ಡಿಸೆಂಬರ್ 21, 2019
ಆಗಮನಕಾಲದ ವಾರದ ದಿನ
ಇಂದಿನ ವಾಚನಗಳು
ಸಂತ ಪೇತ್ರ ಕನೀಸಿಯಸ್, ಯಾಜಕ ಮತ್ತು ಧರ್ಮಪಂಡಿತ—ಐಚ್ಛಿಕ ಸ್ಮರಣೆ

“ಸ್ತ್ರೀಯರಲ್ಲಿ ನೀನು ಅತ್ಯಂತ ಧನ್ಯಳು, ನಿನ್ನ ಗರ್ಭದ ಫಲವೂ ಧನ್ಯ. ನನ್ನ ಪ್ರಭುವಿನ ತಾಯಿ ನನ್ನ ಬಳಿಗೆ ಬರುವ ಈ ಭಾಗ್ಯ ನನಗೆ ಹೇಗೆ ದೊರಕಿತು? ನಿನ್ನ ವಂದನೆಯ ಧ್ವನಿ ನನ್ನ ಕಿವಿಗೆ ಬಿದ್ದ ಕ್ಷಣದಲ್ಲೇ ನನ್ನ ಗರ್ಭದಲ್ಲಿರುವ ಶಿಶು ಆನಂದದಿಂದ ಕುಣಿದಾಡಿತು. ಪ್ರಭು ನಿನಗೆ ಹೇಳಿದ ಮಾತು ನೆರವೇರುವುದೆಂದು ವಿಶ್ವಾಸವಿಟ್ಟ ನೀನು ಧನ್ಯಳು.” ಲೂಕ 1:42b-45
ಅಬ್ಬಾ, ಎಲಿಸಬೇತಳು ನಮ್ಮ ಧನ್ಯ ಮಾತೆಗೆ ಹೇಳಿದ ಈ ಸುಂದರ ವಾಕ್ಯಭಾಗದಲ್ಲಿ ನಾವು ಗ್ರಹಿಸಬೇಕಾದದ್ದು ಎಷ್ಟೋ ಇದೆ. ಮೊದಲನೆಯದಾಗಿ, ಆಕೆಯ ವಂದನೆಯ ಒಟ್ಟಾರೆ ಧ್ವನಿಯನ್ನು ನಾವು ಗಮನಿಸುತ್ತೇವೆ. ಅದರಲ್ಲಿ ಅಪಾರ ಪ್ರೀತಿ ತುಂಬಿದೆ. ದೇವಮಾತೆಯನ್ನೂ, ಮರಿಯ ಮಾತೆಯ ಗರ್ಭದಲ್ಲಿ ನೆಲೆಸಿರುವ ತನ್ನ ಪ್ರಭುವನ್ನೂ ಎದುರುಗೊಂಡಾಗ ಎಲಿಸಬೇತಳ ಹೃದಯದಲ್ಲಿದ್ದ ನೈಜ ಆನಂದವನ್ನು ಸುಲಭವಾಗಿ ಅರಿಯಬಹುದು.
“ನನ್ನ ಪ್ರಭುವಿನ ತಾಯಿ ನನ್ನ ಬಳಿಗೆ ಬರುವ ಈ ಭಾಗ್ಯ ನನಗೆ ಹೇಗೆ ದೊರಕಿತು?” ಮರಿಯಳನ್ನು ಭೇಟಿಯಾದಾಗ ಎಲಿಸಬೇತಳು ನಿಜವಾದ ಆನಂದವನ್ನು ಅನುಭವಿಸಿದಳು ಮತ್ತು ಈ ಭೇಟಿಯನ್ನು ಸಮೃದ್ಧವಾದ ಆಶೀರ್ವಾದವೆಂದು ಕಂಡಳು ಎಂಬುದನ್ನು ಈ ಮಾತು ತಿಳಿಸುತ್ತದೆ. ಎಲಿಸಬೇತಳು ಮರಿಯಳಿಗಿಂತ ಬಹಳ ಹಿರಿಯಳಾಗಿದ್ದಳು ಎಂಬುದನ್ನು ನೆನಸಿದರೆ ಇದು ಗಮನಾರ್ಹವಾಗಿದೆ. ಮರಿಯಳು ತನ್ನ ಬಳಿಗೆ ಬರಲೇಬೇಕೆಂದು ಆಕೆ “ನಿರೀಕ್ಷಿಸಿ”, ಆ ಭೇಟಿಯನ್ನು ಸಹಜವೆಂದು ತೆಗೆದುಕೊಳ್ಳಬಹುದಿತ್ತು. ಆದರೆ ಆಕೆ ಹಾಗೆ ಮಾಡದೆ, ಅದನ್ನು ಬಹಳ ಕೃತಜ್ಞತೆಯಿಂದ ಸ್ವೀಕರಿಸಿದಳು.
ದೇವಮಾತೆಯನ್ನೂ ಆಕೆಯ ಮಗುವನ್ನೂ ಭೇಟಿಯಾಗುವ ಆಶೀರ್ವಾದ ಪಡೆದವಳು ಎಲಿಸಬೇತಳು ಮಾತ್ರವಲ್ಲ ಎಂಬುದೂ ಸ್ಪಷ್ಟವಾಗಿದೆ. ಆಕೆಯ ಗರ್ಭದಲ್ಲಿರುವ ಶಿಶುವಾದ ಸ್ನಾನಿಕ ಯೋಹಾನನೂ ಆನಂದದಿಂದ ತುಂಬಿ, ಆ ಆನಂದದ ಅಭಿವ್ಯಕ್ತಿಯಾಗಿ ಕುಣಿದಾಡುತ್ತಾನೆ. ಈ ಭೇಟಿಯು ಎಲಿಸಬೇತಳ ಮೇಲೂ, ಇನ್ನೂ ಹುಟ್ಟದ ಆಕೆಯ ಮಗುವಿನ ಮೇಲೂ ಎಂಥ ಅದ್ಭುತ ಪರಿಣಾಮವನ್ನು ಬೀರುತ್ತದೆ!
