ಕನ್ನಡ

ಯೇಸುವಿನ ಪಾದಗಳಿಗೆ ತೈಲಾಭಿಷೇಕ

ಏಪ್ರಿಲ್ 6, 2020
ಪವಿತ್ರ ವಾರದ ಸೋಮವಾರ
ಇಂದಿನ ವಾಚನಗಳು

ಮರಿಯಳು ಶುದ್ಧ ಜಟಾಮಾಂಸಿಯಿಂದ ತಯಾರಿಸಿದ ಬೆಲೆಬಾಳುವ ಸುಗಂಧ ತೈಲವನ್ನು ಒಂದು ಲೀಟರಿನಷ್ಟು ತೆಗೆದುಕೊಂಡು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಅವುಗಳನ್ನು ಒರೆಸಿದಳು; ಆ ತೈಲದ ಪರಿಮಳವು ಮನೆಯೆಲ್ಲಾ ತುಂಬಿತು.  ಯೋಹಾನ 12:3

ಯೇಸುವಿನ ಮೇಲಿನ ಪ್ರೀತಿಯನ್ನು ತೋರಿಸುವ ಎಂಥ ವಿನಮ್ರವಾದ, ಸುಂದರವಾದ ಕಾರ್ಯ!  ಈ ಸುಗಂಧ ತೈಲದ ಬೆಲೆ 300 ದಿನಗಳ ಕೂಲಿಗೆ ಸಮನಾಗಿತ್ತು.  ಅದು ದೊಡ್ಡ ಮೊತ್ತವೇ ಸರಿ!  ಅದನ್ನು ಮಾರಿ, ಬಂದ ಹಣವನ್ನು ಬಡವರಿಗೆ ಕೊಡಬೇಕಿತ್ತೆಂದು ತಾನು ಭಾವಿಸಿದ್ದಾಗಿ ಹೇಳುತ್ತಾ ಯೂದನು ಈ ಕಾರ್ಯವನ್ನು ಆಕ್ಷೇಪಿಸಿದನು ಎಂಬುದು ಗಮನಾರ್ಹ.  ಆದರೆ ಯೂದನು ಹಣದ ಚೀಲದಿಂದ ಕದಿಯುತ್ತಿದ್ದುದರಿಂದ, ಅವನಿಗೆ ನಿಜವಾಗಿಯೂ ಆಸಕ್ತಿ ಇದ್ದದ್ದು ತನಗಾಗಿ ಆ ಹಣವನ್ನು ಪಡೆಯುವುದರಲ್ಲಿ ಮಾತ್ರ ಎಂದು ಸುವಾರ್ತೆ ಸ್ಪಷ್ಟವಾಗಿ ಹೇಳುತ್ತದೆ.  ಇದಕ್ಕಿಂತಲೂ ಹೆಚ್ಚು ಗಮನಿಸಬೇಕಾದದ್ದು ಯೂದನಿಗೆ ಯೇಸು ನೀಡಿದ ಉತ್ತರ.  ಯೇಸು ಯೂದನನ್ನು ಗದರಿಸಿ ಹೀಗೆ ಹೇಳುತ್ತಾರೆ: “ಅವಳನ್ನು ಬಿಡು. ನನ್ನ ಸಮಾಧಿಯ ದಿನಕ್ಕಾಗಿ ಅವಳು ಇದನ್ನು ಇಟ್ಟುಕೊಳ್ಳಲಿ. ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ, ಆದರೆ ನಾನು ಯಾವಾಗಲೂ ನಿಮ್ಮೊಂದಿಗಿರುವುದಿಲ್ಲ.”

