲೂ ಕಲ್ಪಿಸಿಕೊಳ್ಳುವುದಕ್ಕಿಂತಲೂ ಎಷ್ಟೋ ಉತ್ತಮವಾಗಿದೆ.  ಆದ್ದರಿಂದ, ನಮ್ಮ ಸ್ವಂತ ಇಚ್ಛೆಗೂ ನಮ್ಮದೇ ರೀತಿಯಲ್ಲಿ ಕಾರ್ಯಗಳನ್ನು ಮಾಡುವುದಕ್ಕೂ “ಇಲ್ಲ” ಎನ್ನುವ ಮೂಲಕ, ನಾವು ವಾಸ್ತವವಾಗಿ ದೇವರ ಪರಿಪೂರ್ಣ ರೀತಿಯಲ್ಲಿ ಕಾರ್ಯಗಳನ್ನು ಮಾಡಲು “ಹೌದು” ಎನ್ನುತ್ತಿದ್ದೇವೆ.

ನಮ್ಮ ಜೀವನದ ಪ್ರತಿಯೊಂದು ದಿನವೂ ಆತನ ಚಿತ್ತವನ್ನೇ ಅರಸಲು ನಾವು ಏಕೆ ಬಯಸಬಾರದು?  ಆತನಿಗೂ ಆತನ ಪರಿಪೂರ್ಣ ಯೋಜನೆಗೂ ಸೇವೆ ಸಲ್ಲಿಸಲು ನಾವು ಏಕೆ ಬಯಸಬಾರದು?  ಇದು ನಮ್ಮ ಕುಟುಂಬಗಳಿಗೆ ಮಾಡುವ ಸೇವೆಯ ರೂಪವನ್ನು ತಳೆಯಬಹುದು.  ನಮಗೆ ಕೊಡಲು ಮನಸ್ಸಿಲ್ಲದಿದ್ದಾಗಲೂ ಅವರಿಗೆ ಕೊಡುವುದಾಗಿರಬಹುದು.  ಸೇವೆ ಮತ್ತು ಪ್ರೀತಿಯ ಸಣ್ಣ ಕಾರ್ಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳಲು ಶ್ರಮಿಸುವುದಾಗಿರಬಹುದು.  ಕೆಲವರಿಗೆ, ಆತನ ಚಿತ್ತವನ್ನು ಇನ್ನಷ್ಟು ಆಮೂಲಾಗ್ರವಾಗಿ ಅರಸಲು ಜೀವನದ ಎಲ್ಲ ಸಾಮಾನ್ಯ ಬಾಂಧವ್ಯಗಳನ್ನು ತ್ಯಜಿಸುವುದಾಗಿರಬಹುದು.  ನಿಮ್ಮ ಜೀವನದ ನಿರ್ದಿಷ್ಟ ಕರೆ ಯಾವುದಾದರೂ ಆಗಿರಲಿ, ದೇವರ ಚಿತ್ತವನ್ನು ಸ್ವೀಕರಿಸುವುದು ಸಾರ್ಥಕವೇ. 

ಕ್ರಿಸ್ತನು ನಿಮ್ಮಿಂದ ಏನನ್ನೇ ಕೇಳಿದರೂ ಆತನಿಗೆ “ಹೌದು” ಎಂದು ಹೇಳಲು ನೀವು ಎಷ್ಟು ಸಿದ್ಧರಾಗಿದ್ದೀರಿ ಮತ್ತು ಮನಸ್ಸುಳ್ಳವರಾಗಿದ್ದೀರಿ ಎಂಬುದನ್ನು ಇಂದು ಮನನ ಮಾಡಿ.  ಆತನು ಇನ್ನೂ ನಿಮಗೆ ಪ್ರಕಟಿಸದಿರುವುದಕ್ಕೂ “ಹೌದು” ಎಂದು ಹೇಳಲು ನೀವು ಸಿದ್ಧರಿದ್ದೀರಾ?  ನಿಮ್ಮ ಭವಿಷ್ಯದಲ್ಲಿ ಏನೇ ಎದುರಾದರೂ ಅದಕ್ಕೆ ಇಂದೇ “ಹೌದು” ಎಂದು ಹೇಳಿ; ದೇವರು ನಿಮ್ಮನ್ನು ಸಮೃದ್ಧವಾಗಿ ಆಶೀರ್ವದಿಸುವರು.

ಪ್ರಭುವೇ, ಜೀವನದಲ್ಲಿ ನೀನು ನನ್ನನ್ನು ಏನು ಮಾಡಲು ಕರೆದರೂ ನನ್ನ ಉತ್ತರ “ಹೌದು” ಎಂಬುದೇ.  ನಿನ್ನ ಚಿತ್ತಕ್ಕೆ ನಿಸ್ವಾರ್ಥವಾಗಿ ಮತ್ತು ಸಂಪೂರ್ಣವಾಗಿ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ.  ಆ ಕರೆಯನ್ನು ಉದಾರತೆ ಮತ್ತು ಪ್ರೀತಿಯಿಂದ ಜೀವಿಸಲು ನನಗೆ ಸಹಾಯ ಮಾಡು.  ಯೇಸುವೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ.

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು