ಕನ್ನಡ

ಇತರರ ಪಾಪಗಳನ್ನು ಗಮನಿಸುವುದು

ಸೆಪ್ಟೆಂಬರ್ 11, 2020
ಸಾಮಾನ್ಯ ಕಾಲದ ಇಪ್ಪತ್ತಮೂರನೆಯ ವಾರದ ಶುಕ್ರವಾರ
ಇಂದಿನ ವಾಚನಗಳು

“ನಿನ್ನ ಸಹೋದರನ ಕಣ್ಣಿನಲ್ಲಿರುವ ಕಸಕಡ್ಡಿಯನ್ನು ನೀನು ಗಮನಿಸುತ್ತೀಯೆ; ಆದರೆ ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ತೊಲೆಯನ್ನು ಏಕೆ ಕಾಣುವುದಿಲ್ಲ?”  ಲೂಕ 6:41

ಇದು ಎಷ್ಟು ಸತ್ಯ!  ಇತರರ ಸಣ್ಣಪುಟ್ಟ ದೋಷಗಳನ್ನು ನೋಡುವುದು ಎಷ್ಟು ಸುಲಭ! ಅದೇ ಸಮಯದಲ್ಲಿ, ನಮ್ಮದೇ ಹೆಚ್ಚು ಸ್ಪಷ್ಟವಾದ ಮತ್ತು ಗಂಭೀರವಾದ ದೋಷಗಳನ್ನು ನಾವು ಕಾಣದೆ ಹೋಗುತ್ತೇವೆ.  ಹೀಗೇಕೆ ಆಗುತ್ತದೆ?  

ಮೊದಲನೆಯದಾಗಿ, ನಮ್ಮದೇ ದೋಷಗಳನ್ನು ನೋಡುವುದು ಕಷ್ಟ, ಏಕೆಂದರೆ ನಮ್ಮ ಅಹಂಕಾರದ ಪಾಪವು ನಮ್ಮನ್ನು ಕುರುಡರನ್ನಾಗಿಸುತ್ತದೆ.  ಅಹಂಕಾರವು ನಾವು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳದಂತೆ ತಡೆಯುತ್ತದೆ.  ಅಹಂಕಾರವು ನಾವು ಧರಿಸುವ ಮುಖವಾಡವಾಗಿ, ನಮ್ಮ ಬಗ್ಗೆ ಸುಳ್ಳು ಚಿತ್ರಣವನ್ನು ತೋರಿಸುತ್ತದೆ.  ಅಹಂಕಾರವು ಅಸಹ್ಯವಾದ ಪಾಪ, ಏಕೆಂದರೆ ಅದು ನಮ್ಮನ್ನು ಸತ್ಯದಿಂದ ದೂರವಿಡುತ್ತದೆ.  ಸತ್ಯದ ಬೆಳಕಿನಲ್ಲಿ ನಮ್ಮನ್ನು ನಾವು ನೋಡಿಕೊಳ್ಳದಂತೆ ಅದು ತಡೆಯುತ್ತದೆ; ಪರಿಣಾಮವಾಗಿ, ನಮ್ಮ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ನಾವು ಕಾಣದಂತೆ ಮಾಡುತ್ತದೆ.    