ಬೇರಾರಾದರೂ ಹೀಗೆ ಹೇಳಿದ್ದರೆ ಅದು ಸ್ವಾರ್ಥದ ಮಾತಿನಂತೆ ಕೇಳಿಸುತ್ತಿತ್ತು.  ಆದರೆ ಅದನ್ನು ಹೇಳಿದ್ದು ಯೇಸು; ಅವರ ಪ್ರೀತಿ ಸಂಪೂರ್ಣವಾಗಿ ನಿಸ್ವಾರ್ಥವಾಗಿತ್ತು.  ಹಾಗಾದರೆ ಈ ಮಾತಿನ ಅರ್ಥವೇನು?  ಮರಿಯಳಿಗೆ ಏನು ಬೇಕಾಗಿತ್ತು ಎಂಬುದು ಯೇಸುವಿಗೆ ತಿಳಿದಿತ್ತು ಎಂಬುದೇ ಅದರ ಅರ್ಥ.  ಮತ್ತು ಈ ಮಾತುಗಳ ಮೂಲಕ ನಮ್ಮಲ್ಲಿ ಪ್ರತಿಯೊಬ್ಬರಿಗೂ ಏನು ಬೇಕಾಗಿದೆ ಎಂಬುದನ್ನು ಅವರು ತಿಳಿಯಪಡಿಸಿದರು.  ನಾವು ಅವರನ್ನು ಆರಾಧಿಸಬೇಕು, ಗೌರವಿಸಬೇಕು ಮತ್ತು ಅವರನ್ನು ನಮ್ಮ ಜೀವನದ ಕೇಂದ್ರವಾಗಿಸಬೇಕು.  ನಾವು ಅವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು ಅವರಿಗೆ ಸೇವೆ ಸಲ್ಲಿಸಬೇಕು.  ನಾವು ಅವರನ್ನು ಈ ರೀತಿಯಾಗಿ ಕಾಣುವುದು ಅವರಿಗೆ ಅಗತ್ಯವೆಂದಲ್ಲ, ಬದಲಾಗಿ ನಾವು ಅವರನ್ನು ಈ ರೀತಿಯಾಗಿ ಕಾಣುವುದು ನಮಗೇ ಅಗತ್ಯವಾದುದರಿಂದ.  ನಮ್ಮ ಸ್ವಂತ ಪವಿತ್ರತೆ ಮತ್ತು ಸಂತೋಷಕ್ಕಾಗಿ ನಾವು ಮಾಡಬೇಕಾದದ್ದು, ವಿನಮ್ರತೆಯಿಂದಲೂ ಪ್ರೀತಿಯಿಂದಲೂ ಅವರನ್ನು ಗೌರವಿಸುವುದೇ.  ಯೇಸುವಿಗೆ ಇದು ತಿಳಿದಿತ್ತು; ಆದ್ದರಿಂದ ಮರಿಯಳ ಈ ಪ್ರೀತಿಯ ಕಾರ್ಯಕ್ಕಾಗಿ ಅವರು ಅವಳನ್ನು ಗೌರವಿಸಿದರು.

ಈ ಘಟನೆಯು ನಾವೂ ಹಾಗೆಯೇ ಮಾಡಲು ಆಹ್ವಾನಿಸುತ್ತದೆ.  ಯೇಸುವಿನತ್ತ ದೃಷ್ಟಿಹರಿಸಲು ಮತ್ತು ಅವರನ್ನು ನಮ್ಮ ಆರಾಧನೆ ಹಾಗೂ ಪ್ರೀತಿಯ ಕೇಂದ್ರವಾಗಿಸಿಕೊಳ್ಳಲು ಅದು ನಮ್ಮನ್ನು ಆಹ್ವಾನಿಸುತ್ತದೆ.  ನಮ್ಮ ಶ್ರಮವನ್ನೆಲ್ಲಾ ಮನಃಪೂರ್ವಕವಾಗಿ ಅವರಿಗೆ ಧಾರೆಯೆರೆಯಲು ಅದು ನಮ್ಮನ್ನು ಆಹ್ವಾನಿಸುತ್ತದೆ (300 ದಿನಗಳ ಕೂಲಿಗೆ ಸಮನಾದ ಬೆಲೆಯ ಸುಗಂಧ ತೈಲವು ಇದನ್ನು ಸಂಕೇತಿಸುತ್ತದೆ).  ಯೇಸುವಿಗಾಗಿ ಅರ್ಪಿಸಲು ಯಾವುದೂ ಅತಿಯಾದ ಬೆಲೆಯದ್ದಲ್ಲ.  ನಮ್ಮ ಒಂದು ಆರಾಧನಾ ಕಾರ್ಯಕ್ಕಿಂತ ಹೆಚ್ಚು ಮೌಲ್ಯವುಳ್ಳದ್ದು ಯಾವುದೂ ಇಲ್ಲ.

ದೇವರನ್ನು ಆರಾಧಿಸುವುದು ಯೋಗ್ಯವಾದದ್ದು.  ಎಲ್ಲಕ್ಕಿಂತ ಮುಖ್ಯವಾಗಿ, ನೀವು ಯಾರಾಗಿರಬೇಕೆಂದು ನಿಮ್ಮನ್ನು ಸೃಷ್ಟಿಸಲಾಗಿದೆಯೋ ಆ ವ್ಯಕ್ತಿಯಾಗಿ ನಿಮ್ಮನ್ನು ರೂಪಾಂತರಿಸುವ ಕಾರ್ಯ ಅದು.  ದೇವರನ್ನು ಪೂಜಿಸಿ ಆರಾಧಿಸುವುದಕ್ಕಾಗಿಯೇ ನಿಮ್ಮನ್ನು ಸೃಷ್ಟಿಸಲಾಗಿದೆ; ನಿಮ್ಮ ಸಮಸ್ತ ಅಸ್ತಿತ್ವದಿಂದ ವಿನಮ್ರವಾಗಿ ನಮ್ಮ ಪ್ರಭುವನ್ನು ಗೌರವಿಸುವಾಗ ಇದು ನೆರವೇರುತ್ತದೆ.  