ಇದು ನಿಮ್ಮ ಹೃದಯದಲ್ಲೂ ಒಂದು ಪ್ರಶ್ನೆಯನ್ನು ಹುಟ್ಟಿಸಬೇಕು. ಕ್ರಿಸ್ತನು ನಿಮ್ಮ ಬಳಿಗೆ ಬಂದಾಗ ಆತನ ಸಾನ್ನಿಧ್ಯವನ್ನು ನೀವು ಗುರುತಿಸುತ್ತೀರಾ? ಎಲಿಸಬೇತಳೂ ಇನ್ನೂ ಹುಟ್ಟದ ಆಕೆಯ ಮಗುವೂ ಆತನನ್ನು ಗುರುತಿಸಲು ಸಾಧ್ಯವಾದರೆ, ನಮಗೂ ಆತನನ್ನು ಗುರುತಿಸಲು ಸಾಧ್ಯವಾಗಬೇಕಲ್ಲವೇ? ಉದಾಹರಣೆಗೆ, ನೀವು ದೇವಾಲಯವನ್ನು ಪ್ರವೇಶಿಸಿದಾಗ, ನಮ್ಮ ಪ್ರಭುವಿನ ದಿವ್ಯ ಸಾನ್ನಿಧ್ಯದ ಅರಿವು ನಿಮಗೆ ಕೂಡಲೇ ಆಗುತ್ತದೆಯೇ? ಆತನು ನಿಮ್ಮ ಸಮೀಪದಲ್ಲಿರುವುದನ್ನು ನೀವು ಅನುಭವಿಸುತ್ತೀರಾ? ಮತ್ತು ದಿವ್ಯಪ್ರಸಾದದಲ್ಲಿ ಆತನನ್ನು ಸ್ವೀಕರಿಸುವಾಗ, ನಿಮ್ಮ ಬಳಿಗೆ ಬಂದು ನಿಮ್ಮೊಳಗೆ ನೆಲೆಸುವ ರಕ್ಷಕನ ಮೇಲೆ ನಿಮ್ಮ ಹೃದಯವು ಏಕಾಗ್ರವಾಗಿದೆಯೇ? ಇದಕ್ಕೆ ವಿಶ್ವಾಸವೂ, ಪ್ರಭುವಿನ ಆಗಮನ ಮತ್ತು ಸಾನ್ನಿಧ್ಯದ ಮೇಲೆ ನೆಟ್ಟಿರುವ ದೃಷ್ಟಿಯೂ ಬೇಕು.
ನೋಡಬಲ್ಲ ವರಕ್ಕಾಗಿ ಇಂದು ಪ್ರಾರ್ಥಿಸಿ. ನಿಮ್ಮ ಸುತ್ತಲೂ ಇರುವ ತನ್ನ ದಿವ್ಯ ಸಾನ್ನಿಧ್ಯವನ್ನು ಗುರುತಿಸಲು ಬೇಕಾದ ಕಣ್ಣುಗಳನ್ನು ನಮ್ಮ ಪ್ರಭು ನಿಮಗೆ ನೀಡಲೆಂದು ಪ್ರಾರ್ಥಿಸಿ. ವಿಶೇಷವಾಗಿ, ದಿವ್ಯಪ್ರಸಾದದಲ್ಲಿ ಆತನನ್ನು ಭೇಟಿಯಾಗಿ ಸ್ವೀಕರಿಸುವಾಗ, ನಿಮ್ಮ ಮನಸ್ಸು ಮತ್ತು ಹೃದಯವು ಆತನ ದಿವ್ಯ ಸಾನ್ನಿಧ್ಯಕ್ಕೆ ತೆರೆದಿರಲೆಂದು ಪ್ರಾರ್ಥಿಸಿ.
ಪ್ರಭುವೇ, ನಿನ್ನನ್ನು ನೋಡಲು ಮತ್ತು ನಿನ್ನನ್ನು ಅರಿಯಲು ನಾನು ನಿಜವಾಗಿಯೂ ಬಯಸುತ್ತೇನೆ. ನನ್ನ ಸುತ್ತಲೂ ಮತ್ತು ನೀನು ನನ್ನ ಬಳಿಗೆ ಬರುವ ಪ್ರತಿಯೊಂದು ರೀತಿಯಲ್ಲೂ ನಿನ್ನ ಸಾನ್ನಿಧ್ಯವನ್ನು ಗುರುತಿಸಲು ಬಯಸುತ್ತೇನೆ. ವಿಶೇಷವಾಗಿ, ದಿವ್ಯಪ್ರಸಾದದಲ್ಲಿನ ನಿನ್ನ ಸಾನ್ನಿಧ್ಯಕ್ಕೆ ಗಮನವಿಡಲು ನನಗೆ ಸಹಾಯಮಾಡು. ಈ ಅತ್ಯಂತ ಪರಿಪೂರ್ಣ ರೀತಿಯಲ್ಲಿ ನೀನು ನನ್ನ ಬಳಿಗೆ ಬರುವಾಗಲೆಲ್ಲ ನನ್ನ ಹೃದಯವು ಆನಂದದಿಂದ ಕುಣಿದಾಡಲಿ. ಯೇಸುವೇ, ನಿನ್ನಲ್ಲಿ ಭರವಸೆ ಇಡುತ್ತೇನೆ.