ನಾವು ಅಹಂಕಾರದಿಂದ ತುಂಬಿರುವಾಗ ಮತ್ತೊಂದು ಸಂಗತಿ ನಡೆಯುತ್ತದೆ.  ನಮ್ಮ ಸುತ್ತಲಿರುವವರ ಪ್ರತಿಯೊಂದು ಸಣ್ಣ ದೋಷದ ಮೇಲೂ ನಾವು ಗಮನ ಕೇಂದ್ರೀಕರಿಸಲು ಪ್ರಾರಂಭಿಸುತ್ತೇವೆ.  ಕುತೂಹಲದ ಸಂಗತಿಯೆಂದರೆ, ಈ ಸುವಾರ್ತೆಯು ನಿನ್ನ ಸಹೋದರನ ಕಣ್ಣಿನಲ್ಲಿರುವ “ಕಸಕಡ್ಡಿ”ಯನ್ನು ನೋಡುವ ಪ್ರವೃತ್ತಿಯ ಬಗ್ಗೆ ಹೇಳುತ್ತದೆ.  ಇದು ನಮಗೆ ಏನು ತಿಳಿಸುತ್ತದೆ?  ಅಹಂಕಾರದಿಂದ ತುಂಬಿರುವವರಿಗೆ ಗಂಭೀರ ಪಾಪಿಯನ್ನು ಕೀಳಾಗಿ ಕಾಣುವುದರಲ್ಲಿ ಅಷ್ಟೊಂದು ಆಸಕ್ತಿಯಿಲ್ಲ ಎಂಬುದನ್ನು ಇದು ತಿಳಿಸುತ್ತದೆ.  ಬದಲಾಗಿ, ಕೇವಲ ಸಣ್ಣ ಪಾಪಗಳನ್ನು, ಅಂದರೆ “ಕಸಕಡ್ಡಿ”ಯಂಥ ಪಾಪಗಳನ್ನು ಹೊಂದಿರುವವರನ್ನೇ ಅವರು ಹುಡುಕುತ್ತಾರೆ; ಆ ಪಾಪಗಳು ನಿಜವಾಗಿರುವುದಕ್ಕಿಂತ ಹೆಚ್ಚು ಗಂಭೀರವಾಗಿ ಕಾಣುವಂತೆ ಮಾಡಲು ಪ್ರಯತ್ನಿಸುತ್ತಾರೆ.  ದುಃಖದ ಸಂಗತಿಯೆಂದರೆ, ಅಹಂಕಾರದಲ್ಲಿ ಮುಳುಗಿರುವವರು ಗಂಭೀರ ಪಾಪಿಗಿಂತಲೂ ಸಂತರಿಂದಲೇ ತಮಗೆ ಹೆಚ್ಚು ಅಪಾಯವಿದೆ ಎಂದು ಭಾವಿಸುತ್ತಾರೆ.  

ನಿಮ್ಮ ಸುತ್ತಲಿರುವವರ ಬಗ್ಗೆ ತೀರ್ಪು ನೀಡುವ ಮನೋಭಾವದೊಂದಿಗೆ ನೀವು ಹೋರಾಡುತ್ತಿದ್ದೀರೋ ಇಲ್ಲವೋ ಎಂಬುದನ್ನು ಇಂದು ಮನನ ಮಾಡಿ.  ವಿಶೇಷವಾಗಿ, ಪವಿತ್ರತೆಗಾಗಿ ಶ್ರಮಿಸುತ್ತಿರುವವರನ್ನು ನೀವು ಹೆಚ್ಚು ಟೀಕಿಸುವ ಪ್ರವೃತ್ತಿ ಹೊಂದಿದ್ದೀರೋ ಇಲ್ಲವೋ ಎಂಬುದನ್ನು ಮನನ ಮಾಡಿ.  ಇಂತಹ ಪ್ರವೃತ್ತಿ ನಿಮ್ಮಲ್ಲಿದ್ದರೆ, ನೀವು ಅರಿತಿರುವುದಕ್ಕಿಂತಲೂ ಹೆಚ್ಚಾಗಿ ಅಹಂಕಾರದೊಂದಿಗೆ ಹೋರಾಡುತ್ತಿದ್ದೀರಿ ಎಂಬುದನ್ನು ಅದು ತೋರಿಸಬಹುದು.

ಪ್ರಭುವೇ, ನನ್ನನ್ನು ವಿನಮ್ರನನ್ನಾಗಿ ಮಾಡಿ, ಎಲ್ಲ ಅಹಂಕಾರದಿಂದ ಮುಕ್ತನಾಗಲು ನನಗೆ ಸಹಾಯಮಾಡಿ.  ಇತರರ ಬಗ್ಗೆ ತೀರ್ಪು ನೀಡುವ ಮನೋಭಾವವನ್ನು ತೊರೆದು, ನಾನು ಅವರನ್ನು ಹೇಗೆ ನೋಡಬೇಕೆಂದು ನೀವು ಬಯಸುತ್ತೀರೋ ಹಾಗೆಯೇ ಅವರನ್ನು ನೋಡುವಂತಾಗಲಿ.  ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

Advertisement

ಇನ್ನಷ್ಟು ಸುವಾರ್ತಾ ಚಿಂತನೆಗಳು

ದೈವಿಕ ಕರುಣೆಯ ಧ್ಯಾನಗಳು

ಇಂದಿನ ಸಂತರು/ಹಬ್ಬಗಳು

ದಿವ್ಯಬಲಿಯ ವಾಚನಗಳ ಆಯ್ಕೆಗಳು

ಚಿತ್ರ: ಸಾಂತಾ ಪುಡೆನ್ಜಿಯಾನಾದ ಅಪ್ಸಿಸ್‌ನ ಮೊಸಾಯಿಕ್ ಚಿತ್ರ