ನಮ್ಮ ಪ್ರಭುವಿನ ಮೇಲಿನ ನಿಮ್ಮ ಆರಾಧನೆಯ ಆಳವನ್ನು ಕುರಿತು ಇಂದು ಚಿಂತಿಸಿ.  ನಿಮ್ಮ ಇಡೀ ಜೀವನಾಧಾರವನ್ನೇ ಅವರಿಗೆ “ಧಾರೆಯೆರೆಯಲು” ನೀವು ಸಿದ್ಧರಿದ್ದೀರಾ?  300 ದಿನಗಳ ಕೂಲಿಗಿಂತಲೂ ಅವರು ನಿಮಗೆ ಹೆಚ್ಚು ಮೌಲ್ಯವುಳ್ಳವರಾಗಿದ್ದಾರೆಯೇ?  ನಿಮ್ಮ ಜೀವನದಲ್ಲಿ ಅವರೇ ಎಲ್ಲಕ್ಕಿಂತ ಪ್ರಮುಖ ಸ್ಥಾನದಲ್ಲಿದ್ದಾರೆಯೇ?  ನೀವು ಪ್ರತಿದಿನ ಅವರ ಮುಂದೆ ನಿಮ್ಮನ್ನು ತಗ್ಗಿಸಿಕೊಂಡು, ಪ್ರಾರ್ಥನೆಯಲ್ಲಿ ನಿಮ್ಮ ಹೃದಯವನ್ನು ಅವರಿಗೆ ತೆರೆದಿಡುತ್ತೀರಾ?  ಮರಿಯಳು ಯೇಸುವಿಗೆ ಅರ್ಪಿಸುವ ಈ ವಿನಮ್ರ ಆರಾಧನಾ ಕಾರ್ಯವನ್ನು ಕುರಿತು ಚಿಂತಿಸಿ ಮತ್ತು ಅವಳ ಸುಂದರ ಮಾದರಿಯನ್ನು ಅನುಸರಿಸಲು ಪ್ರಯತ್ನಿಸಿ.

ಪ್ರಭುವೇ, ಈ ಪವಿತ್ರ ಸ್ತ್ರೀಯಾದ ಮರಿಯಳ ಮಾದರಿಯನ್ನು ನಾನು ಅನುಸರಿಸುವಂತಾಗಲಿ.  ನಿನ್ನ ಮುಂದೆ ನನ್ನನ್ನು ತಗ್ಗಿಸಿಕೊಳ್ಳಲು ಮತ್ತು ನನ್ನ ಇಡೀ ಜೀವನದಿಂದ ನಿನ್ನನ್ನು ಗೌರವಿಸಲು ನನಗೆ ಸಹಾಯ ಮಾಡು.  ಪ್ರಿಯ ಪ್ರಭುವೇ, ಜೀವನದಲ್ಲಿ ನಿನಗಿಂತಲೂ, ನಿನ್ನನ್ನು ನಾನು ಸಂಪೂರ್ಣವಾಗಿ ಆರಾಧಿಸುವುದಕ್ಕಿಂತಲೂ ಮುಖ್ಯವಾದದ್ದು ಯಾವುದೂ ಇಲ್ಲ.  ಪ್ರಿಯ ಪ್ರಭುವೇ, ನನ್ನನ್ನು ನಿನ್ನತ್ತ ಸೆಳೆದುಕೋ, ನಿನ್ನ ಮಹಿಮೆಯ ಮುಂದೆ ನನ್ನನ್ನು ತಗ್ಗಿಸು ಮತ್ತು ನನ್ನ ಸಮಸ್ತ ಅಸ್ತಿತ್ವದಿಂದ ನಿನ್ನನ್ನು ಪ್ರೀತಿಸಲು ಹಾಗೂ ಆರಾಧಿಸಲು ನನಗೆ ಸಹಾಯ ಮಾಡು.  ಯೇಸುವೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ.

ಶಿಲುಬೆಯ ಅಡಿಯಲ್ಲಿ 40 ದಿನಗಳು – ನಲವತ್ತನೆಯ ಧ್ಯಾನ – ಸಮಾಧಿಯ ಮೌನ

ತಪಸ್ಸುಕಾಲದ ಸಂಪನ್ಮೂಲಗಳು

ಪವಿತ್ರ ವಾರದ ಪ್ರಾರ್ಥನೆಗಳು

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು