ಮಾರ್ಚ್ 5, 2020
ತಪಸ್ಸುಕಾಲದ ಮೊದಲನೆಯ ವಾರದ ಗುರುವಾರ
ಇಂದಿನ ವಾಚನಗಳು

“ಬೇಡಿರಿ, ನಿಮಗೆ ದೊರೆಯುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು…”
“ಹಾಗಾದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯು ತಮ್ಮನ್ನು ಬೇಡುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯವುಗಳನ್ನು ಕೊಡುವರು.” ಮತ್ತಾಯ 7:7, 11
ನಾವು ಬೇಡಿದಾಗ ನಮಗೆ ದೊರೆಯುವುದು, ಹುಡುಕಿದಾಗ ನಮಗೆ ಸಿಗುವುದು, ತಟ್ಟಿದಾಗ ನಮಗೆ ಬಾಗಿಲು ತೆರೆಯಲಾಗುವುದು ಎಂದು ಯೇಸು ಬಹಳ ಸ್ಪಷ್ಟವಾಗಿ ಹೇಳುತ್ತಾರೆ. ಆದರೆ ನಿಮ್ಮ ಅನುಭವವೂ ಇದೇ ಆಗಿದೆಯೇ? ಕೆಲವೊಮ್ಮೆ ನಾವು ಮತ್ತೆ ಮತ್ತೆ ಬೇಡುತ್ತೇವೆ, ಮೊರೆಯಿಡುತ್ತೇವೆ; ಆದರೂ ನಮ್ಮ ಪ್ರಾರ್ಥನೆಗೆ ಉತ್ತರ ಸಿಗುತ್ತಿಲ್ಲವೆಂದು ತೋರುತ್ತದೆ—ಕನಿಷ್ಠಪಕ್ಷ, ನಾವು ಬಯಸಿದ ರೀತಿಯಲ್ಲಾದರೂ ಉತ್ತರ ಸಿಗುವುದಿಲ್ಲ. ಹಾಗಾದರೆ, “ಬೇಡಿರಿ…ಹುಡುಕಿರಿ…ತಟ್ಟಿರಿ” ಮತ್ತು ನಿಮಗೆ ದೊರೆಯುವುದು ಎಂದು ಯೇಸು ಹೇಳುವಾಗ ಅವರ ಅರ್ಥವೇನು?
ನಮ್ಮ ಪ್ರಭುವಿನ ಈ ಕರೆಯನ್ನು ಅರ್ಥಮಾಡಿಕೊಳ್ಳುವ ಕೀಲಿಕೈ ಇದು: ಮೇಲಿನ ಪವಿತ್ರ ಗ್ರಂಥದ ವಾಕ್ಯ ಹೇಳುವಂತೆ, ನಮ್ಮ ಪ್ರಾರ್ಥನೆಯ ಮೂಲಕ ದೇವರು ತಮ್ಮನ್ನು ಬೇಡುವವರಿಗೆ “ಒಳ್ಳೆಯವುಗಳನ್ನು” ಕೊಡುವರು. ನಾವು ಬೇಡುವುದೆಲ್ಲವನ್ನೂ ಕೊಡುವುದಾಗಿ ಅವರು ನಮಗೆ ವಾಗ್ದಾನ ಮಾಡುವುದಿಲ್ಲ; ಬದಲಾಗಿ, ನಿಜವಾಗಿಯೂ ಒಳ್ಳೆಯದನ್ನು, ವಿಶೇಷವಾಗಿ ನಮ್ಮ ಶಾಶ್ವತ ರಕ್ಷಣೆಗೆ ಒಳ್ಳೆಯದಾದುದನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ.
ಇದು ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ: “ಹಾಗಾದರೆ, ನಾನು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು?” ಆದರ್ಶವಾಗಿ, ನಾವು ಮಾಡುವ ಪ್ರತಿಯೊಂದು ವಿಜ್ಞಾಪನಾ ಪ್ರಾರ್ಥನೆಯೂ ಪ್ರಭುವಿನ ಚಿತ್ತವು ನೆರವೇರಲೆಂದೇ ಇರಬೇಕು—ಅದಕ್ಕಿಂತ ಹೆಚ್ಚೇನೂ ಅಲ್ಲ, ಕಡಿಮೆಯೂ ಅಲ್ಲ. ಅವರ ಪರಿಪೂರ್ಣ ಚಿತ್ತ ಮಾತ್ರವೇ ನೆರವೇರಬೇಕು.
ಇದಕ್ಕಾಗಿ ಪ್ರಾರ್ಥಿಸುವುದು ಮೊದಲಿಗೆ ನಾವು ಊಹಿಸುವುದಕ್ಕಿಂತ ಕಷ್ಟವಾಗಿರಬಹುದು. ಅನೇಕ ಬಾರಿ ನಾವು “ನಿಮ್ಮ ಚಿತ್ತ ನೆರವೇರಲಿ” ಎನ್ನುವುದಕ್ಕಿಂತ “ನನ್ನ ಚಿತ್ತ ನೆರವೇರಲಿ” ಎಂದು ಪ್ರಾರ್ಥಿಸಲು ಒಲವು ತೋರುತ್ತೇವೆ. ಆದರೆ ದೇವರ ಚಿತ್ತವು ಪರಿಪೂರ್ಣವಾಗಿದೆ ಮತ್ತು ಅದು ನಮಗೆ ಎಲ್ಲ “ಒಳ್ಳೆಯವುಗಳನ್ನು” ಒದಗಿಸುತ್ತದೆ ಎಂದು ನಾವು ಭರವಸೆಯಿಡಲು, ಅದೂ ಆಳವಾದ ಭರವಸೆಯಿಡಲು ಸಾಧ್ಯವಾದರೆ, ಅವರ ಚಿತ್ತವನ್ನು ಅರಸುವುದು, ಅದು ನೆರವೇರಲೆಂದು ಬೇಡುವುದು ಮತ್ತು ಅವರ ಹೃದಯದ ಬಾಗಿಲನ್ನು ತಟ್ಟುವುದು—ಇವೆಲ್ಲವೂ ದೇವರು ದಯಪಾಲಿಸಲು ಬಯಸುವ ಸಮೃದ್ಧ ಅನುಗ್ರಹಕ್ಕೆ ಕಾರಣವಾಗುತ್ತವೆ.
ಇಂದು, ನೀವು ಪ್ರಾರ್ಥಿಸುವ ರೀತಿಯ ಬಗ್ಗೆ ಚಿಂತಿಸಿ. ದೇವರು ಕೊಡಬೇಕೆಂದು ನೀವು ಬಯಸುವ ಅನೇಕ ಸಂಗತಿಗಳನ್ನು ಬೇಡುವ ಬದಲು, ದೇವರು ದಯಪಾಲಿಸಲು ಬಯಸುವ ಒಳ್ಳೆಯವುಗಳನ್ನು ಅರಸುವಂತೆ ನಿಮ್ಮ ಪ್ರಾರ್ಥನೆಯನ್ನು ಬದಲಾಯಿಸಲು ಪ್ರಯತ್ನಿಸಿ. ನಿಮ್ಮ ಸ್ವಂತ ಆಲೋಚನೆಗಳು ಮತ್ತು ಇಚ್ಛೆಯನ್ನು ಬಿಟ್ಟುಕೊಡುವುದು ಮೊದಲಿಗೆ ಕಷ್ಟವಾಗಬಹುದು. ಆದರೆ ಕೊನೆಯಲ್ಲಿ ದೇವರಿಂದ ಅನೇಕ ಒಳ್ಳೆಯವುಗಳನ್ನು ಪಡೆದು ಆಶೀರ್ವದಿತರಾಗುವಿರಿ.
ಪ್ರಭುವೇ, ಎಲ್ಲದರಲ್ಲಿಯೂ ನಿಮ್ಮ ಚಿತ್ತವು ನೆರವೇರಲೆಂದು ನಾನು ಪ್ರಾರ್ಥಿಸುತ್ತೇನೆ. ಎಲ್ಲಕ್ಕಿಂತಲೂ ಮಿಗಿಲಾಗಿ ನಿಮ್ಮಿಗೆ ನನ್ನನ್ನು ಸಮರ್ಪಿಸಿಕೊಳ್ಳಲು ಮತ್ತು ನಿಮ್ಮ ಪರಿಪೂರ್ಣ ಯೋಜನೆಯಲ್ಲಿ ಭರವಸೆಯಿಡಲು ಬಯಸುತ್ತೇನೆ. ಪ್ರೀತಿಯ ಪ್ರಭುವೇ, ನನ್ನ ಸ್ವಂತ ಆಲೋಚನೆಗಳನ್ನೂ ಆಸೆಗಳನ್ನೂ ಬಿಟ್ಟು, ಯಾವಾಗಲೂ ನಿಮ್ಮ ಚಿತ್ತವನ್ನು ಅರಸಲು ನನಗೆ ಸಹಾಯಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.
ಶಿಲುಬೆಯ ಪಾದದ ಬಳಿ 40 ದಿನಗಳು – ಎಂಟನೆಯ ಧ್ಯಾನ – ಎಲ್ಲದರಲ್ಲಿಯೂ ನಿಷ್ಠೆ





